Thursday, 19th December 2024

2024 Flash Back: ಡೀಪ್ ಫೇಕ್, ವಯನಾಡು ಭೂಕುಸಿತ, ಸಿರಿಯಾ ಬಿಕ್ಕಟ್ಟು- ಈ ವರ್ಷದ ಹೆಡ್ ಲೈನ್ ಆಗಿ ಗಮನ ಸೆಳೆದ ಸುದ್ದಿಗಳಿವು

ನವದೆಹಲಿ: 2024 ಇನ್ನೇನು ಕೆಲವೇ ದಿನಗಳಲ್ಲಿ ಭೂತಕಾಲಕ್ಕೆ ಸರಿದು ಹೊಗಲಿದೆ ಮತ್ತು 2025 (New Year) ನಮ್ಮೆಲ್ಲರ ವ್ಯಾವಹಾರಿಕ ಜೀವನದಲ್ಲಿ ಪ್ರವೇಶವನ್ನು ಪಡೆದುಕೊಳ್ಳಲಿದೆ. ಈ ಸಂದರ್ಭದಲ್ಲಿ ಕಳೆದ 12 ತಿಂಗಳುಗಳಲ್ಲಿ ನಡೆದ ಪ್ರಮುಖ ಘಟನೆಗಳನ್ನು ಮೆಲುಕು ಹಾಕುವುದು ಸಂಪ್ರದಾಯ. ಅದೇ ರೀತಿಯಲ್ಲಿ, ರಾಷ್ಟ್ರ ರಾಜಕಾರಣ, ಅಂತರಾಷ್ಟ್ರೀಯ ವ್ಯವಹಾರ, ಪರಿಸರ ಕಾಳಜಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿನ ಅಭಿವೃದ್ಧಿ ಇವೆಲ್ಲ ವಿಷಯಗಳನ್ನು ಒಟ್ಟಾಗಿಸಿ, ಈ ವರ್ಷ (2024 Flash Back) ಎಲ್ಲರ ಗಮನವನ್ನು ತನ್ನತ್ತ ಸೆಳೆದಿದ್ದ 12 ವಿಚಾರಗಳ ಪ್ರಸ್ತುತಿ ಇಲ್ಲಿದೆ.

1. ಇರಾನ್ – ಇಸ್ರೇಲ್ ಸಂಘರ್ಷ:

ಈ ವರ್ಷದ ಎ.14ರಂದು ಇರಾನ್ (Iran) ತನ್ನ ಶತ್ರುರಾಷ್ಟ್ರ ಇಸ್ರೇಲ್‌ನತ್ತ (Israel) ನೂರಾರು ಡ್ರೋನ್ ಹಾಗೂ ಕ್ಷಿಪಣಿಗಳನ್ನು ಉಡಾಯಿಸಿತು. ಇದು, ಸಿರಿಯಾದ ಡಮಾಸ್ಕಸ್ ನಲ್ಲಿರುವ (Damascus) ತನ್ನ ರಾಯಭಾರಿ ಕಚೇರಿಯ ಮೇಲೆ ಎ.2ರಂದು ಇಸ್ರೇಲಿ ಪಡೆಗಳು ನಡೆಸಿದ ದಾಳಿಗೆ ಪ್ರತಿದಾಳಿ ಎಂದು ಇರಾನ್ ಹೇಳಿಕೊಂಡಿತ್ತು. ಈ ದಾಳಿಯಿಂದ ಮದ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಸಂಘರ್ಷಮಯ ವಾತಾವರಣ ಭುಗಿಲೇಳುವಂತಾಯ್ತು. ಈ ಭಾಗದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಹಲವಾರು ವರ್ಷಗಳಿಂದ ಮುಸುಕಿನ ಗುದ್ದಾಟ ನಡೆಯುತ್ತಿದ್ದರೂ, ಈ ರಿತಿಯಾಗಿ ನೇರ ದಾಳಿ ನಡೆದಿರುವುದು ಇದೇ ಮೊದಲು.

