Sunday, 5th January 2025

Bengaluru News: ಸಹಜ ಯೋಗದ ಮೂಲಕ ಪರಿವರ್ತನೆಯ ಅನುಭವ ಸಿಗಲಿದೆ; ರಾಜೀವ್‌ ಕುಮಾರ್

Bengaluru News

ಬೆಂಗಳೂರು: ಸಹಜ ಯೋಗ ಎಂದರೆ ಅದೊಂದು ಪರಿವರ್ತನೆಯ ಅನುಭವ. ಸಹಜ್‌ ಎಂಬ ಪದದಲ್ಲಿ ಎರಡು ಅರ್ಥಗಳಿವೆ. ಸರಳತೆ ಮತ್ತು ʼಸಹ-ಅಜ್‌ʼ ಎಂದರೆ ʼಹುಟ್ಟಿನಿಂದಲೆʼ ಎಂಬ ಅರ್ಥವನ್ನು ನೀಡುತ್ತದೆ. ನಮ್ಮೊಳಗೆ ಒಂದು ಅಂತರ್ಗತವಾದ ಸೂಕ್ಷ್ಮ ವ್ಯವಸ್ಥೆ ಇದೆ. ಈ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದರ ಪ್ರಯೋಜನವನ್ನು ಪಡೆದುಕೊಳ್ಳುವುದು ನಮ್ಮ ಕರ್ತವ್ಯ ಎಂದು ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಡಾ. ರಾಜೀವ್‌ ಕುಮಾರ್‌ ಹೇಳಿದರು. ಬೆಂಗಳೂರು ನಗರದ (Bengaluru News) ಭಾರತ್ ಸ್ಕೌಟ್ಸ್ ಸಭಾಂಗಣದಲ್ಲಿ ಧ್ಯಾನಕ್ರಮದಲ್ಲಿ ನಂಬಿಕೆ ಮತ್ತು ಆಸಕ್ತಿ ಇರುವವರಿಗೆಲ್ಲ ಸಹಜ ಯೋಗ – ಇಂದಿನ ಮಹಾ ಯೋಗ ಎಂಬ ಹೆಸರಿನಲ್ಲಿ ಕುಂಡಲಿನೀ ಜಾಗೃತಿ ಮೂಲಕ ಆತ್ಮ ಸಾಕ್ಷಾತ್ಕಾರ ಪಡೆಯುವ ಮಾರ್ಗದ ಕುರಿತಾಗಿ ಮಾಹಿತಿ ಜತೆಗೆ ಕಲಿಕೆಯನ್ನು ಉಚಿತವಾಗಿ ತಿಳಿಸಿಕೊಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಆಂತರಿಕ ಶಕ್ತಿಯನ್ನು ದೈವಿಕ ಶಕ್ತಿಯೊಂದಿಗೆ ಸಂಪರ್ಕಿಸುವುದೇ ಯೋಗ. ಕೃಷ್ಣ ಹೇಳಿದಂತೆ ಯೋಗದ ಮೂಲಕ ನಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು. ನಾನು 35 ವರ್ಷಗಳ ಕಾಲದಿಂದ ಸಹಜ ಯೋಗವನ್ನು ಅಭ್ಯಾಸ ಮಾಡಿದ್ದೇನೆ ಮತ್ತು ಮಾತಾಜಿಯವರಿಂದ ಆಶೀರ್ವಾದ ಪಡೆದಿದ್ದೇನೆ. ಸಹಜ ಯೋಗದ ಮೂಲಕ ಜೀವನದಲ್ಲಿ ಪರಿವರ್ತನೆಯ ಅನುಭವವನ್ನು ಪಡೆಯಬಹುದು. ಇದು ಪ್ರಕೃತಿಯೊಂದಿಗೆ ಬೆರೆಯಲು, ಇತರರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಜೀವನದಲ್ಲಿ ಯಶಸ್ಸನ್ನು ಕಂಡುಕೊಳ್ಳಲು ನಿಮಗೆ ಅನುವು ಮಾಡಿಕೊಡುತ್ತದೆ. ಅಲ್ಲದೆ ಸಹಜ ಯೋಗವನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ಜೀವನದಲ್ಲಿ ಆಳವಾದ ಬದಲಾವಣೆಯನ್ನು ತರುತ್ತದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Health tips: ಮಧುಮೇಹಿಗಳೇ ಎಚ್ಚರ! ಈ ಆಹಾರ ಸಕ್ಕರೆಗಿಂತ 3 ಪಟ್ಟು ಹೆಚ್ಚು ಅಪಾಯಕಾರಿಯಂತೆ!

