ನವದೆಹಲಿ: ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ(Virat Kohli) ಅವರು ಭಾರತ ತೊರೆದು ತಮ್ಮ ಕುಟುಂಬದೊಂದಿಗೆ ಲಂಡನ್ನಲ್ಲಿ ಶಾಶ್ವತವಾಗಿ ನೆಲೆಸಲಿದ್ದಾರೆ ಎಂಬ ವದಂತಿಗಳು ಬಹಳ ದಿನಗಳಿಂದ ಕೇಳಿಬರುತ್ತಿವೆ. ಇದೀಗ ಈ ವದಂತಿ ಇನ್ನಷ್ಟು ವೇಗ ಪಡೆದುಕೊಂಡಿವೆ. ಕೊಹ್ಲಿಯ ಬಾಲ್ಯದ ಕೋಚ್(Virat Kohli Childhood Coach) ರಾಜ್ಕುಮಾರ್ ಶರ್ಮಾ ಅವರು ಸಂದರ್ಶನವೊಂದಲ್ಲಿ ಕೊಹ್ಲಿ ಭಾರತ ತೊರೆಯುವು ಖಚಿತ ಎಂದು ಹೇಳಿದ್ದಾರೆ.
ದೈನಿಕ್ ಜಾಗರಣ್ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಕೋಚ್ ರಾಜ್ಕುಮಾರ್ ಶರ್ಮಾ, ಕೊಹ್ಲಿ ತಮ್ಮ ಕುಟುಂಬದೊಂದಿಗೆ ಲಂಡನ್ಗೆ ತೆರಳಲು ಯೋಚಿಸುತ್ತಿದ್ದಾರೆ. ಶೀಘ್ರದಲ್ಲೇ ಭಾರತಕ್ಕೆ ಆಗಮಿಸಿದ ಬಳಿಕ ಅವರು ಕುಟುಂಬ ಸಮೇತರಾಗಿ ಲಂಡನ್ಗೆ ತೆರಳಲಿದ್ದಾರೆ ಎಂದು ಹೇಳಿದ್ದಾರೆ. ರಾಜ್ಕುಮಾರ್ ಅವರ ಈ ಹೇಳಿಕೆ ಕೊಹ್ಲಿ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ.
ವಿರಾಟ್ ಕೊಹ್ಲಿ ತಮ್ಮ ಮಗ ಅಕಾಯ್ ಜನನದ ಬಳಿಕ ಭಾರತಕ್ಕಿಂತ ಹೆಚ್ಚಾಗಿ ಲಂಡನ್ನಲ್ಲಿಯೇ ನೆಲೆಸಿದ್ದಾರೆ. ಫೆಬ್ರವರಿ 15 ರಂದು ಲಂಡನ್ನಲ್ಲಿ ಅನುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಭಾರತಕ್ಕೆ ಕೇವಲ ಸರಣಿಯನ್ನಾಡಲು ಮಾತ್ರ ಕೊಹ್ಲಿ ಆಗಮಿಸಿ ಪಂದ್ಯ ಮುಕ್ತಾಯದ ಬಳಿಕ ಮತ್ತೆ ಲಂಡನ್ಗೆ ವಿಮಾನ ಏರುತ್ತಿದ್ದರು. ಜೂನ್ನಲ್ಲಿ ಮುಕ್ತಾಯ ಕಂಡಿದ್ದ ಟಿ20 ವಿಶ್ವಕಪ್ ಬಳಿಕ ಭಾರತಕ್ಕೆ ಬಂದಿದ್ದ ಕೊಹ್ಲಿ ಮುಂಬೈಯಲ್ಲಿ ನಡೆದಿದ್ದ ಅಭಿನಂದನಾ ಕಾರ್ಯಕ್ರಮ ಮುಗಿದ ದಿನದಂದೇ ಲಂಡನ್ಗೆ ತೆರಳಿದ್ದರು. ಅದಾಗಲೇ ಕೊಹ್ಲಿ ಲಂಡನ್ನಲ್ಲಿ ವಾಸಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಇದೀಗ ಅವರ ಬಾಲ್ಯದ ಕೋಚ್ ಕೂಡ ಕೊಹ್ಲಿ ಲಂಡನ್ನಲ್ಲಿ ನೆಲೆಸಲಿದ್ದಾರೆ ಎಂದಿದ್ದಾರೆ. ಆದರೆ ಈ ಬಗ್ಗೆ ಕೊಹ್ಲಿ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಇದನ್ನೂ ಓದಿ Jasprit Bumrah: ಕಪಿಲ್, ಇಶಾಂತ್ ದಾಖಲೆ ಮುರಿದ ಬುಮ್ರಾ
ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಅನುಷ್ಕಾ ಮತ್ತು ವಿರಾಟ್ ಯುಕೆ ಮೂಲದ ಕಂಪನಿಯ ನಿರ್ದೇಶಕರಾಗಿದ್ದಾರೆ. ಯುಕೆ ಸರ್ಕಾರದ ಫೈಂಡ್ ಅಂಡ್ ಅಪ್ಡೇಟ್ ಕಂಪನಿಯ ಮಾಹಿತಿ ಸೇವೆಯ ಪ್ರಕಾರ, ದಂಪತಿಗಳು ಮ್ಯಾಜಿಕ್ ಲ್ಯಾಂಪ್ನ ಮೂವರು ನಿರ್ದೇಶಕರಲ್ಲಿ ಇಬ್ಬರು. ಇದು ಆಗಸ್ಟ್ 1, 2022 ರಂದು ಆರಂಭಗೊಂಡ ಸಲಹಾ ಸಂಸ್ಥೆಯಾಗಿದೆ. ಕಂಪನಿಯ ಅಧಿಕೃತ ಕಚೇರಿ ವಿಳಾಸವು ಯುಕೆಯ ವೆಸ್ಟ್ ಯಾರ್ಕ್ಶೈರ್ನಲ್ಲಿದೆ.