2. ನೆಸ್ಲೆ ಮತ್ತು ಎಂ.ಡಿ.ಎಚ್. ವಿವಾದಗಳು:

ನೆಸ್ಲೆ (Nestle), ಎಂ.ಡಿ.ಎಚ್. (MDH) ಮತ್ತು ಎವರೆಸ್ಟ್ ಮಸಾಲೆ ಮಿಶ್ರಣಗಳ (Everest spice mixes) ನಡುವೆ ಉಂಟಾದ ವಿವಾದಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಕಳವಳ ಉಂಟಾಗುವಂತೆ ಮಾಡಿತು. ಈ ವಿವಾದವನ್ನು ಬಗೆಹರಿಸಲು ಭಾರತದ ಆಹಾರ ನಿಯಂತ್ರಣ ಮಂಡಳಿ, ಎಫ್.ಎಸ್.ಎಸ್.ಎ.ಐ. (FSSAI) ಕೊನೆಗೂ ಮಧ್ಯಪ್ರವೇಶಿಸಬೇಕಾಯಿತು.

ಹಾಂಕಾಂಗ್ ಸರಕಾರವು ಎಂ.ಡಿ.ಎಚ್. ಮತ್ತು ಎವರೆಸ್ಟ್ ಫುಡ್ ಪ್ರಾಡಕ್ಟ್ಸ್ ನ ನಾಲ್ಕು ಉತ್ಪನ್ನಗಳ ಮಾರಾಟ ಮತ್ತು ಬಳಕೆಗೆ ತನ್ನ ದೇಶದಲ್ಲಿ ನಿಷೇಧ ಹೇರಿತು. ಅಲ್ಲಿನ ಆಹಾರ ಮತ್ತು ನೈರ್ಮಲ್ಯ ಇಲಾಖೆಯಡಿಯಲ್ಲಿ ಬರುವ ‘ಸೆಂಟರ್ ಫಾರ್ ಫುಡ್ ಸೇಫ್ಟಿ (CFS) ತನ್ನ ಪತ್ರಿಕಾ ಪ್ರಕಟನೆಯಲ್ಲಿ ಹೇಳಿಕೊಂಡಂತೆ, ‘ಪ್ಯಾಕ್ ಮಾಡಲಾದ ಹಲವು ಮಸಾಲೆ ಮಿಶ್ರಣ ಉತ್ಪನ್ನಗಳ ಮಾದರಿಗಳಲ್ಲಿ ಇಥಿಲಿನ್ ಆಕ್ಸೈಡ್ ಎಂಬ ಕೀಟನಾಶಕ ಪತ್ತೆಯಾಗಿದೆ’ ಎಂದು ಅದು ಹೇಳಿಕೊಂಡಿತ್ತು.

ಆದರೆ ಇದಕ್ಕೆ ಸ್ಪಷ್ಟನೆ ನೀಡಿದ ಭಾರತಿಯ ಮೂಲದ ಎಂ.ಡಿ.ಎಚ್. ಸಂಸ್ಥೆ, ತನ್ನ ಎಲ್ಲಾ ಉತ್ಪನ್ನಗಳೂ ಬಳಕೆ ಯೋಗ್ಯವಾಗಿದೆ ಮತ್ತು ಕಂಪೆನಿಯು ಹಾಂಕಾಂಗ್ ಅಥವಾ ಸಿಂಗಾಪೂರ್ ನ ನಿಯಂತ್ರಕ ಮತ್ತು ಅಧಿಕಾರಿಗಳಿಂದ ಈ ರೀತಿಯ ಯಾವುದೇ ಕಳವಳಕಾರಿ ಮಾಹಿತಿಗಳನ್ನು ಪಡೆದುಕೊಂಡಿಲ್ಲ ಎಂದು ಸ್ಪಷ್ಟನೆಯನ್ನು ನಿಡಿತ್ತು.

