Thursday, 19th December 2024

Vijay Mallya: ಪಡೆದಿರೋ ಸಾಲಕ್ಕಿಂತ ದುಪ್ಪಟ್ಟು ಆಸ್ತಿ ಜಪ್ತಿ- ಭಾರತೀಯ ಬ್ಯಾಂಕ್‌ಗಳ ವಿರುದ್ಧ ವಿಜಯ್‌ ಮಲ್ಯ ಆರೋಪ

vijay mallya

ನವದೆಹಲಿ: ಭಾರತದಿಂದ ಪರಾರಿಯಾಗಿರುವ ಆರ್ಥಿಕ ಅಪರಾಧಿ, ಉದ್ಯಮಿ ವಿಜಯ್‌ ಮಲ್ಯ(Vijay Mallya) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಭಾರತೀಯ ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ರೂ. ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿ ಅಲ್ಲೇ ಇರುವ ವಿಜಯ್‌ ಮಲ್ಯ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌(Nirmala Sitharaman) ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ತಾವು ಪಡೆದ ಸಾಲಕ್ಕೆ ಪ್ರತಿಯಾಗಿ ದುಪ್ಪಟ್ಟಿನಷ್ಟು ತಮ್ಮ ಆಸ್ತಿಯನ್ನು ಬ್ಯಾಂಕ್‌ಗಳು ಜಪ್ತಿ ಮಾಡಿದೆ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಮಲ್ಯ, ಬ್ಯಾಂಕ್‌ಗಳು ಅವರಿಂದ ₹ 14,131.60 ಕೋಟಿ ವಸೂಲಿ ಮಾಡಿದ್ದು, ಸಾಲ ವಸೂಲಾತಿ ನ್ಯಾಯಮಂಡಳಿ ₹ 1,200 ಕೋಟಿ ಬಡ್ಡಿ ಸೇರಿದಂತೆ ಕಿಂಗ್‌ಫಿಶರ್ ಏರ್‌ಲೈನ್ಸ್ (ಕೆಎಫ್‌ಎ) ಸಾಲವನ್ನು ₹ 6,203 ಕೋಟಿ ಎಂದು ನಿರ್ಣಯಿಸಿದೆ. ಅಂದರೆ ಪಡೆದ ಸಾಲಕ್ಕಿಂತ ಎರಡು ಪಟ್ಟು ಹೆಚ್ಚು ವಸೂಲಾತಿ ಮಾಡಲಾಗಿದೆ ಎಂದು ಮಲ್ಯ ಹೇಳಿದ್ದಾರೆ.

ಎಕ್ಸ್‌ನಲ್ಲಿನ ಪೋಸ್ಟ್‌ಗಳಲ್ಲಿ, ಜಾರಿ ನಿರ್ದೇಶನಾಲಯ (ಇಡಿ) ಮತ್ತು ಬ್ಯಾಂಕ್‌ಗಳು ಹೆಚ್ಚುವರಿ ವಸೂಲಾತಿಯನ್ನು ಕಾನೂನುಬದ್ಧವಾಗಿ ಸಮರ್ಥಿಸದಿದ್ದರೆ, ಅವರು ಪರಿಹಾರಕ್ಕೆ ಅರ್ಹರು ಎಂದು ಮಲ್ಯ ವಾದಿಸಿದರು. ಸಾಲ ಮತ್ತು ಬಡ್ಡಿಯನ್ನು ಪೂರ್ಣವಾಗಿ ಮರುಪಾವತಿಸಿದ್ದರೂ ಅನ್ಯಾಯವಾಗಿ “ಆರ್ಥಿಕ ಅಪರಾಧಿ” ಎಂಬ ಹಣೆಪಟ್ಟಿ ಕಟ್ಟಲಾಗಿದೆ ಎಂದು ಅವರು ಹೇಳಿದ್ದಾರೆ.

ಸಾಲ ವಸೂಲಾತಿ ನ್ಯಾಯಮಂಡಳಿಯು ಕೆಎಫ್‌ಎ ಸಾಲವನ್ನು ₹ 1200 ಕೋಟಿಗಳ ಬಡ್ಡಿ ಸೇರಿದಂತೆ ₹ 6203 ಕೋಟಿ ಎಂದು ನಿರ್ಣಯ ಮಾಡಿದೆ. ₹ 6203 ಕೋಟಿಗಳ ತೀರ್ಪಿನ ಸಾಲದ ವಿರುದ್ಧ ಇಡಿ ಮೂಲಕ ಬ್ಯಾಂಕ್‌ಗಳು ₹ 14,131.60 ಕೋಟಿಗಳನ್ನು ನನ್ನಿಂದ ವಸೂಲಿ ಮಾಡಿವೆ. ಇಷ್ಟೆಲ್ಲಾ ಆಗಿದ್ದರೂ, ನಾನು ಇನ್ನೂ ಆರ್ಥಿಕ ಅಪರಾಧಿ ಎಂದು ಸಂಸತ್ತಿನಲ್ಲಿ ವಿತ್ತ ಸಚಿವೆ ಘೋಷಣೆ ಮಾಡುತ್ತಾರೆ. ಇಡಿ ಮತ್ತು ಬ್ಯಾಂಕ್‌ಗಳು ಎರಡು ಪಟ್ಟು ಹೆಚ್ಚು ಸಾಲವನ್ನು ಹೇಗೆ ಸರಿದೂಗಿಸಿಕೊಂಡಿದೆ ಎಂಬುದನ್ನು ಕಾನೂನುಬದ್ಧವಾಗಿ ಸಮರ್ಥಿಸದಿದ್ದರೆ, ನಾನು ಪರಿಹಾರಕ್ಕೆ ಅರ್ಹನಾಗಿರುತ್ತೇನೆ, ಈ ಹೋರಾಟವನ್ನು ನಾನು ಮುಂದುವರಿಸುತ್ತೇನೆ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ನಿರ್ಮಲಾ ಸೀತಾರಾಮನ್‌ ಹೇಳಿದ್ದೇನು?

ಭಾರತದಿಂದ ಪರಾರಿಯಾಗಿರುವ ಉದ್ಯಮಿಯ ಗಣನೀಯ ಸಾಲದ ಒಂದು ಭಾಗವನ್ನು ಪಾವತಿಸಲು ವಿಜಯ್ ಮಲ್ಯಗೆ ಸೇರಿದ್ದ 14,131 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡು ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳಿಗೆ ಹಸ್ತಾಂತರಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭಾ ಸದನದಲ್ಲಿ ತಿಳಿಸಿದ್ದಾರೆ. ವಿಜಯ್ ಮಲ್ಯ, ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿಯಂತಹ ವಾಂಟೆಡ್ ವ್ಯಕ್ತಿಗಳ ಸಾಲವನ್ನು ಮರುಪಾವತಿಸಲು ಜಾರಿ ನಿರ್ದೇಶನಾಲಯವು ಒಟ್ಟು 22,280 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮರುಸ್ಥಾಪಿಸಿದೆ. ಆರ್ಥಿಕ ಅಪರಾಧಿಗಳ ವಿರುದ್ಧದ ಹೋರಾಟವನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: ಮಲ್ಯ ವಿರುದ್ಧ ಜಾಮೀನು ರಹಿತ ವಾರಂಟ್‌ ಜಾರಿ