Friday, 20th December 2024

Kannada sahitya sammelana: ಆಂಗ್ಲ ಮಾಧ್ಯಮ ಶಾಲೆ ತೆರೆಯುವಿಕೆ ನಿಲ್ಲಿಸಿ, ಖಾಸಗಿ ಶಾಲೆಗಳಿಗೂ ಅನುಮತಿ ಬೇಡ: ಗೊ.ರು. ಚನ್ನಬಸಪ್ಪ ಆಗ್ರಹ

Kannada sahitya sammelana

ಮಂಡ್ಯ: ಒಕ್ಕೂಟ ಸರಕಾರದಿಂದ ತೆರಿಗೆ ಪಾಲಿನ ಸಲ್ಲಿಕೆಯಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ, ರಾಜ್ಯದಲ್ಲಿ ಅನ್ಯಭಾಷಿಕರ ಅಪಾರ ವಲಸೆಯಿಂದ ನಾಡುನುಡಿಯ ಮೇಲೆ ಆಗುತ್ತಿರುವ ದುಷ್ಪರಿಣಾಮ, ಆಂಗ್ಲ ಮಾಧ್ಯಮದಲ್ಲಿ ಸರಕಾರಿ ಪ್ರಾಥಮಿಕ ಶಾಲೆಗಳು ಹಾಗೂ ಖಾಸಗಿ ಶಾಲೆಗಳ ತೆರೆಯುವಿಕೆ, ಕನ್ನಡದಲ್ಲಿ ಯಾಂತ್ರಿಕ ಬುದ್ಧಿಮತ್ತೆಯ ಬೆಳವಣಿಗೆ, ಹಿಂದಿಯ ಹೇರಿಕೆ ತಡೆಯುವಿಕೆ ಹಾಗೂ ಬಹುತ್ವಕ್ಕೆ ಮನ್ನಣೆ, ಕನ್ನಡದ ವಿಶ್ವವಿದ್ಯಾಲಯಗಳಿಗೆ ಅನುದಾನದ ಕೊರತೆ… ಇವೆಲ್ಲವೂ ‌87ನೇ ಅಖಿಲ ಭಾರತ ಕನ್ನಡ ಸಾಹಿತ್ಯ (Kannada sahitya sammelana) ಸಮ್ಮೇಳನಾಧ್ಯಕ್ಷ ಗೊ.ರು ಚನ್ನಬಸಪ್ಪ ಅವರ ಭಾಷಣದಲ್ಲಿ ಸ್ಥಾನ ಪಡೆದುಕೊಂಡವು.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಸಮ್ಮೇಳನಾಧ್ಯಕ್ಷ ಗೊ.ರು ಚನ್ನಬಸಪ್ಪ ಅವರು, ಪ್ರಾಥಮಿಕ ಶಿಕ್ಷಣದ ಒಂದನೇ ತರಗತಿಯಿಂದ ಹತ್ತನೆಯ ತರಗತಿಯವರೆಗೆ ಬೋಧನೆ ಕನ್ನಡ ಮಾಧ್ಯಮವೇ ಕಡ್ಡಾಯವಾಗಬೇಕು. ಯಾವ ಕಾರಣದಿಂದಲೂ ಬೇರಾವ ಭಾಷೆಯನ್ನು ಶಿಕ್ಷಣ ಮಾಧ್ಯಮವನ್ನಾಗಿ ಹೇರಕೂಡದು. ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಸರ್ಕಾರ ತೆರೆಯುವುದನ್ನಾಗಲಿ, ಖಾಸಗಿ ಶಾಲೆಗಳಿಗೆ ಅನುಮತಿ ಕೊಡುವುದನ್ನಾಗಲೀ ಕೂಡಲೇ ನಿಲ್ಲಿಸಬೇಕು ಎಂದು ಸಮ್ಮೇಳನಾಧ್ಯಕ್ಷರು ಆಗ್ರಹಿಸಿದರು.

ಒಕ್ಕೂಟ ಸರ್ಕಾರವು ಹಣಕಾಸು ಆಯೋಗಗಳ ಶಿಫಾರಸುಗಳಿಗೆ ಅನುಗುಣವಾಗಿ ಕರ್ನಾಟಕಕ್ಕೆ ಬರಬೇಕಾದ ತೆರಿಗೆ ಪಾಲನ್ನು ವರ್ಗಾಯಿಸುತ್ತಿಲ್ಲ. ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಈ ತೆರಿಗೆ ಪಾಲಿನ ಬಗೆಗೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಹೇಳುವುದರಲ್ಲಿ ಸತ್ಯಾಂಶವಿದೆ. ನಬಾರ್ಡ್ ಕರ್ನಾಟಕಕ್ಕೆ ನೀಡುತ್ತಿದ್ದ ಮರುಹಣಕಾಸು ಸಾಲವನ್ನು 2024-25ರಲ್ಲಿ ಶೇ. 58ರಷ್ಟು ಕಡಿತ ಮಾಡಿದೆ. ಈ ಮಾತುಗಳನ್ನು ರಾಜಕೀಯ ಬಣ್ಣದ ಮೂಲಕ ನೋಡುವುದು ಸಲ್ಲ ಎಂದು ಗೊರುಚ ನುಡಿದರು.

ಬಹುಭಾಷಾ ಸಂಸ್ಕೃತಿ ನೀತಿಯನ್ನು ಸಂವಿಧಾನಾತ್ಮಕವಾಗಿ ಕೇಂದ್ರ ಸರ್ಕಾರವು ಪಾಲಿಸಬೇಕು. ಅಖಿಲ ಭಾರತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ, ಬ್ಯಾಂಕು ವ್ಯವಹಾರಗಳಲ್ಲಿ, ಅಂಚೆ ಕಚೇರಿಗಳಲ್ಲಿ, ರಾಜ್ಯಭಾಷೆಗಳನ್ನು ನಿರ್ಲಕ್ಷಿಸಿ ಹಿಂದಿಯನ್ನು ಹೇರುವ ಪ್ರಯತ್ನ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಕನ್ನಡವು ಕರ್ನಾಟಕದಲ್ಲಿ ಸಾರ್ವಭೌಮ ಎಂದರೆ, ಅದು ಭಾಷಾಂಧತೆಯಲ್ಲ. ಅದು ಒಂದು ಆದರ್ಶ ಜನತಂತ್ರದ ಬಹುಮುಖ್ಯ ಗುಣ ಎಂದು ಗೊರುಚ ಗುಡುಗಿದರು.

ಗೊರು ಚನ್ನಬಸಪ್ಪ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾವಿಸಿದ ಸಂಗತಿಗಳು ಹಾಗೂ ಹಕ್ಕೊತ್ತಾಯಗಳು ಈ ಕೆಳಗಿನಂತಿವೆ.

ಶಿಕ್ಷಣ ಮಾಧ್ಯಮದಲ್ಲಿ ಕನ್ನಡವೇ ಆದ್ಯತೆಯಾಗಲಿ

ಕನ್ನಡನಾಡಿನಲ್ಲಿ ಹುಟ್ಟುವ ಮಕ್ಕಳು ಪಡೆಯುವ ಶಿಕ್ಷಣದ ಭಾಷೆ ಮತ್ತು ಮಾಧ್ಯಮ ಯಾವುದಾಗಿರಬೇಕು ಎನ್ನುವ ಚರ್ಚೆ, ಅಲ್ಲಿಂದಾಚೆಗೆ ಪಡೆದಿರುವ ಆಯಾಮಗಳನ್ನು ಲೆಕ್ಕವಿಡುವುದೇ ಕಷ್ಟ. ಪ್ರಾಥಮಿಕ ಪೂರ್ವ (ಪ್ರೀ ಪ್ರೈಮರಿ) ಶಿಕ್ಷಣದಿಂದ ಉನ್ನತ ಮಟ್ಟದ ಶಿಕ್ಷಣದವರೆಗೆ, ಗ್ರಾಮಾಂತರ ಪ್ರದೇಶದಿಂದ ಪ್ರಗತಿ ಹೊಂದಿದ ನಗರ ಪ್ರದೇಶದವರೆಗೆ ಶಿಕ್ಷಣದ ಭಾಷೆ ಯಾವುದು ಎನ್ನುವುದು ಇನ್ನೂ ನಿರ್ಧಾರವಾಗದ ಸಂಕೀರ್ಣ ಸ್ವರೂಪದಲ್ಲೇ ಇದೆ.

ನಮ್ಮ ನೆಲದಲ್ಲಿ ಹುಟ್ಟುವ ಪ್ರತಿಯೊಂದು ಮಗುವಿಗೂ ಶಿಕ್ಷಣ ನೀಡಬೇಕು ಎಂಬುದನ್ನು ಕರ್ತವ್ಯವಾಗಿ ಪರಿಗಣಿಸಬೇಕಿರುವ ಸರ್ಕಾರ ತುರ್ತಾಗಿ ಕೆಲವು ಬಾಹ್ಯ ಮತ್ತು ಆಂತರಿಕ ಸಂಗತಿಗಳನ್ನು ಗಮನಿಸಬೇಕಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನೂರಾರು, ಸಾವಿರಾರು ಸರ್ಕಾರಿ ಶಾಲೆಗಳು ಸೂರು, ಗೋಡೆ ಉರುಳುವ ಸ್ಥಿತಿಯಲ್ಲಿವೆ. ಮೊದಲು ಅವುಗಳನ್ನು ಸರಿಪಡಿಸಿ, ಮಕ್ಕಳಿಗೆ ಮತ್ತು ಪೋಷಕರಿಗೆ ಅವು ಆಕರ್ಷಕವಾಗುವಂತೆ ಉನ್ನತೀಕರಿಸಬೇಕು. ಮಕ್ಕಳು ಮತ್ತು ಶಿಕ್ಷಕರ ಕೊರತೆಯಿಂದ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಪ್ರಕ್ರಿಯೆ ಎದ್ದುಕಾಣುವಂತೆ ನಡೆಯುತ್ತಿದೆ. ಇದು ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸದಂತೆ ಹಿರಿಯರನ್ನು ಪ್ರೇರೇಪಿಸುತ್ತಿದೆ. ಆದ್ದರಿಂದ ಸರ್ಕಾರ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಎಂಬ ಗುಚ್ಛವ್ಯವಸ್ಥೆಯನ್ನು ಪ್ರತೀ ಗ್ರಾಮದಲ್ಲಿ ಅಲ್ಲದಿದ್ದರೂ ಪ್ರತೀ ಗ್ರಾಮಪಂಚಾಯಿತಿಯ ವ್ಯಾಪ್ತಿಯಲ್ಲಿ ತೆರೆಯಬೇಕು ಎನ್ನುವ ಸಲಹೆಯನ್ನು ಅನೇಕ ಚಿಂತಕರು ನೀಡಿದ್ದಾರೆ. ಇದನ್ನು ಸರ್ಕಾರ ಪರಿಶೀಲಿಸುವುದು ಅಗತ್ಯ. ಇವುಗಳಲ್ಲಿ ಕನ್ನಡವೇ ಶಿಕ್ಷಣದ ಭಾಷೆಯಾಗಿ, ಇಂಗ್ಲಿಷ್ ಭಾಷೆ ಪಠ್ಯಕ್ರಮದಲ್ಲಿ ಒಂದು ಭಾಷೆ/ವಿಷಯವಾಗಿ ಮಾತ್ರ ಇರುವಂತೆ ಮಾಡಬಹುದು.

ಆದರೆ, ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದ ಶಾಲೆಯಲ್ಲಿ, ಅದರಲ್ಲೂ ಖಾಸಗಿ ಶಾಲೆಯಲ್ಲಿ ಓದಿಸಿದರೆ ಮಾತ್ರ ಅವರಿಗೆ ಸರಿಯಾದ ಶಿಕ್ಷಣ ಸಿಗುತ್ತದೆ ಮತ್ತು ಮುಂದೆ ಉದ್ಯೋಗಾವಕಾಶಕ್ಕೆ ಅನುಕೂಲವಾಗುತ್ತದೆ ಎಂಬ ಭ್ರಮೆಯಲ್ಲಿರುವ ತಂದೆತಾಯಿಗಳ ಬುದ್ಧಿ, ಆಲೋಚನೆಗಳಿಗೆ ಕನ್ನಡದ ಬಗೆಗೆ ಮನವರಿಕೆ ಮಾಡಿಕೊಡುವುದು ಬಹಳ ದೊಡ್ಡ ಸವಾಲಾಗಿದೆ. ಗ್ರಾಮಾಂತರ ಪ್ರದೇಶದ ಶಾಲೆಗಳನ್ನು ಉನ್ನತೀಕರಿಸಲು ಅವರ ಸಹಕಾರ ಅತ್ಯಗತ್ಯ. ಸರ್ಕಾರ ಇಂಥ ಸಹಕಾರದ ಹುಡುಕಾಟಕ್ಕೆ ಹಿರಿಯರ ಸಮಿತಿಯನ್ನು ರಚಿಸುವುದು ಸೂಕ್ತ ಎಂದು ಅನ್ನಿಸುತ್ತದೆ. ಕನ್ನಡ ಭಾಷೆಯನ್ನು ಶಿಕ್ಷಣದ ಮಾಧ್ಯಮವಾಗಿ ಬೆಳೆಸುವುದಿರಲಿ, ಸದ್ಯ ಸಂವಹನ ಭಾಷೆಯಾಗಿ ಉಳಿಸಿಕೊಳ್ಳುವುದೇ ಕಷ್ಟವಾಗಿರುವಾಗ, ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವಂತೆ ಹೆತ್ತವರನ್ನು ಪ್ರೇರೇಪಿಸಲು ಶಾಲೆಗಿರುವ ಬಲ-ಬೆಂಬಲಗಳೂ ಮುಖ್ಯವಾಗುತ್ತವೆ. ಶಿಕ್ಷಣ ವ್ಯವಸ್ಥೆಗೆ ಅಂತರಂಗದಷ್ಟೇ ಬಹಿರಂಗವೂ ಮುಖ್ಯವೆನ್ನಿಸುವ ಕಾಲ ಇದಲ್ಲವೇ? ಕಂಪೆನಿಗಳು, ಉದ್ಯಮಗಳು ತಮ್ಮ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಲು, ಮಕ್ಕಳ ಶಾಲೆಗಿಂತ ಉತ್ತಮ ಅಂಗಳ ಬೇರೊಂದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದರು.

