ಇಸ್ಲಮಾಬಾದ್: ಎರಡು ದಶಕಗಳ ಹಿಂದೆ ಪಾಕಿಸ್ತಾನಕ್ಕೆ ಕಳ್ಳಸಾಗಣೆ ಮಾಡಲ್ಪಟ್ಟ ಭಾರತೀಯ ಮಹಿಳೆಯೊಬ್ಬರು ಯೂಟ್ಯೂಬ್ ವಿಡಿಯೊದಲ್ಲಿ ತಮ್ಮ ಮೊಮ್ಮಗನನ್ನು ಗುರುತಿಸಿದ ನಂತರ ಅಂತಿಮವಾಗಿ ತನ್ನ ತಾಯ್ನಾಡಿಗೆ ಮರಳಿದ ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ. 2002ರಲ್ಲಿ ದುಬೈನಲ್ಲಿ ಉದ್ಯೋಗಾವಕಾಶ ನೀಡುವುದಾಗಿ ನಂಬಿಸಿ ಆಕೆಯನ್ನು ಪಾಕಿಸ್ತಾನಕ್ಕೆ ಕರೆತರಲಾಗಿತ್ತು. ಅಂದಿನಿಂದ 75 ವರ್ಷದ ಹಮೀದಾ ಬಾನು ಅವರು ಪಾಕಿಸ್ತಾನದಲ್ಲಿ 22 ವರ್ಷಗಳ ಕಾಲ “ಜೀವಂತ ಶವದಂತೆ” ಬದುಕಿದ್ದಾರಂತೆ. ಈ ಸುದ್ದಿ ಈಗ ಎಲ್ಲೆಡೆ ವೈರಲ್(Viral Video) ಆಗಿದೆ.
“ದುಬೈಯಲ್ಲಿ ಕೆಲಸ ಕೊಡಿಸುವ ಭರವಸೆ ನೀಡುವ ಮೂಲಕ ಮೋಸದಿಂದ ಪಾಕಿಸ್ತಾನಕ್ಕೆ ಕರೆದೊಯ್ಯಲಾಯಿತು. 23 ವರ್ಷಗಳ ಕಾಲ ನನ್ನ ಕುಟುಂಬದಿಂದ ದೂರವಾಗಿದ್ದೆ. ಅದನ್ನೆಲ್ಲವನ್ನೂ ಸಹಿಸಿಕೊಂಡೆ” ಎಂದು ಬಾನು ಅವರು ಭಾರತಕ್ಕೆ ಪ್ರವೇಶಿಸಿದ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.
2002ರಲ್ಲಿ, ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನಾಲ್ಕು ಮಕ್ಕಳನ್ನು ಪೋಷಿಸುತ್ತಿರುವ ವಿಧವೆ ಬಾನು ಅವರನ್ನು ನೇಮಕಾತಿ ಏಜೆಂಟ್ ಸಂಪರ್ಕಿಸಿದ್ದಾರೆ. ದುಬೈನಲ್ಲಿ ಕೆಲಸಕ್ಕಾಗಿ ಏಜೆಂಟ್‍ಗಳಿಗೆ 20,000 ರೂಪಾಯಿಗಳನ್ನು ಪಾವತಿಸಿದ್ದಾರೆ. ಆದರೆ ಅವರನ್ನು ದುಬೈ ಬದಲಿಗೆ ಪಾಕಿಸ್ತಾನದ ಹೈದರಾಬಾದ್ ನಗರಕ್ಕೆ ಕರೆದೊಯ್ದು ಆಕೆಯನ್ನು ಮೂರು ತಿಂಗಳ ಕಾಲ ಅಲ್ಲಿನ ಮನೆಯೊಂದರಲ್ಲಿ ಇರಿಸಲಾಗಿತ್ತು. ನಂತರ ಮಹಿಳೆ ಕರಾಚಿಯ ಬೀದಿ ಬದಿಯ ವ್ಯಾಪಾರಿಯನ್ನು ಮದುವೆಯಾದರಂತೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅವರ ಪತಿ ನಿಧನರಾದರಂತೆ.
ಜುಲೈ 2022 ರಲ್ಲಿ ಪಾಕಿಸ್ತಾನದ ಸೋಶಿಯಲ್ ಮೀಡಿಯಾ ಕಾರ್ಯಕರ್ತ ವಲಿಯುಲ್ಲಾ ಮರೂಫ್ ಯೂಟ್ಯೂಬ್‍ನಲ್ಲಿ ಬಾನು ಅವರನ್ನು ಸಂದರ್ಶನ ಮಾಡಿದಾಗ ಬಾನು ಅವರ ಕಥೆ ಗಮನ ಸೆಳೆಯಿತು. ಭಾರತೀಯ ಪತ್ರಕರ್ತ ಖಲ್ಫಾನ್ ಶೇಖ್ ಈ ವಿಡಿಯೊವನ್ನು ನೋಡಿ ಶೇರ್ ಮಾಡಿದ್ದು, ಇದು ಭಾರತದಲ್ಲಿರುವ ಬಾನು ಅವರ ಕುಟುಂಬವನ್ನು ತಲುಪಿದೆ. ಮಹಿಳೆಯ ಮೊಮ್ಮಗ, ವಿಡಿಯೊದಲ್ಲಿ ಅವರನ್ನು ಗುರುತಿಸಿದ್ದಾನೆ. ಕೊನೆಗೆ ಫೋನ್ ಕರೆಯ ಮೂಲಕ ಮಹಿಳೆ ತಮ್ಮ ಕುಟುಂಬವನ್ನು ಸೇರಿದರಂತೆ.
ಈ ಸುದ್ದಿಯನ್ನೂ ಓದಿ:ಲಂಡನ್ ಮೂಲದ ‘ಸ್ಟ್ರೀಟ್ ಡ್ಯಾನ್ಸರ್’ ಜೊತೆ ಸಖತ್ ಆಗಿ ಹೆಜ್ಜೆ ಹಾಕಿದ ʼಡ್ಯಾನ್ಸಿಂಗ್ ಕಾಪ್’; ಮೋಡಿ ಮಾಡುವ ವಿಡಿಯೊ ನೋಡಿ
ನಂತರ ಭಾರತ ಮತ್ತು ಪಾಕಿಸ್ತಾನ ಅಧಿಕಾರಿಗಳು ಆಕೆಯ ರಾಷ್ಟ್ರೀಯತೆಯನ್ನು ದೃಢೀಕರಿಸಲು ಸಂಪೂರ್ಣ ಗುರುತಿನ ತಪಾಸಣೆ ನಡೆಸಿದರು. ಅವರ ಭಾರತೀಯ ಪೌರತ್ವವನ್ನು ಅಕ್ಟೋಬರ್ 2023ರಲ್ಲಿ ಪರಿಶೀಲಿಸಲಾಯಿತು. ನಂತರ ಅವರನ್ನು ಭಾರತಕ್ಕೆ ಕಳುಹಿಸಲಾಯಿತು.