Wednesday, 18th December 2024

Rewind 2024: ಈ ವರ್ಷ ಇಹಲೋಕ ತ್ಯಜಿಸಿದ ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರಿವರು

ನವದೆಹಲಿ: ಕನ್ನಡ ಚಿತ್ರರಂಗ(Sandalwood)ದ ಸಿನಿಮಾಗಳು(Cinema) ಅಂತರಾಷ್ಟ್ರೀಯ ಮಟ್ಟದಲ್ಲಿ ಮಿನುಗಿದ ವರ್ಷ 2024(Rewind 2024). ಹಲವು ಹೊಸ, ಗುಣಮಟ್ಟದ, ಕಂಟೆಂಟ್ ಆಧರಿತ ಸಿನಿಮಾಗಳು ಕನ್ನಡ ಚಿತ್ರರಂಗದಿಂದ ಬಂದಿದ್ದು ಮಾತ್ರವಲ್ಲ ನೂರಾರು ಕೋಟಿ ಗಳಿಕೆಯನ್ನೂ ಮಾಡಿವೆ. 2022 ವರ್ಷವನ್ನು ಕನ್ನಡ ಚಿತ್ರರಂಗ ಬೆಂಚ್ ಮಾರ್ಕ್‌ ಮಾದರಿಯಲ್ಲಿ ನೆನಪಿಟ್ಟುಕೊಳ್ಳಲಿದೆ. ಆದರೆ ಈ ವರ್ಷ ಎಲ್ಲವೂ ಸಿಹಿಯೇ ಆಗಿರಲಿಲ್ಲ. ಹಲವು ಖ್ಯಾತ ಕಲಾವಿದರು ನಮ್ಮನ್ನಗಲಿ(Death) ಹೋಗಿದ್ದಾರೆ. ಈ ವರ್ಷ ಅಗಲಿದ ಬೆಳ್ಳಿತೆರೆ ಕಲಾವಿದರ(Celebrities) ಪಟ್ಟಿ ಇಲ್ಲಿದೆ.

ದ್ವಾರಕೀಶ್

ಏಪ್ರಿಲ್ 16 ರಂದು ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಅವರು ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ದ್ವಾರಕೀಶ್ ಅವರು ಮನೆಯಲ್ಲೇ ನಿಧನರಾಗಿದ್ದರು. 1942ರ ಆಗಸ್ಟ್ 19ರಂದು ಮೈಸೂರಿನಲ್ಲಿ ಜನಿಸಿದ ದ್ವಾರಕೀಶ್, ಅಲ್ಲಿಯೇ ಶಿಕ್ಷಣ ಮುಗಿಸಿದರು. ನಂತರ ಮೈಸೂರಿನಲ್ಲೇ ವ್ಯವಹಾರವನ್ನು ಆರಂಭಿಸಿದ್ದರು. ಆದರೆ ಅವರಲ್ಲಿದ್ದ ನಟನೆಯ ಮೇಲಿನ ಗೀಳು ಅವರನ್ನು ಚಿತ್ರರಂಗಕ್ಕೆ ಕರೆತಂದಿತ್ತು. ಅದಕ್ಕೆ ಪೂರಕವಾಗಿ ಅವರಿಗೆ ಬೆಂಬಲಕ್ಕೆ ನಿಂತವರು ಅವರ ಸಂಬಂಧಿ, ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ. ಹಾಗಾಗಿ, 1963ರಲ್ಲಿ ಚಿತ್ರರಂಗಕ್ಕೆ ಕಲಾವಿದರಾಗಿ ದ್ವಾರಕೀಶ್ ಎಂಟ್ರಿ ನೀಡಿದರು. ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ನೂರಾರು ಸಿನಿಮಾಗಳಲ್ಲಿ ನಟಿಸಿದ್ದರು. ಚಂದನವನಕ್ಕೆ ಅವರ ಕೊಡುಗೆ ಅಪಾರ.

ಅಪರ್ಣಾ
ಕನ್ನಡ ನಾಡು ಕಂಡ ಅಪರೂಪದ ನಿರೂಪಕಿ, ನಟಿ ಅಪರ್ಣಾ ಅವರು ವಿಧಿವಶರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಪರ್ಣಾ ಅವರಿಗೆ 58 ವರ್ಷ ವಯಸ್ಸಾಗಿತ್ತು. ಕಳೆದ ಎರಡು ವರ್ಷಗಳಿಂದ ಅವರು ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.ಜುಲೈ 11 ರಾತ್ರಿ ಅಪರ್ಣಾ ಇಹಲೋಕ ತ್ಯಜಿಸಿದರು.

