ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ (Belagavi Winter Sessoin 2024) ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು, ಉತ್ತರ ಕರ್ನಾಟಕದ ಅಭಿವೃದ್ಧಿ ಸಂಬಂಧ ಕೆಲವು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದ್ದಾರೆ.
ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ 49 ಜನ ಸದಸ್ಯರು 13 ಗಂಟೆ 11 ನಿಮಿಷಗಳ ಕಾಲ ಮಾತನಾಡಿದ್ದಾರೆ. ಕಾಂಗ್ರೆಸ್‌ನಿಂದ 26, ಬಿಜೆಪಿಯಿಂದ 19 ಮತ್ತು ಜೆಡಿಎಸ್ ನಿಂದ 4 ಜನ ಸದಸ್ಯರು ಮಾತನಾಡಿದ್ದಾರೆ. ಮಾತನಾಡಿದ ಎಲ್ಲರೂ ಉತ್ತರ ಕರ್ನಾಟಕದ ನೀರಾವರಿ, ಕೈಗಾರಿಕೆ, ಕೃಷಿ, ಶಿಕ್ಷಣ, ಆರೋಗ್ಯ , ಮೂಲಭೂತ ಸೌಕರ್ಯ ಹಾಗೂ ಮುಂತಾದವುಗಳ ಬಗ್ಗೆಯೇ ಮಾತನಾಡಿದ್ದಾರೆ. ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ ಎಂದು ಸಿಎಂ ಅವರು ತಿಳಿಸಿದರು.
ಈ ಸುದ್ದಿಯನ್ನೂ ಓದಿ | CM Siddaramaiah: ಅವಾಚ್ಯ ಪದ ಬಳಸಿದ ಸಿ.ಟಿ. ರವಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ದೂರು; ಸೂಕ್ತ ಕ್ರಮ ಎಂದ ಸಿಎಂ
ಕಳೆದ ಡಿಸೆಂಬರ್‌ನಲ್ಲಿ ಇದೇ ಸದನದಲ್ಲಿ ನಾನು 8 ಭರವಸೆಗಳನ್ನು ನೀಡಿದ್ದೆ. ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸುವ ನಿಟ್ಟಿನಲ್ಲಿ 2002 ರಲ್ಲಿ ಡಾ. ಡಿ.ಎಂ. ನಂಜುಂಡಪ್ಪನವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯು ಸಲ್ಲಿಸಲಾಗಿದ್ದ ವರದಿಯನ್ನು 2007 ರಿಂದ ಇದುವರೆಗೆ ಅನುಷ್ಠಾನ ಮಾಡಲಾಗಿದೆ. ಉತ್ತರ ಕರ್ನಾಟಕದ ಕಲಬುರಗಿ ಮತ್ತು ಬೆಳಗಾವಿ ವಿಭಾಗಗಳ 14 ಜಿಲ್ಲೆಗಳಿಗೆ ಸಂಬಂಧಿಸಿದಂತೆ 17,850 ಕೋಟಿ ರೂಪಾಯಿಗಳನ್ನು (ರೆಗ್ಯುಲರ್ ಅನುದಾನಗಳನ್ನು ಹೊರತುಪಡಿಸಿ) ನಂಜುಂಡಪ್ಪ ವರದಿಯ ಅಡಿಯಲ್ಲಿ ಖರ್ಚು ಮಾಡಲಾಗಿದೆ. ಇಷ್ಟಾದರೂ ಕೂಡ ಈ ಭಾಗದಲ್ಲಿ ನಿರೀಕ್ಷಿತ ಪ್ರಗತಿಯಾಗಿಲ್ಲ ಎಂಬುದು ಇಲ್ಲಿರುವ ಬಹುಪಾಲು ಜನರ ಅಭಿಪ್ರಾಯ.
ನಂಜುಂಡಪ್ಪ ವರದಿಯ ಪ್ರಕಾರ 2007-08 ರಿಂದ 2023-24 ರವರೆಗೆ 35 ಸಾವಿರ ಕೋಟಿಗೂ ಹೆಚ್ಚಿನ ಅನುದಾನಗಳನ್ನು ಖರ್ಚು ಮಾಡಲಾಗಿದೆ. ಅದರಲ್ಲಿ, ಉತ್ತರ ಕರ್ನಾಟಕದ 14 ಜಿಲ್ಲೆಗಳಿಗೆ 17,500 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಆದರೆ, ನಿರೀಕ್ಷಿತ ಪ್ರಮಾಣದ ಪ್ರಗತಿ ಆಗಿಲ್ಲವೆಂದು ಬಹುಪಾಲು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರಿಂದ ಕಳೆದ ಬಾರಿ ಇದೇ ಸದನದಲ್ಲಿ ಘೋಷಣೆ ಮಾಡಿದಂತೆ 14ನೇ ಹಣಕಾಸು ಆಯೋಗದ ಸದಸ್ಯರಾಗಿದ್ದ ಡಾ.ಗೊವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಹೈ ಪವರ್ ಕಮಿಟಿಯೊಂದನ್ನು ರಚಿಸಲಾಗಿದೆ. ಸದರಿ ಸಮಿತಿಯು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಈ ಸಮಿತಿ ವರದಿ ಕೊಟ್ಟ ಕೂಡಲೇ ಅದನ್ನು ಅನುಷ್ಠಾನ ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ತಿಳಿಸಿದರು.
ಕೆ.ಕೆ.ಆ.ರ್.ಡಿ.ಬಿ. ಗೆ 2013-14 ರಿಂದ ಇದುವರೆಗೆ 19,878 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಒದಗಿಸಲಾಗಿದೆ. 13,229 ಕೊಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಇದುವರೆಗೆ 11,500 ಕೋಟಿ ಖರ್ಚು ಮಾಡಲಾಗಿದೆ. ಮಂಡಳಿಯು ಬಿಡುಗಡೆಯಾದ ಅನುದಾನಕ್ಕೆ ಶೇ.85ರಷ್ಟು ಆರ್ಥಿಕ ಪ್ರಗತಿ ಸಾಧಿಸಿದೆ. ಒಟ್ಟಾರೆ 35,885 ಕಾಮಗಾರಿಗಳು ಕೈಗೆತ್ತಿಕೊಂಡಿದ್ದು, 27,264 ಕಾಮಗಾರಿಗಳನ್ನು ಪೂರ್ಣಗೊಳಿಸಿದೆ. 8,621 ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿವೆ. ಈ ಅಂಕಿ-ಸಂಖ್ಯೆಗಳೇ ಪ್ರದೇಶದ ಅಭಿವೃದ್ಧಿಯನ್ನು ಸಾರಿ ಹೇಳುತ್ತಿವೆ ಎಂದರು.
