Sunday, 5th January 2025

Stock Market: 2025ರಲ್ಲಿ ಈ 9 ಷೇರುಗಳಲ್ಲಿ15%ಕ್ಕಿಂತ ಹೆಚ್ಚು ಲಾಭ?

ಮುಂಬೈ: ಹೊಸ ವರ್ಷ ಯಾವ ಷೇರುಗಳಲ್ಲಿ ಹೂಡಿಕೆ ಮಾಡಬೇಕು ಎಂದು ಆಲೋಚಿಸುತ್ತಿದ್ದೀರಾ? ಹಾಗಾದರೆ ಎಕನಾಮಿಕ್‌ ಟೈಮ್ಸ್‌ನ ಇತ್ತೀಚಿನ ವರದಿಯ ಶಿಫಾರಸುಗಳು ನಿಮಗೆ ಉಪಯುಕ್ತವಾಗಬಹುದು (Stock Market). ಹಾಗಾದರೆ ಈ ವರದಿಯ ಪ್ರಕಾರ 2025ರಲ್ಲಿ ಹೂಡಿಕೆದಾರರಿಗೆ ಎರಡಂಕಿಯ ರಿಟರ್ನ್‌ ನೀಡಬಲ್ಲ 9 ಷೇರುಗಳ ವಿವರ ಇಲ್ಲಿದೆ (New Year, New Gains).

ಗೋದ್ರೇಜ್‌ ಪ್ರಾಪರ್ಟೀಸ್

ರಿಯಲ್‌ ಎಸ್ಟೇಟ್‌ ವಲಯದಲ್ಲಿ ಮುಂಚೂಣಿಯಲ್ಲಿರುವ ಗೋದ್ರೇಜ್‌ ಪ್ರಾಪರ್ಟೀಸ್‌ ಕಂಪನಿಯು ಕಳೆದ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಉತ್ತಮ ಆದಾಯ ಮತ್ತು ಲಾಭ ಗಳಿಸಿದೆ. ಸೇಲ್ಸ್‌ನಲ್ಲಿ 219% ಮತ್ತು ನಿವ್ವಳ ಲಾಭದಲ್ಲಿ 360% ಹೆಚ್ಚಳವನ್ನು ದಾಖಲಿಸಿದೆ. ಗೋದ್ರೇಜ್‌ ಪ್ರಾಪರ್ಟೀಸ್ ಷೇರಿನ ಈಗಿನ ದರ 2,899 ರೂ.ಗಳಾಗಿದೆ. 1 ವರ್ಷದ ಟಾರ್ಗೆಟ್‌ ಪ್ರೈಸ್‌ 3,650 ರೂ. ಆಗಿದೆ. ಷೇರಿನ ದರದಲ್ಲಿ 25.9% ಏರಿಕೆ ನಿರೀಕ್ಷಿಸಲಾಗಿದೆ. ಅಂದರೆ 2025ರಲ್ಲಿ ಷೇರುದಾರರಿಗೆ ಪ್ರತಿ ಷೇರಿನಲ್ಲಿ 751 ರೂ. ಲಾಭವನ್ನು ನಿರೀಕ್ಷಿಸಲಾಗಿದೆ.
ಗೋದ್ರೇಜ್‌ ಪ್ರಾಪರ್ಟೀಸ್‌ ಈಗ ಗುರುಗ್ರಾಮ, ನೋಯ್ಡಾ, ಮುಂಬಯಿ, ಪುಣೆ ಮತ್ತು ಹೈದರಾಬಾದ್‌ನಲ್ಲಿ ಹಲವು ರಿಯಾಲ್ಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ.

HDFC ಲೈಫ್ ಇನ್ಷೂರೆನ್ಸ್‌ ಕಂಪನಿ

    HDFC ಲೈಫ್ ಇನ್ಷೂರೆನ್ಸ್‌ ಕಂಪನಿಯು ಕಳೆದ ಜುಲೈ-ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ 27% ಬೆಳವಣಿಗೆಯನ್ನು ದಾಖಲಿಸಿದೆ. ಈ ಷೇರಿನ ಈಗಿನ ದರ 633 ರೂ. ಆಗಿದೆ. ಹೊಸ ವರ್ಷದಲ್ಲಿ ಈ ಷೇರಿನ ದರ 810 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ. ಅಂದರೆ ಹೂಡಿಕೆದಾರಿರಗೆ ಪ್ರತಿ ಷೇರಿನಲ್ಲಿ 27.9% ರಿಟರ್ನ್‌ ಸಿಗೋ ನಿರೀಕ್ಷೆ ಇದೆ.

