Wednesday, 1st January 2025

Ravi Sajangadde Column: ಬೆಂಗಳೂರು ವಾಯು ಸಾರಿಗೆ: 3 ಕಾರ್ಯಸಾಧು ಯೋಜನೆಗಳು !

ಪ್ರಚಲಿತ

ರವೀ ಸಜಂಗದ್ದೆ

ಕಳೆದೆರಡು ದಶಕಗಳಿಂದ ಅತ್ಯಂತ ಕ್ಷಿಪ್ರವಾಗಿ, ಎಲ್ಲ ಎಂಟು ದಿಕ್ಕುಗಳಲ್ಲೂ ಬೆಂಗಳೂರು ವ್ಯಾಪಕವಾಗಿ ಬೆಳೆಯುತ್ತಿದೆ. ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಾ, ಅಭಿವೃದ್ಧಿ ಸೂಚ್ಯಂಕದಲ್ಲಿ 2ನೆಯ ಸ್ಥಾನವನ್ನು ಬೆಂಗಳೂರು ಹೊಂದಿದೆ. ಇದು ಭಾರತದ ೩ನೆಯ ಅತಿ ದೊಡ್ಡ ನಗರ.

ಯಾವುದೇ ನಗರ ಬೆಳೆಯಲು, ಅಭಿವೃದ್ಧಿ ಹೊಂದಲು ಅಲ್ಲಿನ ಮೂಲ ಸೌಕರ್ಯ ಮತ್ತು ಸಂಪರ್ಕ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ದೇಶ, ವಿದೇಶಗಳಿಂದ ಆಗಮಿಸುವವರಿಗೆ ಉತ್ತಮ ರಸ್ತೆ ಸಾರಿಗೆ, ರೈಲು ಸಂಪರ್ಕ ಮತ್ತು ವಾಯು ಸಂಪರ್ಕ ಇರುವುದು ಬೆಂಗಳೂರಿನ ಹೆಗ್ಗಳಿಕೆ. ಹಾಗಿದ್ದೂ ವರ್ಷದಿಂದ ವರ್ಷಕ್ಕೆ ಬೇಡಿಕೆಗಳು ಮತ್ತು ಜನರ ದಟ್ಟಣೆ ಹೆಚ್ಚುತ್ತಿದ್ದು ಸದ್ಯದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎಎಲ್) ಪ್ರಯಾಣಿಕರ ದಟ್ಟಣೆ ಎದುರಿಸುತ್ತಿದೆ. ದೇಶದ ಅತ್ಯಂತ ಕಾರ್ಯನಿರತ (busy) ವಿಮಾನ ನಿಲ್ದಾಣಗಳ ಪೈಕಿ‌ ಕೆಐಎಎಲ್ ಮುಂಚೂಣಿಯಲ್ಲಿದೆ.

ದಕ್ಷಿಣ ಭಾರತದ ವಿಮಾನ ನಿಲ್ದಾಣಗಳಲ್ಲಿ ಅತ್ಯಂತ ಆಧುನಿಕ, ವಿಶಾಲ ಮತ್ತು ಸುವ್ಯವಸ್ಥಿತವಾದದ್ದು ಎನ್ನುವ ಹೆಗ್ಗಳಿಕೆ ಕೆಐಎಎಲ್ ಹೊಂದಿದೆ. ಎರಡು ರನ್ ವೇ ಹೊಂದಿರುವ ದಕ್ಷಿಣದ ಏಕೈಕ ವಿಮಾನ ನಿಲ್ದಾಣವಿದು. ಇಲ್ಲಿ ನುರಿತ ಏರ್ ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆ ಇದ್ದು ದಿನವೊಂದಕ್ಕೆ 780+ ವಿಮಾನಗಳ ಆಗಮನ ಮತ್ತು ನಿರ್ಗಮನ ನಿಯಂತ್ರಿಸುವ ಸುವ್ಯವಸ್ಥೆ ಇದೆ – 2 ನಿಮಿಷಕ್ಕೊಂದು ವಿಮಾನದ ಆಗಮನ ಯಾ ನಿರ್ಗಮನ ಆಗುತ್ತಿರುತ್ತದೆ!

