Saturday, 21st December 2024

K Annamalai: ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ ಅರೆಸ್ಟ್‌

K Annamalai

ಚೆನ್ನೈ: ಕೊಯಂಬತ್ತೂರಿನಲ್ಲಿ ಆಡಳಿತರೂಢ ಡಿಎಂಕೆ ನೇತೃತ್ವದ ರಾಜ್ಯ ಸರ್ಕಾರದ ವಿರುದ್ದ ನಡೆದ ಪ್ರತಿಭಟನೆಯ ನೇತೃತ್ವದ ವಹಿಸಿದ್ದ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ (K Annamalai) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 1998ರ ಕೊಯಂಬತ್ತೂರು ಬಾಂಬ್ ಸ್ಫೋಟದಲ್ಲಿ 58 ಜನರ ಸಾವಿಗೆ ಕಾರಣವಾದ ಭಯೋತ್ಪಾದಕನನ್ನು ವೈಭವೀಕರಿಸಲಾಗಿದೆ ಎಂದು ಆರೋಪಿಸಿ ಬಿಜೆಪಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಕೊಯಂಬತ್ತೂರು ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಉಗ್ರ ಎಸ್.ಎ.ಬಾಷಾನ ಅಂತ್ಯ ಸಂಸ್ಕಾರಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿರುವುದನ್ನು ಖಂಡಿಸಿ ಬಿಜೆಪಿ ಶುಕ್ರವಾರ (ಡಿ. 20) ಕೊಯಂಬತ್ತೂರಿನಲ್ಲಿ ಪ್ರತಿಭಟನೆ ನಡೆಸಿ ಮೆರವಣಿಗೆ ನಡೆಸಿತು. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ನೇತೃತ್ವದಲ್ಲಿ ನಡೆದ ರ್‍ಯಾಲಿಯಲ್ಲಿ ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ರಾಜ್ಯ ಸರ್ಕಾರದ ವಿರುದ್ಧ ಆರೋಪ

ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದಾನೆ ಎಂದು ಶಂಕಿಸಲಾದ ವ್ಯಕ್ತಿಯನ್ನು ಡಿಎಂಕೆ ಗೌರವಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಬಂಧನಕ್ಕೂ ಮುನ್ನ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಅಣ್ಣಾಮಲೈ, “ಇದು ಶಾಂತಿಪ್ರಿಯ ನಗರವಾಗಿದ್ದು, 1998ರಲ್ಲಿ ಭೀಕರ ಬಾಂಬ್‌ ಸ್ಫೋಟ ನಡೆಯಿತು. ಭಯೋತ್ಪಾದಕನನ್ನು ವೈಭವೀಕರಿಸುವುದು ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗೆ ಮಾಡಿದ ಅವಮಾನʼʼ ಎಂದು ಅವರು ಕಿಡಿ ಕಾರಿದರು.

ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದರು. ಇದು ಈ ಪ್ರದೇಶದಲ್ಲಿನ ಉದ್ವಿಗ್ನತೆಯನ್ನು ಹೆಚ್ಚಿಸಿತು. ಪರಿಸ್ಥಿತಿ ಉಲ್ಬಣಗೊಳ್ಳುತ್ತಿದ್ದಂತೆ ಮಧ್ಯಪ್ರವೇಶಿಸಿದ ಪೊಲೀಸರು, ಅಣ್ಣಾಮಲೈ ಮತ್ತು ಇತರ ಹಲವು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಸಾರ್ವಜನಿಕ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು, ಸಂಭಾವ್ಯ ಸಂಘರ್ಷವನ್ನು ತಡೆಗಟ್ಟಲು ಅಣ್ಣಾಮಲೈ ಅವರನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯು ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಡಿಎಂಕೆ ನಡುವಿನ ಘರ್ಷಣೆಯನ್ನು ಹೆಚ್ಚಿಸಿದೆ. ಡಿಎಂಕೆ ನೀತಿಗಳನ್ನು ಟೀಕಿಸಿರುವ ಬಿಜೆಪಿ, ರಾಜ್ಯ ಸರ್ಕಾರವು ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದೆ.

“58 ಜನರ ಸಾವಿಗೆ ಕಾರಣವಾದ, 1998ರ ಕೊಯಂಬತ್ತೂರು ಬಾಂಬ್ ಸ್ಫೋಟದ ಹಿಂದಿರುವ ಭಯೋತ್ಪಾದಕನನ್ನು ವೈಭವೀಕರಿಸುವುದರ ವಿರುದ್ಧ ಪ್ರತಿಭಟನೆ ನಡೆಸಿ ಮೆರವಣಿಗೆ ಭಾಗಿಯಾದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಿದ ತಮಿಳುನಾಡು ಸರ್ಕಾರದ ಕ್ರಮ ಖಂಡನಾರ್ಹʼʼ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅವರು ಬರೆದಿದ್ದಾರೆ.

1998ರ ಕೊಯಂಬತ್ತೂರು ಬಾಂಬ್ ಸ್ಫೋಟದಲ್ಲಿ 58 ಜನರನ್ನು ಬಲಿಯಾಗಿ 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಭಾಗವಹಿಸಲಿದ್ದ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಈ ಸ್ಫೋಟ ನಡೆಸಲಾಗಿತ್ತು. ತಮ್ಮ ನಾಯಕರ ಬಂಧನವನ್ನು ಖಂಡಿಸಿರುವ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ತಿಳಿಸಿದೆ. ಅಣ್ಣಾಮಲೈ ಅವರ ಬಂಧನವು ತಮಿಳುನಾಡಿನಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಯನ್ನು ಇನ್ನಷ್ಟು ಹೆಚ್ಚಿಸಲಿದೆ. 1998ರ ಕೊಯಂಬತ್ತೂರು ಬಾಂಬ್ ಸ್ಫೋಟ ಪ್ರಕರಣದಲ್ಲಿ ದೋಷಿಯಾಗಿದ್ದ ಬಾಷಾ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಡಿ. 16ರಂದು ಮೃತಪಟ್ಟಿದ್ದ.

ಈ ಸುದ್ದಿಯನ್ನೂ ಓದಿ: Viral News: ಹೀಗೊಂದು ಸೇಡಿನ ಕಥೆ; ವಿಚ್ಛೇದಿತ ಪತ್ನಿಗೆ 80 ಸಾವಿರ ರೂ. ಜೀವನಾಂಶವನ್ನು ನಾಣ್ಯದ ಮೂಲಕ ನೀಡಲು ಮುಂದಾದ ವ್ಯಕ್ತಿ