ನೆಸ್ಲೇ ವಿವಾದ: ಅಂತರಾಷ್ಟ್ರಿಯ ಶಿಸು ಆಹಾರ ಕ್ರಮ ಜಾಲ (IBFAN) ಮತ್ತು ಸ್ವಿಝ್ ಮೂಲದ ತನಿಖಾ ಸಂಸ್ಥೆ, ಪಬ್ಲಿಕ್ ಐ (Public Eye), ನೆಸ್ಲೆ, ಭಾರತದಂದತಹ ಅಭಿವೃದ್ಧಿ ಹೊಂದಿದ ದೆಶಗಳಿಗೆ ಪೂರೈಸುವ ತನ್ನ ಶಿಶು ಆಹಾರ ಉತ್ಪನ್ನ ಸೆರೆಲಾಕ್ ಗೆ 2.7 ಗ್ರಾಂನಷ್ಟು ಸಕ್ಕರೆಯನ್ನು ಸೇರಿಸುತ್ತಿದೆ ಎಂದು ಗಂಭೀರ ಆರೋಪವನ್ನು ಮಾಡಿತ್ತು. ಈ ಆರೋಪವನ್ನು ಸಮರ್ಥಿಸಿಕೊಂಡ ನೆಸ್ಲೇ, ಭಾರತದಲ್ಲಿ ತಾನು ಪೂರೈಸುವ ಶಿಶು ಆಹಾರದಲ್ಲಿನ ಪೂರಕ ಸಕ್ಕರೆ ಪ್ರಮಾಣವನ್ನು ಕಳೆದ ಐದು ವರ್ಷಗಳಲ್ಲಿ 30%ಕ್ಕೆ ಇಳಿಸಿರುವುದಾಗಿ ಸ್ಪಷ್ಟನೆಯನ್ನು ನೀಡಿತ್ತು.

3. ಬಿಸಿ ಗಾಳಿ:

ದಿನದ ಉಷ್ಣಾಂಶದಲ್ಲಿ ಗರಿಷ್ಠ ಹಾಗೂ ಸುದೀರ್ಘ ಏರಿಕೆ, ಮತ್ತು ಬಿಸಿ ಗಾಳಿಯ ತೀವ್ರತೆ ಹೆಚ್ಚಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ವಿಶ್ವವನ್ನೇ ಕಳವಳಕ್ಕೀಡುಮಾಡಿರುವ ಅಂಶಗಳಲ್ಲಿ ಒಂದಾಗಿದೆ. ಈ ವರ್ಷದ ಬೇಸಗೆಯಲ್ಲಿ ಭಾರತದಲ್ಲು ಬಿಸಿ ಗಾಳಿ ತನ್ನ ಪರಾಕ್ರಮವನ್ನು ತುಸು ಹೆಚ್ಚೇ ಎಂಬಂತೆ ತೋರಿಸಿತ್ತು. ಇದರ ಪರಿಣಾಮ ಜನರ ಆರೋಗ್ಯ ಮತ್ತು ಇಲ್ಲಿನ ಪರಿಸರದ ಮೇಲೆ ಉಂಟಾಗಿತ್ತು. ಭಾರತಿಯ ಹವಾಮಾನ ಇಲಾಖೆ (IMD) ಪ್ರಕಾರ – ಬಿಸಿ ಗಾಳಿ ಅಂದರೆ, ಭಾರತದ ವಾಯುವ್ಯ ಭಾಗಗಳಲ್ಲಿ ಬೇಸಗೆ ಕಾಲದಲ್ಲಿ ಸಾಮಾನ್ಯ ಹೆಚ್ಚು ಉಷ್ಣತೆಗಿಂತ ಅಸಹಜ ರೀತಿಯಲ್ಲಿ ಹೆಚ್ಚು ಉಷ್ಣತೆ ಕಾಣಿಸಿಕೊಳ್ಳುವ ಅವಧಿಯಾಗಿದೆ. ಈ ಬಿಸಿಗಾಳಿ ಅವಧಿ ಸಾಮಾನ್ಯವಾಗಿ ಮಾರ್ಚ್ ನಿಂದ ಜೂನ್ ವರೆಗೆ ಇರುತ್ತದೆ. ಆದರೆ, ಕೆಲವೊಂದು ಅಪರೂಪದ ಸಂದರ್ಭಗಳಲ್ಲಿ ಇದು ಜುಲೈ ವರೆಗೂ ವಿಸ್ತರಣೆಗೊಳ್ಳುವ ಸಾಧ್ಯತೆಗಳಿರುತ್ತವೆ. ಈ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಆ ಭಾಗದಲ್ಲಿ ವಾಸಿಸುವ ಜನಜೀವನವು, ಮಾನಸಿಕ ಒತ್ತಡದಂತಹ ಗಂಭೀರ ಸಮಸ್ಯೆಯನ್ನು ಎದರಿಸಬೇಕಾಗುತ್ತದೆ ಮತ್ತು ಕೆಲವೊಮ್ಮೆ ಇದು ಸಾವಿಗೂ ಕಾರಣವಾಗಬಲ್ಲುದು.