2024ರ ನವೆಂಬರ್ ಅಂಕಿ-ಅಂಶಗಳ ಪ್ರಕಾರ ತಿಂಗಳಿಗೆ 40 ಲಕ್ಷಕ್ಕಿಂತ ಹೆಚ್ಚು ಪ್ರಯಾಣಿಕರು ಕೆಐಎಎಲ್
ಮೂಲಕ ಪ್ರಯಾಣಿಸಿದ್ದಾರೆ. ಅಂದರೆ ದಿನಕ್ಕೆ 1.3 ಲಕ್ಷ, ವರ್ಷಕ್ಕೆ ಸುಮಾರು ೫ ಕೋಟಿ ಪ್ರಯಾಣಿಕರು! ಇದು ಆಸ್ಟ್ರೇಲಿಯಾದ ಜನಸಂಖ್ಯೆಯ ಎರಡುಪಟ್ಟು! ಅಲ್ಲಿಗೆ ಕೆಐಎಎಲ್ ಎಷ್ಟು busy ಎನ್ನುವ ಅಂದಾಜು ಸಿಗುತ್ತದೆ.
ವರದಿಯೊಂದರ ಪ್ರಕಾರ 2030ರ ವೇಳೆ ಬೆಂಗಳೂರಿನ ವಿಮಾನ ಪ್ರಯಾಣಿಕರ ಸಂಖ್ಯೆ 10 ಕೋಟಿ ದಾಟುವ
ನಿರೀಕ್ಷೆಯಿದೆ. ಈಗಿರುವ ಬೇಡಿಕೆಯ ಎರಡರಷ್ಟು!

ಸದ್ಯದ ಅಂದಾಜು ಮತ್ತು ಸಾಮರ್ಥ್ಯದ ಪ್ರಕಾರ ಬರೋಬ್ಬರಿ 6 ರಿಂದ 7 ಕೋಟಿ ಪ್ರಯಾಣಿಕರು ಮತ್ತು ತತ್ಸಮಾನ ಸರಕು ಮತ್ತು ನಾಗರಿಕ ಸೇವಾ (1100-1200) ವಿಮಾನಗಳನ್ನು ನಿರ್ವಹಿಸುವ ಗರಿಷ್ಠ ಸಾಮರ್ಥ್ಯ ಮಾತ್ರ ಕೆಐಎಎಲ್ ಗೆ ಇದೆ. ಬೇಡಿಕೆ ದುಪ್ಪಟ್ಟು ಇದೆ! ಹಾಗಾಗಿ ಮತ್ತೊಂದು ವಿಮಾನ ನಿಲ್ದಾಣ, ಕೆಐಎಎಲ್ ನಲ್ಲಿ ಹೊಸದೊಂದು ಟರ್ಮಿನಲ್, ಈಗಿರುವ ಎಚ್‌ಎಎಲ್ ವಿಮಾನ ನಿಲ್ದಾಣ ಮತ್ತೊಮ್ಮೆ ಶುರು ಮಾಡುವುದು ಇತ್ಯಾದಿ‌ ಸಾಧ್ಯಾ ಸಾಧ್ಯತೆಗಳ ಕುರಿತಾದ ಚರ್ಚೆ, ಮಾತುಕತೆ, ವಿಶ್ಲೇಷಣೆ ನಡೆಯುತ್ತಿದೆ. ಈ ಕುರಿತು ಒಂದು ಅವಲೋಕನ.

ವಿಮಾನಯಾನ ಸಚಿವಾಲಯದ ಪ್ರಮಾಣಿತ ನಿಬಂಧನೆಗಳ ಪ್ರಕಾರ, ಇರುವ ವಿಮಾನ ನಿಲ್ದಾಣದಿಂದ ಹೊಸ ವಿಮಾನ ನಿಲ್ದಾಣದ ವೈಮಾನಿಕ ದೂರ (aerial distance) ಕನಿಷ್ಠ 150 ಕಿಲೋಮೀಟರ್ ಆಗಿರಬೇಕು. ಹಾಗಿದ್ದೂ ಈ ವಿಚಾರದಲ್ಲಿ ಆ ಭಾಗದ ಜನಸಾಂದ್ರತೆ ಮತ್ತು ಪ್ರಯಾಣಿಕರ ದಟ್ಟಣೆ ಅವಲೋಕನ ಮಾಡಿ ಈ ಮಿತಿಯನ್ನು ಸಡಿಲಿಸಲು ಸಾಧ್ಯವಿದೆ ಎಂದು ಉಲ್ಲೇಖಿಸಲಾಗಿದೆ.

ಭಾರತೀಯ ವಾಯು ಸಂಪರ್ಕ ಇಲಾಖೆ ಈ ಕುರಿತು ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿದೆ. ಹಾಗಾಗಿ ಬೆಂಗಳೂರು ಹೊರವಲಯದಲ್ಲಿ ಇನ್ನೊಂದು ವಿಮಾನ ನಿಲ್ದಾಣ ಸ್ಥಾಪಿಸಲು ಈ ಕಾನೂನು ಅಡ್ಡಿಯಾಗಲಾರದು. ಈಗಿರುವ ಕೆಐಎಎಲ್ ಮತ್ತು ಸರಕಾರಗಳ ನಡುವಿನ ಒಪ್ಪಂದದ ಪ್ರಕಾರ, 2033ರವರೆಗೆ ಬೆಂಗಳೂರು ಆಸುಪಾಸಿನಲ್ಲಿ ಯಾವುದೇ ಹೊಸ ವಿಮಾನ ನಿಲ್ದಾಣ ಕಾರ್ಯಾಚರಿಸುವಂತಿಲ್ಲ.

ಹಾಗಾಗಿ ಈಗಿರುವ ಎಚ್‌ಎಎಲ್ ಒಡೆತನದ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಪುನರ್ ಕಾರ್ಯಾಚರಣೆ ನಡೆಸಲೂ 2034ರವರೆಗೆ ಕಾಯಲೇಬೇಕು. ಆ ವಿಮಾನ ನಿಲ್ದಾಣದ ಸಾಮರ್ಥ್ಯ ವರ್ಷಕ್ಕೆ ಗರಿಷ್ಠ 50 ಲಕ್ಷ ಪ್ರಯಾಣಿಕರು ಮಾತ್ರ. ಅಲ್ಲಿ ಯಾವುದೇ ವಿಸ್ತರಣೆಗೆ ಜಾಗ ಲಭ್ಯವಿಲ್ಲ. ಹಾಗಾಗಿ ಸದ್ಯಕ್ಕೆ ಆ ವಿಮಾನ ನಿಲ್ದಾಣದ ಕೊಡುಗೆ ‘ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆ’!

ಇನ್ನು ಹೊಸ ವಿಮಾನ ನಿಲ್ದಾಣದ ವಿಚಾರಕ್ಕೆ ಬಂದರೆ, ಎಲ್ಲವೂ ಅಂದುಕೊಂಡಂತೆ ನಡೆದು, ಕಾಮಗಾರಿ ಶೀಘ್ರ
ಪೂರ್ಣಗೊಂಡರೂ ಜಾಗ ನಿಗದಿಯಿಂದ ತೊಡಗಿ ಪ್ರಥಮ ವಿಮಾನ ಹಾರಾಟದವರೆಗೆ ತಲುಪಲು ತಗಲುವ ಕನಿಷ್ಠ ಸಮಯ 10-12 ವರ್ಷಗಳು! ಅಂದರೆ ಹೊಸ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಬಹುದಾದ ನಿಕಟತಮ ವರ್ಷ 2035-2037! ಆ ಸಮಯಕ್ಕೆ ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣದ ಬೇಡಿಕೆ ಮತ್ತೂ ದುಪ್ಪಟ್ಟಾಗುವು ದರಲ್ಲಿ ಸಂಶಯವಿಲ್ಲ. ಅಲ್ಲಿಗೆ ವಾಯುಯಾನ ಕ್ಷೇತ್ರದಲ್ಲಿ ಬೆಂಗಳೂರಿನ ಬೇಡಿಕೆ ಪೂರೈಸುವಲ್ಲಿ ಸರಕಾರಗಳು ಸಂಪೂರ್ಣ ಎಡವಿದಂತೆಯೇ ಸರಿ.

ಸರಕಾರದ ಎದುರಿಗಿರುವ ಇನ್ನೊಂದು ಆಯ್ಕೆ ಎಂದರೆ ಕೆಐಎಎಲ್ ಪರಿಸರದಲ್ಲಿ ಮತ್ತೊಂದು ಟರ್ಮಿನಲ್
(ಮೂರನೆಯ) ಅಭಿವೃದ್ಧಿ ಪಡಿಸುವುದು. ಇರುವ ಮಾಹಿತಿಯ ಪ್ರಕಾರ, ಇನ್ನೊಂದು ಟರ್ಮಿನಲ್ ನಿರ್ಮಿಸಲು ಬೇಕಾದಷ್ಟು ಜಾಗ ಅಲ್ಲಿದೆ (ಅಥವಾ ಭೂ ಸ್ವಾಧೀನ ಕಷ್ಟವಲ್ಲ!) ಮತ್ತು ಈ ಕೆಲಸಕ್ಕೆ ಈಗಿಂದೀಗಲೇ ಪ್ರಾರಂಭಿಸಿದರೆ ನಾಲ್ಕೈದು ವರ್ಷಗಳಲ್ಲಿ ಹೊಸ ಟರ್ಮಿನಲ್ ಕಾರ್ಯಾರಂಭ ಮಾಡಬಹುದು.

