ನವದೆಹಲಿ: ಭಾರತದ ಯುವ ಸ್ಪೋಟಕ ಬ್ಯಾಟ್ಸ್ಮನ್ ಪೃಥ್ವಿ ಶಾಗೆ (Prithvi Shaw) ಮತ್ತೊಂದು ಆಘಾತ ಸುದ್ದಿ ಬಂದಿದೆ. 2025 ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೆಗಾ ಹರಾಜಿನಲ್ಲಿ ಅನ್ಸೋಲ್ಡ್ ಆದ ನಂತರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದ್ದ ಬಲಗೈ ಬ್ಯಾಟ್ಸ್ಮನ್ಗೆ ಇದೀಗ ಮತ್ತೊಂದು ಹಿನ್ನಡೆಯಾಗಿದೆ. ಡಿಸೆಂಬರ್ 17 ರಂದು ವಿಜಯ್ ಹಝಾರೆ ಟ್ರೋಫಿ ಟೂರ್ನಿಗೆ ಮುಂಬೈ ತಂಡವನ್ನು ಪ್ರಕಟಿಸಲಾಗಿದ್ದು, ಪೃಥ್ವಿ ಶಾ ಅವರನ್ನು ಕೈಬಿಡಲಾಗಿದೆ. ಈ ಇತ್ತೀಚಿನ ಬೆಳವಣಿಗೆಯ ನಂತರ, ಭಾರತದ ಬಲಗೈ ಸ್ಫೋಟಕ ಆರಂಭಿಕ ಆಟಗಾರ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.
ತಮ್ಮ ಆರಾಧ್ಯ ದೈವ ಸಾಯಿಬಾಬಾ ಅವರನ್ನು ಸ್ಮರಿಸುತ್ತಾ 25ರ ವಯಸ್ಸಿನ ಪೃಥ್ವಿ ಶಾ, ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಲಿಸ್ಟ್ ‘ಎ’ ಕ್ರಿಕೆಟ್ ದಾಖಲೆಯನ್ನು ಹಂಚಿಕೊಂಡಿದ್ದಾರೆ. “ದೇವರೇ ಹೇಳು ನಾನು ಇನ್ನೇನು ನೋಡಬೇಕು? 65 ಇನಿಂಗ್ಸ್ಗಳಲ್ಲಿ 55.7ರ ಸರಾಸರಿಯಲ್ಲಿ 3399 ರನ್ಗಳು ಮತ್ತು 126 ಸ್ಟ್ರೈಕ್ ರೇಟ್ ಸಾಕಾಗದಿದ್ದರೆ ನಾನು ಇನ್ನೇನು ಮಾಡಬೇಕು? ನಿನ್ನ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ. ಆಶಾದಾಯಕವಾಗಿ ಜನರು ಇನ್ನೂ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ ಏಕೆಂದರೆ ನಾನು ಖಂಡಿತವಾಗಿಯೂ ಕಮ್ಬ್ಯಾಕ್ ಮಾಡುತ್ತೇನೆ. ಓಂ ಸಾಯಿ ರಾಮ್,” ಎಂದು ಪೃಥ್ವಿ ಶಾ ಬರೆದಿದ್ದಾರೆ.
ಕಳೆದ ಭಾನುವಾರ ಮುಂಬೈ ತಂಡ, ಭಾರತೀಯ ದೇಶಿ ಟಿ20 ಕ್ರಿಕೆಟ್ನ ಶ್ರೇಷ್ಠ ಟೂರ್ನಿಯಾದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಶ್ರೇಯಸ್ ಅಯ್ಯರ್ ನಾಯಕತ್ವದ ತಂಡದಲ್ಲಿ ಪೃಥ್ವಿ ಶಾ ಕೂಡ ಇದ್ದರು. ಒಂಬತ್ತು ಪಂದ್ಯಗಳಲ್ಲಿ 197 ರನ್ಗಳನ್ನು ಗಳಿಸಿದ್ದ ಪೃಥ್ವಿ ಶಾ ಸರಾಸರಿ ಪ್ರದರ್ಶನವನ್ನು ತೋರಿದ್ದರು. ಆದರೆ, ಅವರಿಂದ ಒಂದೇ ಒಂದು ಅರ್ಧಶತಕ ಕೂಡ ಮೂಡಿ ಬಂದಿರಲಿಲ್ಲ.