4. ಡೀಪ್ ಫೇಕ್ ನ ದುರ್ಬಳಕೆ:

ಈ ಬಾರಿಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಡೀಪ್ ಫೇಕ್ ತಂತ್ರಜ್ಞಾನದ (Deepfakes Technology) ವ್ಯಾಪಕ ಬಳಕೆಯು ತಪ್ಪು ಸಂದೇಶಗಳ ವಿರುದ್ಧದ ನೈಜ ಹೋರಾಟದ ಬಲವನ್ನು ತಗ್ಗಿಸಿದ್ದು ಸುಳ್ಳಲ್ಲ. ಬಾಲಿವುಡ್ (Bollywood) ನಟರಾದ ರಣ್ವೀರ್ ಸಿಂಗ್ (Ranveer Singh) ಮತ್ತು ಅಮೀರ್ ಖಾನ್ (Aamir Khan) ನಿರ್ಧಿಷ್ಟ ಪಕ್ಷವೊಂದರ ಪರ ಮಾತನಾಡಿದ್ದರು ಎನ್ನಲಾದ ವಿಡಿಯೋ ಚುನಾವಣಾ ಸಂದರ್ಭದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಇದಕ್ಕೂ ಮೊದಲು ನಟಿ ರಶ್ಮಿಕಾ ಮಂದಣ್ಣ (Rashmika Mandanna) ಲಿಫ್ಟ್ ನಲ್ಲಿ ಹೋಗುತ್ತಿರುವ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ನೋಡುವಾಗ ನೈಜ ವಿಡಿಯೋದಂತಿದ್ದ ಇದು ನಿಜವಾಗಿಯೂ ಡೀಪ್ ಫೇಕ್ ತಂತ್ರಜ್ಞಾನದ ಮೂಲಕ ರಚಿಸಲಾದ ವಿಡಿಯೊ ಇದಾಗಿತ್ತು. ಆಂಗ್ಲೋ-ಇಂಡಿಯನ್ ಹುಡುಗಿಯೊಬ್ಬಳ ದೇಹಕ್ಕೆ ರಶ್ಮಿಕಾ ತಲೆಭಾಗವನ್ನು ಜೋಡಿಸಿ ಈ ವಿಡಿಯೋ ಸೃಷ್ಟಿಸಲಾಗಿತ್ತು.

ಡೀಪ್ ಫೇಕ್ ಅಂದರೆ ಯಾವುದೇ ಒಂದು ವಿಷಯ ಅಥವಾ ವ್ಯವಸ್ಥೆಯ ಬಗ್ಗೆ ತಪ್ಪು ಮಾಹಿತಿಯನ್ನು ನೀಡುವುದಾಗಿದೆ. ಇದು ವಿಡಿಯೋ, ಆಡಿಯೋ ಅಥವಾ ಲೇಖನಗಳ ರೂಪದಲ್ಲಿರಬಹುದು ಮತ್ತು ಸಶಕ್ತ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಮಾಡುವಂತದ್ದಾಗಿರಬಹುದು. ಇವೆಲ್ಲವನ್ನೂ ಒಟ್ಟಾಗಿ ಡೀಪ್ ಫೇಕ್ ಎಂದು ಕರೆಯುತ್ತಾರೆ.

