Sunday, 5th January 2025

NZ vs ENG: 147 ವರ್ಷಗಳ ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲೇ ವಿಶೇಷ ದಾಖಲೆ ಬರೆದ ಕೇನ್‌ ವಿಲಿಯಮ್ಸನ್‌

ಹ್ಯಾಮಿಲ್ಟನ್‌: ಇಂಗ್ಲೆಂಡ್‌(NZ vs ENG) ವಿರುದ್ಧ ಸಾಗುತ್ತಿರುವ ಮೂರನೇ ಟೆಸ್ಟ್‌ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಸೊಗಸಾದ ಶತಕ ಬಾರಿಸಿದ ನ್ಯೂಜಿಲ್ಯಾಂಡ್‌ ಬ್ಯಾಟರ್‌ ಕೇನ್‌ ವಿಲಿಯಮ್ಸನ್‌(Kane Williamson) ಅವರು 147 ವರ್ಷಗಳ ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ವಿಶ್ವ ದಾಖಲೆಯೊಂದನ್ನು ಬರೆದಿದ್ದಾರೆ.

ದ್ವಿತೀಯ ದಿನದಾಟದಲ್ಲಿ 50 ರನ್‌ ಗಳಿಸಿದ್ದ ವಿಲಿಯಮ್ಸನ್‌ ಮೂರನೇ ದಿನವಾದ ಸೋಮವಾರ 156 ರನ್‌ ಬಾರಿಸಿದರು. ಶತಕ ಪೂರ್ತಿಗೊಳಿಸುತ್ತಿದ್ದಂತೆ ಒಂದೇ ಮೈದಾನದಲ್ಲಿ ಸತತ ಐದು ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಒಟ್ಟಾರೆಯಾಗಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಲಿಯಮ್ಸನ್‌ ಬಾರಿಸಿದ 33ನೇ ಶತಕ ಇದಾಗಿದೆ.

ಹ್ಯಾಮಿಲ್ಟನ್‌ನ ಸೀಡನ್‌ ಪಾರ್ಕ್‌ ಮೈದಾನದಲ್ಲಿ ವಿಲಿಯಮ್ಸನ್‌ ಕಳೆದ ಐದು ಟೆಸ್ಟ್ ಪಂದ್ಯಗಳಲ್ಲಿ 200 (ಬಾಂಗ್ಲಾದೇಶ, 2019), 104 (ಇಂಗ್ಲೆಂಡ್, 2019), 251 (ವೆಸ್ಟ್ ಇಂಡೀಸ್ (2020),133* (ದಕ್ಷಿಣ ಆಫ್ರಿಕಾ, 2024), 156 (ಇಂಗ್ಲೆಂಡ್‌, 2024) ಶತಕ ಬಾರಿಸಿದ್ದರು. ಉಳಿದಂತೆ ಮಹೇಲಾ ಜಯವರ್ಧನೆ, ಡಾನ್ ಬ್ರಾಡ್ಮನ್, ಮೈಕೆಲ್ ಕ್ಲಾರ್ಕ್, ಡೆನಿಸ್ ಕ್ರಾಂಪ್ಟನ್, ಮಾರ್ಟಿನ್ ಕ್ರೋವ್, ಸುನಿಲ್ ಗವಾಸ್ಕರ್, ಜಾಕ್ವೆಸ್ ಕಾಲಿಸ್, ಮಿಸ್ಬಾ-ಉಲ್-ಹಕ್, ಗ್ಯಾರಿ ಸೋಬರ್ಸ್ ತಲಾ ನಾಲ್ಕು ಶತಕ ಬಾರಿಸಿ ಜಂಟಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸುನಿಲ್ ಗವಾಸ್ಕರ್ ಅವರು ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಈ ಮೈಲುಗಲ್ಲು ನೆಟ್ಟಿದ್ದರು.