ರಾಜ್ಯಗಳ ಮೇಲೆ ಹಿಂದಿ ಹೇರಿಕೆ ನಿಲ್ಲಿಸಿ

ಭಾರತ ದೇಶದ ಭಾಷೆ, ಸಂಸ್ಕೃತಿ, ಆಚರಣೆ ಎಲ್ಲವೂ ಪ್ರಾದೇಶಿಕವಾಗಿ ಮತ್ತು ಸಾಮಾಜಿಕವಾಗಿ ಬಹುರೂಪಿಯಾಗಿವೆ ಎನ್ನುವುದು ಎಲ್ಲರಿಗೂ ಗೊತ್ತು. ನಾವೆಲ್ಲರೂ ಸಂವಿಧಾನದ ಅಡಿಯಲ್ಲಿ ಭಾರತದ ಪ್ರಜೆಗಳಾಗಿರುವ ಅದೃಷ್ಟವಿದ್ದರೂ ವೈಯಕ್ತಿಕವಾಗಿ ಅವರವರ ಆಯ್ಕೆಯ ಸ್ವಾತಂತ್ರ್ಯ ಇದ್ದೇ ಇದೆ. ಇದು ಭಾಷೆಯ ವಿಚಾರಕ್ಕೂ ನಿಜ. ಆದರೆ ‘ಭಾರತದ ಜನರೆಲ್ಲರೂ ಸಂವಹನ ನಡೆಸಲು ಹಿಂದಿ ಭಾಷೆಯನ್ನು ಕಲಿತು ಬಳಸಬೇಕು, ಅದೇ ನಮ್ಮ ರಾಷ್ಟ್ರ ಭಾಷೆ’ ಎಂಬುದನ್ನು ಲಿಖಿತವಾಗಿ ಮತ್ತು ಅಲಿಖಿತವಾಗಿ, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹೇರುವ ಹುನ್ನಾರವನ್ನು ಹಿಂದಿನ ಮತ್ತು ಇಂದಿನ ಕೇಂದ್ರ ಸರ್ಕಾರಗಳು ಮಾಡುತ್ತಲೇ ಬಂದಿವೆ. ಕೇಂದ್ರ ಸರ್ಕಾರಕ್ಕೆ ಒಳಪಟ್ಟ ಇಲಾಖೆಗಳು, ನಿಗಮ-ಮಂಡಲಿಗಳು, ಸಂಸ್ಥೆಗಳು, ಬ್ಯಾಂಕುಗಳಲ್ಲಿ ಕನ್ನಡದ ಸೊಲ್ಲು ಸಾಧ್ಯವಾದಷ್ಟೂ ಇರದಂತೆ ನೋಡಿಕೊಳ್ಳಲಾಗುತ್ತದೆ. ನಿಜವಾಗಿ ಹೇಳುವುದಾದರೆ, ಒಕ್ಕೂಟ ಸರ್ಕಾರವೇ ಸರಿಯಾದ ಸ್ವರೂಪವಾಗಿದ್ದು, ರಾಜ್ಯ ಸರ್ಕಾರಗಳಿಗೆ ಭಾಷೆಯೂ ಸೇರಿ ಅನೇಕ ವಿಷಯಗಳಲ್ಲಿ ಆಯ್ಕೆಯ ಸ್ವಾತಂತ್ರ್ಯ ಇದ್ದೇ ಇರುತ್ತದೆ. ಇತರ ರಾಜ್ಯಗಳಿಗೂ ಇರುವಂತೆ, ನಮಗೂ ಇರುವ ಸಂವಿಧಾನದ 345ನೇ ವಿಧಿಯ ಪ್ರಕಾರ ಕನ್ನಡವೇ ನಮ್ಮ ರಾಜ್ಯದ ಅಧಿಕೃತ ಭಾಷೆ ಆಗಿದೆ. ಎಲ್ಲ ರಾಜ್ಯಗಳಿಗೂ ಒಂದೇ ಭಾಷೆಯನ್ನು ಹೇರುವುದು ಸಮರ್ಥನೀಯವಲ್ಲ. ಸಂವಿಧಾನದ 351ನೇ ವಿಧಿಯ ಅನ್ವಯ ಹಿಂದಿ ಭಾಷೆಗೆ ಆದ್ಯತೆ ನೀಡುವ ಅವಕಾಶವಿದ್ದರೂ ಅದು ಹೇರಿಕೆ ಮತ್ತು ದಬ್ಬಾಳಿಕೆ ರೂಪದಲ್ಲಿ ಜಾರಿಗೆ ಬರಬಾರದು. ಕನ್ನಡನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎನ್ನುವುದು ನಿರ್ವಿವಾದ. ಇದನ್ನು ನಮ್ಮ ರಾಜ್ಯ ಸರ್ಕಾರ ಸರ್ವರೀತಿಯಲ್ಲೂ ಕೇಂದ್ರ ಸರ್ಕಾರಕ್ಕೆ ಮನಗಾಣಿಸಬೇಕು. ಇದಕ್ಕೆ ಕನ್ನಡಿಗರು ಪ್ರತಿರೋಧ ತೋರಿಸಿದರೆ ಅದು ತಪ್ಪೇನಲ್ಲ; ತಮಿಳುನಾಡು ಮುಂತಾದ ಮಾದರಿಗಳು ನಮ್ಮ ಜತೆಗೆ ಇದ್ದೇ ಇವೆ. ಕೇಂದ್ರದ ಪ್ರಭಾವಿ ಸಚಿವರುಗಳು ಈ ವಿಚಾರವನ್ನು ಆಗಾಗ ಪ್ರಸ್ತಾಪ ಮಾಡುತ್ತಿರುವುದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದರು.

ಮಂಡ್ಯದ ಗುಣಗಾನ

ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ತನ್ನ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ನಡೆಸುತ್ತಿರುವುದು ಅತ್ಯಂತ ಸಂತೋಷದ – ಸಂಭ್ರಮದ ಸಂಗತಿಯಾಗಿದೆ. ರಾಜಕೀಯವಾಗಿ ಸದಾ ಜಾಗೃತವಾಗಿರುವ, ಸಾಮಾಜಿಕವಾಗಿ ಸೌಹಾರ್ದತೆಯನ್ನು ಒಳಗೊಂಡಿರುವ, ಆರ್ಥಿಕವಾಗಿ ಸಮೃದ್ಧವಾದ, ಸಾಂಸ್ಕೃತಿಕವಾಗಿ ಶ್ರೀಮಂತವಾದ ಮತ್ತು ಸಾಹಿತ್ಯಕವಾಗಿಯೂ ಹೆಸರು ಮಾಡಿರುವ ಜಿಲ್ಲೆ ಮಂಡ್ಯ. ಇದು ಸಕ್ಕರೆ ನಾಡು, ಇದು ಹಸಿರಿನ ಬೀಡು. ಕರ್ನಾಟಕ ರಾಜ್ಯದ ರಾಜಕೀಯ ಮತ್ತು ಸಾಹಿತ್ಯ ಕ್ಷೇತ್ರಗಳಿಗೆ ಗಮನಾರ್ಹ ಕಾಣಿಕೆ ನೀಡಿರುವ ಮಂಡ್ಯವು ಅಪ್ಪಟ ಕನ್ನಡ ಜಿಲ್ಲೆ. ಇಲ್ಲಿ ಅನ್ಯ ಭಾಷಿಕರ ಪ್ರಮಾಣ ಕಡಿಮೆ. ಮಂಡ್ಯ ಜಿಲ್ಲೆಯು ರೈತಾಪಿಗಳ ನಾಡು. ಕಬ್ಬು ಮತ್ತು ಬತ್ತ ಬೆಳೆಯುತ್ತಿರುವ ನೇಗಿಲಯೋಗಿಗಳ ಬೀಡು.

ತಂತ್ರಜ್ಞಾನದ ನೆರವಿನ ಮೇಲೆ ಭಾಷೆಯ ಬೆಳವಣಿಗೆ

ತಂತ್ರಜ್ಞಾನದ ಕನ್ನಡಕವಿಲ್ಲದೆ ಇಂದು ಜಗತ್ತನ್ನು ನೋಡುವುದೇ ಕಷ್ಟವಾಗಿದೆ. ಕನ್ನಡ ಭಾಷೆ ಇನ್ನಷ್ಟು ಸಂಪನ್ನವಾಗಬೇಕಾದರೆ, ಸಂಪೂರ್ಣ ಅನ್ನಿಸಬೇಕಾದರೆ ಮತ್ತು ಮುಖ್ಯವಾಗಿ ಸಮಕಾಲೀನ ಅನ್ನಿಸಬೇಕಾದರೆ ಅದಕ್ಕೆ ತಂತ್ರಜ್ಞಾನದ ಬೆನ್ನೆಲುಬನ್ನು ಜೋಡಿಸಲೇಬೇಕು. ಕನ್ನಡ ಭಾಷೆಯನ್ನು, ಕನ್ನಡ ಲಿಪಿಯನ್ನು ತಂತ್ರಜ್ಞಾನಕ್ಕೆ ಜೋಡಿಸುವ ವಿಚಾರದಲ್ಲೇ ಇರುವ ಗೊಂದಲಗಳನ್ನು ಮೊದಲು ಪರಿಹರಿಸುವುದು ಅಗತ್ಯ. ಜ್ಞಾನ, ತಂತ್ರಜ್ಞಾನ ಜಾಗತಿಕವಾಗಿ ಅಗಾಧವಾಗಿ ಬೆಳೆದಿದೆ. ಆದರೆ ಜ್ಞಾನವನ್ನು ತಂತ್ರಜ್ಞಾನದ ಮೂಲಕ ಕನ್ನಡ ಭಾಷೆಯಲ್ಲೇ ಪಡೆದುಕೊಳ್ಳಲು ಸರಿಯಾದ ವ್ಯವಸ್ಥೆ ನಮ್ಮಲ್ಲಿ ಇರಬೇಕಾಗುತ್ತದೆ. ದತ್ತಾಂಶಗಳನ್ನು ಕನ್ನಡದಲ್ಲೇ ರೂಪಿಸುವ ಹಲವಾರು ಪ್ರಯತ್ನಗಳು ನಡೆದಿವೆ ಎನ್ನುವುದು ನಿಜ. ಅವುಗಳನ್ನು ಅಭಿನಂದಿಸೋಣ. ಆದರೆ ಅವು ಇಲ್ಲಿರುವ ಅಗಾಧ ಅಗತ್ಯವನ್ನು ಪೂರೈಸುವ ಪ್ರಮಾಣದಲ್ಲಿ ಇವೆಯೇ? ಈ ಕುರಿತು ಸರ್ಕಾರ ಮತ್ತು ತಂತ್ರಜ್ಞಾನ ಪರಿಣತರು ಗಂಭೀರ ಚಿಂತನೆ ನಡೆಸಬೇಕಿದೆ. ರಾಜಕಾರಣದ ಜೊತೆಗೆ ಜ್ಞಾನಕಾರಣ, ಜನಕಾರಣಗಳ ಬಗ್ಗೆ ನಮ್ಮ ಸರ್ಕಾರಗಳು ಗಮನ ಹರಿಸಲೇಬೇಕು. ಇವುಗಳಲ್ಲಿ ಬಹಳ ಮುಖ್ಯವಾದುದು ಜನಭಾಷೆಯಲ್ಲಿ ಜ್ಞಾನದ ಪ್ರಸಾರ. ಇದಕ್ಕೆ ಅಗತ್ಯವಾದ ತಾಂತ್ರಿಕ ಸಿದ್ಧತೆ ಮತ್ತು ವ್ಯವಸ್ಥೆಯನ್ನು ಮಾಡುವುದು ಈ ಕಾಲಕ್ಕೆ ಸರ್ಕಾರದ ದೊಡ್ಡ ಜವಾಬ್ದಾರಿ. ಅದಕ್ಕೆ ನೆರವು ನೀಡಬಲ್ಲ ಕನ್ನಡಿಗ ತಾಂತ್ರಿಕ ಸಂಪನ್ನರ ಸಂಪರ್ಕ ಮಾಡಿ ಕನ್ನಡವನ್ನು ‘ಅರಿವಿನ „ಭಾಷೆ’ಯಾಗಿ, ‘ಅನ್ನದ ಭಾಷೆ’ಯಾಗಿ, ಬೆಳೆಸುವುದು ಅಗತ್ಯ ಎಂದರು.

ಗೂಗಲ್, ಯಾಂತ್ರಿಕ ಬುದ್ಧಿಮತ್ತೆಗೂ ಬರಲಿ ಶುದ್ಧ ಕನ್ನಡ ಪ್ರೇಮ

ಜಗತ್ತಿನಲ್ಲಿ ಗೂಗಲ್ ಎನ್ನುವ ಜಗದ್ಗುರು 1998ರ ಸುಮಾರಿಗೆ ಅವತರಿಸಿದ ಬಳಿಕ, ಅದರಂಥ ಇನ್ನೂ ಕೆಲವು ಕಿರಿಯ ಗುರುಗಳು ಹುಟ್ಟಿದ ಬಳಿಕ, ಮನುಷ್ಯರು ಲೋಕವನ್ನು ಅರಿಯುವ ಮಾರ್ಗ, ಲೋಕದ ಯಾವುದೇ ವಿಷಯದ ಬಗ್ಗೆ ಮಾಹಿತಿ ಪಡೆಯುವ ಮಾರ್ಗ ಬಹಳ ಸುಲಭವಾಯಿತು. ಆದರೆ ಈ ಆಧುನಿಕ ಗುರುಗಳು ಜ್ಞಾನದ ಪ್ರಸಾರ ಮಾಡುವುದು, ಪಾಠಗಳನ್ನು ಹೇಳಿಕೊಡುವುದು ಇಂಗ್ಲಿಷ್ ಭಾಷೆಯಲ್ಲೇ. ಕನ್ನಡ ಭಾಷೆಯ ಮೂಲಕವೂ ಲೋಕವನ್ನು ಅರಿಯಲು ಸಾಧ್ಯ, ಜ್ಞಾನವನ್ನು ಪಡೆಯಲು ಸಾಧ್ಯ ಎನ್ನುವುದನ್ನು ನಾವೀಗ ತೋರಿಸಿ ತಿಳಿಸದಿದ್ದರೆ, ಮುಂದಿನ ಪೀಳಿಗೆಯ ಮಕ್ಕಳು ‘ಜ್ಞಾನ ಎಂದರೆ ಇಂಗ್ಲಿಷ್’ ಎಂದು ನಂಬುವ ಅಪಾಯವಿದೆ. ಜ್ಞಾನ ಪಡೆಯುವ ತಂತ್ರಜ್ಞಾನಕ್ಕೆ ಕನ್ನಡವನ್ನು ಹೊಂದಿಸಿದರೆ, ಕನ್ನಡ ಜ್ಞಾನದ ಭಾಷೆಯೂ ಆಗುತ್ತದೆ. ನಮಗೆ ಗೊತ್ತಿರುವಂತೆ, ತಮ್ಮ ತಲೆಗೆ ತಜ್ಞರು ತುಂಬಿರುವ ದತ್ತಾಂಶ ಏನಿದೆಯೋ ಅದನ್ನೇ ಈ ‘ಯಾಂತ್ರಿಕ ಗುರುಗಳು’ ಕೇಳಿದವರಿಗೆ ಮಾಹಿತಿಯಾಗಿ ನೀಡುತ್ತಾರೆ. ಕನ್ನಡದಲ್ಲಿ ದತ್ತಾಂಶ (ಅಂದರೆ ಡೇಟಾ) ತುಂಬದಿದ್ದರೆ ಅಥವಾ ಸರಿಯಾಗಿ ತುಂಬದಿದ್ದರೆ, ಅಂತರಜಾಲದಲ್ಲಿ ಸಿಗುವ ಮಾಹಿತಿ ಸರಿಯಾಗಿ ಇರುವುದಾದರೂ ಹೇಗೆ? ಕರ್ನಾಟಕದ ರಾಜಧಾನಿ ಬೆಂಗಳೂರನ್ನು ‘ಐಟಿ ಸಿಟಿ- ಇನ್‌ಫರ್‌ಮೇಷನ್ ಟೆಕ್ನಾಲಜಿ ಸಿಟಿ’ – ಮಾಹಿತಿ ತಂತ್ರಜ್ಞಾನ ನಗರ ಎಂದು ಕರೆಯಲಾಗುತ್ತದೆ. ಇದು ಕನ್ನಡ ಭಾಷೆಯ ಮಟ್ಟಿಗೂ ಅನ್ವರ್ಥವಾಗಬೇಕಾದರೆ, ಇದುವರೆಗಿನ ಕನ್ನಡದಲ್ಲೇ ದತ್ತಾಂಶ ತುಂಬುವ ಅಷ್ಟಿಷ್ಟು ಪ್ರಯತ್ನಗಳ ಮುಂದುವರಿಕೆಯಾಗಿ ಮತ್ತೊಂದು ಸದೃಢ ಪ್ರಯತ್ನ ನಡೆಯಲೇಬೇಕು. ಇದಕ್ಕೆ ಸರ್ಕಾರ ನೇತೃತ್ವ ವಹಿಸುವುದು, ಅಗತ್ಯ ವ್ಯವಸ್ಥೆ ರೂಪಿಸುವುದು, ಅದು ನಿರ್ವಹಿಸಬೇಕಾದ ಸಾಮಾಜಿಕ ಕರ್ತವ್ಯ ಎಂದರು.