ಕಾಯ್ದೆ ಆರಂಭದಿಂದ ಇದುವರೆಗೆ ವಿವಿಧ ಇಲಾಖೆಗಳಲ್ಲಿ ಈ ಭಾಗದವರಿಗೆ 1,09,416 ಹುದ್ದೆಗಳನ್ನು ನೇರ ನೇಮಕಾತಿಗೆ ಗುರುತಿಸಿದ್ದು, 79,985 ಹುದ್ದೆಗಳು ಭರ್ತಿಯಾಗಿವೆ. ಮುಂಬಡ್ತಿ ಮೀಸಲಿಗೆ ಗುರುತಿಸಿದ 38,705 ಹುದ್ದೆಗಳ ಪೈಕಿ 29,793 ಜನರಿಗೆ ಮುಂಬಡ್ತಿ ಭಾಗ್ಯ ನೀಡಲಾಗಿದೆ. ಇನ್ನು ಖಾಲಿ ಉಳಿದ ನೇರ ನೇಮಕಾತಿ ಮತ್ತು ಮುಂಬಡ್ತಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದರು.
ಈ ಸುದ್ದಿಯನ್ನೂ ಓದಿ | DK Shivakumar: ಬೆಂಗಳೂರಿನ ಕಸ ಮಾಫಿಯಾ ಮಟ್ಟ ಹಾಕುತ್ತೇವೆ; ಡಿ.ಕೆ. ಶಿವಕುಮಾರ್ ಘೋಷಣೆ
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರಸಕ್ತ 2024-25 ನೇ ಸಾಲಿನ ಆಯವ್ಯಯದಲ್ಲಿ ದಾಖಲೆ ಪ್ರಮಾಣದಲ್ಲಿ 5,000 ಕೋಟಿ ರೂ. ಘೋಷಿಸಿ ಅನುದಾನ ಹಂಚಿಕೆ ಮಾಡಲಾಗಿದೆ. ಕೆ.ಕೆ.ಆರ್.ಡಿ.ಬಿ. ಮಂಡಳಿಯ ಸಂಪೂರ್ಣ ಆರ್ಥಿಕ ನೆರವಿನೊಂದಿಗೆ ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ 371 ಹಾಸಿಗೆಯ ಶ್ರೀ ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆಯ ಆಸ್ಪತ್ರೆಯ ಶಾಖಾ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು 262.20 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಈಗಾಗಲೆ ಅನುಮೋದನೆ ನೀಡಿದ್ದು, ಅಂತಿಮ ಘಟ್ಟದ ಕೆಲಸ ಭರದಿಂದ ಸಾಗಿದೆ. ಶೀಘ್ರವೇ ಇದರ ಪ್ರದೇಶಕ್ಕೆ ಲೋಕಾರ್ಪಣೆ ಮಾಡಲಾಗುವುದು ಎಂದರು.
ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ತಾಂತ್ರಿಕ ನೆರವಿನೊಂದಿಗೆ ಕಲಬುರಗಿಯಲ್ಲಿ 221.52 ಕೋಟಿ ರೂ. ವೆಚ್ಚದಲ್ಲಿ 150 ಹಾಸಿಗೆಯ ಮಕ್ಕಳ ಆರೋಗ್ಯ ಘಟಕ ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಜಿಮ್ಸ್ ಆಸ್ಪತ್ರೆಯ ಆವರಣದಲ್ಲಿಯೇ 90 ಕೋಟಿ ರೂ. ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು 72 ಕೋಟಿ ರೂ. ವೆಚ್ಚದಲ್ಲಿ 150 ಹಾಸಿಗೆಗಳ ಸಾಮರ್ಥ್ಯದ ಕ್ಯಾನ್ಸರ್ ಆಸ್ಪತ್ರೆಯ ಕಟ್ಟಡ ನಿರ್ಮಿಸಲಾಗುತ್ತಿದ್ದು, ಈ ಮೂರು ಆಸ್ಪತ್ರೆಗಳ ಕಾಮಗಾರಿಗೆ ಈ ವರ್ಷ 75 ಕೋಟಿ ರೂ. ಅನುದಾನ ನೀಡಲು ನಿರ್ಧರಿಸಲಾಗಿದೆ.
ಕಲಬುರಗಿ ನಗರದಲ್ಲಿ ಈ ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿಯೆ ಜಿಮ್ಸ್ ವೈದ್ಯಕೀಯ ಕಾಲೇಜು, ಜಯದೇವ ಆಸ್ಪತ್ರೆ, ಇತ್ತೀಚೆಗೆ ಟ್ರಾಮಾ ಸೆಂಟರ್‌ಗಳನ್ನು ಸ್ಥಾಪಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುತ್ತಿದೆ. ಇದಲ್ಲದೆ ಪ್ರಗತಿಯಲ್ಲಿರುವ 162.80 ಕೋಟಿ ರೂ. ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹ ಶೀಘ್ರ ಸಾರ್ವಜನಿಕರಿಗೆ ಬಳಕೆಗೆ ಬರಲಿದೆ. 30.14 ಕೋಟಿ ರೂ. ವೆಚ್ಚದಲ್ಲಿ 50 ಹಾಸಿಗೆ ಸಾಮರ್ಥ್ಯದ ತೀವ್ರ ನಿಗಾ ಘಟಕ ಮತ್ತು 15.57 ಕೋಟಿ ರೂ. ವೆಚ್ಚದಲ್ಲಿ 30 ಹಾಸಿಗೆ ಸಾಮರ್ಥ್ಯದ ಸುಟ್ಟ ಗಾಯಗಳ ಘಟಕಕ್ಕೆ ಇತ್ತೀಚೆಗೆ ಅಡಿಗಲ್ಲು ಹಾಕಲಾಗಿದೆ. ಈ ಎಲ್ಲಾ ಆರೋಗ್ಯ ಸೇವೆಗಳಿಂದ ಈ ಪ್ರದೇಶದ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ಜೊತೆಗೆ ವೈದ್ಯಕೀಯ ಸವಲತ್ತುಗಳು ಮತ್ತಷ್ಟು ಸರಳವಾಗಿ ಕೈಗೆಟುಕಲಿವೆ.
