Sunday, 22nd December 2024

R Ashwin : ನಿವೃತ್ತಿ ಘೋಷಿಸಿರುವ ಆರ್.‌ ಅಶ್ವಿನ್‌ಗೆ ಪ್ರಧಾನಿ ಮೋದಿಯಿಂದ ಸುದೀರ್ಘ ಅಭಿನಂದನಾ ಪತ್ರ

R Ashwin

ನವದೆಹಲಿ: ಭಾರತದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (R Ashwin) ಅವರ ಗಮನಾರ್ಹ 14 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಿನಂದನೆ ಸಲ್ಲಿಸಿದ್ದಾರೆ. ಭಾರತೀಯ ಕ್ರಿಕೆಟ್‌ನ ಶ್ರೇಷ್ಠ ಆಟಗಾರನಲ್ಲಿ ಒಬ್ಬರಾದ ಅಶ್ವಿನ್, ಆಸ್ಟ್ರೇಲಿಯಾ ವಿರುದ್ಧದ ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ್ದರು.

ಟೀಮ್‌ ಇಂಡಿಯಾದ ಅನುಭವಿ ಆಟಗಾರ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದು ಶುಭ ಹಾರೈಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ನಿಮ್ಮ ನಿರ್ಧಾರ ಭಾರತ ಅಷ್ಟೇ ಅಲ್ಲ, ಬೇರೆ ದೇಶಗಳ ಅಭಿಮಾನಿಗಳನ್ನು ಚಕಿತ ಗೊಳಿಸಿದೆ. ಮೈದಾನದಲ್ಲಿ ಆಫ್‌ ಬ್ರೇಕ್‌ ಮಾಡಿ ಎಲ್ಲರನ್ನು ಕಾಡುವ ನೀವು, ಕೇರಂ ಬೌಲ್ ಮಾಡಿ ಎಲ್ಲರನ್ನೂ ಬೋಲ್ಡ್ ಮಾಡಿದ್ದೀರಾ. ಭಾರತಕ್ಕೆ ಇಷ್ಟು ವರ್ಷಗಳ ಕಾಲ ಅದ್ಭುತ ಪ್ರದರ್ಶನ ನೀಡಿದ್ದೀರಿ. ಇದೀಗ ಈ ನಿರ್ಧಾರ ತಳೆಯುವುದು ಬಹಳ ಕಠಿಣ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದ್ದಾರೆ.

ನಿವೃತ್ತಿ ಪಡೆಯುವ ನಿರ್ಧಾರ ನಿಮಗೆ ಸುಲಭವಾಗಿರಲಿಲ್ಲ. ಇಷ್ಟು ವರ್ಷಗಳ ಕಾಲ ಟೀಮ್ ಇಂಡಿಯಾದ ಭಾಗವಾಗಿದ್ದೀರಿ. ನಿಮ್ಮ ಅದ್ಭುತ ವೃತ್ತಿಜೀವನಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಐಕಾನಿಕ್ ಜೆರ್ಸಿ ಸಂಖ್ಯೆ 99 ಅನ್ನು ಅಭಿಮಾನಿಗಳು ಮತ್ತು ತಂಡದ ಸಹ ಆಟಗಾರರು ಸಹ ಮಿಸ್ ಮಾಡಿಕೊಳ್ಳುತ್ತಾರೆ ಎಂದಿದ್ದಾರೆ.

ಅಶ್ವಿನ್ ಕುಟುಂಬಕ್ಕೆ ಅಭಿನಂದನೆ

ಪ್ರಧಾನಿ ಮೋದಿ ಅವರು ಅಶ್ವಿನ್ ಅವರ ಕುಟುಂಬಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅವರ ಯಶಸ್ಸಿನಲ್ಲಿ ಅವರ ಪತ್ನಿ ಪ್ರೀತಿ ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳು ಹಾಗೂ ಪೋಷಕರು ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ. ಇದೀಗ ನೀವು ನಿಮ್ಮ ಪ್ರೀತಿಪಾತ್ರರಿಗೆ ಹೆಚ್ಚಿನ ಸಮಯ ನೀಡುವ ಮೂಲಕ ಮತ್ತು ಆಟಕ್ಕೆ ತಮ್ಮ ಕೊಡುಗೆಗಳನ್ನು ನೀಡುವ ಮೂಲಕ ಭವಿಷ್ಯವನ್ನು ಪೂರೈಸಲಿ ಎಂದು ಪ್ರಧಾನಿ ಹಾರೈಸಿದರು.

ನೀವು ಇಷ್ಟು ವರ್ಷ ಪ್ರೀತಿಸಿರುವ ಆಟಕ್ಕೆ ಇನ್ಮುಂದೆಯೂ ಕೊಡುಗೆ ನೀಡುವುದನ್ನು ಮುಂದುವರಿಸಲು ನೀವು ಹೊಸ ಮಾರ್ಗಗಳನ್ನು ಕಂಡುಕೊಳ್ಳಬಹುದು. ನಿಮ್ಮ ಅತ್ಯುತ್ತಮ ವೃತ್ತಿಜೀವನಕ್ಕೆ ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ನಿಮ್ಮ ಮುಂದಿನ ಜೀವನಕ್ಕೆ ಶುಭಾಶಯಗಳು ಎಂದು ಮೋದಿ ತಿಳಿಸಿದ್ದಾರೆ.

38 ವರ್ಷದ ಅಶ್ವಿನ್, ಆರು ಶತಕಗಳು ಸೇರಿದಂತೆ 3,503 ರನ್ ಗಳಿಸುವುದರ ಜೊತೆಗೆ 106 ಟೆಸ್ಟ್ ಪಂದ್ಯಗಳಲ್ಲಿ 537 ವಿಕೆಟ್‌ಗಳನ್ನು ಪಡೆದಿದ್ದಾರೆ. ಏಕದಿನದಲ್ಲಿ 156 ಮತ್ತು ಟಿ20ಯಲ್ಲಿ 72 ವಿಕೆಟ್‌ಗಳನ್ನು ಕಬಳಿಸಿರುವ ದಾಖಲೆ ಅವರ ಹೆಸರಲ್ಲಿದೆ.

ಈ ಸುದ್ದಿಯನ್ನೂ ಓದಿ : R Ashwin: ಅಶ್ವಿನ್​ ದಿಢೀರ್​ ವಿದಾಯ ನಿರ್ಧಾರಕ್ಕೆ ಕಾರಣವೇನು?