ಲಖನೌ: ರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ (Ayodhya Monkeys) ವಾನರ ಸೇನೆಗಳ ದಂಡೇ ಇದೆ. ಧಾರ್ಮಿಕ ನಗರಿಯಲ್ಲಿ ದೇವರ ಜೊತೆಗೆ ಕೋತಿಗಳಿಗೂ ಸೇವೆ ಸಲ್ಲಿಸಲಾಗುತ್ತದೆ. ಅಯೋಧ್ಯೆಯಲ್ಲಿ ಕೋತಿಯನ್ನು (Monkeys) ಹನುಮಂತನ ರೂಪವೆಂದು ಪೂಜಿಸುತ್ತಾರೆ. ಅಲ್ಲಿಗೆ ಬರುವ ಸಾಕಷ್ಟು ಭಕ್ತಾದಿಗಳು ಕೋತಿಗಳಿಗೆ ಹಣ್ಣು-ಹಂಪಲು ನೀಡುತ್ತಾರೆ. ಇತ್ತೀಚೆಗಷ್ಟೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ( Akshay Kumar) ಅಯೋಧ್ಯೆಯ ಕೋತಿಗಳ ಆಹಾರ ಪೂರೈಕೆಗಾಗಿ ಸರಿ ಸುಮಾರು ಒಂದು ಕೋಟಿ ರೂ. ದೇಣಿಗೆಯನ್ನು(Donation) ನೀಡಿದ್ದರು. ಇದೀಗ ಅವರ ದೇಣಿಗೆಯು ಸದ್ವಿನಿಯೋಗವಾಗಿದ್ದು, ಅಯೋಧ್ಯೆಯಲ್ಲಿನ ಸಾವಿರಾರು ಕೋತಿಗಳು ನಿತ್ಯವೂ ಪೌಷ್ಠಿಕ ಆಹಾರವನ್ನು ಸೇವಿಸುತ್ತಿವೆ.
ಅಕ್ಷಯ್ ಕುಮಾರ್ ಅವರ ದೇಣಿಗೆ ಮತ್ತು ಆಂಜನೇಯ ಸೇವಾ ಟ್ರಸ್ಟ್‌ನ(Anjaneya Sewa Trust) ಪ್ರಯತ್ನದಿಂದಾಗಿ ಪವಿತ್ರ ನಗರವಾದ ಅಯೋಧ್ಯೆಯಲ್ಲಿ 1250ಕ್ಕೂ ಹೆಚ್ಚು ಮಂಗಗಳಿಗೆ ಆಹಾರ ನೀಡಲಾಗುತ್ತಿದೆ. ಅಯೋಧ್ಯೆಯಲ್ಲಿ ಮಂಗಗಳ ಸಂತತಿ ವಿಪರೀತವಾಗಿ ಬೆಳೆಯುತ್ತಿರುವುದು ಹಲವರಿಗೆ ಗೊತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಅಕ್ಷಯ್ ಒಂದು ಕೋಟಿ ರುಪಾಯಿ ದೇಣಿಗೆ ನೀಡಿದ್ದು, ಅವರ ಸಹಕಾರದಿಂದ ಕೋತಿಗಳಿಗೆ ಪ್ರತಿದಿನ ಶುದ್ಧ ಮತ್ತು ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದೆ ಎಂದು ಟ್ರಸ್ಟ್ ತಿಳಿಸಿದೆ.
