Wednesday, 18th December 2024

Vishweshwar Bhat Column: ಜಪಾನಿನ ರಸ್ತೆಗಳಿಗೆ ಹೆಸರಿಲ್ಲ

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಒಂದು ಪ್ರಸಂಗ. ನೀವು ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ನಡೆಯುತ್ತಿದ್ದೀರಿ ಎಂದು ಕಲ್ಪಿಸಿಕೊಳ್ಳಿ. ಅಲ್ಲಿಗೆ ಹೊಸ ತಾಗಿ ಆಗಮಿಸಿದ ಜಪಾನಿನ ಯುವತಿಯೊಬ್ಬಳು ನಿಮ್ಮ ಬಳಿ ಬಂದು, ‘ಕಾವೇರಿ ಕರಕುಶಲ ವಸ್ತುಗಳ ಮಳಿಗೆಗೆ ಹೋಗಬೇಕಾಗಿದೆ. ಬಹಳ ಹೊತ್ತಿನಿಂದ ಹುಡುಕುತ್ತಿದ್ದೇನೆ, ಸಿಗುತ್ತಿಲ್ಲ. ಆ ಮಳಿಗೆ ಯಾವ ಬ್ಲಾಕ್‌ನಲ್ಲಿದೆ ಎಂದು ಹೇಳಬಹುದೇ?’ ಎಂದು ಕೇಳುತ್ತಾಳೆ.

ಆಗ ತುಸು ಗೊಂದಲಕ್ಕೊಳಗಾಗುವ ಸರದಿ ನಿಮ್ಮದು. ಆಗ ನೀವು, ‘ನನಗೆ ಕಾವೇರಿ ಮಳಿಗೆಯಿರುವ ಬ್ಲಾಕ್ ಹೆಸರು, ಸಂಖ್ಯೆ ಗೊತ್ತಿಲ್ಲ. ಆದರೆ ಅದು ಎಂ.ಜಿ.ರಸ್ತೆಯಲ್ಲಿದೆ’ ಎನ್ನುತ್ತೀರಿ. ಅದಕ್ಕೆ ಆ ಯುವತಿ, ‘ಇಲ್ಲ, ನಾನು ಈ ಬೀದಿಯ ಹೆಸರನ್ನು ತಿಳಿಯಲು ಬಯಸುವುದಿಲ್ಲ, ಆ ಮಳಿಗೆ ಇರುವ ಬ್ಲಾಕ್ ಹೆಸರೇನು ಮತ್ತು ಅದರ ಸಂಖ್ಯೆ ಏನು ಎಂಬು ದನ್ನು ತಿಳಿಯಬಯಸುವೆ’ ಎನ್ನುತ್ತಾಳೆ. ಅದನ್ನು ಕೇಳಿ ಕಳೆದುಹೋಗುವ ಸರದಿ ನಿಮ್ಮದು. ‘ನೀವು ಯಾವ ಜಗತ್ತಿನಲ್ಲಿ ವಾಸಿಸುತ್ತಿದ್ದೀರಿ? ಬ್ಲಾಕ್ ಹೆಸರು ಮತ್ತು ಸಂಖ್ಯೆ ಅಂದ್ರೆ ನನಗೆ ಗೊತ್ತಿಲ್ಲ. ಆದರೆ ಅದು ಎಂ.ಜಿ.ರಸ್ತೆ…
ಮಹಾತ್ಮ ಗಾಂಽ ರಸ್ತೆಯಲ್ಲಿದೆ ಎಂದಷ್ಟೇ ಹೇಳಬ’ ಎಂದು ನೀವು ಹೇಳುತ್ತೀರಿ. ಇನ್ನೊಂದು ಪ್ರಸಂಗವನ್ನು ಕಲ್ಪಿಸಿಕೊಳ್ಳಿ. ನೀವು ಟೋಕಿಯೋ ನಗರದಲ್ಲಿ ನಡೆಯುತ್ತಿದ್ದೀರಿ.

