Sunday, 22nd December 2024

Sushila Meena: 12 ವರ್ಷದ ಹುಡುಗಿಯ ಅದೃಷ್ಟವನ್ನೇ ಬದಲಿಸಿದ ಸಚಿನ್ ಹಂಚಿಕೊಂಡ ಆ ಒಂದು ವಿಡಿಯೊ

ಮುಂಬಯಿ: ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್(Sachin Tendulkar) ಅವರು ಇಂದು(ಶನಿವಾರ) ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಒಂದು ವಿಡಿಯೊ ಕೆಲವೇ ಗಂಟೆಗಳ ಅಂತರದಲ್ಲಿ 12 ವರ್ಷದ(12-Year-Old Sushila Meena) ಬಾಲಕಿಯ ಭವಿಷ್ಯವನ್ನೇ ಬದಲಿಸಿದೆ. ರಾಜಸ್ಥಾನ ಮೂಲಕ ಸುಶೀಲಾ ಮೀನಾ(Sushila Meena) ಎನ್ನುವ ಹುಡುಗಿ ಜಹೀರ್‌ ಖಾನ್‌(Zaheer Khan) ಶೈಲಿಯಲ್ಲಿ ಬೌಲಿಂಗ್‌ ನಡೆಸುತ್ತಿದ್ದ ವಿಡಿಯೊವೊಂದು ಸಚಿನ್‌ ಅವರ ಮನಗೆದ್ದಿತ್ತು. ಈ ವಿಡಿಯೊವನ್ನು ಅವರು ತಮ್ಮ ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು ಮೆಚ್ಚುಗೆ ಸೂಚಿಸಿದ್ದರು.

ಇದೀಗ ಸಚಿನ್‌ ಅವರು ಹಂಚಿಕೊಂಡ ವಿಡಿಯೊವನ್ನು ಕಂಡ ಆದಿತ್ಯ ಬಿರ್ಲಾ ಗ್ರೂಪ್, ಬಾಲಕಿಯ ಕ್ರಿಕೆಟ್​ ತರಬೇತಿಗಾಗಿ ಎಲ್ಲಾ ರೀತಿಯ ನೆರವು ನೀಡಲು ಮುಂದಾಗಿದೆ. ‘ಫೋರ್ಸ್ ಫಾರ್ ಗುಡ್’ ಯೋಜನೆಯ ಅಡಿಯಲ್ಲಿ, ಸುಶೀಲಾಗೆ ಕ್ರಿಕೆಟ್ ತರಬೇತಿ ನೀಡಲಾಗುವುದು. ನಾವೆಲ್ಲರೂ ಈ ಹುಡುಗಿಯ ಕ್ರಿಕೆಟ್‌ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಒಂದಾಗೋಣ. ಅವಳು ಭಾರತ ಕ್ರಿಕೆಟ್‌ ತಂಡದಲ್ಲಿ ಆಡುವಂತಾಗಲಿ ಎಂದು ಆದಿತ್ಯ ಬಿರ್ಲಾ ಗ್ರೂಪ್ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

‘ಸುಶೀಲಾ ಮೀನಾ ಅವರ ಬೌಲಿಂಗ್‌ ನೋಡಲು ಎಷ್ಟೊಂದು ನಾಜೂಕು, ನಿರಾಯಾಸವಾಗಿ, ಅಷ್ಟೇ ಆಕರ್ಷಣಿಯವಾಗಿ ಬೌಲಿಂಗ್‌ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಜಹೀರ್‌ ಈ ವಿಡಿಯೊ ನೋಡಿದ್ದೀರ’ ಎಂದು ಬರೆದು ಈ ವಿಡಿಯೊವನ್ನು ಸಚಿನ್‌ ಅವರು ಜಹೀರ್‌ಗೆ ಟ್ಯಾಗ್‌ ಮಾಡಿದ್ದರು. ವಿಡಿಯೊ ಕಂಡ ಜಹೀರ್‌ ಖಾನ್‌ ಕೂಡ ಈಕೆ ಚಿಕ್ಕ ವಯಸ್ಸಿನಲ್ಲಿ ತುಂಬಾ ಬಲಶಾಲಿಯಾಗಿ ಕಾಣುತ್ತಿದ್ದಾಳೆ ಎಂದು ಮೆಚ್ಚುಗೆ ಸೂಚಿಸಿದ್ದರು.

ಇದನ್ನೂ ಓದಿ Sara Tendulkar: ತಂದೆಯ ಫೌಂಡೇಶನ್‌ಗೆ ನಿರ್ದೇಶಕಿಯಾದ ಸಾರಾ ತೆಂಡೂಲ್ಕರ್

ಸಚಿನ್​ ಅವರು ಈ ಹಿಂದೆಯೂ ಇಂತಹದ್ದೇ ಹಲವು ಹಳ್ಳಿ ಪ್ರತಿಭೆಗಳ ಪ್ರದರ್ಶನದ ವಿಡಿಯೊಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸಚಿನ್‌ ಅವರು ʼಸಚಿನ್ ತೆಂಡೂಲ್ಕರ್ ಫೌಂಡೇಶನ್ ‘ ಮೂಲಕ ಶಿಕ್ಷಣ, ಕ್ರೀಡೆ ಮತ್ತು ಆರೋಗ್ಯ ಎಂಬ ಮೂರು ಕ್ಷೇತ್ರಗಳಲ್ಲಿ ಸಮಾಜ ಸೇವೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಸಾರಾ ತೆಂಡೂಲ್ಕರ್ ತಂದೆಯ ಫೌಂಡೇಶನ್ ನಿರ್ದೇಶಕಿಯಾಗಿ ನೇಮಕಗೊಂಡಿದ್ದರು.

24 ವರ್ಷಗಳ ಕ್ರಿಕೆಟ್‌ ಬಾಳ್ವೆಯಲ್ಲಿ 664 ಪಂದ್ಯ, 34,357 ರನ್‌, 201 ವಿಕೆಟ್‌, 100 ಅಂತಾರಾಷ್ಟ್ರೀಯ ಶತಕ, 164 ಅರ್ಧ ಶತಕ, ಲೆಕ್ಕವಿಲ್ಲದಷ್ಟು ದಾಖಲೆಗಳ ಸರದಾರ, ದೇಶದ ಶ್ರೇಷ್ಠ ಗೌರವ ಭಾರತ ರತ್ನ, ಪದ್ಮ ಪ್ರಶಸ್ತಿಗಳ ಒಡೆಯ, ರಾಜೀವ್‌ ಗಾಂಧಿ ಖೇಲ್‌ರತ್ನ ಪ್ರಶಸ್ತಿಗಳಿಂದೆಲ್ಲ ಪುರಸ್ಕೃತರಾಗಿರುವ ಸಚಿನ್‌ ಸಾಧನೆ ನಿಜಕ್ಕೂ ಒಂದು ಅದ್ಭುತವೇ ಸರಿ. ಕ್ರಿಕೆಟ್​ ಬಾಳ್ವೆಯ ಆರಂಭದಿಂದ ಹಿಡಿದು ಕಡೇಯ ದಿನದವರೆಗೂ ಯಾವುದೇ ವಿವಾದವಿಲ್ಲದೆ ಸವ್ಯಸಾಚಿಯಾಗಿದ್ದ ಸಚಿನ್​ ಎಲ್ಲ ಕ್ರಿಕೆಟ್​ ಆಟಗಾರರಿಗೂ ಸ್ಫೂರ್ತಿಯಾಗಿದ್ದಾರೆ.