Sunday, 22nd December 2024

Viral News: ಬ್ಲೈಂಡ್‌ ಡೇಟ್‌ ಹೋಗೋ ಮುನ್ನ ಎಚ್ಚರ…ಎಚ್ಚರ..! ಫಿಲ್ಮಿ ಸ್ಟೈಲ್‌ನಲ್ಲಿ ಧೋಖಾ; ಈಕೆ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

Viral News

ಚೀನಾ : ಚೀನಾದಲ್ಲಿ ವಿವಾಹಿತ ಮಹಿಳೆಯೊಬ್ಬಳು ತನ್ನ ಫೇಕ್ ಡೇಟಿಂಗ್‍ ಮೂಲಕ ವ್ಯಕ್ತಿಯೊಬ್ಬನನ್ನು ವಂಚಿಸಲು ಮಾಸ್ಟರ್ ಪ್ಲ್ಯಾನ್‍ ಮಾಡಿದ್ದಾಳೆ. ಆಕೆಯ ಮಾತನ್ನು ನಂಬಿ ಅಮಾಯಕ ಯುವಕನೋರ್ವ ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (ಎಸ್ಸಿಎಂಪಿ) ಪ್ರಕಾರ, ಅವಳು ತನ್ನ ಕುಟುಂಬ ಸದಸ್ಯರಂತೆ ಮಾತ್ರವಲ್ಲದೇ ಸ್ವತಃ ತನ್ನಂತೆ ನಟಿಸಲು ನಟರನ್ನು ನೇಮಿಸಿಕೊಳ್ಳುವ ಮೂಲಕ ಯುವಕನಿಂದ ದೊಡ್ಡ ಮೊತ್ತದ ಹಣವನ್ನು ಪೀಕಲು ಸಂಚು ರೂಪಿಸಿದಂತಹ ಸಂಗತಿ ಬಯಲಾಗಿದೆ. ಇದೀಗ ಈ ಸುದ್ದಿ ಎಲ್ಲೆಡೆ ವೈರಲ್‌(Viral News) ಆಗಿದೆ.

ವೆಡ್ಡಿಂಗ್ ಪ್ಲ್ಯಾನಿಂಗ್ ಜಾಹೀರಾತಿನಲ್ಲಿ ಕ್ಸಿನ್‍ ಅವರ ವಿವರಗಳನ್ನು ತಿಳಿದುಕೊಂಡ ಕ್ಸಿಯೋಯು ಆನ್ಲೈನ್ ಮೂಲಕ ಮಾತುಕತೆ ನಡೆಸಿ ಕೇವಲ ಒಂದು ತಿಂಗಳ ನಂತರ, ಕ್ಸಿಯೋಯು ಕ್ಸಿನ್ ಮೇಲಿನ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾಳೆ ಮತ್ತು ಅವರ ಮದುವೆಗಾಗಿ ತಯಾರಿ ಮಾಡಲು ಕ್ಸಿನ್ ಮನವೊಲಿಸಿದ್ದಾಳೆ. ಸ್ಥಳೀಯ ಸಂಪ್ರದಾಯದ ಪ್ರಕಾರ ವಧುವಿನ ಬೆಲೆ 188,000 ಯುವಾನ್ (ಅಂದಾಜು 22.1 ಲಕ್ಷ ರೂ.) ಎಂದು ಆಕೆಯ ಕುಟುಂಬದವರು ಕ್ಸಿನ್‍ ಅವರಿಗೆ  ಬೇಡಿಕೆ ಇಟ್ಟಿದ್ದಾರೆ.