1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಮಸಣದ ಹೂವು’ ಸಿನಿಮಾದಲ್ಲಿ ಪಾರ್ವತಿ ಎಂಬ ಪಾತ್ರ ಮಾಡುವ ಮೂಲಕ ಬಣ್ಣದ ಲೋಕಕ್ಕೆ ಅಪರ್ಣಾ ಎಂಟ್ರಿ ನೀಡಿದ್ದರು. ಆನಂತರ ಸಂಗ್ರಾಮ, ನಮ್ಮೂರ ರಾಜ, ಸಾಹಸ ವೀರ, ಇನ್ಸ್‌ಪೆಕ್ಟರ್ ವಿಕ್ರಂ, ಡಾಕ್ಟರ್ ಕೃಷ್ಣ ಮುಂತಾದ ಸಿನಿಮಾಗಳಲ್ಲಿ ನಟಿಸಿದರು. ಬಳಿಕ ಸಿನಿಮಾಗಳಿಂದ ಸಂಪೂರ್ಣವಾಗಿ ದೂರ ಉಳಿದಿದ್ದ ಅಪರ್ಣಾ, ಈಚೆಗಷ್ಟೇ ತೆರೆಕಂಡ ‘ಗ್ರೇ ಗೇಮ್ಸ್‌’ ಎಂಬ ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದರು.

Director Guruprasad

ಗುರುಪ್ರಸಾದ್
ಜಗ್ಗೇಶ್ ನಟನೆಯ ‘ಮಠ’, ‘ಎದ್ದೇಳು ಮಂಜುನಾಥ’ ಇನ್ನೂ ಕೆಲವು ಜನಪ್ರಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ, ಕೆಲವು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದ ಗುರುಪ್ರಸಾದ್ ನವೆಂಬರ್ 3ರಂದು ನಿಧನ ಹೊಂದಿದ್ದರು. ಅವರಿಗೆ 50 ವರ್ಷ ವಯಸ್ಸಾಗಿತ್ತು. ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿತ್ತು. ಮಾದನಾಯಕಹಳ್ಳಿಯ ಅಪಾರ್ಟ್​ಮೆಂಟ್​ನಲ್ಲಿ ಅವರ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗುರುಪ್ರಸಾದ್ ಅವರು ಸಾಲಗಾರರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು.

‘ಮಠ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಗುರುಪ್ರಸಾದ್ ಮೊದಲ ಸಿನಿಮಾಕ್ಕೆ ರಾಜ್ಯ ಪ್ರಶಸ್ತಿ ಪಡೆದಿದ್ದರು. ಅದಾದ ಬಳಿಕ ನಿರ್ದೇಶಿಸಿದ ‘ಎದ್ದೇಳು ಮಂಜುನಾಥ’ ಭಾರಿ ದೊಡ್ಡ ಹಿಟ್ ಆಯ್ತು, ಕಲ್ಟ್ ಕಾಮಿಡಿ ಸಿನಿಮಾ ಆಗಿ ಗುರುತಿಸಲಾಗುತ್ತಿದೆ. ಅದಾದ ಬಳಿಕ ‘ಡೈರೆಕ್ಟರ್ಸ್ ಸ್ಪೆಷಲ್’ ಸಿನಿಮಾ ಮಾಡಿದರು. ಈ ಸಿನಿಮಾ ಮೂಲಕ ಡಾಲಿ ಧನಂಜಯ್ ನಾಯಕನಾಗಿ ಪರಿಚಯಗೊಂಡರು. ಅದಾದ ಬಳಿಕ 2017 ರಲ್ಲಿ ‘ಎರಡನೇ ಸಲ’ ನಿರ್ದೇಶಿಸಿದರು. ಆ ಸಿನಿಮಾ ಸಾಧಾರಣ ಯಶಸ್ಸನ್ನಷ್ಟೆ ಕಂಡಿತು.