ಟರ್ಮಿನಲ್ 1 ಅಂದಾಜು 3 ಕೋಟಿ, ಟರ್ಮಿನಲ್ 2 ಅಂದಾಜು 3.5 ಕೋಟಿ ಪ್ರಯಾಣಿಕರನ್ನು ವರ್ಷಕ್ಕೆ ನಿಭಾಯಿಸುವ ಸಾಮರ್ಥ್ಯ ಹೊಂದಿದೆ. 2029-2030ರ ಸಮಯಕ್ಕೆ ಟರ್ಮಿನಲ್ 3 ಕಾರ್ಯಾರಂಭ ಮಾಡು ವಂತಾದರೆ ಅದೂ 3.5 ಕೋಟಿ ಪ್ರಯಾಣಿಕರನ್ನು ನಿಭಾಯಿಸಬಹುದು. ಒಟ್ಟಿಗೆ ಸುಮಾರು 10 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಆಗ ಕೆಐಎಎಲ್ ಗೆ ಬರಲಿದೆ. 2032ರ ವರೆಗಿನ ಬೇಡಿಕೆ-ಪೂರೈಕೆ ಸುಗಮವಾದೀತು.

ಈ ಮಧ್ಯೆ ತಮಿಳುನಾಡು ಸರಕಾರವು ಗಡಿ ಪ್ರದೇಶವಾದ ಹೊಸೂರಿನಲ್ಲಿ ಹೊಸ ವಿಮಾನ ನಿಲ್ದಾಣ ಸ್ಥಾಪಿಸಲು ನಿರ್ಧಾರ ಮಾಡಿರುವ ವರದಿಗಳು ಬರುತ್ತಿವೆ. ಆ ವಿಮಾನ ನಿಲ್ದಾಣ ಸ್ಥಾಪನೆಯಾಗಿ ಕಾರ್ಯಾರಂಭ ಮಾಡಿದಾಗ ಅದರ ಪ್ರಯೋಜನವನ್ನು ಬೆಂಗಳೂರು ಪಡೆಯಬಹುದು. 2035ರ ನಂತರವಷ್ಟೇ ಆ ಕುರಿತು ಯೋಚಿಸಬಹುದು.
ಕರ್ನಾಟಕ ಸರಕಾರ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಅಭಿವೃದ್ದಿ ಸಚಿವಾಲಯ ಬೆಂಗಳೂರಿಗೆ ಹೊಸ ವಿಮಾನ ನಿಲ್ದಾಣ ಸ್ಥಾಪಿಸಲು ಸ್ಥಳ ಪರಿಶೀಲನೆಯ ಕುರಿತು ಚರ್ಚೆ, ಮಾತುಕತೆ ನಡೆಸುತ್ತಿದೆ.

ಬೆಂಗಳೂರು ಹೊರವಲಯಗಳಾದ ನೆಲಮಂಗಲ-ತುಮಕೂರು -ಕೊರಟಗೆರೆ, ಹೊಸಕೋಟೆ, ಹುಲಿಯೂರುದುರ್ಗ-ಮಳವಳ್ಳಿ, ಬಿಡದಿ-ಹಾರೋಹಳ್ಳಿ, ರಾಮನಗರ-ಕನಕಪುರ, ದಾಬಸ್ ಪೇಟೆ-ಕುಣಿಗಲ್ ಮುಂತಾದ ಪ್ರದೇಶಗಳಲ್ಲಿ ಪರಿಶೀಲನೆ ನಡೆಯುತ್ತಿದೆ. ವಿಮಾನ ನಿಲ್ದಾಣಕ್ಕೆ ಸುಮಾರು 4000-5000 ಎಕರೆ ಸಮತಟ್ಟಾದ, ಸುತ್ತ ಮುತ್ತ ಬೆಟ್ಟ ಗುಡ್ಡಗಳು ಇರದ ಜಾಗ ಸಿಗಬೇಕು. ಹೆಮ್ಮಿಗೆಪುರದಲ್ಲಿ ಉದ್ದೇಶಿತ ಸ್ಕೈಡೆ ನಿರ್ಮಾಣದ ಮಾತುಕತೆಗಳು ಪ್ರಗತಿ ಯಲ್ಲಿರುವುದರಿಂದ ಬಿಡದಿ-ಹಾರೋಹಳ್ಳಿ ಭಾಗವನ್ನು ಆಯ್ಕೆ ಮಾಡುವ ಸಾಧ್ಯತೆಯಿಲ್ಲ.

