Thursday, 19th December 2024

Viral Video: ಶ್ವಾನವನ್ನು ಆಟೋದ ಮೇಲೆ ಕೂರಿಸಿ ಊರಿಡಿ ಸುತ್ತಾಡಿದ ಚಾಲಕ; ನೆಟ್ಟಿಗರು ಫುಲ್ ಗರಂ

Viral Video

ಮುಂಬೈ: ಮುಂಬೈನ ಜುಹುನಲ್ಲಿ ಆಟೋರಿಕ್ಷಾದ ಚಾಲಕನೊಬ್ಬ ಶ್ವಾನವನ್ನು ಆಟೋದ ಮೇಲೆ ಕೂರಿಸಿಕೊಂಡು ಪ್ರಯಾಣಿಸಿದ ಅಪಾಯಕಾರಿಯಾಗಿ ಘಟನೆ ನಡೆದಿದೆ. ಪೊಮೆರೇನಿಯನ್ ನಾಯಿಯನ್ನು ಆಟೋ ಛಾವಣಿಯ ಮೇಲೆ ನಿಂತು ಹಗಲು ಮತ್ತು ರಾತ್ರಿ ನಗರದಾದ್ಯಂತ ಓಡಾಡಿದ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ. 

ತನ್ನ ಕಾರಿನ ಛಾವಣಿಯ ಮೇಲೆ ಮೂರು ಸಾಕು ನಾಯಿಗಳನ್ನು ಸಾಗಿಸುತ್ತಿದ್ದ ಬೆಂಗಳೂರಿನ ವ್ಯಕ್ತಿಯನ್ನು ಬಂಧಿಸಿದ ಕೆಲವು ದಿನಗಳ ನಂತರ ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವರದಿಯಾಗಿದೆ. ಮುಂಬೈನಲ್ಲಿ ನಾಯಿಯನ್ನು ಆಟೋದ ಛಾವಣಿಯ ಮೇಲೆ ಕೂರಿಸಿ ಪ್ರಯಾಣಿಸಿದ ಪ್ರಕರಣವನ್ನು ಹಲವಾರು ಪ್ರಾಣಿ ಪ್ರಿಯರು ಸೋಶಿಯಲ್ ಮೀಡಿಯಾದಲ್ಲಿ  ಹಂಚಿಕೊಂಡಿದ್ದು, ಆಟೋಚಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ವಾಹನದ ನೋಂದಣಿ ಸಂಖ್ಯೆ “ಎಂಎಚ್ 48 ಎನ್ 309” ಎಂದು ಬರೆಯಲಾಗಿತ್ತು. ವಿಡಿಯೊದಲ್ಲಿ, ಪೊಮೆರೇನಿಯನ್ ವಾಹನದ ಛಾವಣಿಯ ಮೇಲೆ ಅಪಾಯಕಾರಿ ರೀತಿಯಲ್ಲಿ ನಿಂತಿರುವುದು ಕಂಡುಬಂದಿದ್ದು, ಚಾಲಕ ವಾಹನವನ್ನು ಸ್ಟಾರ್ಟ್ ಮಾಡಿ ನಗರದ ಜನನಿಬಿಡ ಬೀದಿಗಳಲ್ಲಿ ಓಡಿಸಿದ್ದಾನೆ. ಆರಂಭದಲ್ಲಿ, ನಾಯಿಯನ್ನು ಹಾಡಹಗಲೇ ಅಸುರಕ್ಷಿತ ರೀತಿಯಲ್ಲಿ ಪ್ರಯಾಣಿಸುವಂತೆ ಮಾಡಿದ್ದಲ್ಲದೇ ನಂತರ ರಾತ್ರಿ ಡ್ರೈವ್ ಸಮಯದಲ್ಲಿಯೂ ಕೂಡ  ಇದೇ ರೀತಿಯ ಘಟನೆ ನಡೆದಿದೆ.  ವೈರಲ್ ವಿಡಿಯೊದ ಎರಡನೇ ಭಾಗದಲ್ಲಿ  ನಗರದ ದಟ್ಟಣೆಯ ನಡುವೆ ನಾಯಿಯನ್ನು  ಆಟೋ ಛಾವಣಿಯ ಮೇಲೆ ಕೂರಿಸಿ ಚಾಲಕ ಸವಾರಿ ಮಾಡಿದ್ದು ರೆಕಾರ್ಡ್ ಆಗಿದೆ.

