Thursday, 19th December 2024

Darshanam Mogilaiah: ಪದ್ಮಶ್ರೀ ಪುರಸ್ಕೃತ ಜಾನಪದ ಗಾಯಕ ದರ್ಶನಂ ಮೊಗಿಲಯ್ಯ ನಿಧನ

Darshanam Mogilaiah

ಹೈದರಾಬಾದ್‌: ಜಾನಪದ ಗಾಯಕ, ಪದ್ಮಶ್ರೀ ಪುರಸ್ಕೃತ ಕಲಾವಿದ ದರ್ಶನಂ ಮೊಗಿಲಯ್ಯ (Darshanam Mogilaiah) ನಿಧನ ಹೊಂದಿದ್ದಾರೆ. ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಅವರು ವಾರಂಗಲ್‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಗುರುವಾರ (ಡಿ. 19) ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.

2022ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಅವರು ಜಾನಪದ ಹಾಡುಗಳಿಂದಲೇ ದೇಶಾದ್ಯಂತ ಜನಪ್ರಿಯರಾಗಿದ್ದಾರೆ. ಬುಡಗಟ್ಟು ಜನಾಂಗದ ವಿಶಿಷ್ಟ ವಾದ್ಯ ಪ್ರಕಾರ ಕಿನ್ನೇರಾ (Kinnera)ಕ್ಕೆ ಮರುಜೀವ ಕೊಟ್ಟ ಇವರು ಕಿನ್ನೆರಾ ಮೊಗಲಯ್ಯ ಎಂದೇ ಜನಪ್ರಿಯರಾಗಿದ್ದಾರೆ.

ಕಳೆದ ವರ್ಷ ತೆರೆಕಂಡ ʼಬಲಗಂʼ ತೆಲುಗು ಚಿತ್ರದಲ್ಲಿ ಮೊಗಿಲಯ್ಯ ಅವರ ಧ್ವನಿಯಲ್ಲಿ ಮೂಡಿಬಂದ ಹಾಡು ಜನಪ್ರಿಯವಾಗಿತ್ತು. ಜತೆಗೆ 2022ರಲ್ಲಿ ರಿಲೀಸ್‌ ಆದ ಪವನ್‌ ಕಲ್ಯಾಣ ಅಭಿನಯದ ತೆಲುಗು ಚಿತ್ರ ʼಭೀಮ್ಲಾ ನಾಯಕ್‌ʼ ಸಿನಿಮಾದಲ್ಲಿಯೂ ಹಾಡಿದ್ದರು.

1951ರಲ್ಲಿ ಹೈದರಾಬಾದ್‌ನ ನಾಗರ್‌ಕರ್ನೋಲ್‌ ಜಿಲ್ಲೆಯಲ್ಲಿ ಜನಿಸಿದ ಅವರ ಪತ್ನಿ ಕೊಮುರಮ್ಮ ಕೂಡ ಜಾನಪದ ಹಾಡುಗಾರ್ತಿ. ದಂಪತಿ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಎರಡೂ ಮೂತ್ರಪಿಂಡಗಳು ಹಾನಿಗೊಳಗಾದ ನಂತರ ದರ್ಶನ್‌ ಮೊಗಿಲಯ್ಯ ಅವರು ಗಂಭೀರ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ʼಬಲಗಂʼ ನಿರ್ಮಾಪಕ ದಿಲ್ ರಾಜು ಮತ್ತು ನಿರ್ದೇಶಕ ಯಲ್ದಂಡಿ ವೇಣು ಅವರಿಗೆ ಆರ್ಥಿಕ ಸಹಾಯ ಮಾಡಿದ್ದರು. ಮೆಗಾಸ್ಟಾರ್ ಚಿರಂಜೀವಿ ಮತ್ತು ಇತರ ಕಾಲವಿದರೂ ಸಹಾಯ ಮಾಡಲು ಮುಂದಾಗಿದ್ದರು. ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರವೂ ಕ್ರಮ ಕೈಗೊಂಡಿತ್ತು. ಐಎಎನ್ಎಸ್ ಪ್ರಕಾರ, ವಿಧಾನಸಭಾ ಸ್ಪೀಕರ್ ಗಡ್ಡಂ ಪ್ರಸಾದ್ ಕುಮಾರ್ ಅವರು ಮೊಗಿಯಾಲಯ್ಯ ಅವರ ಚಿಕಿತ್ಸೆಗಾಗಿ 1 ಲಕ್ಷ ರೂ. ಹಸ್ತಾಂತರಿಸಿದ್ದರು.

ದರ್ಶನ್‌ ಮೊಗಿಲಯ್ಯ ಅವರ ನಿಧನಕ್ಕೆ ಚಿತ್ರರಂಗ ಸೇರಿ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಅಂತ್ಯ ಸಂಸ್ಕಾರ ಹುಟ್ಟೂರಿನಲ್ಲಿ ಗುರುವಾರ ಸಂಜೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: Meena Ganesh: ಮಲಯಾಳಂ ಹಿರಿಯ ನಟಿ ಮೀನಾ ಗಣೇಶ್ ಇನ್ನಿಲ್ಲ