ಕಲ್ಯಾಣ ಕರ್ನಾಟಕದ ಭಾಗದ ಉನ್ನತ ಶಿಕ್ಷಣ, ತಾಂತ್ರಿಕ, ವೈದ್ಯಕೀಯ ಶಿಕ್ಷಣ ಹಾಗೂ ಇತರೆ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಶೇ.70 ರಷ್ಟು ಸ್ಥಾನಗಳನ್ನು ಮತ್ತು ರಾಜ್ಯದ ಉಳಿದ ಇತರೆ ಭಾಗದಲ್ಲಿ ಶೇ.8 ರಷ್ಟು ಸ್ಥಾನಗಳನ್ನು ಸ್ಥಳೀಯ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಇದರ ಪರಿಣಾಮ 2014-15 ರಿಂದ 2023-24ನೇ ಶೈಕ್ಷಣಿಕ ಸಾಲಿನ ವರೆಗೆ ಪ್ರಮುಖವಾಗಿ 7,757 ಅಭ್ಯರ್ಥಿಗಳು ವೈದ್ಯಕೀಯ, 25,683 ಅಭ್ಯರ್ಥಿಗಳು ಇಂಜಿನಿಯರಿAಗ್ ಪ್ರವೇಶಾತಿ ಪಡೆದಿದ್ದಾರೆ. ಇದಲ್ಲದೆ ದಂತ ವೈದ್ಯಕೀಯ, ಹೋಮಿಯೋಪತಿ, ಕೃಷಿ ಸಂಬAಧಿತ, ಬಿ.ಫಾರ್ಮಸಿ/ ಡಿ.ಫಾರ್ಮಸಿ ಕೋರ್ಸುಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ಮೀಸಲಾತಿ ಸೌಲಭ್ಯದಿಂದ ಉನ್ನತ ಶಿಕ್ಷಣ ಪಡೆದುಕೊಂಡಿದ್ದಾರೆ.
ಪ್ರದೇಶದಲ್ಲಿನ ಅನಕ್ಷರತೆಯನ್ನು ಹೋಗಲಾಡಿಸಿ ಸಾಕ್ಷರತೆ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಾಥಮಿಕ ಶಾಲೆಯಿಂದ ಹಿಡಿದು ವಿಶ್ವವಿದ್ಯಾಲಯದವರೆಗೆ ಶಿಕ್ಷಣ ಗುಣಮಟ್ಟ ಕಾಪಾಡಲು, ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಹೆಚ್ಚಳ ಹಾಗೂ ವಸತಿ ನಿಲಯ ಕಟ್ಟಡ ನಿರ್ಮಾಣ ಹೀಗೆ ಅನೇಕ ಶೈಕ್ಷಣಿಕ ಚಟುವಟಿಕೆಗಳಿಗೆ ಒಟ್ಟಾರೆ 2013-14 ರಿಂದ 2023-24ರ ವರೆಗೆ ಒಟ್ಟಾರೆ 4,352 ಕೋಟಿ ರೂ. ಅನುದಾನ ಖರ್ಚು ಮಾಡಲಾಗಿದೆ.
2023-24ನೇ ವರ್ಷವನ್ನು “Year of Education” ಎಂದು ಘೋಷಿಸಿ ಮೈಕ್ರೋ ಮತ್ತು ಮ್ಯಾಕ್ರೋ ಯೋಜನೆಯಡಿ ಶೇ.25 ಅಂದರೆ 652.50 ಕೋಟಿ ರೂ. ಅನುದಾನ ಅಕ್ಷರ ಆವಿಷ್ಕಾರ ಕಾರ್ಯಕ್ರಮದ ಮೂಲಕ ಖರ್ಚು ಮಾಡಲಾಗಿದೆ. ಈ ಅನುದಾನದಲ್ಲಿ ಶಾಲೆಗಳ ದುರಸ್ಥಿ ಮತ್ತು ನಿರ್ಮಾಣ, ಹೆಚ್ಚುವರಿ ಕೋಣೆ ನಿರ್ಮಾಣ, ಪೀಠೋಪಕರಣ, ವಿದ್ಯುತೀಕರಣ, ಶೌಚಾಲಯ ನಿರ್ಮಾಣ, ಗ್ರಂಥಾಲಯ ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಪ್ರದೇಶದಲ್ಲಿ ಆರೋಗ್ಯ ಸಂಸ್ಥೆಗಳನ್ನು ಬಲವರ್ಧನೆ ಮಾಡಿ ಸ್ಥಳೀಯರಿಗೆ ಉತ್ತಮ ಆರೋಗ್ಯ ಸೇವೆ ನೀಡುವಂತಾಗಲು ಆರೋಗ್ಯ ಕೇಂದ್ರ ನಿರ್ಮಾಣ, ತಾಲೂಕು-ಜಿಲ್ಲಾ ಆಸ್ಪತ್ರೆ ನಿರ್ಮಾಣ, ಆಸ್ಪತ್ರೆಗಳಿಗೆ ಅಗತ್ಯ ವೈದ್ಯಕೀಯ ಸಲಕರಣೆ ಪೂರೈಕೆಗೆ 2013-14 ರಿಂದ 2023-24ರ ವರೆಗೆ ಸುಮಾರು 915.50 ಕೋಟಿ ರೂ. ಅನುದಾನ ಒದಗಿಸಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಈ ಸುದ್ದಿಯನ್ನೂ ಓದಿ | Belagavi Winter Sessoin 2024: ಅಶ್ವತ್ಥ್ ನಾರಾಯಣ್ ಮನಬಂದಂತೆ ಸುಳ್ಳು ಹೇಳಿ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ; ದಿನೇಶ್ ಗುಂಡೂರಾವ್ ಆರೋಪ
ನಮ್ಮ ಸರ್ಕಾರವು ರಾಜ್ಯದ ರೈತರ ಹಿತದೃಷ್ಟಿಯಿಂದ ಒಣಭೂಮಿಯನ್ನು ನೀರಾವರಿ ಯೋಗ್ಯ ಪ್ರದೇಶವನ್ನಾಗಿ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಹಿಂದಿನ ಅವಧಿಯಲ್ಲಿ 2013-18 ರವರೆಗೆ 50,000 ಕೋಟಿ ರೂಪಾಯಿಗಳನ್ನು ನೀರಾವರಿಗಾಗಿ ಖರ್ಚು ಮಾಡುತ್ತೇವೆ ಎಂದು ಹೇಳಿದ್ದೆವು. ಅದರಂತೆ ನಾವು ಸಣ್ಣ ನೀರಾವರಿ ಮತ್ತು ಬೃಹತ್ ಪ್ರಮಾಣದ ನೀರಾವರಿ ಯೋಜನೆಗಳಿಗೆ 64,676 ಕೋಟಿ ರೂಪಾಯಿಗಳನ್ನು ಒದಗಿಸಿ 9.97 ಲಕ್ಷ ಎಕರೆಗಳಷ್ಟು ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಿದ್ದೆವು. ಇದರಿಂದ ಉತ್ತರ ಕರ್ನಾಟಕದ ಜಿಲ್ಲೆಗಳ ರೈತರಿಗೆ ಅನುಕೂಲವಾಗಿದೆ.
