ಬೆಂಗಳೂರು: ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಅವರ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ಇದೀಗ ಗುರುಗ್ರಾಮ್ ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕಿರುಕುಳ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟಿದ್ದಾನೆ. ಲಿಂಕ್ಡ್ಇನ್ ಸರಣಿ ಪೋಸ್ಟ್‌ಗಳಲ್ಲಿ ಅಲೋಕ್ ಮಿತ್ತಲ್ ತಮ್ಮ ಪತ್ನಿ ಮಾನ್ಸಿ ವಿರುದ್ಧ ವರದಕ್ಷಿಣೆ ಮತ್ತು ಕೌಟುಂಬಿಕ ಹಿಂಸಾಚಾರದ ಸುಳ್ಳು ಪ್ರಕರಣಗಳ ಮೂಲಕ ಕಿರುಕುಳ(Harassment Case) ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಮದುವೆಯಾದ ಕೇವಲ ಆರು ತಿಂಗಳ ನಂತರ ತಾನು ಮತ್ತು ತನ್ನ ಪತ್ನಿ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದ್ದೇವೆ ಎಂದು ಮಿತ್ತಲ್ ಹೇಳಿದ್ದಾರೆ. ಇದರ ಹೊರತಾಗಿಯೂ, ಮಾನ್ಸಿ ಈಗ ತಿಂಗಳಿಗೆ 1.5 ಲಕ್ಷ ರೂ.ಗಳ ಮೈಂಟೇನೆನ್ಸ್ ಮತ್ತು 1 ಕೋಟಿ ರೂ.ಗಳ ಪರಿಹಾರವನ್ನು ಕೇಳುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ.
ವರದಿ ಪ್ರಕಾರ, ಅಲೋಕ್ ಮಿತ್ತಲ್ 2023 ರ ಮೇ ತಿಂಗಳಲ್ಲಿ ದೆಹಲಿಯಲ್ಲಿ ಮಾನ್ಸಿ ಅಗರ್ವಾಲ್ ಅವರನ್ನು ವಿವಾಹವಾದರು. ಮದುವೆಯ ನಂತರ ಅವರು ಕೆಲಸ ಕಳೆದುಕೊಂಡರು. ಈ ನಡುವೆ, ದಂಪತಿಗಳು ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಂಡರು. ಮಿತ್ತಲ್ ಅವರಿಗೆ ಹೆಂಡತಿ ಹೊಸ ಉದ್ಯೋಗವನ್ನು ಹುಡುಕುವಂತೆ ಒತ್ತಡ ಹೇರಲು ಪ್ರಾರಂಭಿಸಿದ್ದಾರಂತೆ.
ಐದು ತಿಂಗಳ ಹುಡುಕಾಟದ ನಂತರ, ನವೆಂಬರ್ 2023 ರಲ್ಲಿ ಮಿತ್ತಲ್ ಅವರಿಗೆ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿತು. ಆದರೆ, ಮಾನ್ಸಿ ಗರ್ಭಿಣಿ ಎಂದು ಬೆಂಗಳೂರಿಗೆ ಹೋಗಲು ನಿರಾಕರಿಸಿ ತವರು ಮನೆಗೆ ಹೋಗಿದ್ದಾರಂತೆ. ನಂತರ ಬೆಂಗಳೂರಿಗೆ ಬರುವುದಾಗಿ ಭರವಸೆ ನೀಡಿದ್ದಾರಂತೆ. ಇಷೆಲ್ಲಾ ಆದ ಮೇಲೆ ಮಾನ್ಸಿ ಅವರನ್ನು ಕರೆದುಕೊಂಡು ಬರಲು 2023ರ ಡಿಸೆಂಬರ್‌ನಲ್ಲಿ ಮಿತ್ತಲ್ ದೆಹಲಿಗೆ ಹೋದಾಗ ಮಾನ್ಸಿ ಅವರು ಮಿತ್ತಲ್ ಜೊತೆ ಬರುವುದಕ್ಕೆ ನಿರಾಕರಿಸಿದ್ದಾರೆ ಎಂದು ಮಿತ್ತಲ್ ತಿಳಿಸಿದ್ದಾರೆ.
ಕೊನೆಗೆ ಮಾನ್ಸಿ ಮತ್ತು ಅವರ ಪೋಷಕರು ಮಿತ್ತಲ್ ಜೊತೆ ಜಗಳವಾಡಲು ಶುರುಮಾಡಿದ್ದಾರಂತೆ. ತಮ್ಮ 73 ವರ್ಷದ ತಾಯಿಯೊಂದಿಗೆ, ತಾನು ಬೆದರಿಕೆಗಳು ಮತ್ತು ನಿಂದನೆಗಳನ್ನು ಎದುರಿಸಿರುವುದಾಗಿ ಅವರು ಬರೆದಿದ್ದಾರೆ. ನಂತರ ಅವರ ಪತ್ನಿ ದೆಹಲಿ ಮತ್ತು ಬೆಂಗಳೂರಿನಲ್ಲಿ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: ರೈಲಿನಲ್ಲಿ ನಡೆಯಿತು ಈ ವಿಧ್ವಂಸಕ ಕೃತ್ಯ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಪತ್ನಿ ವಿರುದ್ಧ ಮತ್ತಷ್ಟು ಆರೋಪ ಮಾಡಿದ ಅಲೋಕ್ ಮಿತ್ತಲ್ ಲಿಂಕ್ಡ್ಇನ್ ಪೋಸ್ಟ್‌ನಲ್ಲಿ, ಮಿತ್ತಲ್ ತಮ್ಮ ಪತ್ನಿ ಮಾನ್ಸಿ ಅಗರ್ವಾಲ್ ಕಾಲೇಜ್ ದುನಿಯಾದಲ್ಲಿ ವಿಶ್ಲೇಷಕರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ತಿಂಗಳಿಗೆ 80,000 ರೂ.ಗಳನ್ನು ಗಳಿಸುತ್ತಾರೆ. ಇಷ್ಟು ಚೆನ್ನಾಗಿ ಸಂಪಾದಿಸುತ್ತಿದ್ದರೂ, ತನ್ನ ಬಳಿ ತಿಂಗಳಿಗೆ 1.5 ಲಕ್ಷ ರೂ.ಗಳ ಮೈಂಟೇನೆನ್ಸ್ ಮತ್ತು 1 ಕೋಟಿ ರೂ. ಪರಿಹಾರ ಕೇಳುತ್ತಿದ್ದಾಳೆ ಎಂದು ಹೇಳಿದ್ದಾರೆ. ಮತ್ತು ತನ್ನ ಮಗುವನ್ನು ನೋಡಲು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಹಾಗೇ ತಮ್ಮ ವಿರುದ್ಧ ಸುಳ್ಳು ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಮಿತ್ತಲ್ ತಿಳಿಸಿದ್ದಾರೆ.