5. ತುರ್ತು ಪರಿಸ್ಥಿತಿಗೆ 50 ವರ್ಷ:

ದೇಶ ಕಂಡ ಕರಾಳ ತುರ್ತು ಪರಿಸ್ಥಿತಿಗೆ (Emergency) ಈ ವರ್ಷ ಜೂನ್ 25ರಂದು 50 ವರ್ಷಗಳು ತುಂಬಿತು. 1975 ರಿಂದ 1977ರವರೆಗೆ ದೇಶದ ಪ್ರಜಾಪ್ರಭುತ್ವದ ಅಸ್ತಿತ್ವವನ್ನೇ ಅಲ್ಲಾಡಿಸುವಂತಹ ಘಟನೆಗಳು ನಡೆದು ಹೋದ ಕರಾಳ ನೆನಪಿಗೆ ಇದೀಗ 50 ವರ್ಷ ತುಂಬಿತು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾಗರಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಯಿತು. ಪತ್ರಿಕಾ ಸ್ವಾತಂತ್ರ್ಯವನ್ನು ನಿರ್ಬಂದಿಸಲಾಯಿತು, ದೇಶಾದ್ಯಂತ ವಿರೋಧಿ ದಳದ ನಾಯಕರನ್ನು ಬಂಧಿಸಿ ಜೈಲಿಗಟ್ಟಲಾಯಿತು ಹಾಗೂ ದೇಶದಲ್ಲಿ ಚುನಾವಣಾ ವ್ಯವಸ್ಥೆಯನ್ನೇ ರದ್ದುಗೊಳಿಸಲಾಯಿತು.

1975ರ ಜೂನ್ 25ರಿಂದ 1977ರ ಮಾರ್ಚ್ 21ರವರೆಗೆ ಅಂದಿನ ಪ್ರದಾನಿ ಇಂದಿರಾ ಗಾಂಧಿಯವರು (Indira Gandhi) ದೇಶದಲ್ಲಿ ತುರ್ತುಪರಿಸ್ಥಿತಿ ಹೇರುವ ಕಠಿಣ ನಿರ್ಧಾರವನ್ನು ಕೈಗೊಂಡರು. ನಮ್ಮ ಸಂವಿಧಾನದಲ್ಲಿರುವ ವಿಶೇಷ ಅಧಿಕಾರವನ್ನು ಬಳಸಿಕೊಂಡು ಈ ನಿರ್ಧಾರವನ್ನು ಪ್ರದಾನಿ ಇಂದಿರಾ ಕೈಗೊಂಡಿದ್ದರು.

6. ವಯನಾಡಿನ ಭೂಕುಸಿತ ದುರಂತ:

ಈ ವರ್ಷದ ಜುಲೈ ತಿಂಗಳಿನಲ್ಲಿ ಸುರಿದ ರಣ ಭೀಕರ ಮಳೆಗೆ ಕೇರಳದ ವಯನಾಡಿನಲ್ಲಿ ರುದ್ರ ಭೀಕರ ಭೂಕುಸಿತ (Wayanad Landslide) ಸಂಭವಿಸಿ ನೂರಾರು ಜನರು ಬಲಿಯಾದರು. ಇಲ್ಲಿನ ಮೆಪ್ಪಾಡಿ (Meppadi) ಮತ್ತು ಮುಂಡಕೈ (Mundakkai) ಪ್ರದೇಶಗಳಲ್ಲಿ ಮೇಘ ಸ್ಪೋಟ (Cloud Burst) ಉಂಟಾದ ಪರಿಣಾಮ ಸುರಿದ ಭಾರೀ ಮಳೆಗೆ ಚೂರಲ್ ಮಲೆ (Chooralmala) ಕುಸಿತಗೊಂಡು ಅಟ್ಟಮಲೆಗೆ (Attamala) ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿಹೋಗಿ ಸಂಪರ್ಕ ಕಡಿತಗೊಂಡು ಪರಿಸ್ಥಿತಿಯನ್ನು ಇನ್ನಷ್ಟು ಭೀಕರವಾಗಿಸಿತು. ಇತ್ತೀಚಿನ ದಿನಗಳಲ್ಲಿ ಭಾರತ ಮಾತ್ರವಲ್ಲದೇ ಜಗತ್ತಿನ ವಿವಿಧ ಕಡೆಗಳಲ್ಲಿ ಭೂಕುಸಿತದ ಪ್ರಮಾಣ ಹೆಚ್ಚುತ್ತಲೇ ಇದೆ.