ಇದೇ ವೇಳೆ ಬೆಂಗಳೂರಿನ ಲೈಫ್ ಎಟರ್ನಲ್ ಟ್ರಸ್ಟ್‌ನ ಅಧ್ಯಕ್ಷ ಡಾ. ಮನೋಜ್ ಕುಮಾರ್ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಮತ್ತು ಕಾರ್ಪೋರೇಟ್‌ ಸಂಸ್ಥೆಗಳಲ್ಲಿ ಇಂತಹ ಉಚಿತ ಒತ್ತಡ ನಿರ್ವಹಣೆ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲು ಸಹಜ ಯೋಗ ಸಿದ್ಧವಿದೆ ಎಂದು ತಿಳಿಸಿದರು.

ಒತ್ತಡ ರಹಿತ ಹಾಗೂ ನೆಮ್ಮದಿಯ ಬದುಕಿಗೆ ಧ್ಯಾನವೇ ಮಹಾಮದ್ದು ಎಂಬುದನ್ನ ವಿಶ್ವವೇ ಒಪ್ಪಿದೆ. ಈ ನಿಟ್ಟಿನಲ್ಲಿ ಮಾತಾಜಿ ನಿರ್ಮಲಾ ದೇವಿಯವರು 1970ರಲ್ಲಿ ಕಂಡುಕೊಂಡ ಧ್ಯಾನಕ್ರಮವು ಎಲ್ಲ ಚಿಂತೆಗಳಿಂದ ದೂರ ಮಾಡಬಲ್ಲ ಸರಳ ವಿಧಾನ ಎನ್ನುತ್ತದೆ ಸಹಜ ಯೋಗ ಸಂಸ್ಥೆ. ಸಹಜ ಧಾರಾ ಎಂಬ ಪರಿಕಲ್ಪನೆಯಲ್ಲಿ ಸಂಗೀತದ ಜತೆಗೆ ಆತ್ಮ ಸಾಕ್ಷಾತ್ಕರ ಪಡೆದುಕೊಳ್ಳುವ ಕ್ರಮವನ್ನ ಕಾರ್ಯಕ್ರಮದ ಮೂಲಕ ಜನರಿಗೆ ತಿಳಿಸಲಾಯಿತು.