ಹಾಗಾಗಿ ಕಳೆದ ವರ್ಷ ಜನವರಿಯಲ್ಲಿ ಕ್ಸಿನ್ ಆಕೆಯ ಕುಟುಂಬವನ್ನು ಭೇಟಿಯಾಗಲು ಬಂದು ಅವರಿಗೆ 10,000 ಯುವಾನ್ (1.15 ಲಕ್ಷ ರೂ.) ಮೌಲ್ಯದ ಉಡುಗೊರೆಗಳನ್ನು ನೀಡಿದ್ದಾರೆ. ಆದರೆ ಆ ಸಮಯದಲ್ಲಿ  ಕ್ಸಿಯೋಯು ಅನಾರೋಗ್ಯದಿಂದ ಬಳಲುತ್ತಿದ್ದೇನೆ ಎಂದು ಹೇಳಿ ಭೇಟಿಯಾಗುವುದನ್ನು ತಪ್ಪಿಸಿದ್ದಾಳಂತೆ. ನಂತರ ಆಕೆಯ ತಾಯಿಯ ಶಸ್ತ್ರಚಿಕಿತ್ಸೆ ಮತ್ತು ತನ್ನ ಸಹೋದರಿಗೆ ಉಡುಗೊರೆಗಳಂತಹ ವಿವಿಧ ಕಾರಣಗಳಿಗಾಗಿ ಕ್ಸಿನ್‍ ಅವರಿಂದ ಹಣವನ್ನು ಪಡೆದಿದ್ದಾಳಂತೆ.

ವೈಯಕ್ತಿಕವಾಗಿ ಭೇಟಿಯಾಗಲು ಅವಳು ಪದೇ ಪದೇ ನಿರಾಕರಿಸಿದರೂ, ತನ್ನ ಫೋಟೋಗಳನ್ನು ಕಳುಹಿಸುವ ಮೂಲಕ ಮತ್ತು ಫೋನ್‍ನಲ್ಲಿ ಮಾತನಾಡುವ ಮೂಲಕ ಕ್ಸಿನ್‍  ಮನವೊಲಿಸುವಲ್ಲಿ ಯಶಸ್ವಿಯಾದಳು. ವರ್ಷದ ಅಂತ್ಯದ ವೇಳೆಗೆ, ಕ್ಸಿನ್ 220,000 ಯುವಾನ್ (ಸುಮಾರು 25.7 ಲಕ್ಷ ರೂ.) ಗಿಂತ ಹೆಚ್ಚು ಹಣವನ್ನು ಆಕೆಗೆ ವರ್ಗಾಯಿಸಿದ್ದಾನೆ. ಅಂತಿಮವಾಗಿ, ಕ್ಸಿಯೋಯು ಈ ವರ್ಷದ ಏಪ್ರಿಲ್‍ನಲ್ಲಿ ಆಕೆಯ ಕುಟುಂಬ ಇರುವ ನಗರದಲ್ಲಿ  ಕ್ಸಿನ್ ಅವರನ್ನು ಭೇಟಿಯಾಗಲು ಒಪ್ಪಿಕೊಂಡಿದ್ದಾಳೆ.  ಕ್ಸಿಯೋಯು ತನ್ನ ಫೋಟೋಗಳಿಗಿಂತ ಭಿನ್ನವಾಗಿ ಕಾಣುತ್ತಿರುವುದನ್ನು ಕ್ಸಿನ್ ಗಮನಿಸಿದ ನಂತರ ವಿಷಯಗಳು ಇನ್ನೂ ವಿಚಿತ್ರ ತಿರುವು ಪಡೆದುಕೊಂಡವು. ಹೆಚ್ಚುತ್ತಿರುವ ಅನುಮಾನಗಳ ಹೊರತಾಗಿಯೂ, ಕ್ಸಿನ್ ಆಕೆಯ ಕುಟುಂಬಕ್ಕಾಗಿ ಖರ್ಚು ಮಾಡುವುದನ್ನು ಮುಂದುವರೆಸಿದ್ದಾನೆ. 40,000 ಯುವಾನ್ (4.5 ಲಕ್ಷ ರೂ.ಗಿಂತ ಹೆಚ್ಚು) ಮೌಲ್ಯದ ಬಟ್ಟೆಗಳನ್ನು ಅವರಿಗೆ ಖರೀದಿಸಿ ನೀಡಿದ್ದಾನೆ.