2018 ರಲ್ಲಿ ನಮ್ಮ ಸರ್ಕಾರವು ಬಜೆಟ್ ಮಂಡಿಸಿದಾಗ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತಕ್ಕಾಗಿ 51,149 ಕೋಟಿ ರೂಗಳಿಗೆ ಅನುಮೋದನೆ ನೀಡುವುದಾಗಿ ಘೋಷಿಸಿದ್ದೆವು. ಇದರಿಂದಾಗಿ ಲಕ್ಷಾಂತರ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂಬುದು ಇದರ ಮೂಲ ಉದ್ದೇಶವಾಗಿದೆ.
ಇದಷ್ಟೆ ಅಲ್ಲ ಆಲಮಟ್ಟಿ ಆಣೆಕಟ್ಟೆಯನ್ನು 524.256 ಮೀಟರುಗಳಿಗೆ ಎತ್ತರಿಸಿದರೆ ಮಾತ್ರ ಐತೀರ್ಪಿನಂತೆ ನಮ್ಮ ಪಾಲಿನ 130 ಟಿಎಂಸಿ ನೀರಿನ ಪಾಲನ್ನು ಬಳಸಿಕೊಳ್ಳಲು ಸಾಧ್ಯ. ಈ ಯೋಜನೆ ಜಾರಿಯಾದರೆ 5.94 ಲಕ್ಷ ಹೆಕ್ಟೇರ್ ಅಂದರೆ 14.85 ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ದೊರಕುತ್ತದೆ. ಆದರೆ ನೀರಾವರಿಯ ಬಗ್ಗೆ ಬಹಳ ಮಾತನಾಡುತ್ತಿದ್ದ ಬಸವರಾಜ ಬೊಮ್ಮಾಯಿ ಮತ್ತು ಗೋವಿಂದ ಕಾರಜೋಳರು ಮುಳುಗಡೆಯಾಗುವ ಭೂ ಪ್ರದೇಶವನ್ನು ಎರಡು ಹಂತಗಳಲ್ಲಿ ಭೂ ಸ್ವಾಧೀನ ಪಡಿಸಿಕೊಳ್ಳಲು ತೀರ್ಮಾನಿಸಿದ್ದರು. ಈ ಕುರಿತು ಸಭೆಗಳನ್ನೂ ಮಾಡಿದ್ದರು. ಇಷ್ಟೆಲ್ಲ ಮಾಡಿ ಗೋವಿಂದ ಕಾರಜೋಳರು ಇತ್ತೀಚೆಗೆ ಸಿದ್ದರಾಮಯ್ಯನವರ ಸರ್ಕಾರ ಎರಡು ಹಂತಗಳಲ್ಲಿ ಯೋಜನೆ ಜಾರಿ ಮಾಡಲು ಹೊರಟಿದೆ ಎಂದು ಸುಳ್ಳು ಹೇಳಿದ್ದರು.
ಆದರೆ ವಾಸ್ತವವಾಗಿ 2022 ರ ಸೆಪ್ಟೆಂಬರ್ 13 ರಂದು ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನಕ್ಕೆ ಒಳಪಡುವ ಜಮೀನುಗಳಿಗೆ ಭೂ ಪರಿಹಾರ ನೀಡಲು ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿಯವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಲಾಗಿತ್ತು. ಈ ಉಪ ಸಮಿತಿಯ ಸದಸ್ಯರಾಗಿ ಅಂದಿನ ನೀರಾವರಿ ಸಚಿವರಾಗಿದ್ದ ಗೋವಿಂದ ಕಾರಜೋಳ, ಪಿ.ಡಬ್ಲ್ಯೂ.ಡಿ. ಸಚಿವರಾಗಿದ್ದ ಸಿ.ಸಿ. ಪಾಟೀಲ್ ಮತ್ತು ಮುರುಗೇಶ್ ನಿರಾಣಿ ಇದ್ದರು.
ಈ ಉಪ ಸಮಿತಿಯು“ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ರ ಅನುಷ್ಠಾನಕ್ಕೆ ಅವಶ್ಯವಿರುವ ಮುಳುಗಡೆ ಜಮೀನನ್ನು ಏಕಕಾಲಕ್ಕೆ ಭೂಸ್ವಾಧೀನಕ್ಕೆ ಒಳಪಡಿಸುವ ಬದಲಾಗಿ ಒಟ್ಟಾರೆ ಮುಳುಗಡೆ ಕ್ಷೇತ್ರವನ್ನು (1) ಆರ್‌ಎಲ್ 519.600 ರಿಂದ 522.00 ಮೀ. ವರೆಗೆ ಮುಳುಗಡೆ ಹೊಂದುವ ಜಮೀನು ಕ್ಷೇತ್ರ 38.983 ಎಕರೆಯನ್ನು ಭೂಸ್ವಾಧೀನಕ್ಕೆ ಒಳಪಡಿಸಿದಾಗ ತಗುಲುವ ಭೂಪರಿಹಾರ ಮೊತ್ತ ರೂ.5487 ಕೋಟಿಗಳ ವೆಚ್ಚವನ್ನು ಎರಡು ಹಂತದಲ್ಲಿ ಮುಳುಗಡೆ ಜಮೀನನ್ನು ಭೂಸ್ವಾಧೀನಕ್ಕೆ ಒಳಪಡಿಸಲು ಸಮಿತಿಯು ಸೂಚಿಸಿತು. ಎಂದು ತೀರ್ಮಾನಿಸಿದ್ದಾರೆ. ಮಾಡುವುದೆಲ್ಲವನ್ನೂ ಇವರೇ ಮಾಡಿ ನಮ್ಮ ಕಡೆ ತಿರುಗಿಸುವುದೇ ಬಿಜೆಪಿಯವರ ಕೆಲಸ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
ನಾವು ಆಡಿದ್ದನ್ನು ಮಾಡಿ ತೋರಿಸುವವರು
ಆದರೆ ನಾವು ಬರೀ ಮಾತನಾಡಿ ಹೋಗುವ ಜನರಲ್ಲ. ಆಡಿದ್ದನ್ನು ಮಾಡಿ ತೋರಿಸುವವರು. 2024ರ ಡಿ. 16 ರಂದು ನಡೆದ ಸಭೆಯಲ್ಲಿ ಮೊನ್ನೆ ತಾನೆ ಕೃಷ್ಣಾ ಮೇಲ್ದಂಡೆ ಯೋಜನೆಯ ವ್ಯಾಪ್ತಿಯ ರೈತ ಮುಖಂಡರು, ಶಾಸಕರು, ಸಚಿವರು ಹೋರಾಟಗಾರರ ಜತೆ ಸಭೆ ನಡೆಸಿದ್ದೆವು.
