ಬೆಳಗಾವಿ: ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹ ಮಟ್ಟವನ್ನು ಆರ್.ಎಲ್. 519.60 ಮೀ. ನಿಂದ 524.26 ಮೀ. ರವರೆಗೆ ಎತ್ತರಿಸಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 (Upper Bhadra Project stage III) ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ. ಹಂತ ಹಂತವಾಗಿ ಯೋಜನೆಯನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ರಡಿ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕುರಿತ ಸಭೆಯಲ್ಲಿ ಮುಖ್ಯಮಂತ್ರಿ ಅವರು ಮಾತನಾಡಿದ್ದು, ಯೋಜನೆಗಾಗಿ ಮುಳುಗಡೆ ಹೊಂದಲಿರುವ ಜಮೀನು, ಪುನರ್ವಸತಿ ಹಾಗೂ ಕಾಲುವೆ ನಿರ್ಮಾಣಕ್ಕಾಗಿ ಅಂದಾಜು ಒಟ್ಟಾರೆ 1,33,867 ಎಕರೆ ಜಮೀನು ಸ್ವಾಧೀನಪಡಿಸಬೇಕಾಗಿದೆ. ಇದುವರೆಗೆ 28,967 ಎಕರೆ ಸ್ವಾಧೀನಪಡಿಸಲಾಗಿದ್ದು, 1,04,963 ಎಕರೆ ಸ್ವಾಧೀನಪಡಿಸಲು ಬಾಕಿಯಿದೆ.
ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾಗಲಿರುವ 188 ಗ್ರಾಮಗಳಿಗೆ ಸಂಬಂಧಿಸಿದಂತೆ 73,020 ಎಕರೆ ಜಮೀನು ಭೂಸ್ವಾಧೀನಕ್ಕೆ ಬಾಕಿಯಿದೆ. 2022ರಲ್ಲಿ ಅಂದಿನ ಸರ್ಕಾರ ಮುಳುಗಡೆಯಾಗುವ ಜಮೀನನ್ನು ಎರಡು ಹಂತದಲ್ಲಿ ಭೂಸ್ವಾಧೀನಪಡಿಸುವ ನಿರ್ಧಾರ ಕೈಗೊಂಡಿತ್ತು. ಇದನ್ನು ಬದಲಾಯಿಸಿ ಈಗ ಪ್ರಥಮ ಪ್ರಾಶಸ್ತ್ಯದಲ್ಲಿ ಒಂದೇ ಹಂತದಲ್ಲಿ ಈ ಜಮೀನು ಭೂಸ್ವಾಧೀನಕ್ಕೆ ಕ್ರಮ ಕೈಗೊಳ್ಳಲಾಗುವುದು.
ಜಮೀನು ಕಳೆದುಕೊಳ್ಳುವ ರೈತರಿಗೆ ಜಮೀನಿನ ಮಾರುಕಟ್ಟೆ ದರ, ಆಸ್ತಿಯ ಮಾರ್ಗದರ್ಶಿ ಮೌಲ್ಯ, ಭೂಸ್ವಾಧೀನ ಕಾಯ್ದೆಯನ್ನು ಗಮನದಲ್ಲಿರಿಸಿ ನ್ಯಾಯಯುತ ಪರಿಹಾರ ಒದಗಿಸಲು ಸರ್ಕಾರ ಬದ್ಧವಾಗಿದೆ. ರೈತರಿಗಾಗಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಜಮೀನಿಗೆ ಪರಿಹಾರ ನೀಡುವ ಕುರಿತು ಸಹಮತದ ದರ ನಿಗದಿಪಡಿಸಲು ಎಲ್ಲರೂ ಮುಂದೆ ಬರಬೇಕು. ರೈತರಿಗೂ ಅನ್ಯಾಯವಾಗಬಾರದು, ಸರ್ಕಾರಕ್ಕೂ ಹೊರೆಯಾಗದಂತೆ ನಿರ್ಣಯಕ್ಕೆ ಬರಲಾಗುವುದು. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ 20 ಸಾವಿರ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಈ ಪ್ರಕರಣಗಳನ್ನು ಹಿಂಪಡೆದುಕೊಂಡು ಸಹಮತದ ಮೂಲಕ ಬಗೆಹರಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Health Department: ಆರೋಗ್ಯ ಇಲಾಖೆಯಲ್ಲಿ 32,870 ಹುದ್ದೆಗಳ ಭರ್ತಿಗೆ ಕ್ರಮ: ದಿನೇಶ್ ಗುಂಡೂರಾವ್
ಬೆಂಗಳೂರು 2ನೇ ಏರ್ಪೋರ್ಟ್; ಐಡೆಕ್ ಸಂಸ್ಥೆಗೆ ಅಧ್ಯಯನ ವರದಿ ನೀಡುವ ಹೊಣೆ
ಬೆಂಗಳೂರಿಗೆ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡುವ ಪ್ರಸ್ತಾವನೆಯ ಕುರಿತು ಅಧ್ಯಯನ ನಡೆಸಿ ವರದಿ ನೀಡುವ ಕಾರ್ಯವನ್ನು ಐಡೆಕ್ ಸಂಸ್ಥೆಗೆ ರಾಜ್ಯ ಸರ್ಕಾರ ವಹಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರಾದ ಎಂ.ಬಿ.ಪಾಟೀಲ್ ತಿಳಿಸಿದರು.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಟಿ. ಎನ್. ಜವರಾಯಿ ಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು, ಗುಡ್ಡಗಾಡು ಪ್ರದೇಶ, ಸಂಪರ್ಕ-ರಸ್ತೆ, ರೈಲು ಮತ್ತು ಮೆಟ್ರೋ ಸಂಪರ್ಕ, ಬಳಕೆದಾರರಿಗೆ ಉದ್ದೇಶಿತ ವಿಮಾನ ನಿಲ್ದಾಣವನ್ನು ತಲುಪುವ ದೂರ ಮತ್ತು ಸಮಯ, ವಿಸ್ತಾರವಾದ ಭೂಪ್ರದೇಶ, ಜಮೀನಿನ ಪ್ರಕಾರಗಳು, ಕಡಿಮೆ ಜನಸಾಂದ್ರತೆಯ ಪ್ರದೇಶ ಮತ್ತು ಜಲಸಂಪನ್ಮೂಲದ ಲಭ್ಯತೆ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಸಂಭಾವ್ಯ ಸ್ಥಳಗಳ ಅಧ್ಯಯನವನ್ನು ನಡೆಸಲಾಗುತ್ತಿದೆ. ಅದರಂತೆ, ಯೋಜನೆಗೆ ಸಂಬಂಧಿಸಿದಂತೆ ಯೋಜನಾ ವರದಿ / ಪ್ರಸ್ತಾವನೆಯನ್ನು ಸಿದ್ಧಪಡಿಸುವ ಕಾರ್ಯ ಪರಿಶೀಲನೆಯಲ್ಲಿರುತ್ತದೆ ಎಂದು ತಿಳಿಸಿದರು.