Sunday, 5th January 2025

Viral Photo: ಶಿಕ್ಷಣದ ನೈಜ ಶಕ್ತಿಯನ್ನು ಜಗತ್ತಿಗೇ ತೋರಿಸಿಕೊಟ್ಟವರು ಡಾ. ಬಿ.ಆರ್.ಅಂಬೇಡ್ಕರ್; ಈ ವೈರಲ್‌ ಫೋಟೊದಲ್ಲಿದೆ ಪ್ರೂಫ್‌

ನವದೆಹಲಿ: ನಮ್ಮ ಸಂವಿಧಾನ (Constitution of India) ಅಂಗೀಕೃತಗೊಂಡು 75 ವರ್ಷ ಸಂದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಸಂಸತ್ತಿನಲ್ಲಿ ಮಾಡಿದ ಭಾಷಣ ಭಾರೀ ವಿವಾದವನ್ನು ಹುಟ್ಟು ಹಾಕಿದೆ. ಕಾಂಗ್ರೆಸ್ (Congress) ಸೇರಿದಂತೆ ಪ್ರಮುಖ ಪ್ರತಿಪಕ್ಷಗಳು ಅಮಿತ್ ಶಾ ಮತ್ತು ಬಿಜೆಪಿ (BJP) ವಿರುದ್ಧ ತಿರುಗಿಬಿದ್ದಿವೆ. ತನ್ನ ವಿವಾದಾತ್ಮಕ ಹೆಳಿಕೆಗಳಿಗಾಗಿ ಅಮಿತ್ ಶಾ ಅವರು ಕ್ಷಮೆಯಾಚಿಸಬೇಕು ಮಾತ್ರವಲ್ಲದೇ ಅವರನ್ನು ಸಚಿವ ಪದವಿಯಿಂದ ತೆಗೆದುಹಾಕಬೇಕು ಎಂಬ ಕೂಗು ಸಹ ಜೋರಾಗಿಯೇ ಕೇಳಿಬರುತ್ತಿದೆ. ಈ ಎಲ್ಲಾ ವಿವಾದಗಳ ನಡುವೆಯೇ ನಮ್ಮ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ್ (B. R. Ambedkar) ಅವರು ಆ ಕಾಲದಲ್ಲಿ ಮಾಡಿದ್ದ ಶೈಕ್ಷಣಿಕ ಸಾಧನೆಗಳ ಪಟ್ಟಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ (Social Media) ಭರ್ಜರಿಯಾಗಿ ವೈರಲ್ (Viral Photo) ಆಗುತ್ತಿದೆ. ಮಾತ್ರವಲ್ಲದೇ ತೀರಾ ಹಿಂದುಳಿದ ವರ್ಗದಿಂದ ಬಂದ ಯುವಕನೊಬ್ಬ ಆ ಕಾಲದಲ್ಲೇ ಅಸಾಧಾರಣ ಸಾಧನೆಯನ್ನು ಮಾಡಿದ ವಿಷಯ ಇದೀಗ ಹಲವರಿಗೆ ಸ್ಪೂರ್ತಿಯ ವಿಚಾರವಾಗಿ ಚರ್ಚಿತವಾಗುತ್ತಿದೆ. ಮತ್ತಿದು ಶಿಕ್ಷಣದ ಶಕ್ತಿ ಎಂಬ ರೀತಿಯಲ್ಲಿ ಎಲ್ಲೆಡೆ ಗಮನ ಸೆಳೆಯುತ್ತಿದೆ.

ಅಂಬೇಡ್ಕರ್ ಅವರ ಬಗ್ಗೆ ತಾನು ಆಡಿದ ಮಾತುಗಳು ವಿವಾದದ ಸ್ವರೂಪವನ್ನು ಪಡೆದುಕೊಳ್ಳುತ್ತಿರುವಂತೆ, ಇದು ಪ್ರತಿಪಕ್ಷಗಳ ಹತಾಶೆಯ ಪ್ರತೀಕ ಮತ್ತು ನನ್ನ ಮಾತುಗಳನ್ನು ತಿರುಚುವ ಮೂಲಕ ಪ್ರತಿಪಕ್ಷಗಳು ಸುಖಾ ಸುಮ್ಮನೆ ವಿವಾದವನ್ನು ಸೃಷ್ಟಿಸುತ್ತಿವೆ ಎಂದು ಗೃಹ ಸಚಿವ ಅಮಿತ್ ಶಾ ಕಿಡಿ ಕಾರಿದ್ದಾರೆ. ಮಾತ್ರವಲ್ಲದೇ, ಇದು ಅಂಬೆಡ್ಕರ್ ಹಾಗೂ ಮೀಸಲಾತಿ ವಿಚಾರದ ಕುರಿತಾಗಿ ಪ್ರತಿಪಕ್ಷಗಳ ನೈಜ ನಿಲುವಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದೂ ಹೇಳಿದ್ದಾರೆ.