‘ಎರಡನೇ ಸಲ’ ಸಿನಿಮಾ ಆದಮೇಲೆ ದೊಡ್ಡ ಬ್ರೇಕ್ ತೆಗೆದುಕೊಂಡಿದ್ದ ಗುರುಪ್ರಸಾದ್ ಇದೇ ವರ್ಷದಲ್ಲಿ ಜಗ್ಗೇಶ್ ಅವರೊಟ್ಟಿಗೆ ‘ರಂಗನಾಯಕ’ ಸಿನಿಮಾ ಮಾಡಿದರು. ಸಿನಿಮಾ ಚಿತ್ರಮಂದಿರದಲ್ಲಿ ಅಟ್ಟರ್ ಫ್ಲಾಪ್ ಆಯ್ತು. ‘ರಂಗನಾಯಕ’ ಸಿನಿಮಾದ ಸೋಲಿನಿಂದ ವಿಚಲಿತರಾಗಿದ್ದ ಗುರುಪ್ರಸಾದ್ ಸಾಕಷ್ಟು ಸಾಲಗಳಿಗೆ ಸಿಲುಕಿಕೊಂಡಿದ್ದರು. ಕೊನೆಗೆ ಈಗ ನಿಧನ ಹೊಂದಿದ್ದಾರೆ. ಕೌಟುಂಬಿಕ ಕಲಹಗಳ ಕಾರಣದಿಂದಾಗಿ ಗುರುಪ್ರಸಾದ್ ಅವರ ಮೊದಲ ಮದುವೆ ಮುರಿದು ಬಿದ್ದಿತ್ತು, ಕೆಲ ತಿಂಗಳ ಹಿಂದಷ್ಟೆ ಅವರು ಎರಡನೇ ಮದುವೆ ಆಗಿದ್ದರು.

ಕೆ. ಶಿವರಾಮ್
ಮಾಜಿ ಐಎಎಸ್ ಅಧಿಕಾರಿ, ಸಿನಿಮಾ ನಟ, ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದ ಕೆ ಶಿವರಾಮ್ ಫೆಬ್ರವರಿ 29 ರಂದು ನಿಧನರಾದರು. ‘ಶಿವರಾಮ್ ಅವರು ಕರ್ನಾಟಕದ ಮೇರು ವ್ಯಕ್ತಿತ್ವದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಅತ್ಯುತ್ತಮ ನಟರಾಗಿದ್ದರು. ಜೊತೆಗೆ ದಕ್ಷ ಐಎಎಸ್ ಅಧಿಕಾರಿಗಳೂ ಸಹ ಆಗಿದ್ದರು. ಕನ್ನಡದಲ್ಲೇ ಐಎಎಸ್ ಬರೆದು, ನಂತರ ಬೆಂಗಳೂರು, ವಿಜಯಪುರ, ಕೊಪ್ಪಳ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ನಂತರ ‘ಬಾ ನಲ್ಲೆ ಮಧುಚಂದ್ರಕೆ’, ವಸಂತ ಕಾವ್ಯದಂತಹ ಚಿತ್ರಗಳಲ್ಲಿ ನಾಯಕರಾಗಿ ನಟಿಸಿದ್ದಾರೆ. ಸಾಂಗ್ಲಿಯಾನ 3 ಚಿತ್ರದಲ್ಲಿ ಇವರದ್ದು ಖಳನಾಯಕನ ಪಾತ್ರ. ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶಿವರಾಮ್, ತಮ್ಮ ಮಗಳನ್ನು ನಟ ಪ್ರದೀಪ್ ಅವರಿಗೆ ಧಾರೆಯರೆದಿದ್ದರು.

1993ರಲ್ಲಿ ತೆರೆಕಂಡ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಮೂಲಕ ಕೆ ಶಿವರಾಮ್ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ವಸಂತಕಾವ್ಯ, ಸಾಂಗ್ಲಿಯಾನ ಪಾರ್ಟ್ ೩, ಪ್ರತಿಭಟನೆ, ಖಳನಾಯಕ, ಯಾರಿಗೆ ಬೇಡ ದುಡ್ಡು, ಗೇಮ್ ಫಾರ್ ಲವ್, ನಾಗ, ಓ ಪ್ರೇಮ ದೇವತೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದರು.