ಅಲ್ಲಿನ ಅಕಿಹಬರಾ ಪ್ರದೇಶದಲ್ಲಿರುವ ಶಿಂಟೋ ದೇವಾಲಯವನ್ನು ಹುಡುಕುತ್ತಿದ್ದೀರಿ. ನೀವು ಜಪಾನಿ ವ್ಯಕ್ತಿಯ
ಬಳಿಗೆ ಹೋಗಿ, ‘ಶಿಂಟೋ ದೇವಾಲಯವಿರುವ ರಸ್ತೆಯ ಹೆಸರೇನು?’ ಎಂದು ಕೇಳುತ್ತೀರಿ. ಆ ಜಪಾನಿ ವ್ಯಕ್ತಿ ನಿಮ್ಮ ಮಾತು ಕೇಳಿ ಗೊಂದಲಕ್ಕೊಳಗಾಗುತ್ತಾನೆ. ನೀವು ಆ ದೇವಾಲಯವಿರುವ ರಸ್ತೆಯ ಹೆಸರೇನು ಎಂದು ಮತ್ತೊಮ್ಮೆ ಕೇಳುತ್ತೀರಿ. ಆತ ಗಲಿಬಿಲಿಗೊಳಗಾದವನಂತೆ ನಿಮ್ಮನ್ನು ಮತ್ತೊಮ್ಮೆ ದಿಟ್ಟಿಸುತ್ತಾನೆ. ‘ಇಲ್ಲಿನ ಬೀದಿಗಳಿಗೆ ಹೆಸರು ಗಳಿಲ್ಲ, ನೀವು ಹುಡುಕುವ ದೇವಾಲಯದ ಬ್ಲಾಕ್ ನಂಬರ್ ಹೇಳಿದರೆ ಸುಲಭವಾಗಿ ಹುಡುಕಬಹುದು’ ಎನ್ನುತ್ತಾನೆ. ನಿಮಗೆ ತಲೆ ಚಿಟ್ಟುಹಿಡಿಯುವುದೊಂದೇ ಬಾಕಿ.

ಆಗ ನಿಮಗೆ ಎಂ.ಜಿ.ರಸ್ತೆಯಲ್ಲಿ ಸಿಕ್ಕ ಜಪಾನಿ ಯುವತಿ ನೆನಪಾಗುತ್ತಾಳೆ. ಅವಳು ಬ್ಲಾಕ್ ಹೆಸರು ಮತ್ತು ಸಂಖ್ಯೆ ಯನ್ನು ಕೇಳಿದ್ದು ಏಕೆ ಎಂಬುದು ನಿಮ್ಮ ಮನಸ್ಸಿನಲ್ಲಿ ಹಾದುಹೋಗುತ್ತದೆ. ಗೊತ್ತಿರಲಿ, ಜಪಾನಿನ ಬೀದಿಗಳಿಗೆ ಹೆಸರುಗಳೇ ಇಲ್ಲ. ಅಲ್ಲಿ ರಸ್ತೆಗೆ ನಾಮಕರಣ ಮಾಡುವುದಿಲ್ಲ. ಇಡೀ ರಸ್ತೆಯಲ್ಲಿ ಓಡಾಡಿದರೂ, ಅಲ್ಲಿನ ಅಂಗಡಿಗಳ ಬೋರ್ಡಿನಲ್ಲಿ ಅದು ಇರುವ ರಸ್ತೆಯ ಹೆಸರನ್ನು ಬರೆದಿರುವುದಿಲ್ಲ. ಪ್ರತಿ ಕಟ್ಟಡಕ್ಕೂ ಮೂರು ಸಂಖ್ಯೆಗಳ ಒಂದು ನಂಬರ್ ನೀಡಲಾಗುತ್ತದೆ. ಮೊದಲ ಸಂಖ್ಯೆ ಜಿಲ್ಲೆಯದು, ಎರಡನೆಯದು ಬ್ಲಾಕಿನದು ಮತ್ತು ಮೂರನೆಯದು ಬ್ಲಾಕಿನಲ್ಲಿರುವ ಮನೆ ಅಥವಾ ಕಟ್ಟಡದ್ದು. ಇಡೀ ಜಗತ್ತಿನಲ್ಲಿ ಒಂದು ಪದ್ಧತಿಯಿದ್ದರೆ,
ಜಪಾನಿನಲ್ಲಿ ಮಾತ್ರ ಪ್ರತ್ಯೇಕ ಪದ್ಧತಿ!