ಖ್ಯಾತ ಯೂಟ್ಯೂಬರ್ ಧ್ರುವ ರಾಥಿ (Dhruv Rathee) ಈ ವೈರಲ್ ಚಿತ್ರವನ್ನು ತನ್ನ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದು, ತನ್ನ ಈ ಪೋಸ್ಟ್‌ಗೆ ಧ್ರುವ, ʼಶಿಕ್ಷಣದ ಶಕ್ತಿ’ ಎಂದು ಬರೆದುಕೊಂಡಿದ್ದು ನೀಲಿ ಬಣ್ಣದ ಹೃದಯದ ಇಮೋಜಿಯನ್ನು ಹಾಕಿದ್ದಾರೆ. ತನ್ನ ಈ ಪೋಸ್ಟ್ ಗೆ ‘ಬಾಬಾ ಸಾಹೇಬ್’ ಎಂಬ ಹ್ಯಾಷ್ ಟ್ಯಾಗ್ ಕ್ರಿಯೇಟ್ ಮಾಡಿದ್ದಾರೆ.

ಈ ಫೋಟೊದಲ್ಲಿರುವಂತೆ ಡಾ. ಬಿ. ಆರ್.ಅಂಬೇಡ್ಕರ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸತಾರಾದಲ್ಲಿ ಪೂರ್ಣಗೊಳಿಸಿ, ಸೆಕಂಡರಿ ಶಿಕ್ಷಣವನ್ನು ಮುಂಬೈಯ ಎಲ್ಫಿನ್ ಸ್ಟೋನ್ ಹೈಸ್ಕೂಲ್‌ನಲ್ಲಿ ಮುಗಿಸಿದರು. ಬಳಿಕ ಅವರು ಮುಂಬೈ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರ ಹಾಗೂ ರಾಜಕೀಯ ಶಾಸ್ತ್ರದಲ್ಲಿ ಬಿಎ ಪದವಿಯನ್ನು ಪಡೆದರು. ಈ ಸಂದರ್ಭದಲ್ಲಿ ಅವರಿಗೆ ನ್ಯೂಯಾರ್ಕ್‌ನಲ್ಲಿರುವ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಲು ಸ್ಕಾಲರ್ ಶಿಪ್ ಲಭಿಸಿತು. ಇದರ ಮೂಲಕ ಅವರು ಎಂ.ಎ. ಮತ್ತು ಪಿ.ಎಚ್.ಡಿ. ಪೂರ್ಣಗೊಳಿಸಿದರು.

ಅಲ್ಲಿಂದ ಅವರು ನೇರವಾಗಿ ಲಂಡನ್‌ಗೆ ತೆರಳಿದರು. ಅಲ್ಲಿನ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಹಾಗೂ ಪಾಲಿಟಿಕಲ್ ಸೈನ್ಸ್ ಕಾಲೇಜಿನಲ್ಲಿ ಅವರು ಅರ್ಥಶಾಸ್ತ್ರದ ಉನ್ನತ ಅಧ್ಯಯನಕ್ಕಾಗಿ ಸೇರಿಕೊಂಡರು. ಅಲ್ಲೇ ಅವರು ಗ್ರೇ’ಸ್ ಇನ್‌ನಲ್ಲಿ ಕಾನೂನು ಕಲಿಕೆಯನ್ನು ಪ್ರಾರಂಭಿಸಿದರು. ಇವೆಲ್ಲದರ ನಡುವೆ ತನಗಿದ್ದ ಹಣಕಾಸಿನ ಅಡಚಣೆಗಳ ಕಾರಣದಿಂದ ಅವರು 1917ರಲ್ಲಿ ಅನಿವಾರ್ಯವಾಗಿ ಭಾರತಕ್ಕೆ ಹಿಂತಿರುಗಬೇಕಾಯಿತು.