ಈ ವರ್ಷ ಜಗತ್ತಿನಾದ್ಯಂತ ಸಂಭವಿಸಿದ ಪ್ರಮುಖ ಭೂಕುಸಿತಗಳ ಕಡೆಗೆ ನೋಟ ಹರಿಸುವುದಾದರೆ, ಸೆಪ್ಟಂಬರ್ ನಲ್ಲಿ ನೇಪಾಳದಲ್ಲಿ (Nepal) ಸಂಭವಿಸಿದ ಭೂಕುಸಿತ ಮತ್ತು ಭಾರಿ ಪ್ರವಾಹದ ಕಾರಣದಿಂದ 170 ಜನರು ಜೀವ ಕಳೆದುಕೊಂಡು, 42 ಜನರು ನಾಪತ್ತೆಯಾದರು. ಜು.21 ಮತ್ತು 22ರಂದು ಇಥಿಯೋಪಿಯಾದಲ್ಲಿ (Ethiopia) ಭಾರಿ ಮಳೆಯ ಕಾರಣ ಮೂರು ಕಡೆಗಳಲ್ಲಿ ಭೂಕುಸಿತ ಸಂಭವಿಸಿ ಹಲವರು ತಮ್ಮ ಪ್ರಾಣಗಳನ್ನು ಕಳೆದುಕೊಂಡರು ಮತ್ತು  ಈ ಭಾಗದಲ್ಲಿ ಭಾರೀ ನಷ್ಟ ಸಂಭವಿಸಿತು. ಮೇ 24ರಂದು ಪಪುವಾ ನ್ಯೂಗಿನಿಯಲ್ಲಿ (Papua New Guinea) ಸಂಭವಿಸಿದ ಭೂಕುಸಿತಕ್ಕೆ ಯಂಬಾಲಿ ಎಂಬ ಗ್ರಾಮವೇ ನಾಮಾವಶೇಷಗೊಂಡಿತು. ಜನವರಿ 22ರಂದು ಚೀನಾದ (China) ಪರ್ವತ ಪ್ರದೇಶವಾಗಿರುವ ಯುನ್ನಾನ್ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕುಸಿತ ಆ ಪ್ರದೇಶದಲ್ಲಿ ಭಾರೀ ಹಾನಿ ಉಂಟುಮಾಡಿತು.

ಇದನ್ನೂ ಓದಿ: Kumbh Mela 2025: ಈ ಬಾರಿಯ ಮಹಾ ಕುಂಭ ಮೇಳ ಸಂಭ್ರಮಕ್ಕೆ ತಂತ್ರಜ್ಞಾನದ ಬಲ; ಹೇಗಿದೆ ಪ್ರಯಾಗ್‌ರಾಜ್‌ನಲ್ಲಿ ಡಿಜಿಟಲ್ ಸಿದ್ಧತೆ?

7. ಬಾಂಗ್ಲಾ ದೇಶದಲ್ಲಿ ರಾಜಕೀಯ ಅಸ್ಥಿರತೆ – ಕ್ಷಿಪ್ರಕ್ರಾಂತಿ

ನಮ್ಮ ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ (Bangladesh) ಆಗಸ್ಟ್ ತಿಂಗಳಿನಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟು ಮತ್ತು ಅದರ ಬೆನ್ನಲ್ಲೇ ಉಂಟಾದ ಕ್ಷಿಪ್ರ ಕ್ರಾಂತಿಯಲ್ಲಿ ಆಗ ಪ್ರದಾನಿಯಾಗಿದ್ದ ಶೇಖ್ ಹಸೀನಾ (Sheikh Hasina) ಪದಚ್ಯುತಗೊಂಡು ದೇಶಭ್ರಷ್ಟರಾಗಿ ಸದ್ಯಕ್ಕೆ ಭಾರತದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಇದೀಗ ಬಾಂಗ್ಲಾದಲ್ಲಿ, ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಮಹಮ್ಮದ್ ಯೂನುಸ್ (Muhammad Yunus) ನೇತೃತ್ವದಲ್ಲಿ ಮದ್ಯಂತರ ಸರಕಾರ ರಚನೆಗೊಂಡಿದೆ.

