Sunday, 22nd December 2024

Rohit Sharma: ಬಾಕ್ಸಿಂಗ್‌ ಡೇ ಟೆಸ್ಟ್‌ಗೂ ಮುನ್ನ ಭಾರತ ತಂಡಕ್ಕೆ ಗಾಯದ ಭೀತಿ!

India vs Australia: Injury scare for Rohit Sharma after blow to knee in Melbourne nets

ಮೆಲ್ಬರ್ನ್‌: ಆಸ್ಟ್ರೇಲಿಯಾ ವಿರುದ್ದ ನಾಲ್ಕನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಗಾಯದ ಭೀತಿ ಎದುರಾಗಿದೆ. ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma) ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸ ನಡೆಸುತ್ತಿದ್ದ ಸಂದರ್ಭದಲ್ಲಿ ಅವರ ಮೊಣಕಾಲಿಗೆ ಗಾಯವಾಗಿದೆ. ಈ ಹಿನ್ನೆಲೆಯಲಿ ಪ್ರವಾಸಿ ತಂಡದ ಕ್ಯಾಂಪ್‌ನಲ್ಲಿ ಗಾಯದ ಆತಂಕ ಉಂಟಾಗಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್‌ ಪಂದ್ಯ ಡಿಸೆಂಬರ್‌ 26 ರಂದು ಮೆಲ್ಬರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಟೀಮ್‌ ಇಂಡಿಯಾ, ಮೆಲ್ಬರ್ನ್‌ನಲ್ಲಿ ಕಠಿಣ ತಾಲೀಮು ನಡೆಸುತ್ತಿದೆ. ಡಿಸೆಂಬರ್‌ 22 ರಂದು ನೆಟ್ಸ್‌ನಲ್ಲಿ ಥ್ರೋಬಾಲ್‌ ಸ್ಪೆಷಲಿಸ್ಟ್‌ ಸಹಾಯದಿಂದ ರೋಹಿತ್‌ ಶರ್ಮಾ (Rohit Sharma) ಬ್ಯಾಟಿಂಗ್‌ ಅಭ್ಯಾಸ ನಡೆಸುತ್ತಿದ್ದರು. ಈ ವೇಳೆ ಚೆಂಡು ರೋಹಿತ್‌ ಶರ್ಮಾ ಅವರ ಪ್ಯಾಡ್‌ಗೆ ಬಲವಾಗಿ ಬಡಿದಿತ್ತು ಹಾಗೂ ಬಲಗೈ ಬ್ಯಾಟ್ಸ್‌ಮನ್‌ ನೆಟ್ಸ್‌ನಿಂದ ಹೊರಗಡೆ ಬಂದು ಕುಳಿತರು ಹಾಗೂ ತಂಡದ ಫಿಸಿಯೊಗಳು ಅವರನ್ನು ಪರಿಶೀಲನೆ ನಡೆಸಿದರು.

ರೋಹಿತ್‌ ಶರ್ಮಾ ಅವರ ಗಾಯದ ಸ್ಥಿತಿ ಯಾವ ರೀತಿ ಇದೆ ಎಂದು ಇನ್ನೂ ಬಹಿರಂಗವಾಗಿಲ್ಲ. ಅಂದ ಹಾಗೆ ಕಳೆದ ಎರಡೂ ಪಂದ್ಯಗಳಲ್ಲಿ ರೋಹಿತ್‌ ಶರ್ಮಾ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದಾರೆ. ಇದೀಗ ಅವರು ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿದ್ದಾರೆ.

ಕೈಗೆ ಚೆಂಡು ತಗುಲಿಸಿಕೊಂಡಿದ್ದ ಕೆಎಲ್‌ ರಾಹುಲ್‌

ಇದಕ್ಕೂ ಮುನ್ನ ಶನಿವಾರ ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸ ನಡೆಸುತ್ತಿದ್ದ ವೇಳೆ ಕೆಎಲ್‌ ರಾಹುಲ್‌ ಅವರ ಕೈಗೆ ಚೆಂಡು ತಗುಲಿತ್ತು. ಈ ವೇಳೆ ನೆಟ್ಸ್‌ ಬಳಿ ಬಂದಿದ್ದ ತಂಡದ ಫಿಸಿಯೊ ಕನ್ನಡಿಗನ ಕೈ ಅನ್ನು ಪರಿಶೀಲಿಸಿದ್ದರು. ಮೆಲ್ಬರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಕೆಎಲ್‌ ರಾಹುಲ್‌ ಅವರ ಬಲಗೈಗೆ ಚೆಂಡು ಬಲವಾಗಿ ತಗುಲಿತ್ತು. ಆದರೆ, ಅವರ ಗಾಯದ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.