ದೀಪಕ್ ಅರಸ್

ಕನ್ನಡ ನಟಿ ಅಮೂಲ್ಯ ಅವರ ಸಹೋದರ ಹಾಗೂ ನಿರ್ದೇಶಕ ದೀಪಕ್ ಅರಸ್ ಅವರು 2024ರ ಅಕ್ಟೋಬರ್ 17ರಂದು ಕಿಡ್ನಿ ವೈಫಲ್ಯದಿಂದ ಬೆಂಗಳೂರಿನ ರಾಜರಾಜೇಶ್ವರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧರಾದರು. ದೀಪಕ್ 2011ರಲ್ಲಿ ‘ಮನಸಾಲಜಿ’ ಸಿನಿಮಾ ನಿರ್ದೇಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. 2023ರಲ್ಲಿ ‘ಶುಗರ್ ಫ್ಯಾಕ್ಟರಿ’ ಸಿನಿಮಾ ನಿರ್ದೇಶನ ಮಾಡಿದ್ದರು. ಸ್ಯಾಂಡಲ್‌ವುಡ್‌ನಲ್ಲಿ ಅಮೂಲ್ಯ ಬಾಲನಟಿ, ನಾಯಕಿಯಾಗಿ ಜನಪ್ರಿಯತೆ ಪಡೆದಿದ್ದರೆ, ಅವರ ಸಹೋದರ ದೀಪಕ್ ಅರಸ್‌ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಕನ್ನಡದ ‘ಮನಸಾಲಜಿ’, ‘ಶುಗರ್ ಫ್ಯಾಕ್ಟರಿ’ ಸಿನಿಮಾಗಳಿಗೆ ದೀಪಕ್ ಅರಸ್‌ ಆಕ್ಷನ್ ಕಟ್ ಹೇಳಿದ್ದರು

Actor T Thimmaiah

ಡಿ ತಿಮ್ಮಯ್ಯ
ಡಾ ರಾಜ್​ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಕನ್ನಡದ ಹಲವು ಹಿರಿಯ ನಟರೊಡನೆ ನಟಿಸಿದ್ದ ಹಿರಿಯ ಕಲಾವಿದರ ಡಿ ತಿಮ್ಮಯ್ಯ ಅವರು ನವೆಂಬರ್ 16 ನಿಧನ ಹೊಂದಿದ್ದರು. ಅವರಿಗೆ 92 ವರ್ಷ ವಯಸ್ಸಾಗಿತ್ತು, ಇವರಿಗೆ 4 ಜನ ಮಕ್ಕಳು, ಹೆಸರಾಂತ ನಿರ್ದೇಶಕರಾದ ದೊರೈ ಭಗವಾನ್, ಸುನೀಲ್ ಕುಮಾರ್ ದೇಸಾಯಿ, ಭಾರ್ಗವ, ಸಂಗೀತಂ ಶ್ರೀನಿವಾಸ್ ರಾವ್, ಕೆವಿ ಜಯರಾಮ್ ಮತ್ತು ಅನೇಕರೊಂದಿಗೆ ಕೆಲಸ ಮಾಡಿದ್ದಾರೆ. ಚೆಲಿಸುವ ಮೋಡಗಳು, ಪ್ರತಿಧ್ವನಿ, ಬಂಧನ, ಬೆಂಕಿಯ ಬಾಲೆ, ಕಾಮನ ಬಿಲ್ಲು, ಪರಮೇಶಿ ಪ್ರೇಮ ಪ್ರಸಂಗ, ಜ್ವಾಲಾಮುಖಿ, ಭಾಗ್ಯದ ಲಕ್ಷ್ಮಿ ಬಾರಮ್ಮ , ಕರ್ಣ, ಈ ಜೀವ ನಿನಗಾಗಿ, ಕುರುಕ್ಷೇತ್ರ, ನಿಶ್ರ್ಕರ್ಷ, ಬೆಳದಿಂಗಳ ಬಾಲೆ ಚಿತ್ರಗಳಲ್ಲಿ ನಟಿಸಿದ್ದರು.

ಈ ಸುದ್ದಿಯನ್ನು ಓದಿ: Year Ender 2024: ಬಾಬಾ ಸಿದ್ದಿಕಿ, ಸೀತಾರಾಮ್ ಯೆಚೂರಿ; ಈ ವರ್ಷ ನಮ್ಮನ್ನಗಲಿದ ರಾಜಕೀಯ ಕ್ಷೇತ್ರದ ​ಗಣ್ಯರು ಇವರು