ಸಹಜ ಯೋಗ ಅಭ್ಯಾಸದಿಂದ ವ್ಯಕ್ತಿಯ ದೈಹಿಕ, ಮಾನಸಿಕ ಚೈತನ್ಯ ಸಾಧನೆ

ಸಹಜ ಯೋಗ- ನಿಸ್ಸಂಶಯವಾಗಿ ಅಪೂರ್ವ ಧ್ಯಾನ ಮಾರ್ಗ ಎನ್ನಲಾಗುತ್ತದೆ. ಸಹಜ ಯೋಗ ಅಭ್ಯಾಸದಿಂದ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಚೈತನ್ಯ ಸಾಧನೆಯಾಗಲಿದೆ. ಸಹಜ ಯೋಗಕ್ಕೆ ತೊಡಗಿದಾಗ ಸೂಕ್ಷ್ಮ ಶಕ್ತಿಯು ನಮ್ಮ ನರಮಂಡಲದ ಸುಷುಮ್ನ ನಾಡಿಯಲ್ಲಿ ಹರಿಯುತ್ತದೆ. ಅಲ್ಲಿನ ಆರು ಚಕ್ರಗಳನ್ನ ಜಾಗೃತಗೊಳಿಸಿ ಬಲಗೊಳಿಸುತ್ತಾ ಆಜ್ಞಾಚಕ್ರ ದಾಟಿ, ಸಹಸ್ರದಳ ಸ್ವರೂಪಿ ಸಹಸ್ರಾರಚಕ್ರ ತಲುಪುತ್ತದೆ. ಅಲ್ಲಿ ಸುಳಿಯ ಮಧ್ಯಸ್ಥಳ ಭೇದಿಸಿಕೊಂಡು ಸರ್ವವ್ಯಾಪಿಯಾದ ಪರಮಾತ್ಮನ ಜತೆ ಒಂದಾದ ಅನುಭವ ನೀಡುತ್ತದೆ. ಆಗ ಧ್ಯಾನಿಯ ತಲೆ, ಸುಳಿ, ಅಂಗೈ ಮತ್ತು ಬೆರಳುಗಳಲ್ಲಿ ತಂಪಾದ ಗಾಳಿಯ ತರಂಗಗಳೇಳುತ್ತವೆ. ಇದು ಪರಮಾತ್ಮನ ಪ್ರೇಮದ ಹರಿವು ಎಂಬುವುದು ಸಹಜ ಯೋಗದ ಧ್ಯಾನ ಕ್ರಮದ ವಿಧಾನ. ಧ್ಯಾನ ಎಂಬುದು ಕೇವಲ ಮನೋದೈಹಿಕ ನಿರಾಳತೆ ಮಾತ್ರವಲ್ಲ ಆಧ್ಯಾತ್ಮ ಸಾಧನೆಯ ಮಾರ್ಗ ಕೂಡಾ ಆಗಿದೆ. ಶಾಂತಿ, ನೆಮ್ಮದಿ ಹಾಗೂ ಸಮಾಧಾನಕರ ಮನಃಸ್ಥಿತಿಗೆ ಸಹಜ ಯೋಗ ಪಾಲನೆಯೇ ಸುಲಭ ಮಾರ್ಗ ಎಂಬುದು ನಂಬಿಕೆ. ಸಂಗೀತದ ಜತೆ, ಜತೆಗೆ ಧ್ಯಾನವನ್ನು ಹೇಳಿಕೊಡುವ ವಿಶಿಷ್ಟ ಕಾರ್ಯಕ್ರಮ ಇದಾಗಿತ್ತು.

ಈ ಸುದ್ದಿಯನ್ನೂ ಓದಿ | Bengaluru News: ಬೆಂಗಳೂರಿನ ವಿದ್ಯಾರ್ಥಿಗಳಿಗೆ ‘ನಾಸಾ’ ಆಶೋತ್ತರಗಳ ಪರಿಚಯ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಡಾ. ರಾಜೀವ್‌ ಕುಮಾರ್‌, ಸಂಗೀತ ನಿರ್ದೇಶಕಿ ಮತ್ತು ಗಾಯಕಿ ಮಾನಸ ಹೊಳ್ಳ, ನಟಿ ರಾಧಿಕಾ ನಾರಾಯಣ್ ಉಪಸ್ಥಿತರಿದ್ದರು. ವಿಶೇಷ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರಾದ ಸಂಗೀತ ನಿರ್ದೇಶಕ ಧನಂಜಯ ಧಮಾಲ್, ಸಿತಾರ ವಾದಕ ಡಾ ಜಯಂತ ಕುಮಾರ್ ದಾಸ್, ನೃತ್ಯಪಟು ಪ್ರೀತಿ ಸಂಡೂರ ಹಾಗೂ ಕೊಳಲು ವಾದಕ ಶಕ್ತಿಧಾರ್, ರಾಜೇಂದ್ರಸಿಂಗ್ ಪವಾರ್, ಹಾರ್ಮೋನಿಯಂ, ವಿಕಾಸ್ ಜೈಸ್ವಾಲ್ ಗಿಟಾರ್ ಪಾಲ್ಗೊಂಡಿದ್ದರು.