Thursday, 19th December 2024

BBMP news: 8000 ಮಹಿಳಾ ಪೌರ ಕಾರ್ಮಿಕರಿಗೆ ಕೆಲಸ ಕಾಯಂ

bbmp civil workers

ಬೆಂಗಳೂರು: ಹಲವು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಗುತ್ತಿಗೆ ಹಾಗೂ ನೇರ ಪಾವತಿ ಮಹಿಳಾ ಪೌರ ಕಾರ್ಮಿಕರ (Civil workers) ಕೆಲಸ ಕಾಯಮಾತಿಯನ್ನು ಬಿಬಿಎಂಪಿಯಲ್ಲಿ (BBMP news) ಇದೀಗ ಮಾಡಲಾಗಿದೆ. ಕಾಯಂಗೊಂಡಿರುವ 12 ಸಾವಿರ ಹುದ್ದೆಗಳ ಪೈಕಿ ಸುಮಾರು 8 ಸಾವಿರ ಮಹಿಳಾ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಇವರು ಗುತ್ತಿಗೆ ಹಾಗೂ ನೇರ ಪಾವತಿಯಡಿ ಕಾರ್ಯ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದರು. ಕಾಯಂಗೊಳಿಸುವುದಕ್ಕೆ ಕನಿಷ್ಠ ಎರಡು ವರ್ಷ ಅರ್ಹತೆ ಸೂಚಿಸಲಾಗಿತ್ತು. ಬಿಬಿಎಂಪಿಯಲ್ಲಿ ಗುತ್ತಿಗೆ ಹಾಗೂ ನೇರ ಪಾವತಿಯಡಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಎರಡು ಹಂತದಲ್ಲಿ ನೇಮಕ ಮಾಡಿಕೊಳ್ಳಲಾಗಿದ್ದು, ಒಟ್ಟು 14980 ಪೌರಕಾರ್ಮಿಕರನ್ನು ಕಾಯಂಗೊಳಿಸವುದಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಈ ಪೈಕಿ ಇದೀಗ 12,699 ಹುದ್ದೆಗಳಿಗೆ ನೇಮಕ ಮಾಡಲಾಗಿದೆ.

ಇದರಲ್ಲಿ ಬಹುತೇಕ 7,500 ರಿಂದ 8 ಸಾವಿರ ಮಹಿಳಾ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಶೀಘ್ರದಲ್ಲಿ ನೇಮಕಾತಿಪತ್ರ ವಿತರಣೆ ಮಾಡಲಾಗುವುದು ಎಂದು ಬಿಬಿಎಂಪಿ ಆಡಳಿತ ವಿಭಾಗದ ಉಪ ಆಯುಕ್ತ ಮಂಜುನಾಥ ಸ್ವಾಮಿ ಮಾಹಿತಿ ನೀಡಿದ್ದಾರೆ.

2281 ಹುದ್ದೆ ಖಾಲಿ

ಬಿಬಿಎಂಪಿಯು ಮೊದಲ ಹಂತದಲ್ಲಿ 3,673 ಹುದ್ದೆ, ಎರಡನೇ ಹಂತದಲ್ಲಿ 11,307 ಹುದ್ದೆ ಸೇರಿ ಒಟ್ಟು 14,980 ಹುದ್ದೆ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಮೀಸಲಾತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿರುವವರನ್ನು ನೇಮಕ ಸಾಧ್ಯವಾಗದ ಹಿನ್ನೆಲೆಯಲ್ಲಿ ಮೀಸಲಾತಿ ಪಾಲನೆಗೆ ವಿನಾಯಿತಿ ಪಡೆಯಲಾಗಿತ್ತು. ಹಾಗಾಗಿ ಇನ್ನೂ 2281 ಹುದ್ದೆ ಖಾಲಿ ಇವೆ. ಈ ಹುದ್ದೆಗೆ ಗ್ರಾಮೀಣ ಅಭ್ಯರ್ಥಿ, ಅಂಗವಿಕಲ, ಮಾಜಿ ಸೈನಿಕ ಸೇರಿದಂತೆ ಮೊದಲಾದ ಮೀಸಲಾತಿಗೆ ಭರ್ತಿ ಸಾಧ್ಯವಾಗಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Bengaluru news: ಪರವಾನಗಿ ಇಲ್ಲದ ಪಿಜಿಗಳಿಗೆ ಬಿಬಿಎಂಪಿ ಬೀಗ