ಪ್ರಾಣಿ ಪ್ರಿಯರು ನಾಯಿಯ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವರು ಆಟೋ ಚಾಲಕನಿಗೆ ತನ್ನ ವಾಹನದ ಮೇಲ್ಭಾಗದಲ್ಲಿ ನಾಯಿ ನಿಂತಿರುವ ಬಗ್ಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಮುಂಬೈನ ಜನನಿಬಿಡ ರಸ್ತೆಗಳಲ್ಲಿ ನಾಯಿಯನ್ನು ಈ ರೀತಿ  ಅಪಾಯಕಾರಿಯಾಗಿ ಪ್ರಯಾಣ ಮಾಡಿಸಿದ್ದನ್ನು  ನೋಡಿದ ನೆಟ್ಟಿಗರು ಪೊಲೀಸ್ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ವಿಷಯವನ್ನು ಪರಿಶೀಲಿಸಲು ಮತ್ತು ಅಗತ್ಯ ಕ್ರಮಕ್ಕೆ ಅನುಕೂಲವಾಗುವಂತೆ ಅವರು ಮುಂಬೈ ಪೊಲೀಸ್ ಮತ್ತು ಪೆಟಾದ ಹ್ಯಾಂಡಲ್‍ಗಳನ್ನು ಟ್ಯಾಗ್ ಮಾಡಿದ್ದಾರೆ.

“ಇದು ಯಾವಾಗ ನಿಲ್ಲುತ್ತದೆ? ಆಟೋ ಡ್ರೈವರ್ ಅಥವಾ ಸಾಕುಪ್ರಾಣಿ ಮಾಲೀಕರಿಂದ ಇಂತಹ ನಿರ್ಲಕ್ಷ್ಯವನ್ನು ನಾವು ನೋಡುತ್ತಿರುವುದು ಇದೇ ಮೊದಲಲ್ಲ. ನಾಯಿಗಳು ನಿಜವಾಗಿಯೂ ಮನುಷ್ಯನ ಉತ್ತಮ ಸ್ನೇಹಿತ, ಆದರೂ ಅವುಗಳ ಬಗ್ಗೆ ಯಾವಾಗಲೂ ಕಾಳಜಿ ಮತ್ತು ಗೌರವವನ್ನು ತೋರಿಸುವುದಿಲ್ಲ” ಎಂದು ಬರೆದು ಈ ಘಟನೆಯ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಹಾಗೇ ಇದಕ್ಕೆ  ‘ಸ್ಟ್ರೀಟ್ ಡಾಗ್ಸ್ ಆಫ್ ಬಾಂಬೆ’ ಎಂಬ ಶೀರ್ಷಿಕೆ ಬರೆಯಲಾಗಿದೆ.

ಈ ಸುದ್ದಿಯನ್ನೂ ಓದಿ: ಲಂಡನ್ ಮೂಲದ ‘ಸ್ಟ್ರೀಟ್ ಡ್ಯಾನ್ಸರ್’ ಜೊತೆ ಸಖತ್‌ ಆಗಿ ಹೆಜ್ಜೆ ಹಾಕಿದ ʼಡ್ಯಾನ್ಸಿಂಗ್ ಕಾಪ್’; ಮೋಡಿ ಮಾಡುವ ವಿಡಿಯೊ ನೋಡಿ

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಪ್ರಾಣಿ ರಕ್ಷಕ ಮತ್ತು ಹಿರಿಯ ಪೊಲೀಸ್ ಅಧಿಕಾರಿ ಸುಧೀರ್ ಕುಡಲ್ಕರ್, “ಸಾಕುಪ್ರಾಣಿಗಳು ಪ್ರದರ್ಶನಕ್ಕಾಗಿ ಅಲ್ಲ. ಈ ಪ್ರಾಣಿಗಳು ವಸ್ತು ಅಥವಾ ಅಲಂಕಾರಗಳಲ್ಲ; ಅವುಗಳೂ ನಮ್ಮಂತೆಯೇ ಭಯ, ನೋವು ಮತ್ತು ಪ್ರೀತಿಯನ್ನು ಅನುಭವಿಸುವ ಜೀವಿಗಳು. ಯಾವುದೇ ಹಗ್ಗ ಅಥವಾ ಇತರ ಸುರಕ್ಷತಾ ಕ್ರಮಗಳಿಲ್ಲದ ಈ  ಕೃತ್ಯವು ನನ್ನನ್ನು ಆಘಾತಗೊಳಿಸಿದೆ”ಎಂದು ಅವರು ಹೇಳಿದ್ದಾರೆ.