ಆಂಜನೇಯ ಸೇವಾ ಟ್ರಸ್ಟ್‌ನ ಸ್ಥಾಪಕ-ಟ್ರಸ್ಟಿ ಅವರು ಹೇಳಿರುವಂತೆ, ಅಯೋಧ್ಯೆಯ ಜನರಿಗೆ ಯಾವುದೇ ತೊಂದರೆ ಉಂಟಾಗಬಾರದು ಎಂಬುದನ್ನು ಗಮನದಲ್ಲಿಟ್ಟುಕೊಂಡು, ಜಗದ್ಗುರು ಸ್ವಾಮಿ ರಾಘವಾಚಾರ್ಯ ಜಿ ಮಹಾರಾಜರ ಮಾರ್ಗದರ್ಶನದಲ್ಲಿ ಮತ್ತು ಆಂಜನೇಯ ಸೇವಾ ಟ್ರಸ್ಟ್‌ನ ನೇತೃತ್ವದಲ್ಲಿ ಈ ಸಾರ್ಥಕವಾದ ಕೆಲಸವನ್ನು ಮಾಡಲಾಗುತ್ತಿದೆ ಎಂಬ ಮಾಹಿತಿಯಿದೆ.
ಇನ್ನು ಅಕ್ಷಯ್ ಕುಮಾರ್ ಅವರ ತಂಡವು ಕೋತಿಗಳು ತಿಂದು ಬಿಸಾಡಿದ ಬಾಳೆಹಣ್ಣಿನ ಸಿಪ್ಪೆಗಳನ್ನು ಸಂಗ್ರಹಿಸುತ್ತದೆ. ನಂತರ ಅವುಗಳನ್ನು ಹಸುಗಳಿಗೆ ನೀಡುತ್ತಿದೆ. ಹಸುಗಳ ಸಗಣಿಯನ್ನು ನಂತರ ಬಾಳೆ ಗಿಡಗಳನ್ನು ನೆಡಲು ಗೊಬ್ಬರವಾಗಿ ಬಳಸಲಾಗುತ್ತಿದೆ. ಅಕ್ಷಯ್ ದೇಣಿಗೆಯು ಸಾರ್ಥಕ ಕೆಲಸಕ್ಕೆ ಬಳಕೆಯಾಗಿರುವುದರಿಂದ ಅವರು ಸಂತಸಗೊಂಡಿದ್ದಾರೆ. ಕೋತಿಗಳು ಆಹಾರ ಸೇವಿಸುತ್ತಿರುವ ವಿಡಿಯೊವೊಂದನ್ನು ಅಕ್ಷಯ್ ಕುಮಾರ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು,””ಏಕ್ ಛೋಟಿ ಸಿ ಕೊಶಿಶ್” ಎಂದು ಬರೆದುಕೊಂಡಿದ್ದಾರೆ. ಅಕ್ಷಯ್ ಅಭಿಮಾನಿಗಳು ತನ್ನ ನಟನ ಉದಾರತೆಗೆ ”ಭೇಷ್! ಅಕ್ಕಿ ಭಾಯ್” ಎಂದಿದ್ದಾರೆ.
ಧಾರ್ಮಿಕ ನಗರವಾದ ಅಯೋಧ್ಯೆಗೆ ಪ್ರತಿ ವರ್ಷ 1 ಕೋಟಿ ರುಪಾಯಿ ದೇಣಿಗೆ ನೀಡಲು ಅಕ್ಷಯ್ ಕುಮಾರ್ ಮುಂದಾಗಿದ್ದಾರೆ ಎನ್ನಲಾಗಿದೆ. ಈ ದೇಣಿಗೆಯನ್ನು ಅಯೋಧ್ಯೆಯಲ್ಲಿ ತನ್ನ ತಂದೆ ಅರುಣ್ ಭಾಟಿಯಾ ಮತ್ತು ತನ್ನ ಮಾವ ರಾಜೇಶ್ ಖನ್ನಾ ಅವರ ಹೆಸರಿನಲ್ಲಿ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ:Amit Shah: ಅಂಬೇಡ್ಕರ್ ಕುರಿತು ಶಾ ವಿವಾದದ ಕಿಡಿ; ಸಂಸತ್‌ನಲ್ಲಿ ಕೋಲಾಹಲ- ರಾಜ್ಯಸಭೆ ಅಧಿವೇಶನ ಮುಂದೂಡಿಕೆ