Tuesday, 17th December 2024

Vishweshwar Bhat Column: ಇದು ಜಪಾನಿನ ಜೀವನಾಡಿ

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಈ ವರ್ಷದ ಆರಂಭದಲ್ಲಿ ಬ್ರಿಟನ್‌ನಲ್ಲಿ ರೈಲು ಮುಷ್ಕರ ಘೋಷಿಸಿದ್ದು ನೆನಪಿರಬಹುದು. ಇದು ಬ್ರಿಟಿಷ್ ಪ್ರಜೆ ಗಳಲ್ಲಿ ಆತಂಕವನ್ನೂ, ಮುಕ್ತ ರೈಲು ಪ್ರಯಾಣದ ಬಗ್ಗೆ ಸಂದೇಹವನ್ನೂ ಮೂಡಿಸಿತ್ತು. ಆದರೆ ಜಪಾನ್‌ನಲ್ಲಿ ಇಂಥ ಚಿತ್ರಣವನ್ನು ಕಲ್ಪಿಸಿಕೊಳ್ಳುವುದು ಕಷ್ಟ.

1970ರಿಂದ ಇಲ್ಲಿ ತನಕ ಜಪಾನಿನಲ್ಲಿ ರೈಲು ಮುಷ್ಕರ ನಡೆದೇ ಇಲ್ಲ. ಭೂಕಂಪ, ಸುನಾಮಿ, ಚಂಡಮಾರುತದಂಥ ನೈಸರ್ಗಿಕ ಪ್ರಕೋಪದ ಹೊರತಾಗಿ, ಬೇರಾವ ಕಾರಣಕ್ಕೂ ಒಂದು ದಿನವೂ ರೈಲು ಸಂಚಾರ ನಿಂತಿಲ್ಲ. ರೈಲು ಸಾರಿಗೆ ಜಪಾನಿನ ಜೀವನಾಡಿ. 10 ನಿಮಿಷ ರೈಲು ಸ್ಥಗಿತವಾದರೆ (ಹಾಗೇನೂ ಆಗಿಲ್ಲ ಎಂಬುದು ಬೇರೆ ಮಾತು), ಇಡೀ ದೇಶವೇ ಸ್ತಬ್ಧವಾದಂತೆ. ಕಾರಣ ಪ್ರತಿದಿನ 18.5 ದಶಲಕ್ಷ ಮಂದಿ ರೈಲಿನಲ್ಲಿ ಪ್ರಯಾಣಿಸುತ್ತಾರೆ.

ಅಮೆರಿಕದಲ್ಲಿ ಶೇ.90ರಷ್ಟು ಮಂದಿ ರಸ್ತೆ ಸಾರಿಗೆಯನ್ನು ಅವಲಂಬಿಸಿದ್ದರೆ, ಜಪಾನಿನ ಶೇ.40ರಷ್ಟು ಮಂದಿ ರೈಲನ್ನು ನೆಚ್ಚಿಕೊಂಡಿದ್ದಾರೆ. ಈ ಕಾರಣದಿಂದ ಜಪಾನನ್ನು Nation on Train ಎಂದು ಕರೆಯುವುದುಂಟು. 2023ರಲ್ಲಿ 22.61 ಶತಕೋಟಿ ಜನರು ರೈಲ್ವೆ ಸಾರಿಗೆ ವ್ಯವಸ್ಥೆಯನ್ನು ಬಳಸಿದ್ದಾರಂತೆ. ಶೇ.53ರಷ್ಟು ವಿದ್ಯಾರ್ಥಿಗಳು ಮತ್ತು ಶೇ.48ರಷ್ಟು ಕಂಪನಿಯ ಕೆಲಸಗಾರರು ರೈಲನ್ನೇ ಅವಲಂಬಿಸಿದ್ದಾರೆ.

