Sunday, 22nd December 2024

Bangalore Accident: ಕಾರಿನ ಮೇಲೆ ಕಂಟೈನರ್‌ ಉರುಳಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ; ಭೀಕರ ವಿಡಿಯೊ ಇಲ್ಲಿದೆ

Bangalore Accident

ಬೆಂಗಳೂರು: ರಾಜಧಾನಿ ಹೊರವಲಯದ ನೆಲಮಂಗಲದಲ್ಲಿ ಯಮಸ್ವರೂಪಿಯಾಗಿ ಬಂದ ಕಂಟೈನರ್‌ ಲಾರಿ ಉರುಳಿ ಕಾರಿನಲ್ಲಿದ್ದ ಒಂದೇ ಕುಟುಂಬದ 6 ಮಂದಿ ಬಲಿಯಾಗಿದ್ದ ದುರ್ಘಟನೆ ಶನಿವಾರ ಮಧ್ಯಾಹ್ನ ನಡೆದಿತ್ತು. ಬೆಂಗಳೂರಿನಿಂದ ತುಮಕೂರು ಕಡೆಗೆ ಹೋಗುತ್ತಿದ್ದ ಕಾರಿನ ಮೇಲೆ ತುಮಕೂರಿನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕಂಟೈನರ್​ ಲಾರಿ ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಬಿದ್ದಿತ್ತು. ಪರಿಣಾಮ ಕಾರು ಸಂಪೂರ್ಣವಾಗಿ ಅಪ್ಪಚ್ಚಿಯಾಗಿ, ಕಾರಿನಲ್ಲಿದ್ದ ಆರು ಜನ ಸ್ಥಳದಲ್ಲೇ ಮೃತಪಟ್ಟಿದ್ದರು. ಚಲಿಸುತ್ತಿದ್ದ ಲಾರಿ ಏಕಾಏಕಿ ಕಾರಿನ ಮೇಲೆ ಬೀಳುತ್ತಿರುವ ಭೀಕರ ಸಿಸಿಟಿವಿ ದೃಶ್ಯ ಇದೀಗ ಲಭ್ಯವಾಗಿದೆ.

ತುಮಕೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತಾಳೇಕೆರೆ ಬಳಿ ಈ ಭೀಕರ ದುರಂತ ಸಂಭವಿಸಿತ್ತು. ಬೆಂಗಳೂರಿನ ಐಎಸ್‌‍ಡಿ ಸಾಫ್ಟವೇರ್‌ ಸಲ್ಯೂಷನ್‌ ಕಂಪನಿ ಮಾಲೀಕ ಚಂದ್ರಮ್‌ಯಾಗಪ್ಪ ಗೋಳ(48) ಮತ್ತು ಕುಟುಂಬದವರಾದ ಗೌರಾಬಾಯಿ(42), ಮಕ್ಕಳಾದ ದೀಕ್ಷಾ(12), ಜಾನ್‌(16), ಆರ್ಯ(6), ವಿಜಯಲಕ್ಷ್ಮಿ(36) ಮೃತಪಟ್ಟಿದ್ದರು.

ಅತೀ ವೇಗವಾಗಿ ಬಂದ ಕಂಟೈನರ್‌ ಲಾರಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಬಂದು ಸರಣಿ ಅಪಘಾತ ಮಾಡಿ, ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಅದರಲ್ಲಿದ್ದವರು ಸ್ಥಳದಲ್ಲೇ ದುರ್ಮರಣ ಹೊಂದಿದ್ದರು. ಸರಣಿ ಅಪಘಾತದಲ್ಲಿ ಒಂದು ಕಾರು, ಬೈಕುಗಳು, ಬಸ್ಸು ಜಖಂಗೊಂಡಿದ್ದವು.

ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ತಕ್ಷಣ ಮೂರು ಕ್ರೇನ್‌ಗಳನ್ನು ಸ್ಥಳಕ್ಕೆ ಕರೆಸಿಕೊಂಡು ಕಾರಿನ ಮೇಲಿದ್ದ ಕಂಟೈನರ್‌ ಅನ್ನು ತೆರವುಗೊಳಿಸಿದ್ದರು. ಬಳಿಕ ಸ್ಥಳೀಯರ ನೆರವಿನಿಂದ ಕಾರಿನೊಳಗೆ ಸಿಕ್ಕಿಕೊಂಡಿದ್ದ ಆರು ಮಂದಿಯ ಮೃತದೇಹಗಳನ್ನು ಹೊರಗೆ ತೆಗೆದು, ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರು.

ಐಎಎಸ್‌ಟಿ ಸಾಫ್ಟ್‌ವೇರ್ ಸಲ್ಯೂಷನ್ಸ್ ಕಂಪನಿ ಸ್ಥಾಪಿಸಿ ಸುಮಾರು 300 ಜನರಿಗೆ ಉದ್ಯೋಗ ಕೊಟ್ಟಿರುವ ಚಂದ್ರಯಾಗಪ್ಪ ಅವರು ಎರಡು ತಿಂಗಳ ಹಿಂದಷ್ಟೆ ಐಷಾರಾಮಿ ವೋಲ್ವೋ ಕಾರು ಖರೀದಿಸಿದ್ದರು. ಕುಟುಂಬದೊಂದಿಗೆ ವಾರಾಂತ್ಯದ ಪ್ರವಾಸಕ್ಕೆ ಹೊರಟಿದ್ದ ವೇಳೆ ಈ ದುರಂತ ಸಂಭವಿಸಿದೆ.