8. ಆರ್.ಜಿ.ಕರ್ ಆಸ್ಪತ್ರೆಯಲ್ಲಿ ಅತ್ಯಾಚಾರ – ಕೊಲೆ ಪ್ರಕರಣ:

ಕೊಲ್ಕತ್ತಾದ (Kolkata) ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (R. G. Kar Medical College and Hospital) ಆಗಸ್ಟ್ ತಿಂಗಳಿನಲ್ಲಿ ಯುವ ಟ್ರೈನೀ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶದಲ್ಲೇ ಆಕ್ರೋಶದ ಕಿಡಿ ಹೊತ್ತಿಸಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಕೊತ್ತಾ ಪೊಲೀಸರ ಪರವಾಗಿ ಕೆಲಸ ಮಾಡುತ್ತಿದ್ದ 33 ವರ್ಷದ ವ್ಯಕ್ತಿಯನ್ನು ಬಂಧಿಸಲಾಯ್ತು. ಆಸ್ಪತ್ರೆಯ ಸೆಮಿನಾರ್ ಹಾಲ್ ನಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು.

ಈ ಘಟನೆಯನ್ನು ಖಂಡಿಸಿ ಮತ್ತು ಆರೊಪಿಗೆ ಉಗ್ರ ಶಿಕ್ಷೆಗೆ ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಇದೇ ಸಂದರ್ಭದಲ್ಲಿ ದೇಶಾದ್ಯಂತ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ಕುರಿತಾಗಿಯು ಚರ್ಚೆಗಳು ನಡೆಯಿತು. 2022ರಲ್ಲಿ ಮಹಿಳೆಯರ ಮೇಲೆ 4,45,256 ಅಪರಾಧ ಪ್ರಕರಣಗಳು ನಡೆದಿದ್ದು ಇದು 2021ಕ್ಕಿಂತ 4% ಹೆಚ್ಚು ಎನ್ನುವುದು ಕಳವಳಕಾರಿ ಅಂಶವಾಗಿದೆ.

9. ಭಾರತ – ಕೆನಡಾ ರಾಜತಾಂತ್ರಿಕ ಬಿಕ್ಕಟ್ಟು:

ಈ ವರ್ಷದ ಅಕ್ಟೋಬರ್ ಮಧ್ಯಭಾಗದಲ್ಲಿ ಭಾರತ (India) ಮತ್ತು ಕೆನಡಾ (Canada) ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಗೊಂಡಿತು. ಇದರಿಂದಾಗಿ ಎರಡೂ ದೇಶಗಳ ನಡುವಿನ ವ್ಯಾಪಾರ – ವಹಿವಾಟುಗಳ ಮೇಲೂ ವ್ಯತಿರಿಕ್ತ ಪರಿಣಾವನ್ನು ಬೀರುವಂತಾಯಿತು. ಇದೆಲ್ಲಾ ಶುರುವಾಗಿದ್ದು, ಭಾರತವು ಆರು ಜನ ಕೆನಡಾ ರಾಜತಾಂತ್ರಿಕರನ್ನು ಹಿಂದೆ ಕಳಿಸಲು ನಿರ್ಧರಿಸಿತು.

10. ಸೆಕ್ಷನ್ 6ಎ ಮತ್ತು ನಾಗರಿಕತೆ:

ಈ ವರ್ಷದ ಅಕ್ಟೋಬರ್ 17ರಂದು ಸುಪ್ರೀಂ ಕೋರ್ಟ್ (Supreme Court of India), 1955ರ ನಾಗರಿಕ ಕಾಯ್ದೆಯ ಸೆಕ್ಷನ್ 6ಎ ಯ ಸಾಂವಿಧಾನಿಕ ಊರ್ಜಿತವನ್ನು ಎತ್ತಿಹಿಡಿಯಿತು. ಇದರ ಪ್ರಕಾರ ಅನಧಿಕೃತ ವಲಸೆ ವಿರುದ್ಧ ಕಾನೂನುಗಳನ್ನು ಹಾಗೂ ಪೌರತ್ವ ಶಾಸನಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆಯೂ ನ್ಯಾಯಾಲಯ ಇದೇ ಸಂದರ್ಭದಲ್ಲಿ ತನ್ನ ಆದೇಶದಲ್ಲಿ ತಿಳಿಸಿದೆ. ಸೆಕ್ಷನ್ 6ಎ 1971 ಮಾ.24ಕ್ಕೆ ಮೊದಲು  ಅಸ್ಸಾಂ ರಾಜ್ಯವನ್ನು ಪ್ರವೇಶಿಸಿದ ವಲಸಿಗರಿಗೆ ಭಾರತ ಪೌರತ್ವವನ್ನು ಕೊಡುವುದಾಗಿದೆ.