    PNB ಹೌಸಿಂಗ್‌ ಫೈನಾನ್ಸ್

    ಗೃಹ ಸಾಲವನ್ನು ವಿತರಿಸುವ ಪಿಎನ್‌ಬಿ ಹೌಸಿಂಗ್‌ ಫೈನಾನ್ಸ್‌ ಕಂಪನಿಯು ಜುಲೈ-ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ತನ್ನ ಲಾಭದಲ್ಲಿ 23% ಏರಿಕೆ ಕಂಡಿದೆ. ಈ ಷೇರಿನ ಈಗಿನ ದರ 965 ರೂ. ಆಗಿದ್ದು, ಮುಂದಿನ ಒಂದು ವರ್ಷದಲ್ಲಿ 24.4% ಹೆಚ್ಚಳವಾಗಿದೆ. ಅಂದರೆ ಷೇರಿನ ದರ 1,200 ರೂ.ಗೆ ಏರಿಕೆಯಾಗುವ ನಿರೀಕ್ಷೆ ಇದೆ.

    ಮ್ಯಾಕ್ಸ್‌ ಫೈನಾನ್ಷಿಯಲ್‌ ಸರ್ವೀಸ್

    ಜೀವ ವಿಮೆಗಳನ್ನು ಒದಗಿಸುವ ಮ್ಯಾಕ್ಸ್‌ ಫೈನಾನ್ಷಿಯಲ್‌ ಸರ್ವೀಸ್‌ ಕಂಪನಿಯು ಕಳೆದ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ 23% ಬಿಸಿನೆಸ್‌ ಗ್ರೋತ್‌ ದಾಖಲಿಸಿದೆ. ಈ ಷೇರಿನ ಈಗಿನ ದರ 1,165 ರೂ.ಗಳಾಗಿದೆ. ಮುಂದಿನ ಒಂದು ವರ್ಷದಲ್ಲಿ 21% ಏರಿಕೆ ನಿರೀಕ್ಷಿಸಲಾಗಿದೆ. ಅಂದರೆ 1,420 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ.

    ಐನಾಕ್ಸ್‌ ವಿಂಡ್

    ಪವನ ವಿದ್ಯುತ್‌ ಉತ್ಪಾದನೆ ವಲಯದ ಐನಾಕ್ಸ್‌ ವಿಂಡ್‌ ಕಂಪನಿಯ ಆದಾಯ ಕಳೆದ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿದೆ. 90 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಐನಾಕ್ಸ್‌ ವಿಂಡ್‌ ಷೇರಿನ ಈಗಿನ ದರ 208 ರೂ. ಆಗಿದೆ. ಇದು 17.1% ಏರಿಕೆಯಾಗುವ ನಿರೀಕ್ಷೆ ಇದೆ. ಅಂದರೆ 245 ರೂ.ಗೆ ಹೆಚ್ಚಳವಾಗುವ ಸಾಧ್ಯತೆ ಇದೆ.

    ಪ್ರೆಸ್ಟೀಜ್‌ ಎಸ್ಟೇಟ್ಸ್‌ ಪ್ರಾಜೆಕ್ಟ್ಸ್

    ರಿಯಲ್‌ ಎಸ್ಟೇಟ್‌ ವಲಯದ ಪ್ರೆಸ್ಟೀಜ್‌ ಎಸ್ಟೇಟ್ಸ್‌ ಪ್ರಾಜೆಕ್ಟ್ಸ್‌ ಕಳೆದ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ 7% ಬೆಳವಣಿಗೆ ದಾಖಲಿಸಿದೆ. ಷೇರಿನ ಈಗಿನ ದರ 1,751 ರೂ.ಗಳಾಗಿದ್ದು, 16.5% ಏರಿಕೆ ನಿರೀಕ್ಷಿಸಲಾಗಿದೆ. ಷೇರಿನ ದರ 2,040 ರೂ.ಗೆ ಹೆಚ್ಚಳವಾಗುವ ಸಾಧ್ಯತೆ ಇದೆ.