ಭಾರತಕ್ಕೆ ವಾಪಾಸಾದ ಬಳಿಕ ಅಂಬೇಡ್ಕರ್ ಅವರು ಮುಂಬೈಯ ಸೈಡೆನ ಹ್ಯಾಂ ಕಾಲೇಜಿನಲ್ಲಿ ಪಾಲಿಟಿಕಲ್ ಎಕಾನಮಿ ಪ್ರಾದ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದರು. ಇದರ ಉದ್ದೇಶ ಮತ್ತೆ ಲಂಡನ್‌ಗೆ ತೆರಳಿ ಅರ್ಧಕ್ಕೆ ನಿಂತಿದ್ದ ಕಾನೂನು ಅಧ್ಯಯನವನ್ನು ಪೂರ್ಣಗೊಳಿಸುವುದಾಗಿತ್ತು. ಈ ನಡುವೆ ಕೊಲ್ಹಾಪುರದ ಛತ್ರಪತಿ ಶಾಹುಜಿ ಮಹಾರಾಜ್ ಅವರ ಹಣಕಾಸಿನ ನೆರವು, ಗೆಳೆಯನ ಬಳಿ ಪಡೆದುಕೊಂಡ ವೈಯಕ್ತಿಕ ಸಾಲ ಮತ್ತು ತಮ್ಮ ಉಳಿತಾಯದ ಹಣದ ಸಹಾಯದಿಂದ ಬಾಬಾ ಸಾಹೇಬರು ಮತ್ತೆ ಲಂಡನ್‌ಗೆ ತೆರಳಿದರು. ಅಲ್ಲಿ ಅವರು ತಮ್ಮ ಬ್ಯಾರಿಸ್ಟರ್ ಪದವಿಯನ್ನು ಪೂರ್ಣಗೊಳಿಸಿದರು ಹಾಗೂ ತಮ್ಮ ಎಂ.ಎಸ್ಸಿ ಹಾಗೂ ಡಿಎಸ್ಸಿ ಪದವಿಗಳನ್ನೂ ಸಹ ಎಲ್.ಎಸ್.ಇ. ಕಾಲೇಜಿನಲ್ಲಿ ಪೂರ್ಣಗೊಳಿಸಿದರು.

ಇದನ್ನೂ ಓದಿ: Mohan Bhagwat: ಮಂದಿರ-ಮಸೀದಿ ವಿವಾದಕ್ಕೆ ಕಿಚ್ಚು ಹಚ್ಚಿ ಹಿಂದೂ ನಾಯಕರಾಗಲು ಯತ್ನ; ಮೋಹನ್‌ ಭಾಗವತ್‌ ಅಚ್ಚರಿಯ ಹೇಳಿಕೆ

ಭಾರತದ ಸ್ವಾತಂತ್ರ್ಯಾನಂತರ 1952ರಲ್ಲಿ ದೇಶದಲ್ಲಿ ನಡೆದ ಪ್ರಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಅಂಬೇಡ್ಕರ್ ಅವರು ರಾಜ್ಯಸಭಾ ಸದಸ್ಯರಾಗಿ ನೇಮಕಗೊಂಡರು. ಅದೇ ವರ್ಷ ಅವರಿಗೆ ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಲಭಿಸಿತು. 1953ರಲ್ಲಿ ಅವರಿಗೆ ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾನಿಲಯವೂ ಸಹ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿತು.

ಅಂಬೇಡ್ಕರ್ ಅವರು ಪಡೆದುಕೊಂಡಿರುವ ಶೈಕ್ಷಣಿಕ ಪದವಿಗಳ ಪಟ್ಟಿಯನ್ನು ನೋಡಿದ ನೆಟ್ಟಿಗರು ಇದಕ್ಕೆ ಹಲವು ರಿತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. “ಈ ಪದವಿಗಳು ಡಾ.ಅಂಬೇಡ್ಕರ್ ಅವರ ಅತ್ಯುನ್ನತ ಶೈಕ್ಷಣಿಕ ಸಾಧನೆಗಳನ್ನು ಪ್ರತಿಬಿಂಬಿಸುತ್ತವೆ ಹಾಗೂ ಕಾನೂನು, ಅರ್ಥಶಾಸ್ತ್ರ ಮತ್ತು ಸಾಮಾಜ ವಿಜ್ಞಾನ ವಿಷಯಗಳಲ್ಲಿ ಅವರ ಪ್ರಬುದ್ಧತೆಗೆ ಹಿಡಿದ ಕೈಗನ್ನಡಿಯಾಗಿದೆʼʼ ಎಂದು ಒಬ್ಬರು ತಿಳಿಸಿದ್ದಾರೆ.

ʼʼಎಲ್ಲ ಅವಕಾಶಗಳ ಬಾಗಿಲನ್ನು ತೆರೆಯಲು ಶಿಕ್ಷಣವೊಂದೇ ಕೀಲಿ ಕೈʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼಈಗಿನ ನಮ್ಮ ದೇಶದ 95% ರಾಜಕಾರಣಿಗಳು ಇದರ 10% ಸಾಧನೆಯನ್ನು ಶೈಕ್ಷಣಿಕವಾಗಿ ಮಾಡಿಲ್ಲʼʼ ಎನ್ನುವುದು ಇನ್ನೊಬ್ಬರ ಕಾಮೆಂಟ್. ʼʼಇಂತಹ ಪ್ರಬುದ್ಧ ಶೈಕ್ಷಣಿಕ ಹಿನ್ನಲೆಯ ವ್ಯಕ್ತಿ ನಮ್ಮ ಸಂವಿಧಾನವನ್ನು ರೂಪಿಸಿದ್ದಾರೆಂಬುದೇ ನಮಗೊಂದು ಹೆಮ್ಮೆʼʼ ಎಂದು ಮಗದೊಬ್ಬರು ಅಭಿಪ್ರಾಯಪಟ್ಟಿದ್ದಾರೆ.