Sunday, 5th January 2025

Tim Southee: ಟಿಮ್‌ ಸೌಥಿಗೆ ಗೆಲುವಿನ ವಿದಾಯ

ವೆಲ್ಲಿಂಗ್ಟನ್‌: ನ್ಯೂಜಿಲ್ಯಾಂಡ್‌ ತಂಡದ ಹಿರಿಯ ವೇಗಿ ಟಿಮ್‌ ಸೌಥಿ(Tim Southee) ಅವರು ಗೆಲುವಿನೊಂದಿಗೆ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇಂಗ್ಲೆಂಡ್‌(3rd Test NZ vs ENG) ವಿರುದ್ಧದ ತವರಿನ ಮೂರನೇ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ಬರೋಬ್ಬರಿ 423 ರನ್‌ಗಳ ಜಯ ಸಾಧಿಸಿ ಮೆರೆದಾಡಿತು. ಈ ಗೆಲುವಿನೊಂದಿಗೆ ಸೌಥಿ ತಮ್ಮ ಟೆಸ್ಟ್‌ ಕ್ರಿಕೆಟ್‌ ಬಾಳ್ವೆಯನ್ನು ಸ್ಮರಣೀಯಗೊಳಿಸಿದರು.

ಮೊದಲ ಇನಿಂಗ್ಸ್‌ನಲ್ಲಿ 347 ರನ್‌ ಬಾರಿಸಿದ್ದ ನ್ಯೂಜಿಲ್ಯಾಂಡ್‌ ದ್ವಿತೀಯ ಇನಿಂಗ್ಸ್‌ನಲ್ಲಿ 453 ರನ್‌ ಬಾರಿಸಿ 657 ರನ್‌ ಮುನ್ನಡೆ ಸಾಧಿಸಿತ್ತು. ಗೆಲುವಿಗೆ 658 ರನ್‌ ಬೆನ್ನಟ್ಟಿದ ಇಂಗ್ಲೆಂಡ್‌ 234 ರನ್‌ಗೆ ಸರ್ವಪತನ ಕಂಡು ಹೀನಾಯ ಸೋಲು ಕಂಡಿತು. ಅಂತಿಮ ಪಂದ್ಯ ಸೋತರೂ ಮೊದಲೆರಡು ಪಂದ್ಯದಲ್ಲಿ ಗೆಲುವು ಸಾಧಿಸಿದ ಕಾರಣ ಸರಣಿ ಇಂಗ್ಲೆಂಡ್‌ ಪಾಲಾಯಿತು.

ಇಂಗ್ಲೆಂಡ್‌ ಟೆಸ್ಟ್‌ ಸರಣಿ ಆರಂಭಕ್ಕೂ ಮುನ್ನವೇ ಟೆಸ್ಟ್ ಕ್ರಿಕೆಟ್‌ಗೆ ಟಿಮ್ ಸೌಥಿ ನಿವೃತ್ತಿ ಪ್ರಕಟಿಸಿದ್ದರು. ವಿದಾಯ ಪಂದ್ಯದಲ್ಲಿ ಸೌಥಿ 2 ವಿಕೆಟ್‌ ಮತ್ತು 25 ರನ್‌ ಬಾರಿಸಿದ್ದರು. ನ್ಯೂಜಿಲ್ಯಾಂಡ್‌ ತಂಡವನ್ನು ಪ್ರತಿನಿಧಿಸುವುದು ನನ್ನ ದೊಡ್ಡ ಕನಸಾಗಿತ್ತು. 18 ವರ್ಷಗಳ ಕಾಲ ದೇಶಕ್ಕಾಗಿ ಆಡಿರುವುದು ನನಗೆ ದೊರಕಿರುವ ದೊಡ್ಡ ಗೌರವ ಎಂದು ಸೌಥಿ ಪಂದ್ಯದ ಬಳಿಕ ಹೇಳಿದರು. ಕಿವೀಸ್‌ ಆಟಗಾರರು ಸೌಥಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ಇದನ್ನೂ ಓದಿ NZ vs ENG: 147 ವರ್ಷಗಳ ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲೇ ವಿಶೇಷ ದಾಖಲೆ ಬರೆದ ಕೇನ್‌ ವಿಲಿಯಮ್ಸನ್‌

2008ರಲ್ಲಿ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲೇ ಅವರು ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಇದೀಗ ವಿದಾಯ ಕೂಡ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲೇ ಎನ್ನುವುದು ಕಾಕತಾಳಿಯ. ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಪಡೆಯುವ ಜತೆಗೆ ಅಜೇಯ 77 ರನ್‌ ಗಳಿಸಿ ಮಿಂಚಿದ್ದರು. ‌

ಸೌಥಿ ಟೆಸ್ಟ್ ಸಾಧನೆ

35 ವರ್ಷದ ಸೌಥಿ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಕಿವೀಸ್‌ ಪರ ಅತಿ ಹೆಚ್ಚು ವಿಕೆಟ್ ಗಳಿಸಿದ ಎರಡನೇ ಬೌಲರ್ ಆಗಿದ್ದಾರೆ. ಈವರೆಗೆ 107 ಟೆಸ್ಟ್ ಪಂದ್ಯಗಳಲ್ಲಿ 391 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಕ್ರಿಕೆಟ್‌ ದಿಗ್ಗಜ ರಿಚರ್ಡ್ ಹ್ಯಾಡ್ಲಿ (431) ಕಿವೀಸ್‌ ಪರ ಅತಿ ಹೆಚ್ಚು ವಿಕೆಟ್‌ ಪಡೆದ ದಾಖಲೆ ಹೊಂದಿದ್ದಾರೆ. ಟೆಸ್ಟ್‌ನಲ್ಲಿ 300ಕ್ಕೂ ಅಧಿಕ, ಏಕದಿನದಲ್ಲಿ 200ಕ್ಕೂ ಅಧಿಕ ಮತ್ತು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100ಕ್ಕೂ ಅಧಿಕ ವಿಕೆಟ್ ಗಳಿಸಿದ ಏಕಮಾತ್ರ ಬೌಲರ್ ಅವರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಿವೀಸ್‌ ಪರ ಅತಿ ಹೆಚ್ಚು ವಿಕೆಟ್ (776)ಪಡೆದ ಬೌಲರ್ ಎಂಬ ಹೆಗ್ಗಳಿಕೆಯೂ ಸೌಥಿ ಅವರದು. ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ (164) ಗಳಿಸಿದ ದಾಖಲೆ ಅವರ ಹೆಸರಿನಲ್ಲಿದೆ.

ಬೌಲಿಂಗ್‌ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿಯೂ ಸೌಥಿ ಉತ್ತಮ ದಾಖಲೆ ಹೊಂದಿದ್ದಾರೆ. ಟೆಸ್ಟ್‌ನಲ್ಲಿ 2245, ಏಕದಿನಲ್ಲಿ 742, ಟಿ20 ಯಲ್ಲಿ 303 ರನ್‌ ಬಾರಿಸಿದ್ದಾರೆ. ಈ ವೇಳೆ ಒಟ್ಟು 8 ಅರ್ಧಶತಕ ಸಿಡಿಸಿದ್ದಾರೆ. ಟೆಸ್ಟ್‌ನಲ್ಲಿ 15 ಬಾರಿ 5 ವಿಕೆಟ್‌ ಗೊಂಚಲು ಮತ್ತು ಒಂದು ಬಾರಿ 10 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದಾರೆ.