Friday, 20th December 2024

Viral Video: ರೈಲಿನಲ್ಲಿ ನಡೆಯಿತು ಈ ವಿಧ್ವಂಸಕ ಕೃತ್ಯ; ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ!

Viral Video

ಲಖನೌ: ಉತ್ತರ ಪ್ರದೇಶದ ಬಸ್ತಿ ರೈಲ್ವೆ ನಿಲ್ದಾಣದಲ್ಲಿ ಅಂತ್ಯೋದಯ ಎಕ್ಸ್‌ಪ್ರೆಸ್‌ನ ಬಾಗಿಲಿಗೆ ಬೀಗ ಹಾಕಿದ ಕಾರಣ ಕೋಪಗೊಂಡ ಪ್ರಯಾಣಿಕರ ಗುಂಪು ರೈಲನ್ನು ಧ್ವಂಸಗೊಳಿಸಿದೆ ಎಂದು ವರದಿಯಾಗಿದೆ. ಪ್ರಯಾಣಿಕರ ಈ ಕೃತ್ಯದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ವೈರಲ್ ವಿಡಿಯೊದಲ್ಲಿ ಜನದಟ್ಟಣೆಯಿಂದ ತುಂಬಿದ ರೈಲು ನಿಲ್ದಾಣದಲ್ಲಿ ಕೆಲವು ಪುರುಷರು ಕಲ್ಲಿನಿಂದ ಬಾಗಿಲಿನ ಗಾಜನ್ನು ಪುಡಿಮಾಡಿದ್ದಾರೆ. ಕೆಲವರು ರೈಲಿನ ಕಿಟಕಿಗಳ ಮೇಲೆ ಇರಿಸಲಾದ ರಾಡ್‍ಗಳನ್ನು ಕತ್ತರಿಸಲು ಪ್ರಯತ್ನಿಸಿದ್ದಾರೆ. ಈ ವಿಡಿಯೊವನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾಗಿತ್ತು, “ಮಂಕಾಪುರ ರೈಲ್ವೆ ನಿಲ್ದಾಣದಲ್ಲಿ 15101 ಅಂತ್ಯೋದಯ ಎಕ್ಸ್‌ಪ್ರೆಸ್‌ನ  ಗೇಟ್ ತೆರೆಯದ ಕಾರಣ ಕೋಪಗೊಂಡ ಪ್ರಯಾಣಿಕರು ಬೋಗಿಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಗಾಜು ಒಡೆದು ರೈಲಿನಲ್ಲಿ ಕಾಲ್ತುಳಿತಕ್ಕೆ ಕಾರಣವಾಯಿತು. ರೈಲು ಛಾಪ್ರಾದಿಂದ ಮುಂಬೈಗೆ ಹೋಗುತ್ತಿತ್ತು” ಎಂದು ವಿಡಿಯೊದ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಗದ್ದಲಕ್ಕೆ ಕಾರಣವೇನು?
ವರದಿ ಪ್ರಕಾರ, ಜನದಟ್ಟಣೆಯಿಂದಾಗಿ ರೈಲು ಹತ್ತಲು ಸಾಧ್ಯವಾಗದ ಕಾರಣ  ಜನರು ಈ ಕೃತ್ಯ ಎಸಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ರೈಲು ತುಂಬಾ ಜನದಟ್ಟಣೆಯಿಂದ ಕೂಡಿದ್ದರಿಂದ, ಹೆಚ್ಚುವರಿ ಬೋರ್ಡಿಂಗ್‍ಗಳನ್ನು ತಡೆಯಲು ಒಳಗಿನ ಪ್ರಯಾಣಿಕರು ಬೋಗಿಯನ್ನು ಒಳಗಿನಿಂದ ಲಾಕ್‍ ಮಾಡಿದ್ದಾರೆ. ಈ ಕ್ರಮವು ಬಸ್ತಿ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತಲು ಕಾಯುತ್ತಿದ್ದ ಪ್ರಯಾಣಿಕರನ್ನು ಕೆರಳಿಸಿತು” ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: ಯೂಟ್ಯೂಬ್ ಚಾನೆಲ್‍ ತೊರೆದು, 8 ಲಕ್ಷ ರೂ. ಮೌಲ್ಯದ ಸಾಧನ ಸೇಲ್‌ಗಿಟ್ಟ ಖ್ಯಾತ ಯೂಟ್ಯೂಬರ್‌!

ಘಟನೆಯನ್ನು ಉದ್ದೇಶಿಸಿ ಮಾತನಾಡಿದ ಈಶಾನ್ಯ ರೈಲ್ವೆಯ ಹಿರಿಯ ವಿಭಾಗೀಯ ಭದ್ರತಾ ಆಯುಕ್ತ ಚಂದ್ರ ಮೋಹನ್ ಮಿಶ್ರಾ, “ವಿಧ್ವಂಸಕ ಕೃತ್ಯದ ತುಣುಕುಗಳು ನಮ್ಮ ಬಳಿ ಇವೆ, ಮತ್ತು ನಮ್ಮ ತಂಡಗಳು ಈ ವಿಷಯದಲ್ಲಿ ಭಾಗಿಯಾಗಿರುವ ಪುರುಷರ ಗುರುತನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿವೆ” ಎಂದು ಹೇಳಿದ್ದಾರೆ. ಮಂಗಳವಾರ ರಾತ್ರಿ 10:30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಇದುವರೆಗೂ ಯಾರನ್ನೂ ಬಂಧಿಸಲಾಗಿಲ್ಲ ಎನ್ನಲಾಗಿದೆ.