ಪೃಥ್ವಿ ಶಾ ಬಗ್ಗೆ ಶ್ರೇಯಸ್ ಅಯ್ಯರ್ ಹೇಳಿದ್ದಿದು
ಮಧ್ಯಪ್ರದೇಶ ವಿರುದ್ಧ ಫೈನಲ್ ಪಂದ್ಯದಲ್ಲಿ ಐದು ವಿಕೆಟ್ಗಳಿಂದ ಗೆಲುವು ಪಡೆದಿದ್ದ ನಂತರ ಮುಂಬೈ ನಾಯಕ ಶ್ರೇಯಸ್ ಅಯ್ಯರ್, ಯುವ ಬ್ಯಾಟ್ಸ್ಮನ್ ಪೃಥ್ವಿ ಶಾ ಬಗ್ಗೆ ಮಾತನಾಡಿದ್ದರು. “ಅವರು (ಪೃಥ್ವಿ ಶಾ) ಸ್ವಾಭಾವಿಕವಾಗಿ ಪ್ರತಿಭಾವಂತ ಆಟಗಾರ ಎಂದು ನಾನು ಭಾವಿಸುತ್ತೇನೆ. ಯಾರಲ್ಲೂ ಇಲ್ಲದಷ್ಟು ಪ್ರತಿಭೆ ಅವರಲ್ಲಿದೆ. ಅವರು ಕೇವಲ ಶಿಸ್ತಿನ ಮೇಲೆ ಕೆಲಸ ಮಾಡಬೇಕು. ಹೀಗೆ ಮಾಡುವುದರಿಂದ ಅವರು ಅಗ್ರ ದರ್ಜೆಗೆ ಬೆಳೆಯಬಹುದು,” ಎಂದು ಸಲಹೆ ನೀಡಿದ್ದರು.
ಪೃಥ್ವಿ ಶಾ ಅವರು ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಪದಾರ್ಪಣೆ ಟೆಸ್ಟ್ ಪಂದ್ಯದಲ್ಲಿಯೇ ಶತಕವನ್ನು ಸಿಡಿಸಿದ್ದರು, ಆ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು. ಈ ವೇಳೆ ಭಾರತ ತಂಡಕ್ಕೆ ಪೃಥ್ವಿ ಶಾ ಅವರು ಭವಿಷ್ಯದ ವೀರೇಂದ್ರ ಸೆಹ್ವಾಗ್ ಎಂದು ಗುಣಗಾನ ಮಾಡಿದ್ದರು. ಆದರೆ, ಅವರು ಗಾಯ ಮತ್ತು ಫಿಟ್ನೆಸ್ ಸಮಸ್ಯೆಯಿಂದ ತಂಡದಿಂದ ಹೊರ ಬಿದ್ದಿದ್ದರು. ಬಳಿಕ ಅವರು ರಾಷ್ಟ್ರೀಯ ತಂಡಕ್ಕೆ ಕಮ್ಬ್ಯಾಕ್ ಮಾಡಲು ಸಾಧ್ಯವಾಗಲಿಲ್ಲ. ಯುವ ಬ್ಯಾಟ್ಸ್ಮನ್ ಭಾರತದ ಪರ 6 ಒಡಿಐ, ಒಂದು ಟಿ20ಐ ಪಂದ್ಯ ಹಾಗೂ 5 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಎಲ್ಲಾ ಸ್ವರೂಪದಲ್ಲಿಯೂ ಅವರು 528 ರನ್ಗಳನ್ನು ಕಲೆ ಹಾಕಿದ್ದಾರೆ.
ವಿಜಯ್ ಹಝಾರೆ ಟ್ರೋಫಿ ಮುಂಬೈ ತಂಡ
ಶ್ರೇಯಸ್ ಅಯ್ಯರ್ (ನಾಯಕ), ಆಯುಷ್ ಮ್ಹಾತ್ರೆ, ಅಂಗ್ಕ್ರಿಶ್ ರಘುವಂಶಿ, ಜಯ್ ಬಿಸ್ತಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ಸಿದ್ಧೇಶ್ ಲಾಡ್, ಹಾರ್ದಿಕ್ ತಮೋರ್, ಪ್ರಸಾದ್ ಪವಾರ್, ಅಥರ್ವ ಅಂಕೋಲೇಕರ್, ತನುಷ್ ಕೋಟಿಯನ್, ಶಾರ್ದೂಲ್ ಠಾಕೂರ್, ಜುನೈದ್ ಖಾನ್, ಹರ್ಷ್ ತನ್ನಾ ಮತ್ತು ವಿನಾಯಕ್ ಭೋರ್
ಈ ಸುದ್ದಿಯನ್ನು ಓದಿPrithvi Shaw: ‘ನಾನೇನು ತಪ್ಪು ಮಾಡಿದೆ?’; ಟ್ರೋಲ್ ಬಗ್ಗೆ ಬೇಸರ ವ್ಯಕ್ತಪಡಿಸಿದ ಪೃಥ್ವಿ ಶಾ