ವಿಮಾನ ಸಂಚಾರ ದಟ್ಟಣೆಯ ಬಹುದೊಡ್ಡ ಸಮಸ್ಯೆ. ಬೆಂಗಳೂರು ನಗರದ 360ಓ ಜಾಗವನ್ನು ಎಚ್‌ಎಎಲ್ ವಿಮಾನ ನಿಲ್ದಾಣ ಆವರಿಸಿಕೊಂಡಿದೆ. ಕೆಐಎಎಲ್ ದೇವನಹಳ್ಳಿಯ ಆಚೆಗೆ 30 ಕಿಮೀಗಳಷ್ಟು ವ್ಯಾಪ್ತಿಯವರೆಗೆ ವಾಯು ಪ್ರದೇಶವನ್ನು ಬಳಸುತ್ತಿದೆ. ಅದರಾಚೆಯ ವಾಯು ಪ್ರದೇಶವನ್ನು ಹಾಸನದವರೆಗೆ ಭಾರತೀಯ ವಾಯುಪಡೆ ಬಳಸುತ್ತಿದೆ. ಈ ಎಲ್ಲರ ಜೊತೆ ಮಾತುಕತೆ ನಡೆಯುತ್ತಿದ್ದು ವಿಮಾನಗಳ ಹಾರಾಟಕ್ಕೆ ಲಭ್ಯವಾಗು ವಂತೆ ಮಾಡಬಹುದಾದ ವಾಯು ಜಾಗದ ಮಾಹಿತಿ ಸಂಗ್ರಹಿಸುವ ಕೆಲಸ ಪ್ರಗತಿಯಲ್ಲಿದೆ.

ನಾಗರಿಕ ವಿಮಾನಯಾನ ಸಚಿವಾಲಯ ಅಥವಾ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ ಮಾರ್ಗ ದರ್ಶನ ಮತ್ತು ನೆರವಿನಿಂದ ಮಾತ್ರವೇ ಈ ಸಮಸ್ಯೆಯನ್ನು ಪರಿಹರಿಸಬಹುದು. ಹೊಸ ವಿಮಾನ ನಿಲ್ದಾಣ ಪ್ರದೇಶವನ್ನು ಅನಂತರವಷ್ಟೇ ಅಂತಿಮಗೊಳಿಸಲು ಸಾಧ್ಯ. ಈಗಿನ ಪರಿಸ್ಥಿತಿಯಲ್ಲಿ ಸರಕಾರವು ಮೂರು ವಿಭಿನ್ನ ಯೋಜನೆಗಳನ್ನು ಹಾಕಿಕೊಂಡು ಕ್ಷಿಪ್ರವಾಗಿ ಕಾರ್ಯೋನ್ಮುಖವಾಗಬೇಕಿದೆ. ಮೊದಲನೆಯದು, ಕೆಐಎಎಲ್‌ನಲ್ಲಿ ಟರ್ಮಿನಲ್ ೩ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಂಡು 2028-29ರೊಳಗೆ ಸಾರ್ವಜನಿಕ ಸೇವೆಗೆ ಲಭ್ಯವಾಗುವಂತೆ ಅಭಿವೃದ್ಧಿ ಪಡಿಸುವುದು. ಎರಡನೆಯದು, ದೇಶೀಯ ಹಾರಾಟದ ವಿಮಾನಗಳಲ್ಲಿ ಕೆಲವು ವಿಮಾನಗಳನ್ನು ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಕಾರ್ಯಾಚರಿಸುವಂತೆ ಯೋಜನೆ ನಿರ್ಮಿಸಿ ಆ ವಿಮಾನ ನಿಲ್ದಾಣವನ್ನು ೨೦೩೪ರಿಂದ ಸಾರ್ವಜನಿಕ ಸೇವೆಗೆ ಬಳಸುಸುವುದು. ಮೂರನೆಯದು, ಅತ್ಯಂತ ಹೆಚ್ಚು ಆರ್ಥಿಕ ಮತ್ತು ಭೌಗೋಳಿಕ ಸಂಪನ್ಮೂಲ ಬೇಡುವ ಹೊಸ ವಿಮಾನ ನಿಲ್ದಾಣ ಯೋಜನೆ.

