ಮುಂಬಯಿ: ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದ 18ನೇ ಆವೃತ್ತಿಯ ಐಪಿಎಲ್‌ನ(IPL 2025) ತಾತ್ಕಾಲಿಕ ವೇಳಾಪಟ್ಟಿಯೊಂದು ಬಿಡುಗಡೆಯಾಗಿದೆ. ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ಗೆ ಪ್ರವೇಶಿಸಿದರೆ ಐಪಿಎಲ್ ಫೈನಲ್ ಪಂದ್ಯವು ಮೇ 25 ರಂದು ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯವು ಜೂನ್ 11 ರಿಂದ ಶುರುವಾಗಲಿದೆ. ಅದಕ್ಕೂ ಎರಡು ವಾರ ಮುಂಚಿತವಾಗಿ ಐಪಿಎಲ್ ಟೂರ್ನಿಯನ್ನು ಪೂರ್ಣಗೊಳಿಸಲು ಆಯೋಜಕರು ನಿರ್ಧರಿಸಿದ್ದಾರೆ. ಆದರೆ ಭಾರತ ತಂಡ ಫೈನಲ್ಗೆ ತಲುಪದಿದ್ದರೆ ಮೇ ಅಂತ್ಯದವರೆಗೆ ಐಪಿಎಲ್ ಪಂದ್ಯಾವಳಿ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಕಳೆದ ವರ್ಷ ನಡೆದಂತೆ ಈ ವರ್ಷ ಕೂಡಾ ಐಪಿಎಲ್ ಪಂದ್ಯಾವಳಿಗಳ ವಿಚಾರದಲ್ಲಿ ಯಾವುದೇ ಬದಲಾವಣೆಗಳು ಇಲ್ಲ. ಕಳೆದ ಆವೃತ್ತಿಯಂತೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲೂ 74 ಪಂದ್ಯಗಳು ನಡೆಯಲಿವೆ. ಇನ್ನು ಐಪಿಎಲ್ ಟೂರ್ನಿಯ ಮಾದರಿಯಲ್ಲೂ ಯಾವುದೇ ಬದಲಾವಣೆ ಮಾಡದಿರಲು ಬಿಸಿಸಿಐ ತೀರ್ಮಾನಿಸಿದೆ. ಈ ಮೊದಲು 2022ರ ಐಪಿಎಲ್ ಟೂರ್ನಿಯ ವೇಳೆಯಲ್ಲಿ, 2025ರ ಐಪಿಎಲ್ ಟೂರ್ನಿಯಲ್ಲಿ ಪಂದ್ಯಗಳ ಸಂಖ್ಯೆಯನ್ನು 84ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿತ್ತು. ಆದರೆ ಈಗಿನ ವರದಿಯ ಪ್ರಕಾರ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸದಿರಲು ಬಿಸಿಸಿಐ ತೀರ್ಮಾನಿಸಿದೆ ಎನ್ನಲಾಗಿದೆ.
ಮಾರ್ಚ್ 14 ರಂದು ಐಪಿಎಲ್‌ನ ಉದ್ಘಾಟನ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಕಣಕ್ಕಿಳಿಯುವ ಸಾಧ್ಯತೆಯಿದೆ. ಹೀಗಾಗಿ ಉದ್ಘಾಟನಾ ಪಂದ್ಯವು ಈ ಬಾರಿ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುವ ಸಾಧ್ಯತೆ ಹೆಚ್ಚು. ಐಪಿಎಲ್ ಆರಂಭಕ್ಕೂ ಮುನ್ನ ವುಮೆನ್ಸ್ ಪ್ರೀಮಿಯರ್ ಲೀಗ್ ನಡೆಯಲಿದೆ. ಈ ಟೂರ್ನಿಯು ಫೆಬ್ರವರಿ 6 ರಿಂದ ಶುರುವಾಗಲಿದ್ದು, ಮಾರ್ಚ್ 9 ರಂದು ಮುಗಿಯಲಿದೆ. ಈ ಮೂಲಕ WPL ಮತ್ತು IPL ನಡುವೆ ಒಂದು ವಾರಗಳ ಅಂತರವಿಡಲು ಬಿಸಿಸಿಐ ನಿರ್ಧರಿಸಿದೆ.