22[1] ಈ ಯೋಜನೆಯನ್ನು 519 ಮೀಟರುಗಳಿಂದ 524.256 ಮೀಟರುಗಳಿಗೆ ಹೆಚ್ಚಿಸಿದರೆ ನೀರು ಪೂರ್ಣ ಪ್ರಮಾಣದಲ್ಲಿ ನಿಲ್ಲಿಸಿದಾಗ ಒಟ್ಟಾರೆ 75,563 ಎಕರೆ ಭೂಮಿಯ ಅಗತ್ಯವಿದೆ. ಆದರೆ ಇದುವರೆಗೆ ಕೇವಲ 2543 ಎಕರೆ ಭೂಮಿ ಮಾತ್ರ ಭೂಸ್ವಾಧೀನವಾಗಿದೆ. ಉಳಿಕೆ 73,020 ಭೂಮಿಯನ್ನು ಈಗ ಭೂ ಸ್ವಾಧೀನ ಮಾಡಿಕೊಳ್ಳಬೇಕಾಗಿದೆ. ಬೊಮ್ಮಾಯಿಯವರ ಸರ್ಕಾರ ಎರಡು ಹಂತಗಳಲ್ಲಿ ಭೂ ಸ್ವಾಧೀನ ಮಾಡಿಕೊಳ್ಳಲು ತೀರ್ಮಾನಿಸಿತ್ತು. ಆದರೆ ನಮ್ಮ ಸರ್ಕಾರ ಒಂದೇ ಬಾರಿಗೆ ಭೂ ಸ್ವಾಧೀನ ಮಾಡಲು ಉದ್ದೇಶಿಸಿದೆ. ಎರಡು ಹಂತದ ಬದಲಿಗೆ ಒಂದೇ ಹಂತದಲ್ಲಿ ಈ ಯೋಜನೆಯನ್ನು ಜಾರಿ ಮಾಡುತ್ತೇವೆ.
23[2]. ಸಾಧ್ಯವಾದಷ್ಟೂ ಕನ್ಸೆಂಟ್ ಅವಾರ್ಡು [ ಒಪ್ಪಂದದ ಐತೀರ್ಪು ] ಮಾಡಿ ಮುಂದಿನ 3-4 ವರ್ಷಗಳಲ್ಲಿ ಮಾಡಿ ಮುಗಿಸುತ್ತೇವೆ. ಸಾಧ್ಯವಾದಷ್ಟು ರೈತರ ಒಪ್ಪಿಗೆಯ ಮೇಲೆಯೆ ಭೂಮಿಯನ್ನು ರೈತರಿಂದ ಪಡೆದುಕೊಳ್ಳಲಾಗುವುದು. ನಾವು ನಮ್ಮ ಕೆಲಸವನ್ನು ಮಾಡುತ್ತೇವೆ. ಆದರೆ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೆ ಹಂತಕ್ಕಾಗಿ ಐತೀರ್ಪು ಪ್ರಕಟಿಸಿ 11 ವರ್ಷಗಳು ಮುಗಿದವು. ನವೆಂಬರ್ 2013 ರಲ್ಲಿ ಪ್ರಕಟಣೆಯಾಯಿತು. ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಇದುವರೆಗೆ ಐತೀರ್ಪಿನ ಕುರಿತು ಗೆಜೆಟ್ ಪ್ರಕಟಣೆ ಹೊರಡಿಸಿಲ್ಲ. ಗೆಜೆಟ್ ಪ್ರಕಟಣೆ ಹೊರಡಿಸದೆ ಕರ್ನಾಟಕಕ್ಕೆ ದ್ರೋಹ ಬಗೆಯಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
ಈ ಸುದ್ದಿಯನ್ನೂ ಓದಿ | DK Shivakumar: ಬಿಜೆಪಿ ಪಕ್ಷ, ಅದರ ನಾಯಕರಿಗೆ ಮಾನ, ಮರ್ಯಾದೆ ಇಲ್ಲ; ಡಿಸಿಎಂ ಡಿ.ಕೆ. ಶಿವಕುಮಾರ್
ರಾಷ್ಟ್ರೀಯ ವನ್ಯಜೀವಿ ಮಂಡಳಿ ಯೋಜನೆಗೆ ಅನುಮೋದನೆ ನೀಡದೆ ಸತಾಯಿಸುತ್ತಿದೆ
ಹುಬ್ಬಳ್ಳಿ- ಧಾರವಾಡ ಸೇರಿದಂತೆ ಹಲವು ನಗರ ಮತ್ತು ಪಟ್ಟಣ ಪ್ರದೇಶಗಳ ಜನರ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಹದಾಯಿ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಗಾಗಿ ನಮಗೆ ನೀರಿನ ಹಂಚಿಕೆಯನ್ನೂ ಸಹ ಮಾಡಲಾಗಿದೆ. ರಾಜ್ಯ ಸರ್ಕಾರ ಪರಿಷ್ಕೃತ ಯೋಜನೆಗೂ ಅನುಮೋದನೆ ನೀಡಿದೆ. ಟೆಂಡರುಗಳನ್ನೂ ಆಹ್ವಾನಿಸಲಾಗಿದೆ. ಈ ಯೋಜನೆಗೆ ಚುನಾವಣಾ ದೃಷ್ಟಿಯಿಂದ ಜಲ ಆಯೋಗವು ತೀರುವಳಿ ನೀಡಿದೆ. ಆದರೆ ಕೇಂದ್ರ ಸರ್ಕಾರದ ಅಧೀನದ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಈ ಯೋಜನೆಗೆ ಅನುಮೋದನೆ ನೀಡದೆ ಸತಾಯಿಸುತ್ತಿದೆ. ಕರ್ನಾಟಕಕ್ಕೆ ದ್ರೋಹ ಮಾಡುತ್ತಿದೆ ಎಂದು ಆರೋಪಿಸಿದ ಸಿಎಂ ಅವರು, ಈ ಯೋಜನೆಗೆ ಅನುಮೋದನೆ ನೀಡಿದ ಕೂಡಲೆ ನಾವು ಕಾಮಗಾರಿ ಪ್ರಾರಂಭಿಸುತ್ತೇವೆ ಎಂದರು.