ಒಂದು ವರ್ಷದಷ್ಟು ಕಾಲ ಲಭ್ಯವಿರುವ ಎಲ್ಲ ಪ್ರದೇಶಗಳ ವಿಸ್ತೃತ ಅಧ್ಯಯನ ಮಾಡಿ ಸೂಕ್ತ ಪ್ರದೇಶವನ್ನು
ಆರಿಸುವುದು. ಈ ಸಂದರ್ಭದಲ್ಲಿ ಬರಬಹುದಾರ ರಿಯಲ್ ಎಸ್ಟೇಟ್ ಮಾಫಿಯಾದ ಒತ್ತಡವನ್ನು ನಿಭಾಯಿಸು ವುದೂ ಸವಾಲಿನ ಕೆಲಸ! ಪಕ್ಷಾತೀತವಾಗಿ ರಾಜಕಾರಣಿಗಳು, ಉದ್ಯಮಿಗಳು ತಂತಮ್ಮ ಪ್ರಾಬಲ್ಯ ಮತ್ತು ಭೂಮಿ ಇರುವ ಕಡೆ ಉದ್ದೇಶಿತ ವಿಮಾನ ನಿಲ್ದಾಣ ಬರುವಂತೆ ದುಂಬಾಲು ಬೀಳುವುದು ಖಂಡಿತ! ಇದನ್ನೆಲ್ಲ ಮೀರಿ, ಪ್ರಶಸ್ತ ಪ್ರದೇಶ ಆಖೈರುಗೊಂಡು ಹೊಸ ವಿಮಾನ ನಿಲ್ದಾಣ ಯೋಜನೆ ಕೈಗೆತ್ತಿಕೊಳ್ಳುವ ಗುರುತರ ಜವಾಬ್ದಾರಿ ಸರಕಾರಗಳ ಮೇಲಿದೆ. ಈ ಮೂರೂ ಕಾರ್ಯಯೋಜನೆಗಳು ಅಂದುಕೊಂಡಂತೆ ಸಾಕಾರಗೊಂಡು 2029-30ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 3 ಕಾರ್ಯಾರಂಭ ಮಾಡಲಿ.

ವಿಮಾನ ನಿಲ್ದಾಣವನ್ನು ಸುಲಭವಾಗಿ ತಲುಪಲುವಂತೆ ನಮ್ಮ ಮೆಟ್ರೋ ರೈಲು ಸಂಪರ್ಕವೂ ಅಷ್ಟರೊಳಗೆ ಪೂರ್ಣವಾಗಲಿ. 2034ರಿಂದ ಎಚ್‌ಎಎಲ್ ವಿಮಾನ ನಿಲ್ದಾಣ ದೇಶೀಯ ವಿಮಾನಗಳ ಹಾರಾಟಕ್ಕೆ ಲಭ್ಯವಾಗು ವಂತಾಗಲಿ. 2035-37ರ ಸಮಯದಲ್ಲಿ, ಸೂಕ್ತ ಪ್ರದೇಶದಲ್ಲಿ ಬೆಂಗಳೂರಿನ ಹೊಚ್ಚ ಹೊಸ ವಿಮಾನ
ನಿಲ್ದಾಣ ಕಾರ್ಯಾರಂಭ ಆಗುವಂತಾಗಲಿ. ಅಲ್ಲಿಗೂ ನಮ್ಮ ಮೆಟ್ರೋ ರೈಲು ಸಂಪರ್ಕ ಇರಲಿ. ಈ ಮೂರು ಯೋಜನೆಗಳು ನನಸಾಗಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಇಚ್ಛಾಶಕ್ತಿ ತೋರಿಸಲಿ. ವಿಮಾನ ಯಾನ ಕ್ಷೇತ್ರದಲ್ಲಿ ರಾಜಕಾರಣಿಗಳು ‘ರೈಲು ಬಿಡುವುದನ್ನು’ ನಿಲ್ಲಿಸಿ ವಿಮಾನಗಳು ಮಾತ್ರ ಹಾರುವಂತಾಗಲಿ!

(ಲೇಖಕರು: ಸಾಫ್ಟ್‌ ವೇರ್ ಉದ್ಯೋಗಿ)

ಇದನ್ನೂ ಓದಿ: Ravi Sajangadde Column: ಸಿರಿಯಾ ಸಂಕಷ್ಟ ಇನ್ನಾದರೂ ಕೊನೆಯಾಗಲಿ