ಮೊದಲ ಇನಿಂಗ್ಸ್‌ನಲ್ಲಿ 347 ರನ್‌ ಬಾರಿಸಿದ್ದ ನ್ಯೂಜಿಲ್ಯಾಂಡ್‌ ದ್ವಿತೀಯ ಇನಿಂಗ್ಸ್‌ನಲ್ಲಿ 453 ರನ್‌ ಬಾರಿಸಿ 657 ರನ್‌ ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್‌ ಗೆಲುವಿಗೆ 658 ರನ್‌ ಬಾರಿಸಬೇಕಿದೆ. ಮೊದಲ ಇನಿಂಗ್ಸ್‌ನಲ್ಲಿ 143 ರನ್‌ಗೆ ಸರ್ವಪತನ ಕಂಡಿತ್ತು. ಇನ್ನೂ 2 ದಿನಗಳ ಆಟ ಬಾಕಿ ಇರುವ ಕಾರಣ ಪಂದ್ಯದಲ್ಲಿ ಕಿವೀಸ್‌ ಮೇಲುಗೈ ಸಾಧಿಸುವ ಸೂಚನೆ ಲಭಿಸಿದೆ.

ಸಂಕಷ್ಟದಲ್ಲಿ ಭಾರತ

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಸಂಕಷ್ಟಕ್ಕೆ ಸಿಲುಕಿದೆ. ಆಸೀಸ್‌ ಬಾರಿಸಿದ 445 ರನ್‌ ಬೆನ್ನಟ್ಟುತ್ತಿರುವ ರೋಹಿತ್‌ ಶರ್ಮ ಪಡೆ 48 ರನ್‌ಗೆ 4 ವಿಕೆಟ್‌ ಕಳೆದುಕೊಂಡಿದೆ. ಸದ್ಯ ಮಳೆಯಿಂದ ಪಂದ್ಯ ಸ್ಥಗಿತಗೊಂಡಿದೆ. ರೋಹಿತ್‌(0) ಮತ್ತು ರಾಹುಲ್‌(30) ಕ್ರೀಸ್‌ನಲ್ಲಿದ್ದಾರೆ. ಉಭಯ ಆಟಗಾರರು ತಂಡಕ್ಕೆ ನೆರವಾಗದೇ ಹೋದರೆ ಭಾರೀ ಹಿನ್ನಡೆಗೆ ಸಿಲುಕಿ ಪಂದ್ಯ ಕಳೆದುಕೊಳ್ಳುವುದು ಖಚಿತ ಎನ್ನಲಡ್ಡಿಯಿಲ್ಲ.

7 ವಿಕೆಟ್‌ಗೆ 405 ರನ್‌ ಗಳಿಸಿದ್ದಲ್ಲಿಂದ ಸೋಮವಾರ ಆಟ ಮುಂದುವರಿಸಿದ ಆಸ್ಟ್ರೇಲಿಯಾ 445 ರನ್‌ಗೆ ಆಲೌಟ್‌ ಆಯಿತು. 45 ರನ್‌ ಬಾರಿಸಿದ್ದ ಅಲೆಕ್ಸ್‌ ಕ್ಯಾರಿ 70 ರನ್‌ ಬಾರಿಸಿದರು. ಮಿಚೆಲ್‌ ಸ್ಟಾರ್ಕ್‌ 18 ರನ್‌ ಗಳಿಸಿದರು. ಭಾನುವಾರ 5 ವಿಕೆಟ್‌ ಕಿತ್ತಿದ್ದ ಜಸ್‌ಪ್ರೀತ್‌ ಬುಮ್ರಾ ಸೋಮವಾರ ಒಂದು ವಿಕೆಟ್‌ ಉರುಳಿಸಿದರು. ಒಟ್ಟು 76 ರನ್‌ಗೆ 6 ವಿಕೆಟ್‌ ಕಿತ್ತರು. ಮೊಹಮ್ಮದ್‌ ಸಿರಾಜ್‌ 2 ವಿಕೆಟ್‌ ಕಿತ್ತರು.