ಅಂತರ-ರಾಜ್ಯ ಭಾಷಾ ವಿನಿಮಯ

ದ್ರಾವಿಡ ಭಾಷಾ ಕುಟುಂಬದಲ್ಲಿ ಕನ್ನಡವು ಒಂದು ಪ್ರಾಚೀನ ಮತ್ತು ಸಾಹಿತ್ಯದ ದೃಷ್ಟಿಯಿಂದ ಮಹತ್ವದ ಭಾಷೆಯಾಗಿದೆ. ಕನ್ನಡ ಸಾಹಿತ್ಯವು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುತ್ತಿದೆ. ರಾಘವಾಂಕನ ಹರಿಶ್ಚಂದ್ರ ಕಾವ್ಯ, ಕುಮಾರವ್ಯಾಸ ಭಾರತ, ಕವಿರಾಜಮಾರ್ಗ, ವಡ್ಡಾರಾಧನೆ, ಕಥೆ-ಕಾದಂಬರಿಗಳು ಮುಂತಾದ ಕನ್ನಡದ ಅಭಿಜಾತ ಕೃತಿಗಳು ಇಂಗ್ಲಿಷ್‌ಗೆ ಅನುವಾದವಾಗಿ ಜಾಗತಿಕ ಸಾಹಿತ್ಯದ ಭಾಗವಾಗುತ್ತಿವೆ. ವಚನಗಳು ಇಂಗ್ಲೀಷಲ್ಲದೆ ದೇಶದ ಮತ್ತು ಜಗತ್ತಿನ ಇತರ ಪ್ರಮುಖ ಭಾಷೆಗಳಿಗೆ ಅನುವಾದಗಳಾಗುತ್ತಿವೆ. ಸಾಹಿತ್ಯವೇನೋ ಸಮೃದ್ಧವಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತು ಭಾರತದ ಬೇರೆ ಬೇರೆ ಭಾಷೆಗಳ ಜೊತೆಯಲ್ಲಿ ವಿನಿಮಯ ಕಾರ್ಯಕ್ರಮಗಳನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಬೇಕು. ಸೋದರ ಭಾಷೆಗಳಾದ ತಮಿಳು, ತೆಲುಗು, ಮಲೆಯಾಳಂ, ಮರಾಠಿ, ತುಳು, ಕೊಂಕಣಿ, ಕೊಡವ ಮುಂತಾದ ಭಾಷೆ ಮತ್ತು ಭಾಷೆಗಳನ್ನಾಡುನ ಜನರ ಜೊತೆಯಲ್ಲಿ ಹೆಚ್ಚು ಹೆಚ್ಚು ಕೊಡುಕೊಳೆ ಸಂಬಂಧವನ್ನು ಬೆಳೆಸಬೇಕು. ಭಾಷೆಯು ತನ್ನಷ್ಟಕ್ಕೆ ತಾನೆ ಬೆಳೆಯುವುದಿಲ್ಲ. ಯಾವುದನ್ನು ಭಾಷಾ ವಿನಿಮಯ ಎನ್ನುತ್ತೇವೆಯೋ ಅದರ ಅಗತ್ಯ ಇಂದು ಹೆಚ್ಚಾಗಿದೆ. ಕನ್ನಡ ಸಾಹಿತ್ಯ, ಕರ್ನಾಟಕ ಸಂಸ್ಕೃತಿ, ಇಲ್ಲಿನ ಕಲೆಗಳು, ನಾಟಕ, ಸಂಗೀತ, ಬಯಲಾಟ, ಯಕ್ಷಗಾನ ಮುಂತಾದವುಗಳನ್ನು ಉತ್ತರ ಭಾರತದ ರಾಜ್ಯಗಳಿಗೆ ಪರಿಚಯಿಸಿಕೊಡುವ ಕೆಲಸವನ್ನು ಆದ್ಯತೆಯ ಮೇಲೆ ಮಾಡಬೇಕು.

ಉತ್ತರ ಭಾರತದ ಜನರು ಉದ್ಯೋಗವನ್ನು ಅರಸಿಕೊಂಡು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಕರ್ನಾಟಕಕ್ಕೆ, ಬೆಂಗಳೂರಿಗೆ ವಲಸೆ ಬರುತ್ತಿದ್ದಾರೆ. ಭಾಷಾ ವಿನಿಮಯದ ಮೂಲಕ ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಗಟ್ಟಿಗೊಳಿಸಬಹುದಾಗಿದೆ. ನಮ್ಮ ದೇಶವು ಹೇಗೆ ಸಾಂವಿಧಾನಿಕವಾಗಿ ಒಕ್ಕೂಟ ವ್ಯವಸ್ಥೆಯೋ, ಅದೇ ರೀತಿಯಲ್ಲಿ ಇದು ಬಹುಭಾಷಾ ದೇಶವಾಗಿದೆ. ಬಹುತ್ವವು ಭಾರತದ ಜೀವದ್ರವ್ಯವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ವರ್ಷದಲ್ಲಿ ಎರಡು. ಮೂರು ಅಂತರ್-ರಾಜ್ಯ ಸಾಹಿತ್ಯ ಸಮಾವೇಶಗಳನ್ನು ದೇಶದ ಬೇರೆ ಭಾಗಗಳಲ್ಲಿ ನಡೆಸಬೇಕು. ರಾಜ್ಯ- ರಾಜ್ಯಗಳ ನಡುವೆ ಇದು ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಕ ಮತ್ತು ಆರ್ಥಿಕ ಸಂಬಂಧವನ್ನು ಬೆಳೆಸುತ್ತದೆ.

ಕನ್ನಡ ವಿಶ್ವವಿದ್ಯಾನಿಲಯಕ್ಕೆ ವಿಶೇಷ ಗಮನ

ಇತ್ತೀಚಿನ ದಿನಗಳ ಪತ್ರಿಕಾ ವರದಿಗಳಲ್ಲಿ ಕನ್ನಡ ವಿಶ್ವವಿದ್ಯಾನಿಲಯದ ಸಂಕಷ್ಟಗಳು ಹೆಚ್ಚು ನೆಮ್ಮದಿ ಕೆಡಿಸಿವೆ. ಅನುದಾನದ ಕೊರತೆಯಿಂದ ಅದರ ಸ್ಥಿತಿ ಹೀನಾಯ ನೆಲೆಗೆ ಬಂದು ವಿಶ್ವವಿದ್ಯಾನಿಲಯದ ಸಿಬ್ಬಂದಿಗೆ ವೇತನ ಕೊಡಲೂ ಆಗುತ್ತಿಲ್ಲ, ವಿದ್ಯುತ್ ಬಿಲ್, ನೀರಿನ ಬಿಲ್ ಕಟ್ಟಲೂ ಆಗುತ್ತಿಲ್ಲ ಎಂಬುದು ನಿಜಕ್ಕೂ ಕಂಗೆಡಿಸುವಂಥದು. ಯಾವುದೇ ಸರ್ಕಾರಕ್ಕೆ ಇದು ಶೋಭೆ ತರುವುದಿಲ್ಲ. ಏಕೆಂದರೆ 33 ವರ್ಷಗಳ ಹಿಂದೆ ಆರಂಭವಾದ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಘನೋದ್ದೇಶಗಳಿವೆ. ಅದಕ್ಕೆ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು, ಕನ್ನಡ ನಾಡಿನ ಇತಿಹಾಸವನ್ನು ರಕ್ಷಿಸಿ ಮುಂದಿನ ಪೀಳಿಗೆಗಳಿಗೆ ದಾಟಿಸುವ ಪ್ರಮುಖ ಜವಾಬ್ದಾರಿಯಿದೆ. ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕೊಟ್ಟು ಅವರಿಂದ ಶುಲ್ಕ ಸಂಗ್ರಹಿಸಿ ಅನುಕೂಲ ಮಾಡಿಕೊಳ್ಳುವ ಇತರ ವಿಶ್ವವಿದ್ಯಾನಿಲಯಗಳಿಗಿಂತ ನಮ್ಮ ಕನ್ನಡ ವಿಶ್ವವಿದ್ಯಾನಿಲಯದ ಸ್ವರೂಪ ಭಿನ್ನವಾಗಿದೆ.

ಇದನ್ನು ಸರ್ಕಾರ ಒಂದು ಲಾಭದಾಯಕ ಶಿಕ್ಷಣ ಸಂಸ್ಥೆಯಂತೆ ನೋಡಬಾರದು. ಕನ್ನಡ ವಿಶ್ವವಿದ್ಯಾನಿಲಯದ ಉದ್ದೇಶಗಳನ್ನು ಕಾಪಾಡುವ, ಪೋಷಿಸುವ ಮತ್ತು ಅಲ್ಲಿ ನಿರಾತಂಕವಾಗಿ ಸಂಶೋಧನೆ ನಡೆಯುವಂತೆ ನೋಡಿಕೊಳ್ಳುವ ನೈತಿಕ ಜವಾಬ್ದಾರಿ ಕರ್ನಾಟಕ ಸರ್ಕಾರಕ್ಕಿರಬೇಕು. ಇದೇ ಮಾತುಗಳು ಜಾನಪದಕ್ಕೆ ಮೀಸಲಾದ ಮತ್ತು ವಿಶ್ವದಲ್ಲೇ ಮೊದಲೆನಿಸಿರುವ ನಮ್ಮ ಜಾನಪದ ವಿಶ್ವವಿದ್ಯಾಲಯಕ್ಕೂ ಅನ್ವಯಿಸುತ್ತವೆ. ಗ್ರಾಮೀಣರು ಮತ್ತು ಗುಡ್ಡಗಾಡಿನ ಜನರ ಬದುಕಿಗೆ ನೇರವಾಗಿ ಸಂಬಂಧವಿರುವ ಜಾನಪದ ವಿಶ್ವವಿದ್ಯಾಲಯದ ಸ್ಥಿತಿಯೂ ಚಿಂತಾಜನಕವಾಗಿದೆ. ಆದ್ದರಿಂದ ಹೆಚ್ಚಿನ ಶಾಶ್ವತ ಅನುದಾನ ಮತ್ತು ಅದು ಸಕಾಲಕ್ಕೆ ಒದಗುವುದು ಎರಡೂ ಬಹಳ ಮುಖ್ಯ. ಈ ಕುರಿತು ನಮ್ಮ ಶಾಸಕರೆಲ್ಲರೂ ದನಿ ಎತ್ತಬೇಕು ಎಂದು ಸಕಲ ಕನ್ನಡಿಗರೆಲ್ಲರ ಪರವಾಗಿ ಈ ವೇದಿಕೆಯಿಂದ ಮನವಿ ಮಾಡುತ್ತೇನೆ. ಈ ಎರಡು ವಿಶ್ವವಿದ್ಯಾಲಯಗಳಂತೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ನೃತ್ಯ ವಿಶ್ವವಿದ್ಯಾನಿಲಯ ಇವೆಲ್ಲವೂ ಕನ್ನಡನಾಡಿನ ಅಮೂಲ್ಯ ಸಂಸ್ಕೃತಿ ಕೇಂದ್ರಗಳು ಎಂದು ಪರಿಭಾವಿಸಬೇಕು.

