ಮಂಡ್ಯ: ಜಾತಿ, ಪಕ್ಷ ಬಿಟ್ಟು ಎಲ್ಲರು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೈ ಜೋಡಿಸಿ ಇದು ಕನ್ನಡಿಗರ ಹಬ್ಬ. 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಬೇಕು. ಎಲ್ಲರೂ ಸೇರಿ ಒಗ್ಗಟ್ಟಿನಿಂದ ಕನ್ನಡ ಹಬ್ಬ ಮಾಡುತ್ತಿದ್ದೇವೆ ಸಹಕರಿಸಿ ಎಂದು ಕೃಷಿ ಸಚಿವ(Minister of Agriculture) ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್(N Chaluvarayaswamy) ಚಲುವರಾಯಸ್ವಾಮಿ ಮನವಿ ಮಾಡಿದರು.(Saahithya Sammelana)
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಶುರುವಾಗಿದ್ದು,ಇಡೀ ಜಿಲ್ಲೆಯಲ್ಲಿ ವೈಭವದ ತಯಾರಿ ನಡೆಯುತ್ತಿದೆ. ನುಡಿ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ರಾಜ್ಯದ ಲಕ್ಷಾಂತರ ಜನರು ತುದಿಗಾಲಿನಲ್ಲಿ ನಿಂತಿದ್ದಾರೆ. ಸರಿ ಸುಮಾರು ಮೂವತ್ತು ವರ್ಷಗಳ ನಂತರ ಮಂಡ್ಯ(Mandya) ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಸಹಜವಾಗಿ ಎಲ್ಲರಲ್ಲೂ ಸಂಭ್ರಮ-ಸಡಗರ ಮನೆ ಮಾಡಿದೆ.
ಈ ಮಧ್ಯೆ ಇಂದು(ಡಿ.18) ಸಚಿವ ಮತ್ತು ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷರಾದ ಚಲುವರಾಯಸ್ವಾಮಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ್ದು,ಸಮ್ಮೇಳನದ ತಯಾರಿ ಮತ್ತು ಮೂರು ದಿನಗಳು ನಡೆಯಲಿರುವ ಒಟ್ಟು ಕಾರ್ಯಕ್ರಮದ ರೂಪುರೇಷೆಗಳನ್ನು ಹೇಳಿದ್ದಾರೆ. “ನೂರಕ್ಕೆ ನೂರರಷ್ಟು ಕನ್ನಡ ಮಾತನಾಡುವ ಏಕೈಕ ಜಿಲ್ಲೆ ನಮ್ಮ ಮಂಡ್ಯ ಜಿಲ್ಲೆ. ಅದರ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ. ಮಂಡ್ಯ ಜಿಲ್ಲೆ ಅಂದರೆ ಬೆಲ್ಲದ ಸಿಹಿಯ ಹಾಗೆ. ಇಲ್ಲಿನ ಜನರು ಅಷ್ಟೇ. ಮಂಡ್ಯ ಕಲೆಗಳ ತವರೂರು, ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಸಾಹಿತಿಗಳು ಇದ್ದಾರೆ. ಈ ಬಾರಿಯ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆಯಲಿದ್ದು, ಕಾರ್ಯಕ್ರಮದ ಉದ್ಘಾಟನೆ ಇತಿಹಾಸದ ಪುಟಗಳಲ್ಲಿ ದಾಖಲಾಗುವ ರೀತಿ ನೆರವೇರಲಿದೆ” ಎಂದರು. “ಸಮ್ಮೇಳನ ಮಂಡ್ಯದ ಪ್ರತಿಷ್ಠೆಯ ವಿಷಯ. ಹಾಗಾಗಿ ಎಲ್ಲರೂ ಒಗ್ಗಟಿನಿಂದ ಕೆಲಸ ಮಾಡಬೇಕಿದೆ. ಎಲ್ಲರೂ ಕೈ ಜೋಡಿಸಬೇಕಾಗಿ ಕೇಳಿಕೊಳ್ಳುತ್ತೇನೆ” ಎಂದು ಸಚಿವ ಚಲುವರಾಯಸ್ವಾಮಿ ವಿನಂತಿಸಿದ್ದಾರೆ.
ಹೇಗಿದೆ ಸಾಹಿತ್ಯ ಸಮ್ಮೇಳನದ ತಯಾರಿ?
ಡಿ.20ರಿಂದ 22ರ ವರೆಗೆ ಅಂದರೆ ಮೂರು ದಿನಗಳ ಕಾಲ ಅದ್ಭುತ ಮತ್ತು ಅರ್ಥಪೂರ್ಣವಾದ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಈಗಾಗಲೇ ಮಂಡ್ಯದ ಸ್ಯಾಂಜೋ ಆಸ್ಪತ್ರೆಯ ಹಿಂಭಾಗದಲ್ಲಿ ಮೂರು ಬೃಹತ್ ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದೆ. ಸುಮಾರು 70-80 ಎಕರೆ ಜಾಗದಲ್ಲಿ ಈ ಬಾರಿಯ ಸಮ್ಮೇಳನ ಜರುಗಲಿದೆ.
