Thursday, 19th December 2024

Viral News: ಪಾಗಲ್‌ ಪ್ರೇಮಿಯ ಹುಚ್ಚಾಟಕ್ಕೆ ಧಗ ಧಗಿಸಿದ ಪ್ರೇಯಸಿಯ ಮನೆ; ಮದುವೆಗೆ ಒಲ್ಲೆ ಎಂದಳೆಂದು ಬೆಂಕಿ ಇಟ್ಟ ಕಿರಾತಕ!

ಭುವನೇಶ್ವರ: ‘ಎವ್ರಿಥಿಂಗ್‌ ಇಸ್ ಫೇರ್ ಇನ್ ಲವ್ ಆಂಡ್ ವಾರ್..’ ಎಂಬ ಮಾತಿದೆ. ಅಂದ್ರೆ ಪ್ರೇಮ ಮತ್ತು ಯುದ್ಧವನ್ನು ಜಯಿಸಲು ಏನು ಮಾಡಿದ್ರೂ ಅದು ಸರಿ ಎಂಬುದು ಈ ಮಾತಿನ ಅರ್ಥ. ಇದನ್ನು ಸೀರಿಯಸ್ಸಾಗಿ ತೆಗೊಂಡ ಯುವಕನೊಬ್ಬ ತನ್ನ ಪ್ರೀತಿಯನ್ನು ನಿರಾಕರಿಸಿದ ತನ್ನ ಪ್ರೇಯಸಿಯ ಮನೆಗೆ ಬೆಂಕಿ ಇಟ್ಟಿದ್ದಾನೆ. ಸದ್ಯಕ್ಕೆ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ (Viral News) ಆಗಿದ್ದು, ನೆಟ್ಟಿಗರು ಈ ಘಟನೆಗೆ ಶಾಕ್‌ ಆಗಿದ್ದಾರೆ.

ಈ ಘಟನೆ ಒಡಿಸ್ಸಾದ (Odisha) ಭದ್ರಕ್ (Bhadrak) ಜಿಲ್ಲೆಯಲ್ಲಿ ನಡೆದಿದ್ದು, ಆ ಯುವಕ ಮಾಡಿದ ವಿವಾಹದ ಪ್ರಸ್ತಾಪವನ್ನು ಯುವತಿ ಮತ್ತು ಆಕೆಯ ಮನೆಯವರು ನಿರಾಕರಿಸದ ಕಾರಣಕ್ಕೆ ಸಿಟ್ಟುಗೊಂಡ ಯುವಕ ಯುವತಿಯ ಮನೆಗೆ ಬೆಂಕಿಯಿಟ್ಟಿದ್ದಾನೆ. ಭದ್ರಕ್ ಜಿಲ್ಲೆಯ ಧಾಮ್ ನಗರ್ ಬ್ಲಾಕ್ ನಲ್ಲಿ (Dhamnagar block) ಬರುವ ಆನಂದಪುರ ಗ್ರಾಮದಲ್ಲಿ (Anandpur village) ಈ ಘಟನೆ ನಡೆದಿದ್ದು, ಆರೋಪಿಯನ್ನು ಜ್ಯೋತಿ ರಂಜನ್ ದಾಸ್ (28) ಎಂದು ಗರುತಿಸಲಾಗಿದೆ. ಈತ  ಚೂಡಕುಟಿ ಪಂಚಾಯತ್ ವ್ಯಾಪ್ತಿಗೆ ಬರುವ ವಿದ್ಯಾಧರಪುರ ಗ್ರಾಮಕ್ಕೆ ಸೇರಿದವನಾಗಿದ್ದಾನೆ.

ಯುವತಿಯ ಮನೆಗೆ ಬೆಂಕಿ ಹಚ್ಚಿದ ಯುವಕ ಬಳಿಕ ಅಲ್ಲಿಂದ ಪರಾರಿಯಾಗಿದ್ದು, ಸದ್ಯಕ್ಕೆ ತಲೆಮರೆಸಿಕೊಂಡಿದ್ದಾನೆ. ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಮತ್ತು ಎಲ್ಲರೂ ಅಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.