ನೀರಾವರಿ ಯೋಜನೆಗಳ ಅನುಷ್ಠಾನದ ವಿಚಾರದಲ್ಲಿ ನಮ್ಮ ಬದ್ಧತೆ ಪ್ರಶ್ನಾತೀತ. ಕರ್ನಾಟಕ ನೀರಾವರಿ ನಿಗಮವೊಂದರಲ್ಲೆ ಉತ್ತರ ಕರ್ನಾಟಕದ ಭಾಗಗಳಲ್ಲಿ 6890 ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಮುನ್ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಮನೆಗಳ ನಿರ್ಮಾಣಕ್ಕೆ ನೆರವು
2013 ರಿಂದ 2018 ರವರೆಗೆ ನಮ್ಮ ಸರ್ಕಾರದ ಅವಧಿಯಲ್ಲಿ 14.55 ಲಕ್ಷ ಮನೆಗಳನ್ನು ನಿರ್ಮಿಸಿದ್ದೆವು. ಅದರಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ 7.86 ಲಕ್ಷ ಮನೆಗಳನ್ನು ನಿರ್ಮಿಸಿತ್ತು. ಬಿಜೆಪಿ ಯವರು 2019 ರಿಂದ 2023ರ ಮಾರ್ಚ್ ವರೆಗೆ 3 ಲಕ್ಷ ಮನೆಗಳನ್ನು ಮಾತ್ರ ನಿರ್ಮಿಸಿದ್ದಾರೆ. 2023 ರಿಂದ ಇಲ್ಲಿಯವರೆಗೆ ನಮ್ಮ ಸರ್ಕಾರ 3.03 ಲಕ್ಷ ಮನೆಗಳನ್ನು ನಿರ್ಮಿಸಿದೆ. ಅದರಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ 1.45 ಲಕ್ಷ ಮನೆಗಳನ್ನು ನಿರ್ಮಿಸಿದೆ ಎಂದರು.
ಶಕ್ತಿ ಯೋಜನೆ ಯಶಸ್ವಿಯಾಗಿ ಅನುಷ್ಠಾನ
ಉತ್ತರ ಕರ್ನಾಟಕ್ಕೆ ಬಿಜೆಪಿ ಸರ್ಕಾರವು 506 ಬಸ್ಸುಗಳನ್ನು ಖರೀದಿಸಿದ್ದರೆ ನಮ್ಮ ಸರ್ಕಾರದ ಈ ಅವಧಿಯಲ್ಲಿ 1678 ಬಸ್ಸುಗಳನ್ನು ಖರೀದಿಸಿ ಜನರ ಓಡಾಟಕ್ಕೆ ಒದಗಿಸಿದೆ. ನಾವು ಶಕ್ತಿ ಯೋಜನೆಯನ್ನೂ ಯಶಸ್ವಿಯಾಗಿ ಅನುಷ್ಠಾನ ಮಾಡಿದ್ದೇವೆ. ಹೊಸದಾಗಿ ಬಸ್ಸುಗಳನ್ನು ಖರೀದಿಸಿ ಒದಗಿಸಿದ್ದೇವೆ ಎಂದರು.
2013 ರಿಂದ ಈವರೆಗೆ 24840 ಜನ ಶಿಕ್ಷಕರ ನೇಮಕಾತಿ
2013 ರಿಂದ ಇದುವರೆಗೆ 24840 ಜನ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ಇತ್ತೀಚೆಗೆ ಭರ್ತಿ ಮಾಡಿದ 12389 ಜನ ಶಿಕ್ಷಕರಲ್ಲಿ 8030 ಜನರನ್ನು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ನಿಯೋಜಿಸಲಾಗಿದೆ. 2014-15 ನೇ ಸಾಲಿನಲ್ಲಿ ಪ್ರೌಢಶಿಕ್ಷಣ ಇಲಾಖೆಗೆ 1727 ಶಿಕ್ಷಕರನ್ನು ನೇಮಕಾತಿ ಮಾಡಿದ್ದೆವು. ಅದರಲ್ಲಿ 832 ಜನರನ್ನು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ನೀಡಿದ್ದೇವೆ. ಪಿಯು ಕಾಲೇಜುಗಳಿಗೆ 2013 ರಲ್ಲಿ 1765 ಜನರನ್ನು ನೇಮಕಾತಿ ಮಾಡಿದ್ದೆವು. ಇದಾದ ನಂತರ 2020 ರಲ್ಲಿ ಮಾತ್ರ 1195 ಜನರನ್ನು ನೇಮಕಾತಿ ಮಾಡಲಾಗಿದೆ ಎಂದರು.
ಶೇ.67.5 ರಷ್ಟು ಶಾಲಾ ಕೊಠಡಿಗಳು ಉತ್ತರ ಕರ್ನಾಟಕದಲ್ಲಿಯೇ ನಿರ್ಮಾಣವಾಗಿವೆ
2013-14 ರಿಂದ ಇದುವರೆಗೆ 31,564 ಕೊಠಡಿಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ 21,291 ಶಾಲಾ ಕೊಠಡಿಗಳನ್ನು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿಯೇ ನಿರ್ಮಿಸಲಾಗಿದೆ. ಶೇ.67.5 ರಷ್ಟು ಶಾಲಾ ಕೊಠಡಿಗಳು ಉತ್ತರ ಕರ್ನಾಟಕದಲ್ಲಿಯೆ ನಿರ್ಮಾಣವಾಗಿವೆ ಎಂದರು.
