ಕೌಲಾಲಂಪುರ್: ಉದ್ಘಾಟನಾ ಆವೃತ್ತಿಯ ಅಂಡರ್ -19 ಮಹಿಳಾ ಏಷ್ಯಾ ಕಪ್ ಟೂರ್ನಿಯಲ್ಲಿ (Under-19 Women’s Asia Cup) ಭಾರತ ತಂಡ ಚಾಂಪಿಯನ್ ಆಗಿದೆ. ಗೊಂಗಾಡಿ ತ್ರಿಶಾ (52) ಅವರ ಅರ್ಧಶತಕದ ಬಲದಿಂದ ಭಾರತ ಮಹಿಳಾ ತಂಡ, ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ಬಾಂಗ್ಲಾದೇಶ ವಿರುದ್ಧ 41 ರನ್‌ಗಳ ಗೆಲುವು ಪಡೆಯಿತು. ಆ ಮೂಲಕ ಜೂನಿಯರ್ ಮಹಿಳಾ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಇಲ್ಲಿನ ಬೇಯುಮಾಸ್ ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಫೈನಲ್ ಹಣಾಹಣಿಯಲ್ಲಿ ಭಾರತ ತಂಡ ನೀಡಿದ್ದ 118 ರನ್‌ಗಳ ಸುಲಭ ಗುರಿಯನ್ನು ಹಿಂಬಾಲಿಸಿದ್ದ ಬಾಂಗ್ಲಾದೇಶ ತಂಡ, ಆಯುಷಿ ಶುಕ್ಲಾ ಅವರ ಸ್ಪಿನ್ ಮೋಡಿಗೆ ನಲುಗಿ 18.3 ಓವರ್‌ಗಳಿಗೆ ಕೇವಲ76 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ 41 ರನ್‌ಗಳಿಂದ ಸೋಲು ಒಪ್ಪಿಕೊಂಡಿತು.
ಫೈನಲ್ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಭಾರತ ತಂಡದ ಪರ ಗಮನ ಸೆಳೆದಿದ್ದು ಗೊಂಗಾಡಿ ತ್ರಿಷಾ. ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಇವರು ಆಡಿದ 47 ಎಸೆತಗಳಲ್ಲಿ 5 ಬೌಂಡರಿಗಳು ಹಾಗೂ 2 ಸಿಕ್ಸರ್ ಬಲದಿಂದ 52 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಭಾರತ ತಂಡ 100ರ ಗಡಿ ದಾಟುವಲ್ಲಿ ಪ್ರಮುಖ ಪಾತ್ರವಹಿಸಿದರು. ಮಧ್ಯಮ ಕ್ರಮಾಂಕದಲ್ಲಿ 17 ರನ್ ಗಳಿಸಿದ ಮಿಥಾಲಿ ವಿನೋದ್ ಎರಡನೇ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇವರನ್ನು ಹೊರತುಪಡಿಸಿ ನಾಯಕಿ ನಿಕಿ ಪ್ರಸಾದ್ 12 ಮತ್ತು ಆಯುಷಿ ಶುಕ್ಲಾ 10 ರನ್‌ಗಳಿಸಿದರು. ಇನ್ನುಳಿದವರು ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಬಾಂಗ್ಲಾದೇಶ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ಫರ್ಜಾನ ಎಸ್ಮಿನ್ ನಾಲ್ಕು ಒವರ್‌ಗಳಲ್ಲಿ 31 ರನ್ ನೀಡಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು.
ಬಳಿಕ ಗುರಿ ಹಿಂಬಾಲಿಸಿದ ಬಾಂಗ್ಲಾದೇಶ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಜುವೈರಿಯಾ ಫೆರ್ಡಸ್ (22 ರನ್) ಹಾಗೂ ಫಹ್ಮಿದಾ ಚೋಯಾ (18 ರನ್) ಅವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ಭಾರತದ ಪರ ಆಯುಷಿ ಶುಕ್ಲಾ ಸ್ಪಿನ್ ಮೋಡಿಯನ್ನು ಎದುರಿಸುವಲ್ಲಿ ಬಾಂಗ್ಲಾ ಬ್ಯಾಟ್ಸ್‌ವುಮೆನ್‌ಗಳು ಎಡವಿದರು. ಇನ್ನುಳಿದ ಬಾಂಗ್ಲಾ ಬ್ಯಾಟರ್‌ಗಳು ಎರಡಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಗಲಿಲ್ಲ.
ಭಾರತದ ಪರ ಆಯುಷಿ ಶುಕ್ಲಾ 17 ರನ್ ನೀಡಿ ಮೂರು ವಿಕೆಟ್‌ಗಳನ್ನು ಕಬಳಿಸಿದರೆ, ಪರುಣಿಕಾ ಸಿಸೋಡಿಯಾ ಹಾಗೂ ಸೋನಮ್ ಯಾದವ್ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು. ವಿಜೆ ಜೋಶಿತಾ ಅವರ ಒಂದು ವಿಕೆಟ್ ಪಡೆದರು.
ಸ್ಕೋರ್ ವಿವರ
ಭಾರತ ಮಹಿಳಾ ತಂಡ: 20 ಓವರ್‌ಗಳಿಗೆ 117-7 (ಗೊಂಗಾಡಿ ತ್ರಿಷಾ 52 ರನ್, ಮಿಥಾಲಿ ವಿನೋದ್ 17; ಫರ್ಜಾನ ಎಸ್ಮಿನ್ 31 ಕ್ಕೆ 4)
ಬಾಂಗ್ಲಾದೇಶ ಮಹಿಳಾ ತಂಡ: 18.3 ಓವರ್‌ಗಳಿಗೆ 76-10 (ಜುವೈರಿಯಾ ಫೆರ್ಡಸ್ 22 ರನ್, ಫಹ್ಮಿದಾ ಚೋಯಾ 18 ರನ್; ಆಯುಷಿ ಶುಕ್ಲಾ 17 ಕ್ಕೆ 3, ಪರುಣಿಕಾ ಸಿಸೋಡಿಯಾ 12 ಕ್ಕೆ 2, ಸೋನಮ್ ಯಾದವ್ 13 ಕ್ಕೆ 2
ಪಂದ್ಯ ಶ್ರೇಷ್ಠ ಪ್ರಶಸ್ತಿ: ಗೊಂಗಾಡಿ ತ್ರಿಷಾ
ಈ ಸುದ್ದಿಯನ್ನು ಓದಿ: Richa Ghosh: ಸ್ಫೋಟಕ ಬ್ಯಾಟಿಂಗ್ ನಡೆಸಿ ವಿಶ್ವ ದಾಖಲೆ ಸರಿಗಟ್ಟಿದ ರಿಚಾ ಘೋಷ್