ಪ್ರಪಂಚದ ಅತ್ಯಂತ ವಿಶಾಲ ಅಥವಾ ವಿಸ್ತಾರವಾದ ನಗರ ರೈಲುಜಾಲ (ರೈಲ್ವೆ ನೆಟ್ ವರ್ಕ್) ಎಂದು ಕರೆಯಿಸಿ ಕೊಂಡಿರುವ ‘ಗ್ರೇಟರ್ ಟೋಕಿಯೊ’ ರೈಲಿನಲ್ಲಿ ಪ್ರತಿದಿನ 15 ದಶಲಕ್ಷ ಮಂದಿ ಪ್ರಯಾಣಿಸುತ್ತಾರೆ. ಈ ದೇಶದಲ್ಲಿ ಮಾನೋರೈಲ್ ಸೇರಿದಂತೆ ಶೇ.71ರಷ್ಟು ಪ್ರಯಾಣಿಕರು ಈ ರೈಲನ್ನು ಬಳಸುವುದು ಗಮನಾರ್ಹ. 2023ರಲ್ಲಿ, ಟೋಕಿಯೋ ಮೆಟ್ರೋದಲ್ಲಿ 6.52 ದಶಲಕ್ಷ ಮಂದಿ ಪ್ರಯಾಣಿಸಿದ್ದರು. ನಿಪ್ಪೊರಿ-ತೋನೆರಿ ಲೈನರ್ ಎಂಬ ಹೊಸ ಸಾರಿಗೆ ವ್ಯವಸ್ಥೆಯು ಕೋವಿಡ್‌ಗಿಂತ ಮೊದಲಿನಿಂದಲೂ ದೇಶದ ಅತ್ಯಂತ ದಟ್ಟಣೆಯ ಮಾರ್ಗಗಳಲ್ಲಿ ಒಂದಾಗಿದೆ. ಗರಿಷ್ಠ ಅವಧಿಯಲ್ಲಿ, ಇದು ಗಂಟೆಗೆ 8000 ಪ್ರಯಾಣಿಕರನ್ನು ಒಯ್ಯುತ್ತದೆ. ವಿಶ್ವದ ಅತ್ಯಂತ ವೇಗವಾಗಿ ಕಾರ್ಯ ನಿರ್ವಹಿಸುವ ರೈಲು ಅಂದರೆ ಚೀನಾದ ಶಾಂಘೈ ಮ್ಯಾಗ್ಲೆವ್ ರೈಲು.

ಆದರೆ ಜಪಾನಿನ ಟೊಕೈಡೊ ಶಿಂಕನ್ಸೆನ್ ಅತ್ಯಂತ ಹಳೆಯ ರೈಲು ಮತ್ತು ವಿಶ್ವದ ಮೊದಲ ಹೈ-ಸ್ಪೀಡ್ ರೈಲು ವ್ಯವಸ್ಥೆಯಾಗಿದೆ. ಜಪಾನಿನ ಸುಪ್ರಸಿದ್ಧ ಬುಲೆಟ್ ಟ್ರೇನನ್ನು 1964ರ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ಪ್ರಾರಂಭಿಸಲಾಯಿತು. ಇದು ಟೋಕಿಯೊವನ್ನು ಒಸಾಕಾಗೆ ಗಂಟೆಗೆ 210 ಕಿ.ಮೀ. ವೇಗದಲ್ಲಿ ಸಂಪರ್ಕಿಸುತ್ತದೆ. ಜಪಾನ್ ಕೂಡ ಪ್ರಸ್ತುತ ಚೀನಾದ ಮ್ಯಾಗ್ಲೆವ್ ಟ್ರೇನ್ ಮಾದರಿಯ ಟ್ರೇನನ್ನು ಅಭಿವೃದ್ಧಿಪಡಿಸುತ್ತಿದೆ. ಟೋಕಿಯೊ ಮತ್ತು ನಗೋಯಾ ನಡುವಿನ 286 ಕಿ.ಮೀ.ಗಳನ್ನು ಕೇವಲ 40 ನಿಮಿಷಗಳಲ್ಲಿ ಸಂಪರ್ಕಿಸುತ್ತದೆ. ಎರಡು ನಗರಗಳ ನಡುವೆ ವಿಮಾನದಲ್ಲಿ ಹಾರುವುದಕ್ಕಿಂತ ವೇಗವಾಗಿ ರೈಲಿನಲ್ಲಿ (ಗಂಟೆಗೆ 603 ಕಿ.ಮೀ. ವೇಗ) ಕ್ರಮಿಸಬಹುದು. ಇದು ಚೀನಾದ ಮ್ಯಾಗ್ಲೆವ್ ಹೈಪರ್‌ಲೂಪ್ ರೈಲಿನ ವೇಗಕ್ಕಿಂತ ಅಧಿಕ.