    ಪವರ್‌ ಫೈನಾನ್ಸ್‌ ಕಾರ್ಪೊರೇಷನ್

    ಮೂಲ ಸೌಕರ್ಯ ಕ್ಷೇತ್ರದ ಪವರ್‌ ಫೈನಾನ್ಸ್‌ ಕಾರ್ಪೊರೇಷನ್‌ ಕಳೆದ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಆದಾಯದಲ್ಲಿ 14% ಬೆಳವಣಿಗೆ ದಾಖಲಿಸಿದೆ. ಈ ಷೇರಿನ ಈಗಿನ ದರ 517 ರೂ. ಆಗಿದ್ದು, ಮುಂದಿನ ಒಂದು ವರ್ಷದಲ್ಲಿ 16% ಏರಿಕೆ ನಿರೀಕ್ಷಿಸಲಾಗಿದೆ. ಅಂದರೆ 600 ರೂ.ಗೆ ದರ ಹೆಚ್ಚಳ ನಿರೀಕ್ಷಿಸಲಾಗಿದೆ.

    ಅಂಬರ್‌ ಎಂಟರ್‌ಪ್ರೈಸಸ್‌ ಇಂಡಿಯಾ

    ಹೀಟಿಂಗ್‌, ವೆಂಟಿಲೇಶನ್‌, ಏರ್‌ ಕಂಡೀಶನಿಂಗ್‌ ವಲಯದಲ್ಲಿ ಸಲ್ಯೂಷನ್‌ ಪ್ರೊವೈಡರ್‌ ಆಗಿರುವ ಅಂಬರ್‌ ಎಂಟರ್‌ಪ್ರೈಸಸ್‌ ಇಂಡಿಯಾ ಕಂಪನಿಯು ಕಳೆದ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಆದಾಯದಲ್ಲಿ ಉತ್ತಮ ಪ್ರಗತಿ ದಾಖಲಿಸಿದೆ. 19 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಷೇರಿನ ಈಗಿನ ದರ 5,724 ರೂ.ಗಳಾಗಿದ್ದು ಮುಂದಿನ ಒಂದು ವರ್ಷದಲ್ಲಿ 16.6% ಏರಿಕೆ ನಿರೀಕ್ಷಿಸಲಾಗಿದೆ. ಅಂದರೆ 6,675 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ.

    ಹಿಂದೂಸ್ತಾನ್‌ ಏರೊನಾಟಿಕ್ಸ್

    ಸಾರ್ವಜನಿಕ ವಲಯದ ಹಿಂದೂಸ್ತಾನ್‌ ಏರೊನಾಟಿಕ್ಸ್‌ ಅಥವಾ ಎಚ್‌ಎಎಲ್‌ ರಕ್ಷಣಾ ವಲಯದ ಏರೋಸ್ಪೇಸ್‌ ಮತ್ತು ಡಿಫೆನ್ಸ್‌ ಕಂಪನಿಯಾಗಿದ್ದು, ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಕಳೆದ ಜುಲೈ-ಸೆಪ್ಟೆಂಬರ್‌ನಲ್ಲಿ ಕಂಪನಿಯ ಅದಾಯದಲ್ಲಿ 21% ಹೆಚ್ಚಳವಾಗಿದೆ. ಮುಂದಿನ ಒಂದೂವರೆ-ಎರಡು ವರ್ಷಕ್ಕೆ ಕಂಪನಿಯ ಬಳಿ ಒಂದೂವರೆ ಲಕ್ಷ ಕೋಟಿ ರೂ.ಗಳ ಆರ್ಡರ್‌ ಬುಕ್‌ ಇದೆ. ಎಚ್‌ಎಎಲ್‌ ಷೇರಿನ ಈಗಿನ ದರ 4,628 ರೂ.ಗಳಾಗಿದ್ದು, 15.5% ಏರಿಕೆ ನಿರೀಕ್ಷಿಸಲಾಗಿದೆ. ಅಂದರೆ 5,346 ರೂ.ಗೆ ಏರಿಕೆಯಾಗುವ ನಿರೀಕ್ಷೆ ಇದೆ.