ಆದರೆ ಇದು ಅತ್ಯಂತ ವೈeನಿಕ ಮತ್ತು ಪರಿಪೂರ್ಣ ಪದ್ಧತಿ ಎಂಬುದು ಅಷ್ಟೇ ನಿಜ. ಒಮ್ಮೆ ಇದನ್ನು ಅರ್ಥ ಮಾಡಿಕೊಂಡರೆ, ಯಾವ ಕಟ್ಟಡ ಅಥವಾ ಮನೆಯನ್ನಾದರೂ ಸುಲಭವಾಗಿ ಹುಡುಕಬಹುದು. ಇದು ವಿದೇಶಿಗರಿಗೆ ಆರಂಭದಲ್ಲಿ ಕಷ್ಟವೆನಿಸಿದರೂ ಕ್ರಮೇಣ ಸುಲಭವಾಗುತ್ತಾ ಹೋಗುತ್ತದೆ. ಆದರೆ ಕಂಪ್ಯೂಟರುಗಳಿಗೆ ಜಪಾನಿಯರ ಪದ್ಧತಿ ಹೆಚ್ಚು ಆಪ್ತವೆಂಬುದು ಗಮನಾರ್ಹ. ರಸ್ತೆಗಳಿಗೆ ಹೆಸರಿದ್ದರೆ, ವಿಳಾಸ ದೀರ್ಘ ಎಂದು ಅನಿಸಬಹುದು. ಆದರೆ ಜಪಾನಿಯರು ಬರೆಯುವ ವಿಳಾಸ ಸಂಕ್ಷಿಪ್ತವಾಗಿರುತ್ತದೆ.

ಉದಾಹರಣೆಗೆ, ಸುಶಿ ಸನ್ಮಾಯಿ, ಟೋಕಿಯೋ, ಯೋಯೋಗಿ 4-3-1. ಈ ವಿಳಾಸವನ್ನು ಇನ್ನೂ ಸಂಕ್ಷಿಪ್ತವಾಗಿ ‘ಯೋಯೋಗಿ 4-3-1’ ಎಂದು ಬರೆದರೂ ಸುಲಭವಾಗಿ ಹುಡುಕಬಹುದು. ಇಡೀ ರಸ್ತೆಯ ಹೆಸರು ಬರೆಯುವ ಬದಲು ಇಷ್ಟನ್ನೇ ಮೊಬೈಲ್ ಅಥವಾ ಕಾರಿನಲ್ಲಿರುವ ನೇವಿಗೇಷನ್ ಉಪಕರಣದಲ್ಲಿ ಟೈಪ್ ಮಾಡುವುದು ಸುಲಭ. ‘ಯೋಯೋಗಿ 4-3-1’ ಎಂಬ ವಿಳಾಸದಲ್ಲಿ, ಯೋಯೋಗಿ ಅಂದರೆ ಪ್ರದೇಶದ ಹೆಸರು. ಮೊದಲ ಸಂಖ್ಯೆ ಜಿಲ್ಲೆ ಯನ್ನೂ, ಎರಡನೆಯದು ಬ್ಲಾಕ್ ಹೆಸರನ್ನೂ ಮತ್ತು ಮೂರನೆಯದು ಬ್ಲಾಕ್‌ನಲ್ಲಿರುವ ಕಟ್ಟಡದ ಸಂಖ್ಯೆಯನ್ನೂ ಸೂಚಿಸುತ್ತದೆ.

ಆ ದೇಶದ ಯಾವ ಊರಿಗೆ ಹೋದರೂ ಇದೇ ಪದ್ಧತಿಯ ಆಧಾರದಿಂದ ವಿಳಾಸವನ್ನು ಪತ್ತೆ ಹಚ್ಚಬಹುದು.
ಅಪರೂಪ ಎಂಬಂತೆ, ಕೆಲವು ಪ್ರಸಿದ್ಧ ರಸ್ತೆಗಳಿಗೆ ಮಾತ್ರ ಹೆಸರನ್ನಿಡಲಾಗಿದೆ. ಹೀಗಾಗಿ ಜಪಾನಿನಲ್ಲಿ ರಸ್ತೆಗೆ ಹೆಸರಿಡುವ, ಅದು ವಿವಾದಕ್ಕೊಳಗಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಇದನ್ನೂ ಓದಿ: @vishweshwarbhat