11. ಸಿರಿಯಾದಲ್ಲಿ ರಾಜಕೀಯ ಬಿಕ್ಕಟ್ಟು:

ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿದ್ದ ಸಿರಿಯಾದಲ್ಲಿ (Syria) ನಾಗರಿಕ ಸಮರ (civil war) ಡಿಸೆಂಬರ್ ನಲ್ಲಿ ಮಹತ್ವದ ಘಟ್ಟಕ್ಕೆ ತಲುಪಿತು. ಕಳೆದ 24 ವರ್ಷಗಳಿಂದ ಮದ್ಯಪ್ರಾಚ್ಯದ (Middle Eastern country) ಈ ದೇಶದಲ್ಲಿ ಆಡಳಿತ ನಡೆಸುತ್ತಿದ್ದ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ (Bashar al-Assad) ನೇತೃತ್ವದ ಸರಕಾರವನ್ನು ಹಯಾತ್ ತಹ್ರಿರ್ ಅಲ್-ಶಾಮ್ (Hayat Tahrir al-Sham) ಬಂಡುಕೋರರು ಪದಚ್ಯುತಗೊಳಿಸಿದರು. ಡಿ.8ರಂದು ಈ ಬಂಡುಕೋರರ ಗುಂಪು ರಾಜಧಾನಿ ಡಮಾಸ್ಕಸ್ (Damascus) ಪ್ರವೇಶಿಸಿ ಅಸ್ಸಾದ್ ಆಡಳಿತ ಅಂತ್ಯಗೊಂಡಿರುವುದನ್ನು ಸಾರಿ ಸಂಭ್ರಮಾಚರಣೆ ನಡೆಸಿತು.

12 ಒಂದು ರಾ‍ಷ್ಟ್ರ ಒಂದು ಚುನಾವಣೆ ಚರ್ಚೆ:

ದೇಶಾದ್ಯಂತ ಏಕಕಾಲದಲ್ಲಿ ಚುನಾವಣೆ (One Nation, One Election) ನಡೆಸುವ ಪ್ರಸ್ತಾಪ ಈ ವರ್ಷಾದ್ಯಂತ ರಾಜಕೀಯ ವಲಯದಲ್ಲಿ ಚರ್ಚಾ ವಸ್ತುವಾಗಿತ್ತು. ಇತ್ತೀಚೆಗಷ್ಟೇ, ಸಂವಿಧಾನ ತಿದ್ದುಪಡಿ (129ನೇ ತಿದ್ದುಪಡಿ) ಮಸೂದೆ, 2024 ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾನೂನು (ತಿದ್ದುಪಡಿ ಮಸೂದೆ) 2024 ಇವುಗಳಿಗೆ ಕೇಂದ್ರ ಸಚಿವ ಸಂಪುಟ ತನ್ನ ಒಪ್ಪಿಗೆಯನ್ನು ಸೂಚಿಸಿತ್ತು. ಇದರೊಂದಿಗೆ ದೇಶದಲ್ಲಿ ಮತ್ತೆ ಒಂದು ರಾಷ್ಟ್ರ ಒಂದು ಚುನಾವಣೆ ಚರ್ಚೆ ಮುನ್ನಲೆಗೆ ಬಂದಿದೆ. ಕೆಲವರ ಪ್ರಕಾರ ಇದರಿಂದಾಗಿ ದೇಶದ ಜನರಿಗೆ ಪ್ರಯೊಜನವಾಗಲಿದೆ, ಆದರೆ ಕೆಲವರ ವಾದದ ಪ್ರಕಾರ ಇದು ಭಾರತದ ಸಂವಿಧಾನದ ಮೂಲ ಆಶಯವನ್ನೇ ಅಲ್ಲಾಡಿಸಲಿದೆ ಎಂಬುದಾಗಿದೆ.