      ಷೇರು ಮಾರುಕಟ್ಟೆಯಲ್ಲಿ ಕಳೆದ ಅಕ್ಟೋಬರ್‌ನಿಂದೀಚೆಗೆ ತೀವ್ರ ಏರಿಳಿತಗಳು ಸಂಭವಿಸಿವೆ. ನಿಫ್ಟಿ ಸೂಚ್ಯಂಕ 2024ರ ಸೆಪ್ಟೆಂಬರ್‌ನಿಂದ ಡಿಸೆಂಬರ್‌ ತನಕದ ಅವಧಿಯಲ್ಲಿ ತೀವ್ರ ಕುಸಿತಗಳಿಗೆ ಸಾಕ್ಷಿಯಾಗಿದೆ.
      ಸ್ಟಾಕ್‌ ಮಾರ್ಕೆಟ್‌ನಲ್ಲಿ ಸೆನ್ಸೆಕ್ಸ್‌ ಮತ್ತು ನಿಫ್ಟಿ ಯಾಕೆ ಈ ರೀತಿಯಲ್ಲಿ ಕುಸಿದಿವೆ ಎಂದು ಷೇರು ಹೂಡಿಕೆದಾರರು ಕಳವಳಕ್ಕೀಡಾಗಿರುವುದು ನಿಜ. ಇದಕ್ಕೆ ಹಲವು ಕಾರಣಗಳಿವೆ. ಮುಖ್ಯವಾಗಿ ಕಳೆದ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಭಾರತೀಯ ಕಾರ್ಪೊರೇಟ್‌ ವಲಯದ ಕಂಪನಿಗಳ ಆದಾಯ ಇಳಿದಿರುವುದು ನಕಾರಾತ್ಮಕ ಪ್ರಭಾವ ಬೀರಿದೆ. ಹಲವಾರು ತ್ರೈಮಾಸಿಕಗಳಲ್ಲಿ ಲಾಭ ಗಳಿಸಿದ್ದ ಕಂಪನಿಗಳಿಗೆ, ಜುಲೈ-ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಲಾಭ ಇಳಿದಿದೆ. ಸಾಮಾನ್ಯ ಮುಂಗಾರಿನ ಪರಿಣಾಮ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಸುಧಾರಿಸಿದ್ದರೂ, ನಗರಗಳಲ್ಲಿ ಹಣದುಬ್ಬರದ ಪ್ರಭಾವ ಉಂಟಾಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಇತ್ತೀಚಿನ ತಿಂಗಳುಗಳಲ್ಲಿ ಹೂಡಿಕೆಯನ್ನು ಹಿಂತೆಗೆದುಕೊಂಡಿರುವುದು, ಜಾಗತಿಕ ಮಾರುಕಟ್ಟೆಗಳಲ್ಲಿನ ಮಂದಗತಿಯೂ ನಕಾರಾತ್ಮಕ ಪ್ರಭಾವ ಬೀರಿದೆ.