ಜಪಾನಿನ ಮ್ಯಾಗ್ಲೆವ್ ರೈಲು 2027ರ ವೇಳೆಗೆ ಕಾರ್ಯಾರಂಭ ಮಾಡಲಿದೆ. ಜಪಾನ್ ರೈಲು ಪ್ರಯಾಣಿಕರ ಸೇವೆಗೆ ಸದಾ ಕಂಕಣಬದ್ಧ. ಕ್ಯೋಟೋದಿಂದ ಟೋಕಿ ಯೊಕ್ಕೆ ಬುಲೆಟ್ ಟ್ರೇನಿನಲ್ಲಿ ಬರುವಾಗ ನನ್ನೊಂದಿಗಿದ್ದ ಪ್ರಯಾಣಿಕರೊಬ್ಬರು ರೈಲು ಟಿಕೆಟನ್ನು ಕಳೆದು ಕೊಂಡರು. ಟಿಕೆಟ್ ಮೇಲಿರುವ ಬಾರ್‌ಕೋಡ್ ನಿಂದ ಮಾತ್ರ ಗೇಟ್ ತೆರೆಯಲು ಸಾಧ್ಯ. ನನ್ನ ಜತೆಯಲ್ಲಿದ್ದ ವರು ತಾವು ಟಿಕೆಟ್ ಕಳೆದುಕೊಂಡಿದ್ದನ್ನು ಅಲ್ಲಿಯೇ ನಿಂತಿದ್ದ ಸಮವಸ್ತ್ರ ಧರಿಸಿದ್ದ ಮಹಿಳೆಗೆ ಹೇಳಿದಾಗ ಆಕೆ ಮುಗುಳ್ನಗೆ ಬೀರಿ ಆ ಗೇಟಿನಿಂದ ಹೊರಹೋಗಲು ಅನುವು ಮಾಡಿಕೊಟ್ಟಳು. ಅವನನ್ನು ಅನುಮಾನಿಸುವ ಯಾವುದೇ ಪ್ರಶ್ನೆಯನ್ನೂ ಕೇಳಲಿಲ್ಲ ಅಥವಾ ದಂಡ ಪಾವತಿಸುವಂತೆ ಒತ್ತಾಯಿಸ ಲಿಲ್ಲ.

ಆಕೆಯ ವರ್ತನೆಯಲ್ಲಿ ಒರಟುತನವಿರಲಿಲ್ಲ. ‘ಗ್ರಾಹಕನೇ ಮಹಾರಾಜ’ (Customer is the King) ಎಂಬ ಉಕ್ತಿಗೆ ಸರಿಹೊಂದುವ ವರ್ತನೆ ಆಕೆಯದಾಗಿತ್ತು. ಜಪಾನ್ ಬ್ರಿಟನ್‌ಗಿಂತ ಜನಸಂಖ್ಯೆಯ ತಲಾ ಎರಡು ಪಟ್ಟು ಹೆಚ್ಚು ನಿಲ್ದಾಣಗಳನ್ನು ಹೊಂದಿದೆ. ಜಪಾನಿನ ರೈಲುಗಳು ಆಧುನಿಕ, ಸ್ವಚ್ಛ, ವಿಶ್ವಾಸಾರ್ಹ ಮತ್ತು ಸುರಕ್ಷಿತ. ಆದರೆ ರೈಲು ಪ್ರಯಾಣ ದರ ಎಂದಿಗೂ ಹೆಚ್ಚಾಗುವುದಿಲ್ಲ.

ಇದನ್ನೂ ಓದಿ: @vishweshwarbhat