ಜ್ಯೋತಿ ಎಂಬ ಯುವಕ ಆನಂದಪುರ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗೋಪಾಲ್ ಸಾಹಿ ಗ್ರಾಮದ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಈ ನಡುವೆ ಈ ಯುವಕ ತನ್ನನ್ನು ಮದುವೆಯಾಗುವಂತೆ ಯುವತಿಯನ್ನು ಪದೇ ಪದೇ ಒತ್ತಾಯಿಸುತ್ತಿದ್ದ. ಮಾತ್ರವಲ್ಲದೇ, ತನ್ನೊಂದಿಗೆ ಮದುವೆಯಾಗಲು ಒಪ್ಪದೇ ಇದ್ದರೆ ತಮ್ಮ ಖಾಸಗಿ ಕ್ಷಣಗಳ ಫೊಟೋವನ್ನು ಬಹಿರಂಗಗೊಳಿಸುವುದಾಗಿ ಆತ ಯುವತಿಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂದು ಇದೀಗ ಸಂತ್ರಸ್ತೆ ಆರೋಪ ಮಾಡಿದ್ದಾಳೆ.

ಇದೀಗ ಯುವತಿಯು ಆರೋಪಿ ಯುವಕನ ಮೇಲೆ ಧಾಮ್ ನಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆತ ತನಗೆ ಕೊಲೆ ಬೆದರಿಕೆಯನ್ನೂ ಹಾಕಿದ್ದಾನೆ ಎಂದು ಯುವತಿ ತನ್ನ ದೂರಿನಲ್ಲಿ ಗಂಭೀರ ಆರೋಪವನ್ನು ಮಾಡಿದ್ದಾಳೆ.

ಈ ಸುದ್ದಿಯನ್ನೂ ಓದಿ: Viral Video: ಖ್ಯಾತ ಸುದ್ದಿ ನಿರೂಪಕಿಯ ಖಾಸಗಿ ವಿಡಿಯೊ ಲೀಕ್‌; ಅಸಲಿಯತ್ತೇನು?

ಈ ನಡುವೆ, ಆರೋಪಿ ಯವಕ ಜ್ಯೋತಿ ಯುವತಿಯ ಮನೆಗೆ ಬೆಂಕಿ ಹಚ್ಚಿದ್ದಾನೆ. ‘ಬೆಂಕಿ ಅನಾಹುತದಿಂದ ಐದು ಶೆಡ್‌ಗಳು ಹಾಗೂ ಬೆಲೆ ಬಾಳುವ ವಸ್ತುಗಳು ಉರಿದುಹೋಗಿವೆ, ಇದರಲ್ಲಿ ಬಂಗಾರದ ಒಡವೆಗಳು, ಪೀಠೋಪಕರಣಗಳು, ಅಕ್ಕಿ ಹಾಗೂ ಅಮೂಲ್ಯ ದಾಖಲೆಗಳು ಸುಟ್ಟು ಬೂದಿಯಾಗಿವೆ’ ಎಂದು ಯುವತಿ ಅಲವತ್ತುಕೊಂಡಿದ್ದಾಳೆ. ಒಟ್ಟಿನಲ್ಲಿ ಈ ಘಟನೆಯಿಂದ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ ಎಂಬುದು ಯುವತಿ ಮತ್ತು ಆಕೆಯ ಮನೆಯವರ ಆರೋಪವಾಗಿದೆ.

ಯುವತಿ ನೀಡಿದ ದೂರಿನ ಆಧಾರದಲ್ಲಿ, ಧಾಮ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲಿಸರು ತನಿಖೆ ಪ್ರಾರಂಭಿಸಿದ್ದಾರೆ. ಬೆಂಕಿ ಹಚ್ಚಿದ ಯುವಕ ಇದೀಗ ತಲೆ ಮರೆಸಿಕೊಂಡಿದ್ದು, ಆತನನ್ನು ಕೂಡಲೇ ಬಂಧಿಸುವಂತ ಸಂತ್ರಸ್ತ ಯುವತಿ ಮತ್ತು ಆಕೆಯ ಮನೆಯವರು ಆಗ್ರಹಿಸಿದ್ದಾರೆ. ‘ಆರೋಪಿಯಿಂದ ನಮಗೆ ಇನ್ನಷ್ಟು ಬೆದರಿಕೆಯಿದೆ. ಆತನನ್ನು ಪತ್ತೆ ಹಚ್ಚಿ ಶೀಘ್ರದಲ್ಲಿ ಬಂಧಿಸದಿದ್ದರೆ, ಅವನು ಇನ್ನಷ್ಟು ತೊಂದರೆ ಉಂಟುಮಾಡುವ ಸಾಧ್ಯತೆಗಳಿವೆ’ ಎಂದು ಸಂತ್ರಸ್ತೆ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾಳೆ.