ಮಂಡ್ಯ: ಜಗತ್ತಿನ ಶ್ರೇಷ್ಠ ಸಾಹಿತ್ಯವೆಲ್ಲ ನಮ್ಮ ಭಾಷೆಗೆ ಬರಲಿ, ನಮ್ಮ ಭಾಷೆಯ ಶ್ರೇಷ್ಠ ಸಾಹಿತ್ಯವೆಲ್ಲ ಇತರ ಭಾಷೆಗಳಿಗೂ ಹೋಗಲಿ ಎಂದು ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನುಡಿದರು. ಮಂಡ್ಯದಲ್ಲಿ ಇಂದು ಆರಂಭಗೊಂಡ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ (Kannada Sahitya Sammelana) ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕವಿ ಕುವೆಂಪು ಅವರ ಮಾತನ್ನು ನೆನಪಿಸಿಕೊಳ್ಳೋಣ. ಇದು ಕನ್ನಡದ ಜಾತ್ರೆ, ಕನ್ನಡದ ನುಡಿಯ ಯಾತ್ರೆ. ಮನೆಗೊಂದು ಹಬ್ಬ, ಊರಿಗೊಂದು ಹಬ್ಬ, ನಾಡಿಗೊಂದು ಹಬ್ಬ. ಇದು ಕೊಳೆಯನ್ನು ತೊಳೆಯಲು, ಅರಿವನ್ನು ಮೂಡಿಸಲು. ಬಾರಿಸು ಕನ್ನಡ ಡಿಂಡಿಮವ. ನಮ್ಮಲ್ಲಿ ಹಲವು ನ್ಯೂನತೆಗಳಿವೆ. ಕ್ಲೇಷಗಳು, ದ್ವೇಷಗಳಿವೆ. ಎಲ್ಲವನ್ನು ಹೋಗಲಾಡಿಸಲು ಇಂಥ ಹಬ್ಬಗಳು ಆವಾಗಾವಗ ಬರುತ್ತಿರಬೇಕು ಎಂದರು.
ಸೋಮಾರಿಗಳಾಗಿ ಇರುವವರನ್ನು ಎಬ್ಬಿಸಲು- ಸತ್ತಂತಿಹರನು ಬಡಿದೆಚ್ಚರಿಸು. ಕಚ್ಚಾಡುವವರನು ಕೂಡಿಸಿ ಒಲಿಸು. ಒಟ್ಟಿಗೆ ಬಾಳುವ ತೆರದಲಿ ಹರಸು ಎಂದಿದ್ದಾರೆ ಕುವೆಂಪು. ಮಂಗಳಕರವಾದದ್ದನ್ನು ಪುನರುಜ್ಜೀವಗೊಳಸಿಬೇಕು, ಕೆಟ್ಟದ್ದನ್ನು ಅಳಿಸಬೇಕು. ಕವಿಗಳ, ಸಂತರ ಆದರ್ಶದಿಂದ ನಾಡಿನಲ್ಲಿ ಸರ್ವೋದಯವಾಗಲಿ. ನಮ್ಮ ಕವಿಗಳನ್ನು ನೆನಪಿಸುವ ಕಾರ್ಯಕ್ರಮವಿದು ಎಂದರು.
ಇಂದಿನ ಸಾಹಿತ್ಯ ಭಾಷೆ ಮೂಲಕ ಗಟ್ಟಿ ಮಾಡಿಕೊಳ್ಳುವ, ಭವಿಷ್ಯಕ್ಕೆ ಸೋಪಾನ ರೂಪಿಸಿಕೊಳ್ಳುವ, ಹಿಂದಿನ ಕವಿಗಳನ್ನು ನೆನಪು ಮಾಡಿಕೊಳ್ಳುವ ತ್ರಿವೇಣಿ ಸಂಗಮ ಕಾರ್ಯಕ್ರಮವಿದು. ಜಗತ್ತಿನ ಶ್ರೇಷ್ಠ ಸಾಹಿತ್ಯ ನಮ್ಮ ಭಾಷೆಗೆ ಬರಲಿ. ನಮ್ಮ ಶ್ರೇಷ್ಠ ಸಾಹಿತ್ಯ ನಮ್ಮೆಡೆಗೆ ಬರಲಿ. ಆಗ ನಾವು ಜಗತ್ತಿನ ಎಲ್ಲವನ್ನು ತಿಳಿಯಲು ಸಾಧ್ಯ. ಮಂಡ್ಯದ ನಾಡಿನಲ್ಲಿ ಕನ್ನಡಮ್ಮನ ತೇರು ಸಾಗಲಿ ಎಂದು ಅವರು ನುಡಿದರು.
ಈ ಸುದ್ದಿಯನ್ನೂ ಓದಿ | Kannada sahitya sammelana: ಕನ್ನಡವೇ ಕಲಿಕೆಯ ಮಾಧ್ಯಮವಾಗಲಿ; ರಾಜ್ಯ ಸರ್ಕಾರಕ್ಕೆ ಸಮ್ಮೇಳನಾಧ್ಯಕ್ಷ ಗೊರುಚ 21 ಹಕ್ಕೊತ್ತಾಯ
ಕನ್ನಡ ಭಾಷೆ ಸಂದಿಗ್ಧ ಪರಿಸ್ಥಿತಿಯಲ್ಲಿದೆ: ಡಾ. ಮಹೇಶ ಜೋಶಿ ಬೇಸರ
ಮಂಡ್ಯ: ಬದಲಾದ ಸಂದರ್ಭದಲ್ಲಿ ಕನ್ನಡ ಭಾಷೆ (Kannada Sahitya Sammelana) ಸಂದಿಗ್ಧ ಪರಿಸ್ಥಿತಿಯಲ್ಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ , ನಾಡೋಜ ಡಾ. ಮಹೇಶ ಜೋಶಿ ಬೇಸರ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ಶುಕ್ರವಾರದಿಂದ ಆರಂಭವಾದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಶಯ ನುಡಿಗಳನ್ನಾಡಿದ ಅವರು, ಇಂತಹ ವೇದಿಕೆಗಳ ಮುಖೇನ ಕನ್ನಡ ಕಟ್ಟುವ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.
ಇಂದಿನ ಮಕ್ಕಳಿಗೆ ಕನ್ನಡದ ಬಗ್ಗೆ ನಿರಾಸಕ್ತಿ ಹೆಚ್ಚಾಗಿ ಕನ್ನಡ ಭಾಷೆಯಿಂದ ವಿಮುಖರಾಗುತ್ತಿರುವುದು ಅತ್ಯಂತ ಬೇಸರದ ಸಂಗತಿ. ಇದಕ್ಕೆ ಮಕ್ಕಳು ಮಾತ್ರ ಹೊಣೆಗಾರರಲ್ಲ, ಮಕ್ಕಳ ಪೋಷಕರೂ ಹೊಣೆಗಾರರು ಎಂದು ಸೂಚ್ಯವಾಗಿ ತಿಳಿಸಿದರು.
ಕನ್ನಡ ಭಾಷೆ ಕೇವಲ ಅನ್ನದ ಭಾಷೆಯಲ್ಲ, ಈ ನೆಲದ ಅಸ್ಮಿತೆ. ಈ ಭಾಷೆಗೆ ತನ್ನದೇ ಆದ ಗಟ್ಟಿತನ ಇದೆ. ಸಾಂಸ್ಕೃತಿಕ ವೈಭವ ಇದೆ. ಆ ಕಾರಣಕ್ಕಾಗಿ ಎಲ್ಲರೂ ಈ ಬಗ್ಗೆ ಚಿಂತಿಸಬೇಕಿದೆ ಎಂದು ಹೇಳಿದರು.
ಇದು ಕೇವಲ ಸಮ್ಮೇಳನ ಮಾತ್ರವಲ್ಲ, ಸಾಂಸ್ಕೃತಿಕ ಜಾತ್ರೆ. ಈ ನೆಲದ ಇತಿಹಾಸ, ಪರಂಪರೆ ಸಾರುವ ಜಾತ್ರೆ. ಇಂತಹ ಜಾತ್ರೆ ಸದಾ ಚಲನೆಯಲ್ಲಿರಬೇಕು ಎಂದು ಆಶಿಸಿದರು.