ಬೆಂಗಳೂರು: ಇದೇ ಡಿ.21 ರಿಂದ ಆರಂಭಗೊಳ್ಳಲಿರುವ ದೇಶೀಯ ಕ್ರಿಕೆಟ್ ಟೂರ್ನಿಯಾದ ವಿಜಯ್ ಹಜಾರೆ(Vijay Hazare Trophy) ಟ್ರೋಫಿಗೆ 16 ಸದಸ್ಯರ ಕರ್ನಾಟಕ ತಂಡ ಪ್ರಕಟಗೊಂಡಿದೆ. ಮಯಾಂಕ್ ಅಗರ್ವಾಲ್ ನಾಯಕನಾದರೆ, ಶ್ರೇಯಸ್ ಗೋಪಾಲ್ ಉಪನಾಯಕನಾಗಿದ್ದಾರೆ. ಆದರೆ, ಅನುಭವಿ ಮನೀಶ್ ಪಾಂಡೆ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಅಂಡರ್-19 ಏಷ್ಯಾಕಪ್‌ನಲ್ಲಿ ಭಾರತ ತಂಡದ ಪರ ಆಡಿದ್ದ ಹಾರ್ದಿಕ್ ರಾಜ್ ಅವರಿಗೆ ತಂಡದಲ್ಲಿ ಸ್ಥಾನ ಲಭಿಸಿದೆ. ಇವರ ಜತೆಗೆ ಮಹಾರಾಜ ಟ್ರೋಫಿಯಲ್ಲಿ ಆಡಿದ್ದ ಯುವ ಆಟಗಾರರಿಗೂ ಅವಕಾಶ ನೀಡಲಾಗಿದೆ. ಒಟ್ಟಾರೆ ರಾಜ್ಯ ತಂಡ ಈ ಬಾರಿ ಯುವ ಮತ್ತು ಅನುಭವಿ ಆಟಗಾರರನ್ನೊಳಗೊಂಡ ಸಂತುಲಿತ ತಂಡವಾಗಿ ಗೋಚರಿಸಿದೆ.
ಕರ್ನಾಟಕ ತಂಡ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು ತನ್ನ ಮೊದಲ ಪಂದ್ಯವನ್ನು ಸಯ್ಯದ್ ಮುಷ್ತಾಕ್ ಅಲಿ ಚಾಂಪಿಯನ್ ಮುಂಬೈ ವಿರುದ್ಧ ಆಡಲಿದೆ. ಈ ಪಂದ್ಯ ಡಿ.21ರಂದು ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಕರ್ನಾಟಕ ಜತೆ ‘ಸಿ’ ಗುಂಪಿನಲ್ಲಿ ಮುಂಬೈ, ಪುದುಚೇರಿ, ಪಂಜಾಬ್, ಅರುಣಾಚಲ ಪ್ರದೇಶ, ಸೌರಾಷ್ಟ್ರ, ಹೈದರಾಬಾದ್ ಮತ್ತು ನಾಗಾಲ್ಯಾಂಡ್ ತಂಡಗಳು ಕಾಣಿಸಿಕೊಂಡಿದೆ.
ಇದನ್ನೂ ಓದಿ Virat Kohli: ಆಸೀಸ್ ಮಾಧ್ಯಮದ ವಿರುದ್ಧ ಹರಿಹಾಯ್ದ ಕೊಹ್ಲಿ; ವಿಡಿಯೊ ವೈರಲ್
ಕರ್ನಾಟಕ ತಂಡ ಈ ಸಾಲಿನ ರಣಜಿ, ಮುಷ್ತಾಕ್ ಅಲಿ ಸೇರಿ ಆಡಿದ ಎಲ್ಲ ದೇಶೀಯ ಟೂರ್ನಿಗಳಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿತ್ತು. ಇದೀಗ ವರ್ಷದ ಕೊನೆಯ ಟೂರ್ನಿಯಲ್ಲಾದರೂ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ಕಪ್ ಗೆಲ್ಲುವಂತಾಗಲಿ ಎನ್ನುವುದು ಕನ್ನಡಿಗರ ಆಶಯ. ರಾಜ್ಯ ತಂಡ ಕೊನೆಯ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಗೆದ್ದಿದ್ದು 2019-21ರಲ್ಲಿ. ಕಳೆದ ಬಾರಿ ಸೆಮಿ ಫೈನಲ್ ಪ್ರವೇಶಿಸಿದ್ದರೂ, ರಾಜಸ್ಥಾನ್ ವಿರುದ್ಧ ಸೋತು ನಿರಾಸೆ ಕಂಡಿತ್ತು.
ಕರ್ನಾಟಕ ತಂಡ
ಮಯಾಂಕ್ ಅಗರ್ವಾಲ್ (ನಾಯಕ), ಶ್ರೇಯಸ್ ಗೋಪಾಲ್ (ಉಪನಾಯಕ), ಎಸ್ ನಿಕಿನ್ ಜೋಸ್, ಕೆವಿ ಅನೀಶ್, ಆರ್ ಸ್ಮರನ್, ಕೆಎಲ್ ಶ್ರೀಜಿತ್, ಅಭಿನವ್ ಮನೋಹರ್, ಹಾರ್ದಿಕ್ ರಾಜ್, ವೈಶಾಕ್ ವಿಜಯ್ ಕುಮಾರ್, ವಾಸುಕಿ ಕೌಶಿಕ್, ವಿದ್ಯಾಧರ್ ಪಾಟೀಲ್, ಕಿಶನ್ ಬೇಡರೆ, ಅಭಿಲಾಷ್ ಶೆಟ್ಟಿ , ಮನೋಜ್ ಭಾಂಡಗೆ, ಪ್ರವೀಣ್ ದುಬೆ, ಲುವ್ನಿತ್ ಸಿಸೋಡಿಯಾ.