Tuesday, 7th January 2025

Viral Video: ಜರ್ಮನಿಯ ಕ್ರಿಸ್‌ಮಸ್‌ ಮಾರುಕಟ್ಟೆಯಲ್ಲಿ ಕಾರು ದಾಳಿ; ಇಬ್ಬರು ಬಲಿ: ಸೌದಿ ಮೂಲದ ವೈದ್ಯನ ಬಂಧನ

Viral Video

ಬರ್ಲಿನ್‌: ಜರ್ಮನಿಯ (Germany) ಕ್ರಿಸ್‌ಮಸ್‌ ಮಾರ್ಕೆಟ್‌ನಲ್ಲಿ ಸೌದಿ ಅರೇಬಿಯಾ ಮೂಲದ ಡಾಕ್ಟರ್‌ ಒಬ್ಬ ಅಡ್ಡಾದಿಡ್ಡಿ ಕಾರು ಚಲಾಯಿಸಿ (Car Accident) ಹುಚ್ಚಾಟ ಮೆರೆದಿದ್ದಾನೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರೆ, 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಸಂಬಂಧ ಪೊಲೀಸರು ಆತನನ್ನು ಬಂಧಿಸಿದ್ದಾರೆ (Viral News).

ಆರೋಪಿ ಸೌದಿ ಅರೇಬಿಯಾದ 50 ವರ್ಷದ ವೈದ್ಯನಾಗಿದ್ದು, ಈತ ಪೂರ್ವ ಸ್ಯಾಕ್ಸೋನಿ-ಅನ್ಹಾಲ್ಟ್‌ನಲ್ಲಿ ವಾಸವಾಗಿದ್ದ ಎಂದು ಸ್ಥಳೀಯ ಮುಖಂಡ ರೈನರ್ ಹ್ಯಾಸೆಲಾಫ್ ಹೇಳಿದ್ದಾರೆ. ನಾವು ದುಷ್ಕರ್ಮಿಯನ್ನು ಬಂಧಿಸಿದ್ದೇವೆ. ಸೌದಿ ಅರೇಬಿಯಾದ ಈ ವ್ಯಕ್ತಿ 2006ರಿಂದ ಜರ್ಮನಿಯಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ ಎಂದು ಅವರು ಮಾಹಿತಿ ನೀಡಿದ್ದಾರೆ.

ಜರ್ಮನಿಯ ಮಡೆಬರ್ಗ್‌ನಲ್ಲಿ ಸಂಜೆ ಸುಮಾರು 7 ಗಂಟೆಗೆ ಈ ಘಟನೆ ಸಂಭವಿಸಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೊ ವೈರಲ್‌ ಆಗಿದೆ. ವಿಡಿಯೊದ ಪ್ರಕಾರ ಮಾರ್ಕೆಟ್‌ ಒಳಗೆ ಕಾರು ನುಗ್ಗುತ್ತಿರುವುದು ಕಂಡು ಜನರು ಕಕ್ಕಾ ಬಿಕ್ಕಿ ಆಗಿದ್ದಾರೆ. ಅರೆ ಕ್ಷಣದಲ್ಲಿ ಜನರ ಮೇಲೆ ಕಾರು ಹರಿದಿದೆ. ಇದೊಂದು ಪೂರ್ವ ನಿಯೋಜಿತ ಉಗ್ರ ದಾಳಿ ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ರೈನರ್ ಹ್ಯಾಸೆಲಾಫ್, ಅವನು ಒಬ್ಬ ಏಕಾಂಗಿ ದಾಳಿಕೋರ ಎಂದು ನಾವು ಭಾವಿಸುತ್ತೇವೆ. ಸದ್ಯ ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಘಟನೆ ನಡೆದ ತಕ್ಷಣ ಆಂಬ್ಯುಲೆನ್ಸ್‌ ಮತ್ತು ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡವು. ಗಂಭೀರವಾಗಿ ಗಾಯಗೊಂಡವರನ್ನು ಸ್ಟ್ರೆಚರ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಘಟನೆಯ ಬಗ್ಗೆ ಸಂತಾಪ ಸೂಚಿಸಿರುವ ಸ್ಪೇಸ್‌ ಎಕ್ಸ್‌ ಸಿಇಒ ಹಾಗೂ ಉದ್ಯಮಿ ಎಲಾನ್‌ಮಸ್ಕ್‌ ಅವರು ಇದೊಂದು ಪೈಶಾಚಿಕ ಕೃತ್ಯ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ : Viral Video: ರಸ್ತೆಗೆ ಕಟ್ಟಿದ ಹಗ್ಗದಿಂದ ಜೀವ ಕಳೆದುಕೊಂಡ ಬೈಕ್‌ ಸವಾರ; ಭೀಕರ ರಸ್ತೆ ಅಪಘಾತದ ವಿಡಿಯೊ ವೈರಲ್