Monday, 6th January 2025

BBK 11: ಬಿಗ್ ಬಾಸ್ ಮನೆಯಿಂದ ಗೋಲ್ಡ್ ಸುರೇಶ್ ಹೊರಹೋಗಲು ಏನು ಕಾರಣ?: ಇಲ್ಲಿದೆ ಅಸಲಿ ವಿಚಾರ

Gold Suresh Out

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಕೆಲವು ಅನಿರೀಕ್ಷಿತ ಘಟನೆಗಳು ನಡೆಯುತ್ತಿವೆ. ಭಾನುವಾರ ಶಾಕಿಂಗ್ ಎಂಬಂತೆ ಫೈನಲ್ ಸ್ಪರ್ಧಿ ಎಂದುಕೊಂಡಿದ್ದ ಶಿಶಿರ್ ಶಾಸ್ತ್ರೀ ಎಲಿಮಿನೇಟ್ ಆಗಿ ಹೊರಬಂದರು. ಇದರ ಬೆನ್ನಲ್ಲೇ ಗೋಲ್ಡ್ ಸುರೇಶ್ ಕೂಡ ದೊಡ್ಮನೆ ತೊರೆದಿದ್ದಾರೆ. ವೈಯಕ್ತಿಕ ಕಾರಣಗಳಿಂದ ಸುರೇಶ್ ಅವರು ಬಿಗ್ ಬಾಸ್ ಅನ್ನು ಅರ್ಧಕ್ಕೆ ಕೈಬಿಟ್ಟು ಹೊರಬಂದಿದ್ದಾರೆ. ಅಷ್ಟಕ್ಕೂ ಸುರೇಶ್ ದೊಡ್ಮನೆಯಿಂದ ಹೊರಬರಲು ಏನು ಕಾರಣ?.

ಗೋಲ್ಡ್ ಸುರೇಶ್ ಅವರಿಗೆ ಮನೆಯಿಂದ ಒಂದು ತುರ್ತು ಮೆಸೇಜ್ ಬಂದ ಕಾರಣದಿಂದ ಅವರು ಬಿಗ್ ಬಾಸ್​ನಿಂದ ಹೊರಬಂದಿದ್ದಾರೆ. ಗೋಲ್ಡ್ ಸುರೇಶ್​ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ. ಹಾಗಾಗಿ ಅವರ ಅವಶ್ಯಕತೆ ಬಿಗ್ ಬಾಸ್​ ಮನೆಯಿಂದ ಅವರ ಕುಟುಂಬದವರಿಗೆ ಜಾಸ್ತಿ ಇದೆ. ಹೆಚ್ಚು ತಡ ಮಾಡದೇ ವಸ್ತುಗಳನ್ನು ಪ್ಯಾಕ್​ ಮಾಡಿಕೊಂಡು ಕೂಡಲೇ ಬಿಗ್ ಬಾಸ್​ ಮನೆಯಿಂದ ಹೊರಗೆ ಬನ್ನಿ ಎಂದು ಬಿಗ್‌ ಬಾಸ್‌ ಸುರೇಶ್​ಗೆ ಸೂಚನೆ ನೀಡಿದರು.

ಇದನ್ನು ಕೇಳಿ ಗೋಲ್ಡ್ ಸುರೇಶ್ ಅವರು ಏನಾಗಿರಬಹುದು ಎಂದು ಕಣ್ಣೀರು ಹಾಕಿದರು. ದೊಡ್ಡ ತೊಂದರೆ ಆಗಿರಬಹುದೇ ಎಂದು ಊಹಿಸಿ ಅವರಿಗೆ ಅಳು ಬಂತು. ಆ ಬಳಿಕ ಚಿನ್ನ ಹಾಕಿಕೊಂಡೇ ದೊಡ್ಮನೆಯಿಂದ ಹೊರಟರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ವದಂತಿ ಹಬ್ಬಿದೆ. ಸುರೇಶ್ ತಂದೆ ನಿಧನರಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ, ಅದರಲ್ಲಿ ನಿಜವಿಲ್ಲ.

ಖುದ್ದು ಗೋಲ್ಡ್ ಸುರೇಶ್ ಅವರ ತಂದೆ ಶಿವಗೋಡ ಕಾಶಿರಾಮ ನಾರಪ್ಪಗೋಳ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಗೋಲ್ಡ್ ಸುರೇಶ್ ಮೊಣಕಾಲು ನೋವಿನ ಸಲುವಾಗಿ ಬಿಗ್ ಬಾಸ್ ಬಿಟ್ಟು ಹೊರಗೆ ಬಂದಿರಬೇಕು. ನಮ್ಮ ಮನೆ ಹಾಗೂ ಊರಲ್ಲಿ ಯಾರಿಗೂ ಏನ‌ು ಸಮಸ್ಯೆ ಇಲ್ಲ. ಬೆಂಗಳೂರು ಮನೆಯಲ್ಲೂ ಏನೂ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ವಾರದ ಕ್ಯಾಪ್ಟನ್ ಆಗಿದ್ದರು ಸುರೇಶ್:

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಬೇಕು ಎಂಬುದು ಗೋಲ್ಡ್ ಸುರೇಶ್ ಅವರು ಬಹುಕಾಲದ ಆಸೆ ಆಗಿತ್ತು. ಆದರೆ ಇಷ್ಟು ವಾರಗಳ ಕಾಲ ಅವರಿಗೆ ಸಾಧ್ಯವಾಗಿರಲಿಲ್ಲ. ಈ ಹಿಂದಿನ ವಾರಗಳಲ್ಲಿ ಟಾಸ್ಕ್ ಆಡುವಾಗ ಅವರಿಗೆ ಗಾಯ ಆಗಿತ್ತು. ಕಾಲಿಗೆ ಪಟ್ಟಾಗಿದ್ದರಿಂದ ಅನೇಕ ಟಾಸ್ಕ್​ನಿಂದ ಅವರು ಹೊರಗೆ ಉಳಿಯಬೇಕಾಗಿತ್ತು. ಆದರೆ ಈ ಎಲ್ಲ ಅಡೆತಡೆಗಳನ್ನು ದಾಟಿಕೊಂಡು ಬಂದು ಅವರು ಈ ವಾರ ಕ್ಯಾಪ್ಟನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿ ಆಗಿದ್ದರು. ಆದರೆ, ಇದನ್ನು ಸಂಪೂರ್ಣವಾಗಿ ಅನುಭವಿಸುವ ಭಾಗ್ಯ ಇವರಿಗೆ ಇಲ್ಲದಂತಾಗಿದೆ.

BBK 11: ರಜತ್​ರ ಮೈ-ಚಳಿ ಬಿಡಿಸಿದ ಪಾಸಿಟಿವ್ ಗೌತಮಿ: ಇಬ್ಬರ ಮಧ್ಯೆ ದೊಡ್ಡ ಗಲಾಟೆ