ಕನ್ನಡ ಕಲಿಕಾ ಕೇಂದ್ರಗಳು

ಬೆಂಗಳೂರು ನಗರ ತನ್ನ ಹವಾಮಾನ, ಸಹಿಷ್ಣುತೆ ಮತ್ತು ಸೌಂದರ್ಯದಿಂದ ಜಾಗತಿಕ ಉದ್ಯಮಗಳನ್ನು ಸೆಳೆದು, ಅವುಗಳು ಸಂತೋಷದಿಂದ ಬಂದು ಇಲ್ಲಿ ನೆಲೆಯೂರಿ ಬೆಂಗಳೂರು ‘ಐಟಿ ಬಿಟಿ ಸಿಟಿ’ ಎಂದು ಪ್ರಖ್ಯಾತವಾಗಿದೆ. ಯಾವ ರಾಜ್ಯದ, ಯಾವ ಭಾಷೆಯ ಜನರಾದರೂ ಭಾರತದಲ್ಲಿ ಎಲ್ಲಿ ಬೇಕಾದರೂ ನೆಲೆಸಬಹುದಾದ ಅವಕಾಶ ಇದೆಯಾದರೂ ಕಾಲೂರುವ, ನೆಲೆಯೂರುವ ನೆಲದ ಬಗ್ಗೆ, ಅಲ್ಲಿನ ಭಾಷೆಯ ಬಗ್ಗೆ ವಲಸಿಗರು ಗೌರವ ಹೊಂದಿರಬೇಕು. ಬೆಂಗಳೂರು ಮತ್ತು ಇತರ ನಮ್ಮ ನಗರಗಳಿಗೆ ಕೆಲಸಕ್ಕಾಗಿ ಬಂದಿರುವ ಹೊರ ರಾಜ್ಯಗಳ ಜನರು ಮೊದಲು ಕನ್ನಡ ಭಾಷೆಯನ್ನು ಕಲಿತು ಅದರಲ್ಲೇ ಸಂವಹನ ಮಾಡುವುದು ಅವರಿಗೆ ಒಳ್ಳೆಯದು. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈಗ ಕನ್ನಡ ಕಲಿಸುವ ಕಾಯಕವನ್ನು ಇನ್ನಷ್ಟು ಉತ್ಸಾಹದಿಂದ ಮುಂದುವರಿಸಿದೆ. ಉದ್ಯಮ ವಲಯಗಳು ಮತ್ತು ಇನ್ನಿತರ ಕಡೆಗಳಲ್ಲಿ ಸರಳ ಕನ್ನಡ ಕಲಿಕಾ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಬೇರೆ ಭಾಷೆಯ ಜನರು ಇದರ ಸದುಪಯೋಗ ಪಡೆಯಬೇಕು. ಹೊರರಾಜ್ಯಗಳಿಂದ ತಾವು ಬೆಂಗಳೂರಿಗೆ ಉದ್ಯೋಗಕ್ಕಾಗಿ ಬಂದಿರುವುದರಿಂದ ಈ ನಗರದ ಉದ್ದಾರ ಆಗುತ್ತಿದೆ, ಇಲ್ಲಿನ ವ್ಯಾಪಾರ ಹೆಚ್ಚುತ್ತಿದೆ, ಇಲ್ಲಿನ ನಿವೇಶನಗಳು, ಬಡಾವಣೆಗಳಿಗೆ ಬೆಲೆ ಏರುತ್ತಿದೆ ಮುಂತಾದ ದುರಹಂಕಾರದ ಪ್ರದರ್ಶನ ಹೊರನಾಡಿಗರಿಂದ ಅಲ್ಲಲ್ಲಿ ವ್ಯಕ್ತವಾಗಿದೆ. ಇದನ್ನು ಸರ್ಕಾರ ಮತ್ತು ಕನ್ನಡಿಗರು ನಿಯಂತ್ರಿಸಬೇಕು.

ಕನ್ನಡನಾಡಿನಲ್ಲಿ ತಮಗೆ ಸಾಂವಿಧಾನಿಕವಾಗಿ ಲಭ್ಯವಾಗುವ ಎಲ್ಲ ಸೌಲಭ್ಯಗಳನ್ನು ಪಡೆದು, ಪ್ರಭಾವ ಬಳಸಿ ಎಲ್ಲ ರಿಯಾಯಿತಿಗಳನ್ನು ಪಡೆದು ಇಲ್ಲಿ ಔದ್ಯಮಿಕವಾಗಿ ನೆಲೆಯೂರಿ ಲಾಭದಾಯಕವಾಗಿ ಬೆಳೆಯುವ ಉದ್ಯಮಗಳು ಕನ್ನಡಿಗರಾದ ವಿದ್ಯಾವಂತ ಅಭ್ಯರ್ಥಿಗಳಿಗೆ ನಿರ್ದಿಷ್ಟ ಪ್ರಮಾಣದ ಉದ್ಯೋಗ ನೀಡುವುದು ಅವುಗಳ ಋಣಸಂದಾಯದ ಮಾರ್ಗವೆಂದು ಭಾವಿಸಬೇಕು. ಇದು ಅವುಗಳ ನೈತಿಕ ಜವಾಬ್ದಾರಿ ಕೂಡ. ಆದರೆ ಇದನ್ನು ತಪ್ಪಿಸಲು ಹಲವಾರು ದಾರಿಗಳನ್ನು ಹುಡುಕುವ ಉದ್ಯಮಗಳನ್ನು ಕರ್ನಾಟಕ ಸರ್ಕಾರ ತನ್ನ ಷರತ್ತುಗಳು ನಿಯಮಗಳಿಂದ ಪ್ರತಿಬಂಧಿಸಿದರೆ ತಪ್ಪೇನಿಲ್ಲ. ಕನ್ನಡದ ನೆಲ ಜಲ ನೈಸರ್ಗಿಕ ಸಂಪನ್ಮೂಲಗಳನ್ನು ಒದಗಿಸುವ ಮೊದಲು ಸರ್ಕಾರ ಇದಕ್ಕೆ ಮುಚ್ಚಳಿಕೆಯನ್ನು ಬರೆಸಿಕೊಂಡರೂ ತಪ್ಪಿಲ್ಲ. ಈ ಕುರಿತು ಹಲವು ವರ್ಷಗಳಿಂದ ಚರ್ಚೆ ನಡೆದಿದೆಯಾದರೂ ನಿರ್ದಿಷ್ಟ ಕ್ರಮ ಅತ್ಯಗತ್ಯ ಎಂದು ಕನ್ನಡಿಗರು ಹಕ್ಕೊತ್ತಾಯ ಮಂಡಿಸಬೇಕು.

ಬಹುತ್ವ ಬಹುಮುಖ್ಯ

ನಮ್ಮದು ಸಾಂವಿಧಾನಿಕ ಒಕ್ಕೂಟ ವ್ಯವಸ್ಥೆ-ಫೆಡರಲ್ ವ್ಯವಸ್ಥೆ. ಕಳೆದ 74 ವರ್ಷಗಳಿಂದ ಅನೇಕ ಇತಿಮಿತಿಗಳ ನಡುವೆ ಮುಕ್ಕಾಗದಂತೆ ಅದನ್ನು ಕಾಯ್ದುಕೊಂಡು ಬಂದಿದ್ದೇವೆ. ಕವಿರಾಜಮಾರ್ಗಕಾರ ಹೇಳಿದಂತೆ “ಕನ್ನಡದೊಳ್ ಭಾವಿಸಿದ ಜನಪದ” ವಸುಧೆಯಲ್ಲಿ ವಿಲೀನವಾಗಿದೆ ನಿಜ. ಆದರೆ ಅದು ತನ್ನ ಭಾಷೆ, ಸಾಹಿತ್ಯ, ಜೀವನ ಪದ್ಧತಿ, ಆಹಾರ ಸಂಸ್ಕೃತಿ, ಆಧ್ಯಾತ್ಮ, ಆರ್ಥಿಕತೆ, ಉದ್ಯೋಗ, ಕಾಯಕ ಮುಂತಾದವುಗಳ ನೆಲೆಯಿಂದ ತನ್ನ ‘ಅಸ್ಮಿತೆ’ಯನ್ನು, ‘ವಿಶಿಷ್ಟತೆ’ಯನ್ನು, ‘ಅನನ್ಯತೆ’ಯನ್ನು ಜತನದಿಂದ ಕಾಪಿಟ್ಟುಕೊಂಡು ಬಂದಿದೆ. ಭಾರತದ ಐಕ್ಯತೆ ಮತ್ತು ಸಮಗ್ರತೆ ನಿಂತಿರುವುದೇ ಬಹುಭಾಷೆ-ಬಹುಸಂಸ್ಕೃತಿಯಿಂದ ಎಂಬುದನ್ನು ನಾವು ಮರೆಯಬಾರದು. “ಬಹುತ್ವ’ವು ನಮ್ಮ ದೇಶದ ಏಕತೆಯ ಮೂಲ ದ್ರವ್ಯವಾಗಿದೆ. ಅತ್ಯಂತ ಆತಂಕದ ಸಂಗತಿಯೆಂದರೆ ಇಂದು ನಮ್ಮ ಸಾಮಾಜಿಕ ಬಹುತ್ವಕ್ಕೆ, ಬಹುಸಂಸ್ಕೃತಿಗೆ, ಭಾಷಾ ಸ್ವಾಯತ್ತತೆಗೆ, ಧಾರ್ಮಿಕ ಸೌಹಾರ್ದತೆಗೆ, ಆರ್ಥಿಕ ಸಮೃದ್ಧತೆಗೆ ಒದಗಿರುವ ಅಪಾಯ. ಬಹುಭಾಷಾ ಸಂಸ್ಕೃತಿ ನೀತಿಯನ್ನು ಸಂವಿಧಾನಾತ್ಮಕವಾಗಿ ಕೇಂದ್ರ ಸರ್ಕಾರವು ಪಾಲಿಸಬೇಕು. ಇದು ಇಂದು ನಡೆಯುತ್ತಿಲ್ಲ. ಅಖಿಲ ಭಾರತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ, ಬ್ಯಾಂಕು ವ್ಯವಹಾರಗಳಲ್ಲಿ, ಅಂಚೆ ಕಚೇರಿಗಳಲ್ಲಿ, ರಾಜ್ಯಭಾಷೆಗಳನ್ನು ನಿರ್ಲಕ್ಷಿಸಿ ಹಿಂದಿಯನ್ನು ಹೇರುವ ಪ್ರೋತ್ಸಾಹಿಸುವ ಪ್ರಯತ್ನ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಕನ್ನಡವು ಕರ್ನಾಟಕದಲ್ಲಿ ಸಾರ್ವಭೌಮ ಎಂದರೆ, ಅದು ಭಾಷಾಂಧತೆಯಲ್ಲ. ಅದು ಒಂದು ಆದರ್ಶ ಜನತಂತ್ರದ ಬಹುಮುಖ್ಯ ಗುಣ.

ತೆರಿಗೆ ಹಣದಲ್ಲಿ ರಾಜ್ಯಕ್ಕೆ ನ್ಯಾಯವಾದ ಪಾಲು ಕೊಡಿ

ಯಾವುದನ್ನು ‘ಒಕ್ಕೂಟ-ಹಣಕಾಸು (ಫಿಸ್ಕಲ್ ಫೆಡರಲಿಸಮ್) ವ್ಯವಸ್ಥೆ’ ಎಂದು ಕರೆಯುತ್ತೇವೆಯೋ ಅದನ್ನು ಇಂದು ಒಕ್ಕೂಟ ಸರ್ಕಾರವು ಸಂವಿಧಾನಾತ್ಮಕವಾಗಿ ನಿರ್ವಹಿಸುವುದರಲ್ಲಿ ವಿಫಲವಾಗಿದೆ. ಒಕ್ಕೂಟ ಸರ್ಕಾರವು ಹಣಕಾಸು ಆಯೋಗಗಳ ಶಿಫಾರಸ್ಸುಗಳಿಗೆ ಅನುಗುಣವಾಗಿ ಕರ್ನಾಟಕಕ್ಕೆ ಬರಬೇಕಾದ ತೆರಿಗೆ ಪಾಲನ್ನು ವರ್ಗಾಯಿಸುತ್ತಿಲ್ಲ. ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಈ ತೆರಿಗೆ ಪಾಲಿನ ಬಗೆಗೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ಅನ್ಯಾಯಮಾಡುತ್ತಿದೆ ಎಂದು ಹೇಳುವುದರಲ್ಲಿ ಸತ್ಯಾಂಶವಿದೆ. ನಬಾರ್ಡ್ (ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಟರ್ ಆಂಡ್ ರೂರಲ್ ಡೆವಲಪ್‌ಮೆಂಟ್) ವಾರ್ಷಿಕವಾಗಿ ಕರ್ನಾಟಕಕ್ಕೆ ನೀಡುತ್ತಿದ್ದ ಮರುಹಣಕಾಸು ಸಾಲವನ್ನು 2024-25 ರಲ್ಲಿ ಶೇ. 58ರಷ್ಟು ಕಡಿತಮಾಡಿದೆ. ಈ ಮಾತುಗಳನ್ನು ರಾಜಕೀಯ ಬಣ್ಣದ ಮೂಲಕ ನೋಡುವುದು ಸಲ್ಲ. ಇದು ಕರ್ನಾಟಕಸ್ಥರ ಬದುಕು ಮತ್ತು ಭವಿಷ್ಯದ ಪ್ರಶ್ನೆ, ರಾಜ್ಯಗಳು ಆರ್ಥಿಕವಾಗಿ ಬೆಳೆದರೆ ಮಾತ್ರ ಭಾರತ ಬೆಳೆಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ಕೇಂದ್ರ-ರಾಜ್ಯಗಳ ನಡುವಣ ಸಂಬಂಧದ ಬಗ್ಗೆ, ಮುಖ್ಯವಾಗಿ ಹಣಕಾಸು ಸಂಬಂಧವನ್ನು ಕುರಿತಂತೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಬೇಕು ಮತ್ತು ಈ ಬಗ್ಗೆ ಕೇಂದ್ರ ಸರ್ಕಾರವು ಸಂವಿಧಾನ ಮತ್ತು ಹಣಕಾಸು ತಜ್ಞರ ಒಂದು ವಿಶೇಷ ಆಯೋಗವನ್ನು ರಚಿಸಬೇಕು ಎಂದು ನಾನು ಈ ವೇದಿಕೆಯ ಮೂಲಕ ಒತ್ತಾಯಿಸುತ್ತೇನೆ. ರಾಜ್ಯಗಳ ಹಣಕಾಸು ಸ್ವಾಯತ್ತತೆಯನ್ನು ಸಂರಕ್ಷಿಸುವ ಕಾರ್ಯವನ್ನು ಒಕ್ಕೂಟ ಸರ್ಕಾರ ಮಾಡಬೇಕು.

ಕರ್ನಾಟಕದ ಸರ್ಕಾರವು ೨೦೨೩ರಲ್ಲಿ ಘೋಷಿಸಿರುವ “ಭರವಸೆ ಕಾರ್ಯಕ್ರಮಗಳು” ದುಡಿಯುವ ವರ್ಗಕ್ಕೆ ಅಷ್ಟೋ ಇಷ್ಟು ಬದುಕನ್ನು ನೀಡಿವೆ. ‘ಭರವಸೆ ಕಾರ್ಯಕ್ರಮ’ ಅಪ್ರತ್ಯಕ್ಷವಾಗಿ ದುಡಿಮೆಗೆ ಗೌರವ ನೀಡುವ ಕ್ರಮವಾಗಿದೆ. ಇದು ಆರ್ಥಿಕ ಸಮೃದ್ಧತೆಯನ್ನು ಜನರಿಗೆ ಹಂಚುವ ಒಂದು ಕಾರ್ಯಯೋಜನೆಯಾಗಿದೆ. ಅಭಿವೃದ್ಧಿಯಲ್ಲಿ ಉತ್ಪಾದನೆ ಎಷ್ಟು ಮುಖ್ಯವೋ ಹಂಚಿಕೆಯೂ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚು ಮುಖ್ಯ. ಆರ್ಥಿಕ ಸಮೃದ್ಧತೆಯು ಜನರ ಬದುಕಿನ ಸಮೃದ್ಧತೆಯಾಗಿ ಪರಿವರ್ತನೆಯಾಗದಿದ್ದರೆ ಅಂತಹ ಆರ್ಥಿಕ ಸಮೃದ್ಧತೆಗೆ ಯಾವ ಅರ್ಥವೂ ಇರುವುದಿಲ್ಲ. ಭರವಸೆ ಕಾರ್ಯಕ್ರಮಗಳ ಅನುಷ್ಠಾನದಲ್ಲಿನ ಕುಂದು-ಕೊರತೆಗಳನ್ನು ಸರಿಪಡಿಸಿಕೊಂಡು ಅವುಗಳ ಯಶಸ್ಸಿಗೆ ನಾವೆಲ್ಲರೂ ಪ್ರಯತ್ನಿಸಬೇಕು ಎಂಬುದು ನನ್ನ ಪ್ರಾಮಾಣಿಕ ಅಭಿಪ್ರಾಯವಾಗಿದೆ. ಏಕೆಂದರೆ, ನಾನೂ ಕೂಡ ಇಂತಹ ಬಡತನದ – ಹಸಿವಿನ ನೆಲೆಯಿಂದಲೇ ಬಂದವನು. ಬಡತನ ಎಂದರೇನು ಎಂಬುದು ನನಗೆ ಗೊತ್ತಿದೆ.

ಧರ್ಮದ ದುರುಪಯೋಗ ತಡೆಯಿರಿ

ಭಾರತ ಬಹುಧರ್ಮಗಳ ನೆಲೆ, ತುಂಬ ವಿಷಾದದ ಸಂಗತಿಯೆಂದರೆ ಯಾವುದು ಜನರನ್ನು, ಸಮಾಜವನ್ನು, ಜನಸಮೂಹವನ್ನು ಕಾಯಬೇಕಾಗಿತ್ತೋ, ಒಂದುಗೂಡಿಸಬೇಕಿತ್ತೋ ಆ ಧರ್ಮಗಳು ಇಂದು ಅಸಹನೆಯನ್ನು, ಅಸಮಾನತೆಯನ್ನು ಬಿತ್ತುವ ಸಾಧನಗಳಾಗಿ ಬಿಟ್ಟಿವೆ. ಧರ್ಮದ, ಧಾರ್ಮಿಕ ಸಂಸ್ಥೆಗಳ ದುರುಪಯೋಗವಾಗುತ್ತಿದೆ. ೧೨ನೆಯ ಶತಮಾನದಲ್ಲಿ ಸಿದ್ಧರಾಮ ‘ಶರಣರು ಒಬ್ಬರ ಮನವ ನೋಯಿಸದವನೆ, ಒಬ್ಬರ ಮನವ ಘಾತವ ಮಾಡದವನೆ ಪರಮ ಪಾವನ’ ಎನ್ನುತ್ತಾರೆ. ಇಂದು ಈ ನೈತಿಕತೆಯನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಹಬ್ಬ-ಹರದಿನಗಳು, ಉತ್ಸವ- ಆರಾಧನೆಗಳು, ಧಾರ್ಮಿಕ ಮುಖಂಡರ ಜಯಂತಿಗಳು ಜನರನ್ನು ಒಟ್ಟಿಗೆ ತರುವ ಕೆಲಸಕ್ಕೆ ಬದಲಾಗಿ ಸಮಾಜವನ್ನು ಒಡೆಯುವ ಆಯುಧಗಳಾಗುತ್ತಿವೆ. ದಯೆಯ ಬದಲಾಗಿ ಹಿಂಸೆಯನ್ನು ವಿಜೃಂಭಿಸಲಾಗುತ್ತಿದೆ. ದುಡಿಮೆಗೆ, ದುಡಿಮೆಗಾರರಿಗೆ, ಕಷ್ಟಸಹಿಷ್ಣುಗಳಿಗೆ ದೊರೆಯಬೇಕಾದಷ್ಟು ಮನ್ನಣೆ, ಪ್ರೋತ್ಸಾಹ, ನೆರವು ದೊರೆಯುತ್ತಿಲ್ಲ. ಗುಡಿಗಳು, ಮಸೀದಿಗಳು, ಗುರುದ್ವಾರಗಳು, ಚೈತ್ಯಾಲಯಗಳು, ಬಸದಿಗಳು ಮತೀಯ ಸಂಘರ್ಷದ ಕೇಂದ್ರಗಳಾಗುತ್ತಿರುವುದು ಖೇದನೀಯ, ನಾವು ಕಟ್ಟುವವರಾಗಬೇಕೇ ವಿನಾ ಕೆಡವುವರಾಗ ಬಾರದು. ಕೆಡವುವುದು ಸುಲಭ. ಕಟ್ಟುವುದು ಕಷ್ಟ. ಹಿಂದಿನ ತಪ್ಪುಗಳು ಮರುಕಳಿಸಬಾರದು; ನಾವು ಮುಂದೆ ಹೋಗಬೇಕೇ ವಿನಾ ಹಿಂದೆ ಹೋಗಬಾರದು.

ಪರಿಸರ ಸಂರಕ್ಷಣೆ

ಪರ್ಯಾಯವಿಲ್ಲದ ನೈಸರ್ಗಿಕ ಸಂಪನ್ಮೂಲಗಳಾದ ನೀರು, ಭೂಮಿ, ಅರಣ್ಯಗಳು, ವನ್ಯಜೀವಿಗಳು, ಜಲಚರಪ್ರಾಣಿಗಳು, ಸೇವಿಸುವ ಗಾಳಿ ಇಂದು ಆಪತ್ತಿಗೆ ಒಳಗಾಗಿವೆ. ‘ಪರಿಸರದಿಂದ ನಾವು’ ಎಂಬುದನ್ನು ಮರೆತು ‘ನಮಗಾಗಿ ಪರಿಸರ’ ಎಂದು ತಿಳಿದು ಅಭಿವೃದ್ಧಿಯ ಹೆಸರಿನಲ್ಲಿ ಜೀವಜಾಲವನ್ನು ನಾಶಮಾಡುತ್ತಿದ್ದೇವೆ. ಕರ್ನಾಟಕ ರಾಜ್ಯವು ಸಮೃದ್ಧವಾದ ಅರಣ್ಯಸಂಪತ್ತನ್ನು ಹೊಂದಿದೆ. ಅರಣ್ಯಗಳು ಬೆಟ್ಟ-ಗುಡ್ಡ-ಪರ್ವತಗಳು ನಮ್ಮ ಅನೇಕ ಪ್ರಮುಖ ನದಿಗಳ ಮೂಲಗಳಾಗಿವೆ. ಉಸಿರಾಡುವ ಗಾಳಿ ಮತ್ತು ಕುಡಿಯುವ ನೀರು ವಿಷವಾದರೆ ಮನುಷ್ಯ ಬದುಕುವುದು ಹೇಗೆ? ಪರಿಸರ ಎಂಬುದು ಪ್ರಸ್ತುತ ತಲೆಮಾರಿಗೆ ಎಷ್ಟು ಮುಖ್ಯವೋ ಮುಂದಿನ ತಲೆಮಾರಿಗೂ ಅಷ್ಟೇ ಮುಖ್ಯ. ಯಾವುದನ್ನು ‘ಅಂತರ-ತಲೆಮಾರು ಆಜನ್ಮ ಹಕ್ಕು’ ಎನ್ನುತ್ತೇವೆಯೋ ಅದನ್ನು ಸುಸ್ಥಿತಿಯಲ್ಲಿಡುವುದು ಅಗತ್ಯವಾದ ಗುರಿಯಾಗಬೇಕು.

ವನ್ಯಧಾಮ, ಪಕ್ಷಿಧಾಮ, ಸಂರಕ್ಷಿತ ಅರಣ್ಯಗಳು ನಮ್ಮಲ್ಲಿವೆ. ಅರಣ್ಯಗಳ ಒತ್ತುವರಿಯಿಂದಾಗಿ, ಅಭಿವೃದ್ಧಿ ಹೆಸರಿನಲ್ಲಿ ಅರಣ್ಯನಾಶದಿಂದಾಗಿ ವನ್ಯಜೀವಿಗಳಿಗೆ ಆವಾಸಸ್ಥಾನವೇ ಇಲ್ಲದಂತಾಗಿದೆ. ಇದರ ಪರಿಣಾಮವೇ ‘ಮಾನವ-ವನ್ಯಜೀವಿ ಸಂಘರ್ಷ’. ಆರ್ಥಿಕ ಬೆಳವಣಿಗೆಗೆ ಒಂದು ಶಿಸ್ತಿನ ಅಗತ್ಯವಿದೆ. ಸುಸ್ಥಿರ ಅಭಿವೃದ್ಧಿ ಎನ್ನುತ್ತೇವೆ. ವಿಶ್ವಸಂಸ್ಥೆಯು ಸುಸ್ಥಿರ ಗುರಿಗಳ ಬಗ್ಗೆ ಮಾತನಾಡುತ್ತದೆ. ಆದರೆ ಸುಸ್ಥಿರತೆ ಮತ್ತು ಅಭಿವೃದ್ಧಿ ಎರಡೂ ಪರಸ್ಪರ ವಿರುದ್ಧ ನುಡಿಗಳಾಗಿಬಿಟ್ಟಿವೆ. ಇವುಗಳ ನಡುವೆ ಸಮತೋಲನವನ್ನು ಸಾಧಿಸಿಕೊಳ್ಳವ ನೀತಿಯನ್ನು ನಾವು ರೂಪಿಸಬೇಕಾಗಿದೆ. ಪರಿಸರ ಉಳಿದರೆ ಮಾನವ ಉಳಿಯುವುದು ಸಾಧ್ಯ. ಇಲ್ಲದಿದ್ದರೆ ಮಾನವನ ಅವನತಿ ಕಟ್ಟಿಟ್ಟ ಬುತ್ತಿ. ಭಾರತದ ಜೀವಜಾಲವಾಗಿರುವ ಪಶ್ಚಿಮ ಘಟ್ಟವು ಇಂದು ಅಪಾಯವನ್ನು ಎದುರಿಸುತ್ತಿದೆ. ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಯು ನಡೆಯಬಾರದು. ಇದರ ದೀರ್ಘಾವಧಿ ಅಪಾಯಗಳನ್ನು ನಾವು ಮನಗಂಡಿಲ್ಲ. ಪಶ್ಚಿಮ ಘಟ್ಟ ಪ್ರದೇಶವು ನಮ್ಮ ಅನೇಕ ಮುಖ್ಯ ನದಿಗಳ ಮೂಲವಾಗಿದೆ. ಇದರ ರಕ್ಷಣೆಗೆ ನಾವು ಆದ್ಯತೆ ನೀಡಬೇಕು.

ಮಹಿಳಾ ಸ್ವಾಯತ್ತತೆ

ಮಹಿಳಾ ಸಮಾನತೆ – ಲಿಂಗ ಸಮಾನತೆ ಎನ್ನುವುದು ಒಂದು ಔಪಚಾರಿಕವಾದ ಕ್ಲೀಷೆಯಾದ ಸಂಗತಿಯಾಗಿ ಬಿಟ್ಟಿದೆ. ನಮ್ಮದು ಮೂಲತಃ ಪುರುಷ ಪ್ರಧಾನ – ಗಂಡಾಳಿಕೆಯ ಸಮಾಜವಾಗಿದೆ. ಇದಕ್ಕೆ ಪುರಾವೆಗಳ ಕೊರತೆಯೇನಿಲ್ಲ. ಅಭಿವೃದ್ಧಿಯ ಯಾವುದೇ ಸೂಚಿಯನ್ನು ತೆಗೆದುಕೊಂಡರೂ ಪುರುಷರು – ಮಹಿಳೆಯರ ನಡುವೆ ತೀವ್ರ ಅಸಮಾನತೆಯಿರುವುದನ್ನು ಕಾಣಬಹುದು. ನಮ್ಮ ಸಮ್ಮೇಳನಗಳಲ್ಲಿ, ಸಮಾವೇಶಗಳಲ್ಲಿ ‘ಅವರಿಗೂ ಒಂದು ಸ್ಥಾನ’ ಎನ್ನುವಂತೆ ಮಹಿಳೆಯರ ವಿಷಯವನ್ನು ಚರ್ಚೆಗೆ ಇಟ್ಟುಕೊಳ್ಳಲಾಗುತ್ತದೆ. ಆದರೆ ಅವರ ಹಕ್ಕುಗಳನ್ನು ಸಾಂವಿಧಾನಿಕವಾದ ನೆಲೆಯಲ್ಲಿ ನಾವು ನೀಡುವುದಕ್ಕೆ ಸಿದ್ಧವಿಲ್ಲ. ಇದಕ್ಕೆ ಅಪ್ಪಟ ನಿದರ್ಶನವೆಂದರೆ, ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ. ನಮಗೆ ಸ್ವಾತಂತ್ರ್ಯ ಬಂದ 77 ವರ್ಷಗಳಾದರೂ ಮಹಿಳೆಯರಿಗೆ ಶಾಸನ ಸಭೆಗಳಲ್ಲಿ ಪ್ರಾತಿನಿಧ್ಯ ನೀತಿಯನ್ನು ಅನುಷ್ಠಾನಗೊಳಿಸುವುದು ಸಾಧ್ಯವಾಗಿಲ್ಲ. ಇದರ ಬಗ್ಗೆ ಆಶ್ವಾಸನೆಗಳಿಗೇನೂ ಬರವಿಲ್ಲ. ಲೋಕಸಭೆಯಲ್ಲಿನ ನಿರ್ಣಯಗಳಿಗೂ ಬರವಿಲ್ಲ. ಆದರೆ ವಸ್ತುಸ್ಥಿತಿಯೇನು? ಲೋಕಸಭೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ 2024ರಲ್ಲಿ ಶೇ.13.65 ರಷ್ಟಿದ್ದರೆ, ಕರ್ನಾಟಕ ವಿಧಾನ ಸಭೆಯಲ್ಲಿ ಮಹಿಳೆಯರ ಪ್ರಮಾಣ ಶೇ.5 ರಷ್ಟು ಮಾತ್ರ ಇದೆ.