ಮಾತನಾಡಿದ ಅನೇಕರು ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪಿಎಚ್‌ಸಿಗಳಾದಿಯಾಗಿ ಆರೋಗ್ಯ ಸಂಸ್ಥೆಗಳ ಕೊರತೆ ಇದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ 2524 ಪಿಎಚ್‌ಸಿಗಳಿದ್ದರೆ ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ 928 ಪಿಎಚ್‌ಸಿಗಳಿವೆ. ರಾಜ್ಯದಲ್ಲಿ 215 ಸಮುದಾಯ ಆರೋಗ್ಯ ಕೇಂದ್ರಗಳಿದ್ದರೆ 101 ಸಮುದಾಯ ಆರೋಗ್ಯ ಕೇಂದ್ರಗಳು ಉತ್ತರ ಕರ್ನಾಟಕದಲ್ಲಿವೆ. ನಮ್ಮ ಕ್ಲಿನಿಕ್ಕುಗಳು ರಾಜ್ಯದಲ್ಲಿ 511 ಇವೆ. ಇವುಗಳಲ್ಲಿ ಉತ್ತರ ಕರ್ನಾಟಕದಲ್ಲಿ 167 ಇವೆ. ರಾಜ್ಯದಲ್ಲಿ ತಾಲ್ಲೂಕು ಆಸ್ಪತ್ರೆಗಳು 147 ಇವೆ. ಇವುಗಳಲ್ಲಿ ಉತ್ತರ ಕರ್ನಾಟಕದಲ್ಲಿ 67 ಇವೆ. ಗೋವಿಂದರಾವ್ ಅವರು ಅಧ್ಯಯನ ಮಾಡಿ ವರದಿ ನೀಡಿದ ಕೂಡಲೆ ಈ ಕುರಿತು ಕ್ರಮ ವಹಿಸಲಾಗುವುದು ಎಂದರು.
ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ 2013 ರಿಂದ 2018 ವರೆಗೆ ನಮ್ಮ ಸರ್ಕಾರ 56,298 ಕಿ.ಮೀ. ರಸ್ತೆಗಳನ್ನು ನಿರ್ಮಿಸಿತ್ತು. ಆದರೆ ಬಿಜೆಪಿ ಸರ್ಕಾರ ಕೇವಲ 33,566 ಕಿ.ಮೀ ಮಾತ್ರ ನಿರ್ಮಿಸಿದೆ. ನಮ್ಮ ಸರ್ಕಾರದ ಈ ಅವಧಿಯಲ್ಲಿ 7,633 ಕಿ.ಮೀ ರಸ್ತೆ ನಿಮಾಣವಾಗಿದೆ. ಕಲ್ಯಾಣ ಪಥ ಮತ್ತು ಪ್ರಗತಿ ಪಥ ಯೋಜನೆಗಳನ್ನು ಈ ಆರ್ಥಿಕ ವರ್ಷದಲ್ಲೆ ಪ್ರಾರಂಭಿಸುತ್ತಿದ್ದೇವೆ. ಈ ಯೋಜನೆಗಳಿಂದ ಮುಂದಿನ ದಿನಗಳಲ್ಲಿ ತಿಂಗಳುಗಳಲ್ಲಿ 6000 ಕೋಟಿ ರೂಗಳನ್ನು ವೆಚ್ಚ ಮಾಡಿ 8260 ಕಿಮೀ ರಸ್ತೆಯನ್ನು ನಿರ್ಮಿಸುತ್ತೇವೆ. ಇವು ಕೆಲವು ಉದಾಹರಣೆಗಳಷ್ಟೆ. ಎಲ್ಲಾ ಇಲಾಖೆಗಳ ವ್ಯಾಪ್ತಿಯಲ್ಲೂ ನಮ್ಮ ಸರ್ಕಾರವು ಅಭಿವೃದ್ಧಿಯ ಹೊಸ ಭಾಷ್ಯವನ್ನು ಪ್ರಾರಂಭಿಸಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಗ್ಯಾರಂಟಿ ಯೋಜನೆಗಳಿಗಾಗಿ ನಮ್ಮ ಸರ್ಕಾರ ಇದುವರೆಗೆ 64 ಸಾವಿರ ಕೋಟಿ ರೂಗಳನ್ನು ವಿನಿಯೋಗಿಸಿದ್ದೇವೆ. ಈ ಗ್ಯಾರಂಟಿ ಯೋಜನೆಗಳಿಗಾಗಿ ನಮ್ಮ ಸರ್ಕಾರ ಬಜೆಟ್ಟಿನಲ್ಲಿ 2023-24 ರಲ್ಲಿ 36858 ಕೋಟಿ ರೂ ಮತ್ತು 2024-25 ರಲ್ಲಿ 52009 ಕೋಟಿ ರೂ ಸೇರಿ 88867 ಕೋಟಿ ರೂಗಳನ್ನು ಬಜೆಟ್ಟಿನಲ್ಲಿ ಒದಗಿಸಿದ್ದೇವೆ. ನಾವು ನಾಡಿನ ಭೌತಿಕ ಅಭಿವೃದ್ಧಿ ಹಾಗೂ ಸಾಮಾಜಿಕ ಅಭಿವೃದ್ಧಿ ಎರಡನ್ನೂ ಕೂಡ ಸಮತೋಲನ ಮಾದರಿಯಲ್ಲಿ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದರು.
ನಾವು ನುಡಿದಂತೆ ನಡೆದಿದ್ದೇವೆ
ಮಧ್ಯಮಾವಧಿ, ದೀರ್ಘಾವಧಿ ಅಸಲು ಕಟ್ಟಿದರೆ ರೈತರ ಸಂಪೂರ್ಣ ಬಡ್ಡಿ ಮನ್ನಾ ಮಾಡಲಾಗುವುದೆಂದು ಘೋಷಿಸಿದ್ದೆವು. ಅದನ್ನು ಸಂಪೂರ್ಣ ಅನುಷ್ಠಾನ ಮಾಡಿದ್ದೇವೆ. ಮಾರ್ಚ್- 2024 ರವರೆಗೆ 36,146 ರೈತರಿಗೆ ರೂ.239.28 ಕೋಟಿಗಳ ಬಡ್ಡಿಯನ್ನು ಮನ್ನಾ ಮಾಡಿದ್ದೇವೆ.
