Sunday, 22nd December 2024

Kannada Sahitya Sammelana: ವಿಶ್ವವಾಣಿ ಮಳಿಗೆಯಲ್ಲಿ ವಿಶ್ವೇಶ್ವರ ಭಟ್‌ ಸೆಲ್ಫಿ, ಆಟೋಗ್ರಾಫ್‌ಗೆ ಡಿಮ್ಯಾಂಡ್‌

Kannada Sahitya Sammelana

ಮಂಡ್ಯ: 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ (Kannada Sahitya Sammelana) ಪುಸ್ತಕ ಮಳಿಗೆಗಳಲ್ಲಿ ʼವಿಶ್ವವಾಣಿʼ ಪುಸ್ತಕ ಮಳಿಗೆ ವಿಶೇಷವಾಗಿ ಗಮನ ಸೆಳೆಯಿತು. ಶನಿವಾರ ಸಂಜೆ ವಿಶ್ವವಾಣಿ ಸಂಪಾದಕ, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌ (Vishweshwar Bhat) ಅವರು ಪುಸ್ತಕ ಮಳಿಗೆಗಳಿಗೆ ಭೇಟಿ ನೀಡಿ, ಓದುಗರ ಜೊತೆಗೆ ಚಿಟ್‌ಚಾಟ್‌, ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ಅವರು ತಮ್ಮ ಹೊಸ ಪುಸ್ತಕಗಳಾದ ʼಸಂಪಾದಕರ ಸದ್ಯಶೋಧನೆʼ ಕೃತಿಯ ನೂತನ ಆವೃತ್ತಿಯನ್ನು ಓದುಗರಿಗೆ ನೀಡಿದರು. ಓದುಗರು ಖರೀದಿಸಿದ ತಮ್ಮ ಕೃತಿಗಳಿಗೆ ಹಸ್ತಾಕ್ಷರ ಹಾಕಿಕೊಟ್ಟರು. ಅವರೊಂದಿಗೆ ಸೆಲ್ಫಿ ಹಾಗೂ ಹಸ್ತಾಕ್ಷರಕ್ಕಾಗಿ ಅಭಿಮಾನಿಗಳು, ಓದುಗರು ವಿಶ್ವವಾಣಿ ಸ್ಟಾಲ್‌ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸೇರಿದರು. ಭಟ್‌ ಅವರ ʼಕುಡಿಯೋಣು ಬಾರಾʼ ʼಸಂಪಾದಕರ ಸದ್ಯಶೋಧನೆʼ ʼಆಸ್ಕ್‌ ದಿ ಎಡಿಟರ್‌ʼ ʼಇದೇ ಅಂತರಂಗ ಸುದ್ದಿʼ ಮೊದಲಾದ ಕೃತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದವು. ಶನಿವಾರ ಸಾಕಷ್ಟು ಸಂಖ್ಯೆಯಲ್ಲಿ ಜನ ಪುಸ್ತಕ ಖರೀದಿಸಿದರು. ಭಾನುವಾರ ಇನ್ನಷ್ಟು ಪ್ರಮಾಣದಲ್ಲಿ ಪುಸ್ತಕ ಮಾರಾಟ ಆಗುವ ನಿರೀಕ್ಷೆ ಇದೆ. ಸಮ್ಮೇಳನದಲ್ಲಿ ವಿಶ್ವವಾಣಿ ಪುಸ್ತಕ ಪ್ರಕಾಶನದ ಎರಡು ಪುಸ್ತಕ ಮಳಿಗೆಗಳಿವೆ. ಬಿ ಬ್ಲಾಕ್‌ನ 29 ಹಾಗೂ ಸಿ ಬ್ಲಾಕ್‌ನ 159 ಸಂಖ್ಯೆಯ ಮಳಿಗೆಗಳಲ್ಲಿ ಪುಸ್ತಕಗಳು ಲಭ್ಯವಿವೆ.

ಶನಿವಾರ ಚಿಗುರಿಕೊಂಡ ಪುಸ್ತಕ ಮಾರಾಟ

ಶನಿವಾರ ಪುಸ್ತಕ ಮಾರಾಟ ಸ್ವಲ್ಪ ಚಿಗುರಿಕೊಂಡಿತು. ಶುಕ್ರವಾರ ಜನರಿದ್ದರೂ ಪುಸ್ತಕ ಖರೀದಿ ಸಾಕಷ್ಟು ಆಗಿರಲಿಲ್ಲ. ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರೂ ಆಗಮಿಸಿದರು. ಪುಸ್ತಕಗಳನ್ನೂ ಖರೀದಿಸಿದರು. ಆದರೆ ಸಂಜೆ ಆರು ಗಂಟೆಗೆ ಜೋರಾಗಿ ಮಳೆ ಬಂದ ಕಾರಣ ಜನ ಅಲ್ಲಲ್ಲೇ ಅವಿತುಕೊಂಡರು ಹೊರತು ಹೊರಗೆ ಬರಲು ಸಾಧ್ಯವಾಗಲಿಲ್ಲ. ಪುಸ್ತಕ ಮಳಿಗೆಗಳು ಇದ್ದಲ್ಲೂ ಕೆಸರುಮಯ ಆಗಿದ್ದರಿಂದ ಜನ ಅತ್ತ ಕಡೆಗೆ ಬರುವುದನ್ನು ಕಡಿಮೆ ಮಾಡಿದರು. ಮಳಿಗೆಗಳಲ್ಲಿ ಮಧ್ಯಾಹ್ನದವರೆಗೂ ದೇವನೂರು ಮಹಾದೇವ, ಪೂರ್ಣಚಂದ್ರ ತೇಜಸ್ವಿ, ಎಸ್‌ಎಲ್‌ ಭೈರಪ್ಪ, ಕುವೆಂಪು, ಶಿವರಾಮ ಕಾರಂತ, ರವಿ ಬೆಳಗೆರೆ, ವಿಶ್ವೇಶ್ವರ ಭಟ್‌, ಜೋಗಿ ಪುಸ್ತಕಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂತು. ಸ್ಪರ್ಧಾತ್ಮಕ ಪುಸ್ತಕಗಳನ್ನು ಹುಡುಕಿ ಬರುವವರು ಹೆಚ್ಚಿದ್ದರು. ಹಲವು ಪುಸ್ತಕ ಮಳಿಗೆಗಳಲ್ಲಿ ಶೇ.೧೦ರಿಂದ ಹಿಡಿದು ಶೇ.75ರವರೆಗೂ ರಿಯಾಯಿತಿ ನೀಡಿದರು.

ಈ ಸುದ್ದಿಯನ್ನೂ ಓದಿ | Kannada Sahitya sammelana: ಕನ್ನಡಕ್ಕೆ ಡಿಜಿಟಲ್‌ ಪ್ರಾಧಿಕಾರ ಬೇಕು; ವಿದ್ಯುನ್ಮಾನ ಗೋಷ್ಠಿಯಲ್ಲಿ ಹಕ್ಕೊತ್ತಾಯ