‘ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಏನನ್ನೂ ಹೇಳದಿರುವುದೇ ಲೇಸು. ಇಂದು ಹೆಣ್ಣು ಮಕ್ಕಳು ಹುಟ್ಟುವುದೇ ದುರ್ಲಭವಾಗಿದೆ; ಹುಟ್ಟಿದ ಮೇಲೆ ಬದುಕುಳಿಯುವುದು, ಉಳಿದರೆ ಬೆಳೆಯುವುದು ಸಾಧ್ಯವಾಗುತ್ತಿಲ್ಲ; ಬೆಳೆದರೆ ಬದುಕನ್ನು ಸಮೃದ್ಧಗೊಳಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಕರ್ನಾಟಕದ ಚರಿತ್ರೆಯಲ್ಲಿ ಪ್ರಥಮ ಬಾರಿಗೆ ಲಿಂಗಸಮಾನತೆಯ ಬಗ್ಗೆ, ಮಹಿಳಾ ಸ್ವಾಯತ್ತತೆ ಬಗ್ಗೆ ಮಹಿಳೆಯರೇ ಮಾತನಾಡಿದ್ದು ೧೨ನೆಯ ಶತಮಾನದ ವಚನ ಚಳುವಳಿಯಲ್ಲಿ. ಅಂದು ಈ ನೆಲದಲ್ಲಿ ಬಿತ್ತನೆಯಾದ ಲಿಂಗ ಸಮಾನತೆಯ ಮೌಲ್ಯವನ್ನು ಇಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವನ್ನು ನಾವು ಮನಗಾಣಬೇಕು.

ಕರ್ನಾಟಕದ ಸಾಂಸ್ಕೃತಿಕ ನಾಯಕ

‘ಅಪ್ಪನು ನಮ್ಮ ಮಾದಾರ ಚೆನ್ನಯ್ಯ’ ಎಂದ, ‘ಇವ ನಮ್ಮವ ಇವ ನಮ್ಮವ’ ಎಂದ ಸಮಾನತೆಯ ಹರಿಕಾರ, ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ದಿಟ್ಟತನದಿಂದ ಘೋಷಿಸಿದ ಕರ್ನಾಟಕ ಸರ್ಕಾರವನ್ನು, ವಿಶೇಷವಾಗಿ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯನವರನ್ನು ತುಂಬು ಹೃದಯದಿಂದ, ಸಮಸ್ತ ಕರ್ನಾಟಕಸ್ಥರ ಪರವಾಗಿ ನಾನು ಅಭಿನಂದಿಸುತ್ತೇನೆ. ಇದರಲ್ಲಿ ರಾಜಕೀಯವನ್ನು ಕಾಣುವುದು ಸರಿಯಲ್ಲ. ಬಸವಣ್ಣನವರು ಯಾವುದೋ ಒಂದು ಸಮಾಜದ, ಯಾವುದೋ ಒಂದು ಪ್ರದೇಶದ ಪ್ರತಿನಿಧಿಯಲ್ಲ. “ಸಾಂಸ್ಕೃತಿಕ ನಾಯಕ” ಎನ್ನುವುದು ಬಸವಣ್ಣ ಪ್ರತಿಪಾದಿಸಿದ, ಮಾನವೀಯತೆ ಮತ್ತು ಸಮಾನತೆಯ ಘೋಷಣೆಯಾಗಿದೆ; ‘ಎಲ್ಲರನ್ನು ಒಳಗೊಳ್ಳುವುದು’, ‘ಸಮಾಜದ ಅಂಚಿನಲ್ಲಿದ್ದವರನ್ನು ಮುಖ್ಯವಾಹಿನಿಗೆ ಕರೆದುಕೊಳ್ಳುವುದು; ‘ಕಾಯಕ ದುಡಿಮೆ’ಯೇ ದೇವರೆಂದು ತಿಳಿಯುವುದು, ಶಿವಶರಣರ- ಶಿವಶರಣೆಯರ ಆದರ್ಶಗಳಿಗೆ ನೀಡುವ ಮನ್ನಣೆಯಾಗಿದೆ. ಎಲ್ಲಿಯವರೆಗೆ ನಾವು, ಕರ್ನಾಟಕಸ್ಥರು ತಾರತಮ್ಯರಹಿತವಾದ, ಸಮಾನತೆಯಿಂದ ಕೂಡಿದ, ಮಾದಾರ ಚೆನ್ನಯ್ಯನ ಸಂಕುಲಕ್ಕೆ ಸಮಾನ ಸ್ಥಾನಮಾನ ನೀಡುವುದಿಲ್ಲವೋ ಅಲ್ಲಿಯವರೆಗೆ ‘ಸಾಂಸ್ಕೃತಿಕ ನಾಯಕ’ ಎನ್ನುವುದು ಬರೀ ಘೋಷಣೆಯಾಗುತ್ತದೆ. ಈ ಸಮ್ಮೇಳನದ ಮೂಲಕ ನಾವು ನಮ್ಮ ಸಂವಿಧಾನವು ನೀಡಿರುವ “ಸ್ವಾತಂತ್ರ್ಯ, ಸಮಾನತೆ, ಸೌಹಾರ್ದತೆ, ಸಹೋದರತ್ವ” ಮೌಲ್ಯಗಳನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡಾಗ ಮಾತ್ರ ‘ಸಾಂಸ್ಕೃತಿಕ ನಾಯಕ’ ಎಂಬುದಕ್ಕೆ ಅರ್ಥ-ಮಹತ್ವ-ಗುರುತ್ವ ಬರುತ್ತದೆ ಎಂದು ಹೇಳಬೇಕಾಗಿಲ್ಲ. ಬಸವ ಪ್ರಣಾಳಿಕೆಯ ಮೌಲ್ಯಗಳಿಗೂ ಮತ್ತು ನಮ್ಮ ಸಂವಿಧಾನವು ಒಳಗೊಳ್ಳುವ ಮೌಲ್ಯಗಳಿಗೂ ಸಾಮ್ಯತೆಯಿದೆ. ಇದನ್ನು ನಾವು ಮರೆಯಬಾರದು. ಯಾವುದನ್ನು ರವೀಂದ್ರನಾಥ್ ಟಾಗೂರರು ‘ದುಡಿಮೆಯೇ ದೇವರು’ ಎಂದು ೨೦ನೆಯ ಶತಮಾನದಲ್ಲಿ ಹೇಳಿದ್ದರೋ ಅದನ್ನು ವಚನಕಾರರು 12ನೆ ಶತಮಾನದಲ್ಲಿಯೇ ಹೇಳಿದ್ದರು ಮತ್ತು ಅದನ್ನು ಪಾಲಿಸಿದರು. ಅಭಿವೃದ್ಧಿಯ ಮೂಲದ್ರವ್ಯವೇ ದುಡಿಮೆ-ಕಾಯಕ.

ಕನ್ನಡಿಗರ ಉದ್ಯೋಗ ಮತ್ತು ಬದುಕು

ಭಾರತದಲ್ಲಿ ಜನಸಂಖ್ಯೆಯ ಬೆಳವಣಿಗೆಯನ್ನು ತೀವ್ರಗತಿಯಲ್ಲಿ ನಿಯಂತ್ರಿಸಿರುವ ರಾಜ್ಯ ಕರ್ನಾಟಕ. ರಾಜ್ಯದಲ್ಲಿ ಜನಸಂಖ್ಯೆಯು ಸಮಸ್ಯೆಯಾಗಿ ಉಳಿದಿಲ್ಲ. ಯಾವುದನ್ನು ಫಲವತ್ತತೆಯ ದರ ಎನ್ನುತ್ತೇವೆಯೋ ಅದು ಕನಿಷ್ಟಮಟ್ಟಕ್ಕಿಳಿದಿದೆ. ಆದರೆ ಅನೇಕ ಕಾರಣಗಳಿಂದ ನಮ್ಮ ಕನ್ನಡಿಗರಿಗೆ ಉದ್ಯೋಗದ ಅವಕಾಶಗಳು ಹೆಚ್ಚು ದೊರೆಯುತ್ತಿಲ್ಲ. ನಿರುದ್ಯೋಗವು ನಮ್ಮ ಯುವಜನತೆಯ ಬದುಕನ್ನು ದುರ್ಭರಗೊಳಿಸುತ್ತಿದೆ. ಇಂದು ನಮ್ಮ ಜನಸಂಖ್ಯೆಯಲ್ಲಿ ಯುವಜನತೆಯ ಪ್ರಮಾಣ ಅಧಿಕವಾಗಿದೆ. ಈ ಬಗ್ಗೆ 1886ರ ಶ್ರೀಮತಿ ಸರೋಜಿನಿ ಮಹಿಷಿ ಸಮಿತಿ ವರದಿಯಲ್ಲಿ ಕನ್ನಡಿಗರಿಗೆ ಉದ್ಯೋಗವನ್ನು ಮೀಸಲಿಡುವ ಶಿಫಾರಸ್ಸುಗಳನ್ನು ಮಾಡಿತ್ತು. ಗ್ರೂಪ್ ‘ಸಿ’ ಮತ್ತು ‘ಡಿ’ ವರ್ಗಗಳಲ್ಲಿ ಕನ್ನಡಿಗರಿಗೆ ಶೇ. 80 ರಷ್ಟು ಉದ್ಯೋಗವನ್ನು ಮೀಸಲಿಡಬೇಕೆಂದು ಸಮಿತಿಯು ಶಿಫಾರಸ್ಸು ಮಾಡಿತ್ತು. ಸಾರ್ವಜನಿಕ ವಲಯವಲ್ಲದೆ ಖಾಸಗಿ ವಲಯದಲ್ಲಿಯೂ ಕನ್ನಡಿಗರಿಗೆ ಉದ್ಯೋಗವನ್ನು ಮೀಸಲಿಡುವ ಬಗ್ಗೆ ಅದು ಶಿಫಾರಸ್ಸು ಮಾಡಿತ್ತು. ಆದರೆ ಆ ವರದಿ ಇನ್ನೂ ಅನುಷ್ಠಾನಗೊಂಡಿಲ್ಲ.

ಇಂದು ನಮ್ಮ ರಾಜಧಾನಿ ಬೆಂಗಳೂರು ಉತ್ತರ ಭಾರತದಿಂದ ವಲಸೆ ಬರುವ ಕಾರ್ಮಿಕರಿಂದ ತುಂಬಿ ಹೋಗಿದೆ. ಇದಲ್ಲದೆ ಕೇಂದ್ರ ಸರ್ಕಾರದ ಹಿಂದಿ ಭಾಷೆಯನ್ನು ಹೇರುವ ನೀತಿಯಿಂದಾಗಿ ಬ್ಯಾಂಕುಗಳಲ್ಲಿ ಮತ್ತು ಅಂಚೆ ಕಚೇರಿಗಳಲ್ಲಿ ಹಿಂದಿ ಭಾಷಿಕರು ತುಂಬಿ ಹೋಗಿದ್ದಾರೆ. ಕೇಂದ್ರ ಸರ್ಕಾರವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿಂದಿಗೆ ಪ್ರಾಶಸ್ಕೃವನ್ನು ನೀಡುತ್ತಾ ಕನ್ನಡವನ್ನು ನಿರ್ಲಕ್ಷ್ಯ ಮಾಡುತ್ತಿದೆ. ಇದರಿಂದ ಕನ್ನಡಿಗರಿಗೆ ಉದ್ಯೋಗದ ಅವಕಾಶಗಳು ಇಲ್ಲವಾಗುತ್ತಿವೆ. ಆದ್ದರಿಂದ ಸರ್ಕಾರವು ಸರೋಜಿನಿ ಮಹಿಷಿ ಸಮಿತಿ ವರದಿಯನ್ನು ಕೂಡಲೇ ಅನುಷ್ಠಾನಗೊಳಿಸಬೇಕು. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಿಡುವುದು ಸಂವಿಧಾನ ಅಥವಾ ಒಕ್ಕೂಟ ತತ್ವಕ್ಕೆ ವಿರೋಧಿ ಕ್ರಮವೇನಲ್ಲ. ಖಾಸಗಿ ವಲಯದ ಉದ್ದಿಮೆಗಳು ಕರ್ನಾಟಕದ ಭೂಮಿ, ನೀರು, ಗಾಳಿ, ವಿದ್ಯುತ್ ಬಳಸಿಕೊಂಡು ಸಮೃದ್ಧವಾಗಿ ಬೆಳೆಯುತ್ತಿವೆ ಅಪಾರ ಲಾಭ ಗಳಿಸುತ್ತಿವೆ. ಅವುಗಳ ಹಿತದ ದೃಷ್ಟಿಯಿಂದಲೂ ಖಾಸಗಿ ವಲಯದಲ್ಲಿ ಅನಿವಾರ್ಯವೆನಿಸಿದ ವಿಶೇಷ ಉನ್ನತ ಹುದ್ದೆಗಳನ್ನು ಹೊರತುಪಡಿಸಿ ಉಳಿದಂತೆ ಕನ್ನಡಿಗರಿಗೆ ಉದ್ಯೋಗವನ್ನು ಮೀಸಲಿಡುವ ಬಗ್ಗೆ ಸರ್ಕಾರ ಹಿಂಜರಿಯಕೂಡದು ಎಂದು ನಾನು ಕನ್ನಡಿಗರ ಪರವಾಗಿ ಒತ್ತಾಯಿಸುತ್ತೇನೆ. ಇಲ್ಲದಿದ್ದರೆ ನಮ್ಮ ಯುವಜನತೆಯು ಬಂಡೇಳುವ ಸಾಧ್ಯತೆಯಿದೆ. ಕನ್ನಡದ ಯುವಜನ ನಮ್ಮ ರಾಜ್ಯದಲ್ಲಲ್ಲದೆ ಬೇರೆಲ್ಲಿ ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸುವುದು ಸಾಧ್ಯ?

