Monday, 6th January 2025

Naveen Dwarakanath: ಹೊಸ ಸಿನಿಮಾ ಕೈಗೆತ್ತಿಕೊಂಡ ‘ಫಾರ್ ರಿಜಿಸ್ಟ್ರೇಷನ್’ ಡೈರೆಕ್ಟರ್‌; ನವೀನ್ ಚಿತ್ರಕ್ಕೆ ಗುರುಗಳೇ‌ ನಿರ್ಮಾಪಕರು

Naveen Dwarakanath

ಬೆಂಗಳೂರು: ಈ ವರ್ಷ ತೆರೆಕಂಡ ಸ್ಯಾಂಡಲ್‌ವುಡ್‌ನ ʼಫಾರ್​ ರಿಜಿಸ್ಟ್ರೇಷನ್ʼ (For Registration) ಸಿನಿಮಾ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತರಾದವರು ನವೀನ್ ದ್ವಾರಕನಾಥ್ (Naveen Dwarakanath). ಮೊದಲ ಚಿತ್ರದಲ್ಲಿಯೇ ಸ್ವೀಟ್ ಲವ್ ಸ್ಟೋರಿ ಫ್ಯಾಮಿಲಿ ಡ್ರಾಮ ಕಥೆ ಹೇಳಿದ್ದ ಅವರೀಗ ಎರಡನೇ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ನವೀನ್ ತಮ್ಮ ಗುರು ಕೆ.ಚಂದ್ರಶೇಖರ್ ಅವರು ಬರೆದ ಕಥೆಗೆ ದೃಶ್ಯರೂಪ ಕೊಡಲು ಮುಂದಾಗಿದ್ದಾರೆ. ಇದೊಂದು ಆ್ಯಕ್ಷನ್‌ ಫ್ಯಾಮಿಲಿ ಡ್ರಾಮ ಕಥಾಹಂದರ ಹೊಂದಿದ್ದು, ಸದ್ಯ ಕಥೆ ಬರವಣಿಗೆಯ ಕೊನೆ ಹಂತದಲ್ಲಿದೆ.

ಅಂದ ಹಾಗೇ ಕೆ.ಚಂದ್ರಶೇಖರ್ ಅವರಿಗೆ ಚಿತ್ರರಂಗವೇನು ಹೊಸತಲ್ಲ. ಈ ಹಿಂದೆ ರಮೇಶ್ ಅರವಿಂದ್ ನಟನೆಯ ‘ಓ‌ ಮಲ್ಲಿಗೆ’ ಸಿನಿಮಾ ಹಾಡಿಗೆ ಕೋರಿಯೋಗ್ರಫಿ ಮಾಡಿದ್ದವರು ಇದೇ ಚಂದ್ರಶೇಖರ್. ವಿ.ಮನೋಹರ್ ನಿರ್ದೇಶನ ಹಾಗೂ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಹಾಡು ಅಂದು ದೊಡ್ಡಮಟ್ಟದ ಹಿಟ್ ಕಂಡಿತ್ತು. ರಮೇಶ್ ಅರವಿಂದ್ ಸ್ಟೈಲ್ ಜತೆಗೆ ಸಂಗೀತ ಹಾಗೂ ಕೋರಿಯೋಗ್ರಫಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಅದೇ ಚಂದ್ರಶೇಖರ್ ಈಗ ಕಥೆ ಬರೆಯುವ ಜತೆಗೆ ನಿರ್ಮಾಪಕರಾಗಿಯೂ ಮತ್ತೆ ಚಿತ್ರರಂಗಕ್ಕೆ ಮತ್ತೆ ಆಗಮಿಸಿದ್ದಾರೆ. ನವೀನ್ ದ್ವಾರಕನಾಥ್ 2ನೇ ಸಿನಿಮಾಕ್ಕೆ ಅವರೇ ಬಂಡವಾಳ ಹೂಡುತ್ತಿದ್ದಾರೆ. ಶಿಷ್ಯನ ಸಿನಿಮಾಗೆ ಗುರುಗಳೇ ಸಾಥ್ ನೀಡುತ್ತಿರುವುದು ವಿಶೇಷ.

ಕಥೆ ಬರವನಿಗೆ ಮುಗಿದ ಬಳಿಕ ಕಲಾವಿದರು ಹಾಗೂ ತಂತ್ರಜ್ಞರನ್ನು ಆಯ್ಕೆ‌ ಮಾಡಲಾಗುತ್ತದೆ ಎಂದು ಚಿತ್ರತಂಡ ತಿಳಿಸಿದೆ. ಅಪಾರ ಸ್ಟುಡಿಯೋಸ್ ಬ್ಯಾನರ್‌ನಡಿ ಕೆ.ಚಂದ್ರಶೇಖರ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ನವೀನ್ ದ್ವಾರಕನಾಥ್ ನಿರ್ದೇಶನದ ಮೊದಲ ಚಿತ್ರ ‘ಫಾರ್ ರಿಜಿಸ್ಟ್ರೇಷನ್’ನಲ್ಲಿ ಪೃಥ್ವಿ ಅಂಬಾರ್ ಹಾಗೂ ಮಿಲನಾ ನಾಗರಾಜ್ ನಾಯಕ-ನಾಯಕಿಯರಾಗಿ ಕಾಣಿಸಿಕೊಂಡಿದ್ದರು. ಇನ್ನುಳಿದಂತೆ ತಬಲಾ ನಾಣಿ, ರವಿಶಂಕರ್, ಸುಧಾ ಬೆಳವಾಡಿ, ಸ್ವಾತಿ, ರಮೇಶ್‌ ಭಟ್‌, ಅರವಿಂದ ಬೋಳ್ವಾರ್‌ ಮತ್ತಿತರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ನವೀನ್ ದ್ವಾರಕನಾಥ್ ಕಥೆ ಬರೆದು ನಿರ್ದೇಶನ ಮಾಡಿದರೆ, ಆರ್.ಕೆ. ಹರೀಶ್ ಸಂಗೀತ, ಛಾಯಾಗ್ರಹಣ ಅಭಿಷೇಕ್ ಜಿ.ಕಾಸರಗೋಡು, ಮನು ಶೇಡ್ಗರ್ ಸಂಕಲನದ ಜವಾಬ್ದಾರಿ ಹೊತ್ತಿದ್ದರು.

ಈ ಸುದ್ದಿಯನ್ನೂ ಓದಿ: Max Movie: ಕಿಚ್ಚ ಸುದೀಪ್ ಅಭಿನಯದ ʼಮ್ಯಾಕ್ಸ್ʼ ಚಿತ್ರದ ʼLions roarʼ ಹಾಡು ರಿಲೀಸ್