ಎಲ್ಎಲ್ಬಿ ವಿದ್ಯಾರ್ಥಿಗಳ ಜಗಳ ಮಾರಣಾಂತಿಕ ಹಲ್ಲೆಯಲ್ಲಿ ಪರ್ಯಾವಸಾನ
ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ, ದೂರು ದಾಖಲು.!
ಚಿಕ್ಕಬಳ್ಳಾಪುರ : ನಗರ ಹೊರವಲಯ ಹಳೇ ಆರ್ಟಿಒ ಕಚೇರಿ ಬಳಿಯಿರುವ ಸಮಾಜ ಕಲ್ಯಾಣ ಇಲಾಖೆ ಉಸ್ತುವಾರಿಯಲ್ಲಿ ನಡೆಯುವ ವೃತ್ತಿಪರ ಕೋರ್ಸುಗಳ ಕಾಲೇಜು ವಿದ್ಯಾರ್ಥಿನಿಲಯದಲ್ಲಿ ಕ್ಷಲ್ಲಕ ವಿಚಾರಕ್ಕೆ ಇಬ್ಬರು ಎಲ್ಎಲ್ಬಿ ವಿದ್ಯಾರ್ಥಿಗಳ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಮಾರಣಾಂತಿಕ ಹಲ್ಲೆಯಲ್ಲಿ ಪರ್ಯಾವಸಾನಗೊಂಡಿದ್ದು, ತಲೆಗೆ ಗಂಭೀರ ಗಾಯವಾಗಿರುವ ವಿದ್ಯಾರ್ಥಿಯನ್ನು ಜೈನ್ ಆಸ್ಪತ್ರೆಗೆ ದಾಖಲಿಸಿದ್ದು ಅಧಿಕಾರಿಗಳಿಂದ ನಂದಿಗಿರಿಧಾಮ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಿಕ್ಕಬಳ್ಳಾಪುರದ ಖಾಸಗಿ ಲಾ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿರುವ ಎಲ್ಎಲ್ಬಿ ವಿದ್ಯಾರ್ಥಿಗಳಾದ ನರೇಂದ್ರ ಮತ್ತು ಮಣಿ ಕುಮಾರ್ ನಡುವೆ ಹಿಂದಿನಿAದಲೂ ಶೀತಲ ಸಮರ ನಡೆದಿತ್ತು ಎಂದು ತಿಳಿದು ಬಂದಿದೆ.ಶನಿವಾರ ಊಟದ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಶುರುವಾಗಿದೆ.ಈ ವೇಳೆ ನರೇಂದ್ರ ತನ್ನ ಸ್ನೇಹಿತರನ್ನು ಹೊರಗಿನಿಂದ ವಸತಿನಿಲಯಕ್ಕೆ ಕರೆಸಿ ಮಣಿಕುಮಾರ್ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಾರೆ. ಪರಿಣಾಮ ಮಣಿ ಕುಮಾರ್ ತಲೆಗೆ ಗಂಭೀರಸ್ವರೂಪದ ಗಾಯವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ಕೂಡಲೇ ಸಹಪಾಠಿಗಳು ಈತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಘಟನೆಯ ನಂತರ ಹಲ್ಲೆ ನಡೆಸಿರುವ ವಿದ್ಯಾರ್ಥಿ ನರೇಂದ್ರ ಪರಾರಿ ಯಾಗಿದ್ದಾನೆ ಎನ್ನಲಾಗಿದೆ
ಘಟನೆಯ ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಜಿಲ್ಲಾ ಸಮಾಜಕಲ್ಯಾಣ ಅಧಿಕಾರಿ ತೇಜಾನಂದರೆಡ್ಡಿ, ತಾಲೂಕು ಸಮಾಜಕಲ್ಯಾಣ ಅಧಿಕಾರಿ ಶೇಷಾದ್ರಿ ಘಟನೆಯ ಸಂಬಂಧ ವಿದ್ಯಾರ್ಥಿಗಳಿಂದ ಮಾಹಿತಿ ಕಲೆಹಾಕಿ ಹೊರಗಿನವನ್ನು ವಸತಿನಿಲಯಕ್ಕೆ ಕರೆಸಿ ಹಲ್ಲೆ ನಡೆಸಿರುವ ನರೇಂದ್ರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ವೇಳೆ ಹೆಸರು ಹೇಳಲು ಇಚ್ಚಿಸದ ವಿದ್ಯಾರ್ಥಿಗಳು ಪತ್ರಿಕೆಯೊಂದಿಗೆ ಮಾತನಾಡಿ ವೃತ್ತಿಪರ ವಸತಿ ನಿಲಯದಲ್ಲಿ ಕೆಲ ವಿದ್ಯಾರ್ಥಿಗಳು ಓದುವ ವಾತಾವರಣವನ್ನೇ ಹಾಳು ಮಾಡುತ್ತಿದ್ದಾರೆ.ಇವರ ದೆಸೆಯಿಂದ ಚೆನ್ನಾಗಿ ಓದಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಬಯಸುವವರಿಗೆ ತುಂಬಾ ತೊಂದರೆಯಾಗುತ್ತಿದೆ.
ವಸತಿ ನಿಲಯದಲ್ಲಿ ಧೂಮಪಾನ, ಮಧ್ಯಪಾನ ಹವ್ಯಾಹತವಾಗಿ ನಡೆದಿದೆ. ವಿದ್ಯಾರ್ಥಿ ನಿಲಯಕ್ಕೆ ಸಂಬಂಧ ಪಡದ ಪುಂಡುಪೋಕರಿಗಳು ಇಲ್ಲಿಗೆ ಬರುವುದಲ್ಲದೆ, ಪ್ರಶ್ನೆ ಮಾಡಿದವರ ಮೇಲೆ ಮನಸೋಯಿಚ್ಚೆ ಹಲ್ಲೆ ನಡೆಸುತ್ತಾರೆ. ಇದಕ್ಕೆ ಕಡಿವಾಣ ಹಾಕಬೇಕಾದ ಅಧಿಕಾರಿ ವರ್ಗ ಕಣ್ಮುಚ್ಚಿ ಕುಳಿತಿರುವುದೇ ಇಂತಹ ಘಟನೆಗಳಿಗೆ ಸಾಕ್ಷಿ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.