ಇನ್ನು ಸಮ್ಮೇಳನದ ಮೊದಲ ದಿನ 50ಕ್ಕೂ ಹೆಚ್ಚು ಕಲಾ ತಂಡಗಳಿಂದ ಮೆರವಣಿಗೆ ಇರಲಿದೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆಯಿಂದ ಪ್ರಧಾನ ವೇದಿಕೆಯವರೆಗೆ ಮೆರವಣಿಗೆ ಹೋಗಲಾಗುವುದು. ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಕಲಾತಂಡಗಳ ಜೊತೆ ಬೆಂ-ಮೈ ಹೆದ್ದಾರಿಯಲ್ಲಿ ಸಮ್ಮೇಳನಾಧ್ಯಕ್ಷರ ರಥ ಸಾಗಲಿದೆ.
ಮೂರು ವೇದಿಕೆಗಳಿಗೆ ಮಂಡ್ಯ ಜಿಲ್ಲೆಗೆ ಕೊಡುಗೆ ನೀಡಿದ ಮಹನೀಯರ ಹೆಸರುಗಳನ್ನುಇಡಲಾಗಿದೆ. 87 ಪುಸ್ತಕಗಳ ಬೆಲ್ಲದಾರತಿಯ ಮೂಲಕ ಸಾಹಿತ್ಯ ಸಮ್ಮೇಳನವು ಕಳೆ ಕಟ್ಟುತ್ತದೆ. ಇನ್ನು ನಾಳೆ(ಡಿ.19) ಮಂಡ್ಯಕ್ಕೆ ಸಮ್ಮೇಳನ ಅಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಆಗಮಿಸಲಿದ್ದು,ಜಿಲ್ಲಾಡಳಿತ ಅವರನ್ನು ಸ್ವಾಗತಿಸಲಿದೆ. ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸೇರಿ ಸಚಿವ ಸಂಪುಟದ ಹಲವು ಸಚಿವರು ಉಪಸ್ಥಿತರಿರುತ್ತಾರೆ.
ಎಲ್ಲವೂ ಅಚ್ಚುಕಟ್ಟು
ಸಾಹಿತ್ಯ ಸಮ್ಮೇಳನದಲ್ಲಿ ಒಟ್ಟು 31 ಗೋಷ್ಠಿಗಳನ್ನು ಆಯೋಜಿಸಲಾಗಿದೆ. 450 ಪುಸ್ತಕ ಮಳಿಗೆ, 350 ವಾಣಿಜ್ಯ ಮಳಿಗೆ, 55 ವಸ್ತು ಪ್ರದರ್ಶನ ಮಳಿಗೆಗಳು ಇರಲಿವೆ. ನೋಂದಾಯಿತ ಪ್ರತಿನಿಧಿಗಳಿಗೆ 40 ಕೌಂಟರ್, ಸಾರ್ವಜನಿಕರಿಗೆ 100 ಊಟದ ಕೌಂಟರ್ ವ್ಯವಸ್ಥೆಯಾಗಿದ್ದು, ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. 150ಕ್ಕೂ ಹೆಚ್ಚು ಶೌಚಾಲಯಗಳ ನಿರ್ಮಾಣವಾಗಿದೆ. ಜಿಲ್ಲೆಯ ಏಳು ತಾಲ್ಲೂಕಿಗೂ 15 ಪ್ರತ್ಯೇಕ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದ್ದು, ಮೈಸೂರಿನಿಂದ ಹಾಗೂ ಬೆಂಗಳೂರಿನಿಂದ 30 ನಿಮಿಷಕ್ಕೆ ಒಂದು ಬಸ್ ವ್ಯವಸ್ಥೆಯಾಗಿದೆ. ವಾಹನಗಳ ದಟ್ಟಣೆ ನಿಭಾಯಿಸಲು ಮಾರ್ಗ ಬದಲಾಯಿಸಿದ್ದು, ಬೆಂಗಳೂರು ಮಾರ್ಗದಿಂದ ಎಕ್ಸ್‌ಪ್ರೆಸ್ ವೇ ನಲ್ಲಿ ಸಂಚರಿಸಿ ಚಿಕ್ಕ ಮಂಡ್ಯ ಹಾಗೂ ಇಂಡವಾಳು ನಿರ್ಗಮನದ ಮೂಲಕ ಮಂಡ್ಯಕ್ಕೆ ಪ್ರವೇಶವಾಗಬಹುದು. ಭದ್ರತೆಯ ದೃಷ್ಟಿಯಿಂದ ಸಮ್ಮೇಳನದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಪ್ರಮುಖ ಆಕರ್ಷಣೆ
ಡಿ.20 ರಂದು ಖ್ಯಾತ ಸಂಗೀತ ನಿರ್ದೇಶಕ ಸಾಧು ಕೋಕಿಲ ಹಾಗೂ ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ.
ಡಿ.21 ರಂದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯುತ್ತದೆ.
ಈ ಸುದ್ದಿಯನ್ನೂ ಓದಿ:ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