ಧಾರವಾಡದಲ್ಲಿರುವ ವಾಲ್ಮಿ ಧಾರವಾಡದಲ್ಲಿರುವ ವಾಲ್ಮಿ [ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ] ಯನ್ನು ರೂ.2.00 ಕೋಟಿಗಳ ಮೊತ್ತದ ಅನುದಾನದೊಂದಿಗೆ “ಜಲ ನಿರ್ವಹಣೆ ಉನ್ನತ ಕೇಂದ್ರ” (Center for excellence in water management) ಎಂದು ಉನ್ನತೀಕರಿಸಲು ಅಧಿಸೂಚನೆ ಹೊರಡಿಸಲಾಗಿದೆ. ಉತ್ತರ ಕರ್ನಾಟಕದ ಆರ್ಥಿಕತೆಯನ್ನು ಅಭಿವೃದ್ಧಿ ಮಾಡುವ ದೃಷ್ಟಿಯಿಂದ ಬೆಳಗಾವಿ, ವಿಜಯಪುರ, ರಾಯಚೂರು ಹಾಗೂ ಧಾರವಾಡಗಳಲ್ಲಿ ಭೂಸ್ವಾಧೀನ ಮಾಡಿ ಕೈಗಾರಿಕೆಗಳನ್ನು ಸ್ಥಾಪಿಸಿ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಕ್ರಮವಹಿಸುವುದಾಗಿ ಘೋಷಿಸಿದ್ದೆವು. ಅದರಂತೆ, ಈ ಜಿಲ್ಲೆಗಳಲ್ಲಿ 10,125 ಎಕರೆ ಭೂಮಿಯನ್ನು ಭೂಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದ್ದೇವೆ. ಭೂಸ್ವಾಧೀನ ಪ್ರಕ್ರಿಯೆಯು ವೇಗವಾಗಿ ನಡೆಯುತ್ತಿದೆ ಎಂದು ಸಿಎಂ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡಲು ಕ್ರಮವಹಿಸುವುದಾಗಿ ಘೋಷಿಸಿದ್ದೆವು. ಅದರಂತೆ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರೇಣುಕಾ ಯಲ್ಲಮ್ಮ ಕ್ಷೇತ್ರ, ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರಗಳನ್ನು ರನೆ ಮಾಡಿದ್ದೇವೆ. ಹಾಗೆಯೇ ಪ್ರಾಚೀನ ವಿಶ್ವವಿದ್ಯಾಲಯವೆಂದು ಖ್ಯಾತಿ ಪಡೆದ ನಾಗಾವಿಯನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಿದ್ದೇವೆ. ಹಾಗೆಯೇ ಬೀದರ್‌ನ ಭೂ ಅಂತರ್ಗತ ನೀರು ಪೂರೈಕೆ ವ್ಯವಸ್ಥೆ, ಯಾದಗಿರಿಯ ಶಹಾಪುರದ ಸಿರವಾಳ ದೇವಾಲಯದ ಯಾದಗಿರಿ ಕೋಟೆ ಅಭಿವೃದ್ಧಿ, ಕೊಪ್ಪಳ ಆನೆಗುಂದಿಯಲ್ಲಿನ ಅಂಜನಾದ್ರಿ ಬೆಟ್ಟಕ್ಕೆ 100 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ಧಿ, ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಅಲ್ಲಮಪ್ರಭು ಗುಹಾಂತರ ದೇವಾಲಯ ಅಭಿವೃದ್ಧಿ, ಮಳಖೇಡ ಕೋಟೆ ಸಮಗ್ರ ಅಭಿವೃದ್ಧಿ, ವಿಜಯನಗರ ಜಿಲ್ಲೆಯಲ್ಲಿನ ಪಾರಂಪರಿಕ ಅಭಿವೃದ್ಧಿ, ಮೈಲಾರದ ಮೈಲಾರ ಲಿಂಗೇಶ್ವರ ದೇವಸ್ಥಾನ ಹಾಗೂ ಅಂಜನಾದ್ರಿ ಬೆಟ್ಟಕ್ಕೆ ರೋಪ್‌ವೇ ನಿರ್ಮಾಣ ಮುಂತಾದವುಗಳನ್ನು ಅಭಿವೃದ್ಧಿಪಡಿಸಲು ಕ್ರಮವಹಿಸಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ರಾಜ್ಯ ಸರ್ಕಾರದ ಈ ವರ್ಷದ ಘೋಷಣೆಗಳು
ಪ್ರೊ. ಗೋವಿಂದ ರಾವ್ ಅವರು ವರದಿ ಕೊಟ್ಟ ಕೂಡಲೇ ಅದನ್ನು ಅನುಷ್ಠಾನ ಮಾಡಲು ಕ್ರಮವಹಿಸಲಾಗುವುದು.
ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಆಲಮಟ್ಟಿ ಜಲಾಶಯವನ್ನು 519 ಮೀಟರ್‌ಗಳಿಂದ 524.256 ಮೀಟರ್‌ಗಳಿಗೆ ಎತ್ತರಿಸುವುದರಿಂದ ಮುಳುಗಡೆಯಾಗುವ ಸುಮಾರು 73 ಸಾವಿರ ಎಕರೆ ಭೂಮಿಯನ್ನು ಕನ್ಸೆಂಟ್ ಅವಾರ್ಡಿನ ಮೂಲಕ ಒಂದೇ ಹಂತದಲ್ಲಿ ರೈತರ ಭೂಮಿಯನ್ನು ಭೂಸ್ವಾಧೀನಪಡಿಸಿಕೊಳ್ಳಲು ಕ್ರಮವಹಿಸಲಾಗುವುದು.
ಈ ಭಾಗದಲ್ಲಿ ಮಳೆ ಮುಂತಾದ ಕಾರಣಗಳಿಂದ ಹಾನಿಯಾಗಿರುವ ರಸ್ತೆಗಳ ಅಭಿವೃದ್ಧಿಯ ಕುರಿತು ಕ್ರಮವಹಿಸಲಾಗುವುದು.
ಈ ಭಾಗದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಕ್ರಮವಹಿಸಲಾಗುವುದು.
ಈ ಸುದ್ದಿಯನ್ನೂ ಓದಿ | Handbook Release: ಮಂಡ್ಯ ಸಮ್ಮೇಳನದಲ್ಲಿ ಬೆಂಕಿ ಬಸಣ್ಣ ರಚಿತ ʼವಿಶ್ವ ಕನ್ನಡ ಕೂಟಗಳ ಕೈಪಿಡಿʼ ಬಿಡುಗಡೆ
ಮಹದಾಯಿ ಯೋಜನೆಯನ್ನು ನಾವು ಶೀಘ್ರವಾಗಿ ಅನುಷ್ಠಾನ ಮಾಡಲು ಉದ್ದೇಶಿದ್ದೇವೆ. ಆದರೆ ಕೇಂದ್ರದ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಈ ಯೋಜನೆಗೆ ಒಪ್ಪಿಗೆ ನೀಡದೆ ಸತಾಯಿಸುತ್ತಿದೆ. ಆದ್ದರಿಂದ, ಕೇಂದ್ರ ಸರ್ಕಾರವು ಈ ಕೂಡಲೇ ಒಪ್ಪಿಗೆ ನೀಡಬೇಕೆಂದು ಈ ಸದನದ ಪರವಾಗಿ ನಾನು ಒತ್ತಾಯಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.