Thursday, 19th December 2024

Ambedkar Row: ಅಮಿತ್‌ ಶಾ ಆಡಿಯೋ ಎಡಿಟೆಡ್‌ ? ಕಾಂಗ್ರೆಸ್‌ಗೆ ಎಕ್ಸ್‌ನಿಂದ ನೋಟಿಸ್‌!

Ambedkar Row

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಇತ್ತೀಚೆಗೆ ಅಂಬೇಡ್ಕರ್‌ ಬಗ್ಗೆ (Ambedkar Row) ಮಾತನಾಡಿದ್ದು, ಭಾರೀ ವಿವಾದ ಸೃಷ್ಟಿಯಾಗಿದೆ. ಈ ಬಗ್ಗೆ ಕಾಂಗ್ರೆಸ್‌ (Congress) ಕೆಲವು ವೀಡಿಯೊ ತುಣುಕುಗಳನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೀಗ ಬುಧವಾರ ಎಕ್ಸ್‌ನಿಂದ ನೋಟಿಸ್‌ ಬಂದಿದೆ ಎಂದು ಕಾಂಗ್ರೆಸ್ ಪಕ್ಷ ಹೇಳಿಕೊಂಡಿದೆ. ಕೇಂದ್ರ ಗೃಹ ಸಚಿವಾಲಯದ ಕೋರಿಕೆಯ ಮೇರೆಗೆ ಕಾಂಗ್ರೆಸ್ ಹ್ಯಾಂಡಲ್‌ಗಳಿಗೆ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು ನಾಯಕರು ಹೇಳಿದ್ದಾರೆ.

ಭಾರತೀಯ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಅಮಿತ್‌ ಶಾ ಅವಮಾನಿಸಿದ್ದಾರೆ ಎಂದು ಆರೋಪಿಸಿ ಅವರ ಭಾಷಣದ ಕ್ಲಿಪ್ ಅನ್ನು ಕಾಂಗ್ರೆಸ್ ಮಂಗಳವಾರ ಹಂಚಿಕೊಂಡಿತ್ತು. ನಂತರ ಇದು ಭಾರೀ ರಾಜಕೀಯ ಗದ್ದಲಕ್ಕೆ ಕಾರಣವಾಗಿತ್ತು. ಕಾಂಗ್ರೆಸ್‌ ಮಾಡಿರುವ ಆರೋಪವನ್ನು ಪ್ರಧಾನಿ ನರೇಂದ್ರ ಮೋದಿ ತಳ್ಳಿ ಹಾಕಿದ್ದರು.

ಏನಿದು ವಿವಾದ ?

ಸಂಸತ್‌ನಲ್ಲಿ ಮಾತನಾಡಿದ ಅಮಿತ್‌ ಶಾ, ಅಂಬೇಡ್ಕರ್ ಅವರ ಹೆಸರು ಹೇಳುವುದನ್ನು ಕಾಂಗ್ರೆಸ್ ಫ್ಯಾಶನ್ ಮಾಡಿಕೊಂಡಿದೆ. ಅಂಬೇಡ್ಕರ್ ಬದಲು ದೇವರ ಹೆಸರನ್ನು ಹಲವು ಬಾರಿ ಹೇಳಿದ್ದರೆ ಅವರಿಗೆ ಏಳು ಜನ್ಮದ ಪ್ರಾಪ್ತಿಯಾಗುತ್ತಿತ್ತು. ನೀವು 100 ಬಾರಿ ಅಂಬೇಡ್ಕರ್ ಅವರ ಹೆಸರನ್ನು ಜಪಿಸುತ್ತಿರುತ್ತೀರಿ, ಇಷ್ಟು ಬಾರಿ ದೇವರ ನಾಮಸ್ಮರಣೆ ಮಾಡಿದರೆ 7 ಬಾರಿ ಸ್ವರ್ಗಕ್ಕೆ ಹೋಗುತ್ತಿದ್ದಿರಿ’ ಎಂದಿದ್ದರು.

ಈ ಬಗ್ಗೆ ಆಕ್ಷೇಪ ಎತ್ತಿರುವ ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿವೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾತನಾಡಿ ಇದು ಅಂಬೇಡ್ಕರ್ ಅವರ ಕೊಡುಗೆ ಮತ್ತು ಇಡೀ ದೇಶಕ್ಕೆ ತಿಳಿದಿರುವ ಸಂವಿಧಾನವನ್ನು ಅಳಿಸುವ ಪ್ರಯತ್ನ ಎಂದು ಕರೆದರು. ಸಂವಿಧಾನವನ್ನು ಬದಲಾಯಿಸಲು ಬಿಜೆಪಿ ಉದ್ದೇಶಿಸಿದೆ ಎಂದು ಆರೋಪಿಸಿರುವ ಅವರು, ಶಾ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕಾ ಗಾಂಧಿ ಸೇರಿದಂತೆ ಇತರ ಕಾಂಗ್ರೆಸ್ ನಾಯಕರು ಇದೇ ರೀತಿಯ ಭಾವನೆಗಳನ್ನು ಪ್ರತಿಧ್ವನಿಸಿದರು,

ಅಮಿತ್‌ ಶಾ ಸ್ಪಷ್ಟನೆ

ದಿಲ್ಲಿಯಲ್ಲಿ ನಡೆದ ಪ್ರತಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ಕಾಂಗ್ರೆಸ್‌ ಸುಳ್ಳು ಮಾಹಿತಿ ಮೂಲಕ ಜನರ ಹಾದಿ ತಪ್ಪಿಸುತ್ತಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಪಕ್ಷವು ಸಂಸತ್ತಿನಲ್ಲಿ ನಾನು ಆಡಿದ ಮಾತುಗಳನ್ನು ತಿರುಚಿದೆ ಮತ್ತು ಅಂಬೇಡ್ಕರ್ ವಿರೋಧಿ ನಿಲುವನ್ನು ಮತ್ತೊಮ್ಮೆ ಸಾಬಿತುಪಡಿಸಿದೆ ಎಂದು ಆರೋಪಿಸಿದ್ದಾರೆ.

ಈ ಸುದ್ದಿಯನ್ನೂ ಓದಿ : Amit Shah: ಮೋದಿ ವಿರುದ್ಧ ಖರ್ಗೆ ಹೇಳಿಕೆ ಅಸಹ್ಯಕರ; ಅಮಿತ್‌ ಶಾ ತಿರುಗೇಟು