ಆದರೆ ಕ್ಸಿಯೋಯುವಿನ ಫೋನ್‍ನಲ್ಲಿ ಅನುಮಾನಾಸ್ಪದ ಸಂದೇಶಗಳನ್ನು ಕಂಡುಕೊಂಡಾಗ ಕ್ಸಿನ್‍ಗೆ ಹೆಚ್ಚು ಅನುಮಾನ ಬಂತು. ಈ ಬಗ್ಗೆ ಆಕೆಯನ್ನು ಕೇಳಿದಾಗ ತನ್ನ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿದ್ದಾಳೆ. ನಂತರ ಅವಳ ಸಹೋದರಿ ಶಿಯೋಮಿಯಾವೊ ಕ್ಸಿನ್ ಅವರನ್ನು ಭೇಟಿಯಾಗಿ ತಾನು ಖಿನ್ನತೆಯಿಂದ ಬಳಲುತ್ತಿದ್ದೇನೆ ಎಂದು ಹೇಳಿ ಕ್ಸಿಯೋಯುನೊಂದಿಗೆ ಸಂಬಂಧ ಕಡಿದುಕೊಳ್ಳುವಂತೆ ಕೇಳಿಕೊಂಡಿದ್ದಾಳಂತೆ.

Viral News

ಇದರಿಂದ ಅನುಮಾನಗೊಂಡ ಕ್ಸಿನ್‍, ಕ್ಸಿಯೋಯುವಿನ ನಗರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅಸಲಿಯತ್ತು ಬಯಲಾಗಿದೆ. ಆತ ಭೇಟಿ ಮಾಡಿದ ಮಹಿಳೆ ಮತ್ತು ಫೋನ್‌ನಲ್ಲಿ ಸಂಪರ್ಕ ಇದ್ದ ಮಹಿಳೆ ಬೇರೆ ಬೇರೆ ಎಂಬ ಸತ್ಯ ಬಯಲಾಗಿದೆ. ಆಕೆಯ ಹೆಸರು ಝೌ ಹಾಗೇ ಆಕೆ ನಿರುದ್ಯೋಗಿ ವಿವಾಹಿತ ಮಹಿಳೆ, ಆಕೆಗೆ ಒಂದು ಮಗುವಿದೆ ಎಂದು ಚೀನಾದ ಮಾಧ್ಯಮ ಸಂಸ್ಥೆ ವರದಿ ಮಾಡಿದೆ. ಅವಳು ತನ್ನ ಮಗುವನ್ನು ಪೋಷಿಸಲು, ತನ್ನ ಕುಟುಂಬದವರೆಂದು ನಂಬಿಸಲು ನಟರನ್ನು ನೇಮಿಸಿಕೊಂಡಿದ್ದಳಂತೆ  ಮತ್ತು ಆನ್‍ಲೈನ್‌ನಲ್ಲಿ ಸಿಕ್ಕಿದ ಮಾಡೆಲ್‍ಗಳ ಪೋಟೊವನ್ನು ವ್ಯಕ್ತಿಗಳಿಗೆ ತನ್ನ ಫೋಟೊ ಎಂದು ಕಳುಹಿಸಿ ಹಣ ಪಡೆಯುತ್ತಿದ್ದಳು ಎನ್ನಲಾಗಿದೆ. ನವೆಂಬರ್‌ನಲ್ಲಿ ಆಕೆಯನ್ನು ಬಂಧಿಸಲಾಗಿದೆ. ಆದರೆ ಈ ಮೊದಲು ಝೌ ಕ್ಸಿನ್‍ ಅವರಿಗೆ 480,000 ಯುವಾನ್ (ಅಂದಾಜು 55.3 ಲಕ್ಷ ರೂ.) ವಂಚಿಸಿದ್ದಳು ಎಂದು ಹೇಳಲಾಗಿದೆ.

ಈ ಸುದ್ದಿಯನ್ನೂ ಓದಿ:ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ಕಿಡಿಗೇಡಿಗೆ ಬರೋಬ್ಬರಿ 26 ಬಾರಿ ಕಪಾಳಮೋಕ್ಷ ಮಾಡಿದ ಮಹಿಳೆ; ವಿಡಿಯೊ ಭಾರೀ ವೈರಲ್‌