ಗಡಿನಾಡು ಸಮಸ್ಯೆಗೆ ಪರಿಹಾರ

ಭಾರತ 1947ರಲ್ಲಿ ಸ್ವಾತಂತ್ರ್ಯ ಗಳಿಸಿದ ನಂತರ, ಬ್ರಿಟಿಷರು ಬಿಟ್ಟುಹೋದ ದೇಶದಲ್ಲಿ ಜರುಗಿದ ಪ್ರಮುಖ, ಅಸಾಮಾನ್ಯ ಬೆಳವಣಿಗೆ ಎಂದರೆ, ಡಾ. ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿದ ಭಾರತ ಸಂವಿಧಾನದ ಅಂಗೀಕಾರ ಮತ್ತು ಅದರ ಆಧಾರದ ಮೇಲೆ ಬಹುರೂಪಿ, ಬಹುಭಾಷಾ ಭಾರತವನ್ನು ರಾಜಕೀಯವಾಗಿ, ಸಾಮಾಜಿಕವಾಗಿ ಒಂದು ಒಕ್ಕೂಟ ದೇಶವಾಗಿ ಪ್ರಜೆಗಳಿಂದ ಸ್ವೀಕಾರ ಬ್ರಿಟಿಷರ ಆಡಳಿತದಲ್ಲಿ ವಿಪರೀತವಾಗಿ ಹರಿದು ಹಂಚಿ ಹೋಗಿದ್ದ ಭಾರತದಲ್ಲಿ ಭೌಗೋಳಿಕ, ಭಾಷಿಕ, ಸಾಂಸ್ಕೃತಿಕ ಅಸ್ಮಿತೆಗಳಿಗೆ ತಕ್ಕಂತೆ ವಿಭಿನ್ನ ರಾಜ್ಯಗಳನ್ನು ರೂಪಿಸುವುದು ಮುಂದಿನ ಅಗತ್ಯವಾಗಿತ್ತು. ಭಾಷಾವಾರು ಪ್ರಾಂತ್ಯಗಳ ರಚನೆಯ ಪರಿಕಲ್ಪನೆಯಂತೆ, 1956 ರ ನವೆಂಬ‌ರ್ 1 ರಂದು ಶ್ರೀ ಸಿದ್ದವನಹಳ್ಳಿ ನಿಜಲಿಂಗಪ್ಪನವರ ನಾಯಕತ್ವದಲ್ಲಿ ಏಕೀಕೃತ “ವಿಶಾಲ ಮೈಸೂರು” ರಾಜ್ಯವು ಅಸ್ತಿತ್ವಕ್ಕೆ ಬಂದಿತು. ಮುಂದೆ ಜನರ ಅಪೇಕ್ಷೆಯಂತೆ ನವೆಂಬರ್ 1, 1973 ರಂದು ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ದೇವರಾಜ ಅರಸು ಅವರು “ಕರ್ನಾಟಕ” ಎಂದು ನಾಮಕರಣ ಮಾಡಿದರು.

ಕರ್ನಾಟಕದ ಏಕೀಕರಣವಾಗಿ ಅರವತ್ತೆಂಟು ವರ್ಷಗಳ ನಂತರವೂ ನೆರೆಹೊರೆಯ ರಾಜ್ಯಗಳ ಜತೆ ಗಡಿವಿವಾದ ಮುಂದುವರೆದಿದೆ; ಮತ್ತು ಆ ಭೌಗೋಳಿಕ ರೂಪದ ಭಾಷಿಕ- ಸಾಂಸ್ಕೃತಿಕ ನೋವು ಮುಂದುವರೆಯಲಿದೆ. ಇಂದೂ ಮುಂದೂ ಕನ್ನಡನಾಡಿನ ಪ್ರಜೆಗಳಾಗಿ ಇರಬೇಕಾದ ಕನ್ನಡ ಮಕ್ಕಳು ಗಡಿ ಗೊಂದಲದಲ್ಲಿ ಸಿಕ್ಕಿಕೊಳ್ಳುವಂತಾಗಬಾರದು. ಈ ಹಿನ್ನೆಲೆಯಲ್ಲಿ, ಗಡಿನಾಡು ಪ್ರದೇಶಗಳಲ್ಲಿರುವ ಕನ್ನಡಿಗರು ತಮ್ಮ ಮಕ್ಕಳನ್ನು ಕನ್ನಡದ ವಾತಾವರಣದಲ್ಲಿಯೇ ಬೆಳೆಸುವ ಬಗ್ಗೆ, ಅವರಲ್ಲಿ ಕನ್ನಡತನ, ಕನ್ನಡ ಪ್ರಜ್ಞೆಗಳನ್ನು ಮೂಡಿಸುವ ಬಗ್ಗೆ ತಾತ್ವಿಕ ನಿರ್ಧಾರವನ್ನು ಕೈಗೊಳ್ಳಬೇಕು. ಕನ್ನಡದ ಕುಟುಂಬಗಳ ಮಕ್ಕಳ ಶಿಕ್ಷಣದ ಭಾಷೆ ಎಲ್ಲಿ ಯಾವುದಾದರೂ ಆಗಿರಲಿ ಬೆಳವಣಿಗೆಯ ಭಾಷೆ ಕನ್ನಡವೇ ಆಗಿರಬೇಕು. ನೆರೆರಾಜ್ಯಗಳ ಗಡಿ ಪ್ರದೇಶಗಳಲ್ಲಿ ಕನ್ನಡದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಗದಿಯಾಗಿ ನಡೆಸುತ್ತ ಅವರೆಲ್ಲರಿಗೆ ಭಾವನಾತ್ಮಕ ಒತ್ತಾಸೆ ನೀಡುವುದು, ನಾವು ಎಲ್ಲಿದ್ದರೂ ಒಂದೇ ಎಂಬ ಭಾವನೆ ಮೂಡಿಸುವುದು ಕರ್ನಾಟಕ ಸರ್ಕಾರದ ಕರ್ತವ್ಯ.

ಪುಸ್ತಕ ಸಂಸ್ಕೃತಿ ಬೆಳೆಸಬೇಕು

ಗ್ರಂಥಾಲಯಗಳು ಜ್ಞಾನದ ಭಂಡಾರಗಳು, ಪುಸ್ತಕ ಸಂಸ್ಕೃತಿಯ ಬೆಳವಣಿಗೆಗೆ ಸರ್ಕಾರ ಪ್ರೋತ್ಸಾಹಿಸಬೇಕು. ಗ್ರಂಥಾಲಯ ತೆರಿಗೆ ಮೂಲಕ ಸರ್ಕಾರಕ್ಕೆ ಅಪಾರ ಹಣ ಬರುತ್ತದೆ. ಆದರೆ ಅದನ್ನು ಗ್ರಂಥಾಲಯದ ಬೆಳವಣಿಗೆಗೆ ಪೂರ್ಣವಾಗಿ ಬಳಸುತ್ತಿಲ್ಲ. ಇದರಿಂದ ಪುಸ್ತಕ ಪ್ರಕಟಣೆ, ಪುಸ್ತಕ ವ್ಯಾಪಾರ ಸಂಕಷ್ಟಕ್ಕೆ ಒಳಗಾಗಿದೆ. ‘ಸಗಟು’ ಖರೀದಿ ವ್ಯವಸ್ಥೆ ಕ್ರಮವಾಗಿ ನಡೆಯುತ್ತಿಲ್ಲ. ವಾರ್ಷಿಕ ಖರೀದಿಯಲ್ಲಿ ಎರಡು-ಮೂರು ವರ್ಷ ವಿಳಂಬವಾಗುತ್ತಿದೆ. ನಮ್ಮ ಗ್ರಾಮೀಣ ಪ್ರದೇಶದಲ್ಲಿ ಗ್ರಂಥಾಲಯಗಳು ಕಟ್ಟಡದ ಕೊರತೆ, ಅನುದಿನದ ವಾರ್ತಾ ಪತ್ರಿಕೆಗಳ ಮತ್ತು ವಾರ್ಷಿಕವಾಗಿ ಪುಸ್ತಕಗಳ ಸಂಗ್ರಹ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿವೆ. ಇದರ ಬಗ್ಗೆ ಸರ್ಕಾರ ಸೂಕ್ತ ಗಮನ ನೀಡಬೇಕು. ಕರ್ನಾಟಕ ಸರ್ಕಾರದ ವಾರ್ಷಿಕ ಬಜೆಟ್ ಗಾತ್ರ ಮೂರು ಲಕ್ಷ ಕೋಟಿ ಮೀರುತ್ತಿದೆ. ಇದರಲ್ಲಿ ಕನಿಷ್ಟ ಶೇ.0.5 ರಷ್ಟನ್ನಾದರೂ ಪುಸ್ತಕಗಳ ಖರೀದಿ ಮತ್ತು ಗ್ರಂಥಾಲಯಗಳ ಅಭಿವೃದ್ಧಿಗೆ ಮೀಸಲಿಡಬೇಕು.

ಅಭಿವೃದ್ಧಿ ಎನ್ನುವುದು ಕೇವಲ ಎಕ್ಸ್‌ಪ್ರೆಸ್ ಹೆದ್ದಾರಿಗಳು, ಗಗನಚುಂಬಿ ಕಟ್ಟಡಗಳು, ನೀರಾವರಿ ಅಣೆಕಟ್ಟೆಗಳು, ವಿದ್ಯುತ್ ಸ್ಥಾವರಗಳು ಮಾತ್ರವಲ್ಲ. ಅಭಿವೃದ್ಧಿಗೆ ಇವೆಲ್ಲವೂ ಅವಶ್ಯಕ. ಆದರೆ ಇವುಗಳ ಜೊತೆಯಲ್ಲಿ ಪುಸ್ತಕ ಸಂಸ್ಕೃತಿ ಮೂಲಕ ಜನಸಮುದಾಯದ ಜ್ಞಾನದ ದಾಹವನ್ನು ಹಿಂಗಿಸುವುದೂ ಅಷ್ಟೇ ಮಹತ್ವದ ಅಗತ್ಯವಾಗಿದೆ. ಸರ್ಕಾರವು ಪುಸ್ತಕ ನೀತಿಯನ್ನು ರೂಪಿಸಬೇಕು. ಪುಸ್ತಕಗಳ ಸಗಟು ಖರೀದಿಯನ್ನು ವಾರ್ಷಿಕವಾಗಿ ತಪ್ಪದೆ ನಡೆಸಬೇಕು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಂಥಾಲಯ ಮತ್ತು ವಾಚನಾಲಯಗಳ ಸೌಲಭ್ಯ ವಿಸ್ತರಣೆಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಇದರಿಂದ ನಮ್ಮ ಗ್ರಾಮೀಣ ಪ್ರದೇಶದಲ್ಲಿ ಯುವಜನರ ರಾಜಕೀಯ-ಸಾಮಾಜಿಕ ಪ್ರಜ್ಞಾವಿಕಾಸಕ್ಕೆ ನೆರವಾಗುತ್ತದೆ ಎಂದರು.

ಪ್ರವಾಸೋದ್ಯಮದ ಬೆಳವಣಿಗೆ

ಇಂದು ವಿಶ್ವದಾದ್ಯಂತ ಪ್ರವಾಸೋದ್ಯಮವು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಅನೇಕ ದೇಶಗಳಲ್ಲಿ ಪ್ರವಾಸೋದ್ಯಮವು ಅಲ್ಲಿನ ಸರ್ಕಾರಗಳ ವರಮಾನದ ಮೂಲವಾಗಿದೆ. ಕರ್ನಾಟಕವು ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ರಾಜ್ಯವಾಗಿದೆ. ವಿದೇಶಿ ಪ್ರವಾಸಿಗರ ಜೊತೆಗೆ ಆಂತರಿಕವಾಗಿ ನಮ್ಮ ದೇಶದ ಜನರಿಗೆ ವೀಕ್ಷಿಸಲು ಅನುಕೂಲವಾಗುವಂತೆ ಪ್ರವಾಸಿ ಕೇಂದ್ರಗಳನ್ನು ಬೆಳೆಸಬೇಕು. ಹಾಗೆಯೇ ನಮ್ಮ ಶಾಲಾ-ಕಾಲೇಜು ಮಕ್ಕಳಿಗೆ ನಮ್ಮ ಇತಿಹಾಸ, ಪ್ರಕೃತಿ, ಕರಾವಳಿ, ವನ್ಯಜೀವಿಧಾಮ ಮುಂತಾದವುಗಳ ಪರಿಚಯವಾಗುವಂತೆ ನಿಯತಕಾಲಿಕವಾಗಿ ಪ್ರವಾಸಗಳನ್ನು ಏರ್ಪಡಿಸುವಂತೆ ಒಂದು ಕ್ರಮಬದ್ಧ ಯೋಜನೆಯನ್ನು ರೂಪಿಸಬೇಕು.

ಕನ್ನಡ ಶಾಸ್ತ್ರೀಯ ಭಾಷೆ

ಬಹುದಿನಗಳ ಹೋರಾಟದ ಫಲವಾಗಿ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಮನ್ನಣೆ ೨೦೦೮ರಲ್ಲಿ ದೊರೆಯಿತು. ಕನ್ನಡ ಶಾಸ್ತ್ರೀಯ ಭಾಷಾ ಕೇಂದ್ರವನ್ನು 2011ರಲ್ಲಿ ತಾತ್ಕಾಲಿಕವಾಗಿ ಮೈಸೂರಿನಲ್ಲಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥಾನದಲ್ಲಿ ತೆರೆಯಲಾಯಿತು. ಈಗ ಅದು ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ತಮಿಳು ಶಾಸ್ತ್ರೀಯ ಭಾಷಾ ಕೇಂದ್ರವು ಅಲ್ಲಿನ ಭಾಷೆ ಮತ್ತು ಸಾಹಿತ್ಯಗಳಿಗೆ ಸಂಬಂಧಿಸಿದಂತೆ ಏನೆಲ್ಲ ಕೆಲಸ ಮಾಡಿದೆಯೋ ಆ ರೀತಿಯಲ್ಲಿ ನಮ್ಮ ಕನ್ನಡ ಶಾಸ್ತ್ರೀಯ ಭಾಷಾ ಕೇಂದ್ರಕ್ಕೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅದನ್ನು ಒಂದು ಸ್ವಾಯತ್ತ ಕೇಂದ್ರವನ್ನಾಗಿ ಮಾಡಿ ಶಾಸ್ತ್ರೀಯ ಭಾಷೆಗಳಿಗೆ ಒಕ್ಕೂಟ ಸರ್ಕಾರವು ನೀಡುವ ಎಲ್ಲ ಸವಲತ್ತು, ಅನುದಾನ, ನೆರವುಗಳನ್ನು ಕೇಂದ್ರವು ಒದಗಿಸುವಲ್ಲಿ ಅಥವಾ ಅಂತಹ ನೆರವನ್ನು ಪಡೆದುಕೊಳ್ಳುವಲ್ಲಿ ನಾವು ಯಶಸ್ವಿಯಾಗಿಲ್ಲ. ಅದೊಂದು ಉನ್ನತ ಕನ್ನಡ ಅಧ್ಯಯನ ಕೇಂದ್ರವಾಗಿ ಬೆಳೆಯುತ್ತಿಲ್ಲ. ಶಾಸ್ತ್ರೀಯ ಭಾಷೆಗಳಿಗೆ ಒಕ್ಕೂಟ ಸರ್ಕಾರ ನೀಡುತ್ತಿರುವ ಪ್ರಶಸ್ತಿಗಳನ್ನು ಸ್ಥಾಪಿಸುವ ಮತ್ತು ಅದನ್ನು ಕನ್ನಡದ ವಿದ್ವಾಂಸರಿಗೆ ನೀಡುವ ಕ್ರಮ ಸರಿಯಾಗಿ ನಡೆಯುತ್ತಿಲ್ಲ. ಉದಾ: ತಮಿಳು ಸಂಶೋಧನೆಗೆ ದೊಡ್ಡ ಮೊತ್ತದ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ. ಶಾಸ್ತ್ರೀಯ ತಮಿಳು ಅಧ್ಯಯನ ಕೇಂದ್ರವು ಚೆನ್ನೈನಲ್ಲಿ 17 ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದೆ. ಅದು ಅನೇಕ ವಿಶ್ವ ಶಾಸ್ತ್ರೀಯ ತಮಿಳು ಭಾಷಾ ಸಮ್ಮೇಳನಗಳನ್ನು, ಕಾರ್ಯಾಗಾರಗಳನ್ನು ಸಂಘಟಿಸುತ್ತಿದೆ. ಇದೇ ರೀತಿಯಲ್ಲಿ ಕನ್ನಡ ಶಾಸ್ತ್ರೀಯ ಭಾಷಾ ಉನ್ನತ ಅಧ್ಯಯನ ಕೇಂದ್ರವನ್ನು ಬೆಳೆಸುವಲ್ಲಿ ಸರ್ಕಾರ ಮತ್ತು ಕನ್ನಡ ವಿದ್ವಾಂಸರು ಗಮನ ನೀಡಬೇಕು ಎಂದು ಮನವಿ ಮಾಡಿದರು.

