Thursday, 19th December 2024

Ambedkar Row: ಪ್ರತಿಭಟನೆ ವೇಳೆ ಬಿಜೆಪಿ ಸಂಸದರಿಬ್ಬರಿಗೆ ಗಂಭೀರ ಗಾಯ; ICUನಲ್ಲಿ ಚಿಕಿತ್ಸೆ- ರಾಹುಲ್‌ ಗಾಂಧಿ ತಳ್ಳಿರುವ ಆರೋಪ

ನವದೆಹಲಿ: ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್(BR Ambedkar) ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರು ರಾಜ್ಯಸಭೆಯಲ್ಲಿ(Rajyasabha) ನೀಡಿದ ಹೇಳಿಕೆಯು ಪ್ರತಿಪಕ್ಷಗಳ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು,ಎರಡು ದಿನಗಳಿಂದ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಇಂದು(ಡಿ.19) ಕೂಡ ಸಂಸತ್ ಭವನದ ಎದುರು ಕಾಂಗ್ರೆಸ್‌ ಮತ್ತು ಬಿಜೆಪಿಯ ಹೈಡ್ರಾಮಾ ನಡೆಸಿದೆ.(Ambedkar Row) ಈ ವೇಳೆ ಪ್ರತಾಪ್‌ ಚಂದ್ರ ಸಾರಂಗಿ ಸೇರಿದಂತೆ ಇಬ್ಬರು ಬಿಜೆಪಿ ಸಂಸದರಿಗೆ ಗಂಭೀರ ಗಾಯಗಳಾಗಿವೆ. ಇನ್ನು ವಿಪಕ್ಷ ನಾಯಕರು ರಾಹುಲ್‌ ಗಾಂಧಿಯೇ ಅವರನ್ನು ತಳ್ಳಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ಇದೀಗ ಅವರ ವಿರುದ್ಧ FIR ದಾಖಲಿಸಲು ಬಿಜೆಪಿ ಮುಂದಾಗಿದೆ.

ಒಂದು ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರ ಪ್ರತಿಭಟನಾ ಮೆರವಣಿಗೆ ಇಂದು ಮುಖಾಮುಖಿಯಾಗಿದೆ. ಈ ವೇಳೆ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ(Pratap Sarangi) ಅವರು ಆಯತಪ್ಪಿ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ವಿಪಕ್ಷ ನಾಯಕ ರಾಹುಲ್ ಗಾಂಧಿ ನನ್ನನ್ನು ಹಿಡಿದು ತಳ್ಳಿದರು ಎಂದು ಸಂಸದ ಸಾರಂಗಿ ಅವರು ಆರೋಪಿಸಿದ್ದಾರೆ. ಆದರೆ ಆರೋಪವನ್ನು ತಳ್ಳಿಹಾಕಿರುವ ರಾಹುಲ್ ಗಾಂಧಿ ನಾನು ತಳ್ಳಿಲ್ಲ ಎಂದು ಹೇಳಿದ್ದಾರೆ.

ಸದ್ಯ ಬಿದ್ದು ಗಾಯಗೊಂಡಿರುವ ಪ್ರತಾಪ್ ಚಂದ್ರ ಸಾರಂಗಿಯವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಸಾರಂಗಿ ಮಾತ್ರವಲ್ಲದೆ ಮತ್ತೋರ್ವ ಬಿಜೆಪಿ ಸಂಸದ ಮುಖೇಶ್‌ ರಜಪೂತ್‌(Mukesh Rajaput) ಅವರು ಕೂಡ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಮೆರವಣಿಗೆ ವೇಳೆ ಮುಖೇಶ್‌ ಅವರನ್ನೂ ಹಿಡಿದು ತಳ್ಳಿರುವ ಆರೋಪ ಕೇಳಿ ಬರುತ್ತಿದೆ. ಸದ್ಯ ಬಿದ್ದು ಗಾಯಗೊಂಡಿರುವ ಪ್ರತಾಪ್ ಚಂದ್ರ ಸಾರಂಗಿ ಮತ್ತು ಮುಖೇಶ್‌ ರಜಪೂತ್‌ ಅವರನ್ನು ಚಿಕಿತ್ಸೆಗಾಗಿ ಐಸಿಯುಗೆ ದಾಖಲು ಮಾಡಲಾಗಿದೆ ಎಂಬ ಮಾಹಿತಿಯಿದೆ.

ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ ಬ್ಲಾಕ್‌ನ ಹಲವು ಸದಸ್ಯರು ನೀಲಿ ಬಣ್ಣದ ಬಟ್ಟೆಯನ್ನು ಧರಿಸಿ ಸಂಸತ್ ಆವರಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇಂಡಿಯಾಗೆ ವಿರುದ್ಧವಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಸಂಸದರು ಅಂಬೇಡ್ಕರ್ ಅವರನ್ನು ಅವಮಾನಿಸಿದ ಪ್ರತಿಪಕ್ಷ ಕಾಂಗ್ರೆಸ್ ಕೂಡಲೇ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ ಘೋಷಣೆಗಳನ್ನು ಕೂಗುತ್ತಾ, ನಾಮಫಲಕಗಳನ್ನು ಹಿಡಿದು ಸಂಸತ್ತಿನ ಆವರಣದೊಳಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್ ನ ಹಲವು ನಾಯಕರು ಸಂಸತ್ತಿನ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಯಿಂದ ಸಂಸತ್ ಭವನದವರೆಗೆ ‘ಜೈ ಭೀಮ್’ ಘೋಷಣೆಗಳನ್ನು ಕೂಗುತ್ತಾ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿದರು. ‘ಇತ್ತೀಚೆಗೆ ಅಂಬೇಡ್ಕರ್ ಹೆಸರು ಹೇಳುವುದು ಒಂದು ಫ್ಯಾಷನ್ ಆಗಿದ್ದು, ಇದರ ಬದಲು ದೇವರ ಜಪ ಮಾಡಿದರೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು’ ಎಂದು ಅಮಿತ್ ಶಾ ಮೊನ್ನೆ ತಮ್ಮ ಸಂಸತ್‌ ಭಾಷಣದಲ್ಲಿ ಹೇಳಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದು,ದೇಶದಾದ್ಯಂತ ಕಿಡಿ ಹೊತ್ತಿಕೊಂಡಿದೆ.

ಬುಧವಾರ ಅಮಿತ್ ಶಾ ಹೇಳಿಕೆ ನೀಡುತ್ತಿದ್ದಂತೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಗಲಭೆ ಉಂಟಾಗಿತ್ತು. ಪ್ರತಿಪಕ್ಷಗಳು ಪ್ರತಿಭಟನೆ ಆರಂಭಿಸುತ್ತಿದ್ದಂತೆ ಉಭಯ ಸದನಗಳನ್ನು ಮುಂದೂಡಲಾಗಿತ್ತು. ಅಮಿತ್ ಶಾ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇನ್ನು ಕಾಂಗ್ರೆಸ್ ಆರೋಪಗಳಿಗೆ ಉತ್ತರ ನೀಡಿರುವ ಅಮಿತ್, ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಸಮರ್ಥನೆ ನೀಡಿದ್ದಾರೆ. ನಾನು ಮಾತನಾಡಿರುವ ಪೂರ್ತಿ ವಿಡಿಯೊ ಹಾಕದೆ ಕೆಲವು ತುಣುಕುಗಳನ್ನು ಮಾತ್ರ ಹಂಚಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Boat Capsized: 13 ಮಂದಿಯ ಬಲಿ ಪಡೆದ ಮುಂಬೈ ಬೋಟ್‌ ಅಪಘಾತದ ಕಾರಣ ಬಹಿರಂಗ; ಹೇಗಾಯ್ತು ಈ ದುರಂತ?