      ಹಾಗಾದರೆ ಮಾರುಕಟ್ಟೆಯ ಪರಿಸ್ಥಿತಿ ಮುಂದೇನಾಗಬಹುದು? ಎಂಬ ಪ್ರಶ್ನೆ ಇದೆ. ತಜ್ಞರ ಪ್ರಕಾರ 2024-25ರ ದ್ವಿತೀಯಾರ್ಧ ಅಥವಾ ಸೆಕೆಂಡ್‌ ಹಾಫ್‌ನಲ್ಲಿ ಕಾರ್ಪೊರೇಟ್‌ ಕಂಪನಿಗಳ ಆದಾಯ ಮತ್ತು ಲಾಭಾಂಶದಲ್ಲಿ ಏರಿಕೆಯನ್ನು ನಿರೀಕ್ಷಿಸಲಾಗಿದೆ. ಇದಕ್ಕೆ ಕಾರಣವೇನೆಂದರೆ, ಸರ್ಕಾರ ತನ್ನ ಸಾರ್ವಜನಿಕ ವೆಚ್ಚಗಳನ್ನು ಹೆಚ್ಚಿಸುತ್ತಿರುವುದು, ಅಂದರೆ ರಸ್ತೆ, ಹೆದ್ದಾರಿ, ರೈಲ್ವೆ ಇತ್ಯಾದಿ ಮೂಲ ಸೌಕರ್ಯಗಳಿಗೆ ಹೆಚ್ಚಿನ ಹಣ ವಿನಿಯೋಗಿಸಲಿದೆ. ಗ್ರಾಮೀಣ ಪ್ರದೇಶದಲ್ಲಿ ಬೇಡಿಕೆ ಹೆಚ್ಚಲಿದೆ. ಸರಕುಗಳ ದರದಲ್ಲಿ ಸ್ಥಿರತೆ ನಿರೀಕ್ಷಿಸಲಾಗಿದೆ. ಹೀಗಿದ್ದರೂ, ವಿದೇಶಗಳಲ್ಲಿನ ವಿದ್ಯಮಾನಗಳ ಬಗ್ಗೆಈಗಲೇ ಏನೂ ಹೇಳಲಾಗದು. ಜಾಗತಿಕ ಬಿಕ್ಕಟ್ಟುಗಳ ಪ್ರಭಾವವನ್ನು ಕಾದು ನೋಡಬೇಕಿದೆಯಷ್ಟೇ. ಅಮೆರಿಕದಲ್ಲಿ ಡಾಲರ್‌ ಕರೆನ್ಸಿಯು ಇತರ ಕರೆನ್ಸಿಗಳ ಎದುರು ಪ್ರಾಬಲ್ಯ ವೃದ್ಧಿಸುತ್ತಿದೆ. ಡಾಲರ್‌ ತುಟ್ಟಿಯಾದರೆ ಭಾರತಕ್ಕೆ ಆಮದು ತುಟ್ಟಿಯಾಗಲಿದ್ದು, ಸವಾಲಾಗಬಹುದು.

      ಇಷ್ಟೆಲ್ಲ ಸವಾಲುಗಳಿದ್ದರೂ, ಭಾರತದಲ್ಲಿ ಮಧ್ಯಮವರ್ಗದ ಆದಾಯವಿರುವ ಜನರ ಸಂಖ್ಯೆ ಹೆಚ್ಚುತ್ತಿದೆ. ಜತೆಗೆ ಹೂಡಿಕೆಯೂ ವೃದ್ಧಿಸುತ್ತಿದೆ. ಹೀಗಾಗಿ 2025ರಲ್ಲಿಯೂ ಭಾರತವು ವಿಶ್ವದಲ್ಲೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುಂದುವರಿಯಲಿದೆ ಎಂದು ಮಾಸ್ಟರ್‌ ಕಾರ್ಡ್‌ ಸಂಸ್ಥೆಯ ಇತ್ತೀಚಿನ ವರದಿ ತಿಳಿಸಿದೆ. ಅದರ ಪ್ರಕಾರ 2025ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ 6.6%ರಷ್ಟಿರಲಿದೆ. IMF ಪ್ರಕಾರ ಭಾರತ ಮುಂದಿನ ವರ್ಷ 7% ಹಾಗೂ ಆರ್‌ಬಿಐ ಪ್ರಕಾರ 7.2% ಜಿಡಿಪಿ ಬೆಳವಣಿಗೆ ದಾಖಲಿಸಲಿದೆ. ಇದು ಆಶಾದಾಯಕವೂ ಆಗಿದೆ. ಹೀಗಾಗಿ ದೀರ್ಘಾವಧಿಗೆ ಷೇರುಗಳು ಅಥವಾ ಮ್ಯೂಚುವಲ್‌ ಫಂಡ್‌ ಗಳಲ್ಲಿ ಹೂಡಿಕೆ ಮಾಡುವವರು ನಿಶ್ಚಿಂತೆಯಿಂದ ಹೂಡಿಕೆಯನ್ನು ಮುಂದುವರಿಸಿ ಲಾಭ ಪಡೆಯಬಹುದು.

      ಈ ಸುದ್ದಿಯನ್ನೂ ಓದಿ: Stock Market: ಷೇರು ಪೇಟೆಗೆ ಬರಲಿದೆ ಮತ್ತೊಂದು ಟಾಟಾ ಕಂಪನಿ! ಕಂಪ್ಲೀಟ್‌ ಡಿಟೇಲ್ಸ್!‌