ಕನ್ನಡಿಗರ ಪರವಾಗಿ ರಾಜ್ಯ ಸರ್ಕಾರಕ್ಕೆ ಅಧ್ಯಕ್ಷರ ಪ್ರಮುಖ ಹಕ್ಕೊತ್ತಾಯಗಳು

1. ಪ್ರಾಥಮಿಕ ಒಂದನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೆ ಬೋಧನೆಯಲ್ಲಿ ಕನ್ನಡ ಮಾಧ್ಯಮವೇ ಕಡ್ಡಾಯವಾಗಬೇಕು. ಯಾವ ಕಾರಣದಿಂದಲೂ ಬೇರಾವ ಭಾಷೆಯನ್ನು ಶಿಕ್ಷಣ ಮಾಧ್ಯಮವನ್ನಾಗಿ ಹೇರಕೂಡದು. ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಸರ್ಕಾರ ತೆರೆಯುವುದನ್ನಾಗಲಿ, ಖಾಸಗಿ ಶಾಲೆಗಳಿಗೆ ಅನುಮತಿ ಕೊಡುವುದನ್ನಾಗಲೀ ಕೂಡಲೇ ನಿಲ್ಲಿಸಬೇಕು.

2. ಅಗತ್ಯವೆನಿಸಿರುವ ಇಂಗ್ಲಿಷ್ ಕಲಿಕೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿ, ಬೋಧನೆಗೆ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಬೇಕು ಮತ್ತು ಗ್ರಾಮೀಣ ಭಾಗದ ಕನ್ನಡ ಶಾಲೆಗಳನ್ನು, ಎಲ್ಲ ಸೌಲಭ್ಯಗಳಿಂದ ಪೂರ್ಣವಾಗಿ ಸಜ್ಜುಗೊಳಿಸಬೇಕು. ರಾಜ್ಯದ ಆಯವ್ಯಯದಲ್ಲಿ ಕನಿಷ್ಟ ಶೇ.೧೫ರಷ್ಟು ಭಾಗ ಶಿಕ್ಷಣಕ್ಕೆ ಮೀಸಲಿರಬೇಕು.

3. ಕಳೆದ ಅನೇಕ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಸರೋಜಿನಿ ಮಹಿಷಿ ವರದಿಯನ್ನು ಕೂಡಲೇ ಶಾಸನಬದ್ಧಗೊಳಿಸಿ ಅನುಷ್ಠಾನಗೊಳಿಸಬೇಕು. ಅನುಷ್ಠಾನದ ಮೇಲ್ವಿಚಾರಣೆಯ ಹೊಣೆಗಾರಿಕೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸಬೇಕು. ಸಾರ್ವಜನಿಕವಿರಲಿ, ಖಾಸಗಿಯಿರಲಿ ಉದ್ಯೋಗಾವಕಾಶಗಳಲ್ಲಿ ವಿಶೇಷ ಅರ್ಹತೆಯ ಉನ್ನತ ಹುದ್ದೆಗಳ ಹೊರತಾಗಿ ಸಿ ಮತ್ತು ಡಿ ವರ್ಗದ ಹುದ್ದೆಗಳನ್ನು ಪೂರ್ಣವಾಗಿ ಕನ್ನಡಿಗರಿಗೇ ಮೀಸಲಿಡಬೇಕು. ಕಾಲ-ಕಾಲಕ್ಕೆ ಉದ್ಯೋಗ ಮಾಹಿತಿ ದೊರೆಯುವಂತಾಗಬೇಕು.

4.ನಾಡಿನ ವಿಶೇಷ ವ್ಯವಸ್ಥೆಗಳಾದ ಕನ್ನಡ ವಿಶ್ವವಿದ್ಯಾಲಯ ಮತ್ತು ಜಾನಪದ ವಿಶ್ವವಿದ್ಯಾಲಯಗಳು ಅನುಭವಿಸುತ್ತಿರುವ ಹಣಕಾಸು ಮತ್ತು ಭೋದನಾ ಸಿಬ್ಬಂದಿ ಕೊರತೆಯನ್ನು ನಿವಾರಿಸಲು ಕೂಡಲೇ ಕ್ರಮಕೈಗೊಳ್ಳಬೇಕು.

5. ಕನ್ನಡ ಶಾಸ್ತ್ರೀಯ ಭಾಷಾ ಕೇಂದ್ರವನ್ನು ಸ್ವತಂತ್ರ ಸ್ವಾಯತ್ತ ಕೇಂದ್ರವನ್ನಾಗಿ ಬೆಳೆಸಲು ಮತ್ತು ಕೇಂದ್ರದ ನೆರವನ್ನು ಪಡೆಯಲು ಅಗತ್ಯ ವ್ಯವಸ್ಥೆಮಾಡಬೇಕು.

6. ಅಪಾರ ಸಂಭಾವ್ಯ ಸಾಮರ್ಥ್ಯವಿರುವ ಪ್ರವಾಸೋದ್ಯಮವನ್ನು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ದೃಷ್ಟಿಯಿಂದಷ್ಟೇ ಅಲ್ಲದೆ ಆದಾಯ ಮತ್ತು ಉದ್ಯೋಗಾವಕಾಶ ದೃಷ್ಟಿಯಿಂದಲೂ ಅದನ್ನು ವಿಸ್ತರಣೆಯ ವಲಯವನ್ನಾಗಿ ಅಭಿವೃದ್ಧಿಗೊಳಿಸಬೇಕು.

7. ಕೈಗಾರಿಕೋದ್ಯಮಗಳ ಸ್ಥಾಪನೆ ಎಲ್ಲ ಜಿಲ್ಲೆಗಳಿಗೂ ಹಂಚಿಕೆಯಾಗಬೇಕು. ಯಾವುದೇ ಉದ್ಯಮವಿರಲಿ, ಅಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶದ ಕಟ್ಟುನಿಟ್ಟಿನ ಷರತ್ತು ವಿಧಿಸಿ, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.

8. ಸರ್ಕಾರದ ಸಚಿವಾಲಯ ಕಛೇರಿಗಳ ಹೊರತಾಗಿ, ಉಳಿದ ಇಲಾಖೆಗಳ ನಿರ್ದೇಶನಾಲಯ ಕಛೇರಿಗಳನ್ನು ಬೇರೆ ಬೇರೆ ಜಿಲ್ಲಾ ಕೇಂದ್ರಗಳಿಗೆ ವರ್ಗಾಯಿಸಿ ಬೆಂಗಳೂರಿನ ಒತ್ತಡವನ್ನು ತಪ್ಪಿಸಬೇಕು.

9. ಶಿಕ್ಷಣ ಮಾಧ್ಯಮ ಅಂತಾರಾಜ್ಯ ಗಡಿ, ಜಲ ಮತ್ತು ವಲಸೆ ಸಮಸ್ಯೆಗಳನ್ನು ಪರಿಹರಿಸಲು ಒಂದು ರಾಷ್ಟ್ರೀಯ ನೀತಿಯನ್ನು ರೂಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು.

10. ಪ್ರಾದೇಶಿಕ ಅಸಮಾನತೆಯನ್ನು ಸರಿಪಡಿಸುವ ದಿಸೆಯಲ್ಲಿ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಭಾಗದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಕಾಲಬದ್ಧ ಕ್ರಮಕೈಗೊಳ್ಳಬೇಕು.

11. ಬಸವಣ್ಣನವರನ್ನು ರಾಜ್ಯದ ‘ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿರುವ ಮತ್ತು ಬಸವ ಕಲ್ಯಾಣದಲ್ಲಿ ನೂತನ ಅನುಭವ ಮಂಟಪವನ್ನು ನಿರ್ಮಿಸುತ್ತಿರುವ ರಾಜ್ಯ ಸರ್ಕಾರ, ಹನ್ನೆರಡನೆಯ ಶತಮಾನದ ಶರಣರ ಕ್ಷೇತ್ರಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾರ್ಯಕ್ಕಾಗಿ ಒಂದು ಸ್ವಾಯತ್ತ ಪ್ರಾಧಿಕಾರ ರಚಿಸಬೇಕು. ಈಗಾಗಲೇ ಆಶ್ವಾಸನೆ ನೀಡಿರುವಂತೆ ಮುಂದಿನ ಶೈಕ್ಷಣಿಕ ವರ್ಷದಿಂದ ವಚನ ವಿಶ್ವವಿದ್ಯಾಲಯವನ್ನು ಆರಂಭಿಸಬೇಕು.

12. ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಕೈಗಾರಿಕೆಗಳು, ಕಛೇರಿಗಳು, ಅಂಗಡಿ ಮುಂಗಟ್ಟುಗಳ ನಾಮಫಲಕಗಳು ಕನ್ನಡದಲ್ಲಿರುವುದು ಕಡ್ಡಾಯವಾಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.

13. ಪರಿಸರದ, ವಿಶೇಷವಾಗಿ, ಪಶ್ಚಿಮಘಟ್ಟಗಳ ರಕ್ಷಣೆಗೆ ಕಟ್ಟುನಿಟ್ಟಾದ ಕ್ರಮಕೈಗೊಳ್ಳಬೇಕು. ಅಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು.

14. ಜ್ಞಾನಪ್ರಸಾರದ ಕೇಂದ್ರದಂತಿರುವ ಗ್ರಂಥಾಲಯ ಪೋಷಣೆಯ ಬಗೆಗೆ ಪೂರ್ಣ ಗಮನಕೊಡಬೇಕು. ಗ್ರಂಥಗಳ ಸಗಟು ಕೊಳ್ಳಿಕೆ ಪ್ರತಿವರ್ಷ ತಪ್ಪದೇ ನಡೆಯಬೇಕು. ಗ್ರಂಥಾಲಯ ತೆರಿಗೆಯಿಂದ ಸಂಗ್ರಹವಾದ ಹಣವನ್ನು ಗ್ರಂಥಾಲಯಗಳ ಅಭಿವೃದ್ಧಿಗೇ ಬಳಸಬೇಕು.

15. ಹಿರಿಯ ಸಾಹಿತಿಗಳ ಸಮಗ್ರ ಸಾಹಿತ್ಯ ಪ್ರಕಟಣೆ ಒಂದು ಒಳ್ಳೆಯ ಯೋಜನೆಯಾಗಿದ್ದು, ಅದನ್ನು ಮುಂದುವರೆಸಿಕೊಂಡು ಹೋಗಬೇಕು.

16. ಆಡಳಿತದಲ್ಲಿ ಕನ್ನಡ ಬಳಕೆಯ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಮುಖ್ಯವಾಗಿ ಕನ್ನಡ ಲಿಪಿಯನ್ನು ಆಧುನಿಕ ತಂತ್ರ ವಿಧಾನಗಳಿಗೆ ಹೊಂದಿಸುವ ಕೆಲಸ ತ್ವರಿತವಾಗಿ ನಡೆಯಬೇಕು. ಯಾಂತ್ರಿಕ ಬುದ್ಧಿಮತ್ತೆ ತಂತ್ರದ ಬಳಕೆ ಹೆಚ್ಚಾಗಬೇಕು.

17. ಸಾಹಿತ್ಯ-ಸಂಸ್ಕೃತಿ ಸಂಬಂಧದ ಸಂಘ-ಸಂಸ್ಥೆಗಳಿಗೆ ಉದಾರ ಧನ ಸಹಾಯ ದೊರಕಿಸಬೇಕು.

18. ಯಾವುದೇ ಕಾರಣಕ್ಕೆ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆಗೆ ಅವಕಾಶ ಕೊಡಬಾರದು.

19. ಕನ್ನಡದ ಕೃತಿಗಳನ್ನು ಅನ್ಯಭಾಷೆಗೆ ಅನುವಾದಿಸಿ ಪ್ರಕಟಿಸುವ ಕೆಲಸ ದೊಡ್ಡ ಪ್ರಮಾಣದಲ್ಲಿ ನಡೆಯಬೇಕು. ಇದಕ್ಕಾಗಿ ಭಾಷಾ ಪ್ರಾಧಿಕಾರಕ್ಕೆ ಅಗತ್ಯ ನೆರವು ಒದಗಿಸಬೇಕು.

20. ಕನ್ನಡ ಸಾಹಿತ್ಯ ಪರಿಷತ್ತು ಒಂದು ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಅದು ನಡೆಸುವ ಇಂತಹ ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ವಿಳಂಬ ಮಾಡದೆ ಅದನ್ನು ಅನುಷ್ಠಾನಗೊಳಿಸಬೇಕು.

21. ಕನ್ನಡ ಸಾಹಿತ್ಯ ಪರಿಷತ್ತು ಶಾಲಾ ಶಿಕ್ಷಕರಿಗೆ ಸಾಹಿತ್ಯ-ಸಂಸ್ಕೃತಿಗಳ ಬಗೆಗೆ ನಿಯತಕಾಲಿಕ ಶಿಬಿರಗಳನ್ನು ನಡೆಸಿ, ಅವರಲ್ಲಿ ಸಾಹಿತ್ಯದ ಅಧ್ಯಯನಾಸಕ್ತಿ ಬೆಳೆಸಬೇಕು.

ಈ ಸುದ್ದಿಯನ್ನೂ ಓದಿ | Kannada sahitya sammelana: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿಎಂ ಚಾಲನೆ; ಅಕ್ಷರ ಜಾತ್ರೆಗೆ ಹರಿದುಬಂದ ಜನಸಾಗರ