ವಿರಾಟ್‌ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಭಾರತ ತಂಡ ಕೊನೆಯ ಎರಡು ಪ್ರವಾಸಗಳಲ್ಲಿ ಬಾರ್ಡರ್‌-ಗವಾಸ್ಕರ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಇದೀಗ ಟೀಮ್‌ ಇಂಡಿಯಾ ಕಾಂಗರೂ ನಾಡಿನಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಲು ಎದುರು ನೋಡುತ್ತಿದೆ. ಅದರಂತೆ ಆರಂಭಿಕ ಮೂರು ಪಂದ್ಯಗಳ ಅಂತ್ಯಕ್ಕೆ ಸರಣಿಯಲ್ಲಿ 1-1 ಸಮಬಲವನ್ನು ಕಾಯ್ದುಕೊಂಡಿವೆ. ಇದೀಗ ಟೀಮ್‌ ಇಂಡಿಯಾ ಟೆಸ್ಟ್‌ ಸರಣಿಯನ್ನು ಗೆಲ್ಲಬೇಕೆಂದರೆ ಕೊನೆಯ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದು, ಮತ್ತೊಂದನ್ನು ಡ್ರಾ ಮಾಡಿಕೊಳ್ಳಬೇಕು ಅಥವಾ ಕೊನೆಯ ಎರಡೂ ಪಂದ್ಯಗಳನ್ನು ಜಯಿಸಬೇಕು.

ಎಂಸಿಜಿನಲ್ಲಿ ಭಾರತದ ದಾಖಲೆ

ಮೆಲ್ಬರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಭಾರತ ತಂಡ ಇಲ್ಲಿಯವರೆಗೂ ಆಡಿದ 14 ಟೆಸ್ಟ್‌ ಪಂದ್ಯಗಳಿಂದ ಕೇವಲ 4ರಲ್ಲಿ ಗೆದ್ದಿದ್ದು, ಎಂಟು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಇನ್ನುಳಿದ ಎರಡು ಪಂದ್ಯಗಳು ಡ್ರಾನಲ್ಲಿ ಅಂತ್ಯ ಕಂಡಿವೆ. 1948ರಲ್ಲಿ ಮೊಟ್ಟ ಮೊದಲ ಬಾರಿ ಭಾರತ ತಂಡ ಎಂಸಿಜಿನಲ್ಲಿ ಟೆಸ್ಟ್‌ ಆಡಿತ್ತು. ಈ ವೇಳೆ ಡೊನಾಲ್ಡ್‌ ಬ್ರಾಡ್‌ಮನ್‌ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದರು. ಈ ಪಂದ್ಯದಲ್ಲಿ ಲಾಲ್‌ ಅಮರನಾಥ್‌ ಅವರ ನಾಯಕತ್ವದ ಭಾರತ 233 ರನ್‌ಗಳಿಂದ ಸೋಲು ಅನುಭವಿಸಿತ್ತು. 2014ರ ಬಳಿಕ ಭಾರತ ಎಂಸಿಜಿಯಲ್ಲಿ ಸೋತಿಲ್ಲ. ಒಂದರಲ್ಲಿ ಡ್ರಾ ಹಾಗೂ ಎರಡು ಪಂದ್ಯಗಳಲ್ಲಿ ಜಯಿಸಿದೆ.

ಈ ಸುದ್ದಿಯನ್ನು ಓದಿ: IND vs AUS: ಜಸ್‌ಪ್ರೀತ್‌ ಬುಮ್ರಾ ಅಲ್ಲ, ಭಾರತ ತಂಡಕ್ಕೆ ಕೀ ಬೌಲರ್‌ ಹೆಸರಿಸಿದ ನೇಥನ್‌ ಲಯಾನ್‌!