Sunday, 22nd December 2024

Mumbai Horror: ಅತಿ ವೇಗದಲ್ಲಿ ಕಾರು ಚಾಲನೆ- ಯುವಕನ ಹುಚ್ಚಾಟಕ್ಕೆ 4 ವರ್ಷದ ಬಾಲಕ ಬಲಿ

Mumbai Horror

ಮುಂಬೈ: ಯುವಕನೋರ್ವ ಕಾರನ್ನು (Car Accident) ಮಿತಿ ಮೀರಿದ ವೇಗದಲ್ಲಿ ಚಲಾಯಿಸಿ ನಾಲ್ಕು ವರ್ಷದ ಬಾಲಕನನ್ನು ಬಲಿ ಪಡೆದ ಘಟನೆ ಮುಂಬೈನಲ್ಲಿ (Mumbai Horror ) ನಡೆದಿದೆ. ಮುಂಬೈನ ಅಂಬೇಡ್ಕರ್ ಕಾಲೇಜು ಬಳಿಯ ವಡಾಲಾ ಪ್ರದೇಶದಲ್ಲಿ 19 ವರ್ಷದ ಯುವಕ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದು ನಾಲ್ಕು ವರ್ಷದ ಬಾಲಕ ಮೃತಪಟ್ಟಿದ್ದಾನೆ. ಎಂದು ಪೊಲೀಸರು ವರದಿ ಮಾಡಿದ್ದಾರೆ. ಮೃತಪಟ್ಟ ಬಾಲಕನನ್ನು ಆಯುಷ್ ಲಕ್ಷ್ಮಣ್ ಕಿನ್ವಾಡೆ ಎಂದು ಗುರುತಿಸಲಾಗಿದ್ದು, ತನ್ನ ಕುಟುಂಬದೊಂದಿಗೆ ಪಾದಚಾರಿ ಮಾರ್ಗದಲ್ಲಿ ನಡೆದು ಹೋಗುತ್ತಿದ್ದ ಎನ್ನಲಾಗಿದೆ. ಮೃತ ಬಾಲಕನ ಕುಟುಂಬ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು.

ಆರೋಪಿಯನ್ನು ಭೂಷಣ್ ಸಂದೀಪ್ ಗೋಲೆ ಎಂದು ಗುರುತಿಸಲಾಗಿದ್ದು, ಈತ ವಿಲೆ ಪಾರ್ಲೆ ನಿವಾಸಿಯಾಗಿದ್ದಾನೆ. ಹ್ಯುಂಡೈ ಕ್ರೆಟಾ ಕಾರು ಚಲಾಯಿಸುತ್ತಿದ್ದ ವೇಳೆ ಬಾಲಕನಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ವೇಳೆ ಚಾಲಕ ಮದ್ಯದ ಅಮಲಿನಲ್ಲಿದ್ದನೇ ಎಂಬ ಬಗ್ಗೆ ಪೊಲೀಸ್‌ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ವೈದ್ಯಕೀಯ ವರದಿಗಾಗಿ ಕಾಯಲಾಗುತ್ತಿದೆ.

ಸಂಜೆ 5 ಗಂಟೆ ಸುಮಾರಿಗೆ ಅವರ ಮನೆಯ ಬಳಿ ಆಟವಾಡುತ್ತಿದ್ದಾಗ ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಬಾಲಕನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಯುಷ್ ತಕ್ಷಣವೇ ಮೃತಪಟ್ಟಿದ್ದಾನೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸ್ ತಂಡ ಮಗುವಿನ ಶವವನ್ನು ಕೆಇಎಂ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ. ಹೆಚ್ಚುವರಿಯಾಗಿ, ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

ಕೆಲ ದಿನಗಳಿಂದ ಮುಂಬೈನಲ್ಲಿ ಅಪಘಾತ ಸಂಭವಿಸುತ್ತಿದ್ದು, ಡಿ.9ರಂದು ಕುರ್ಲಾದಲ್ಲಿ ನಾಗರಿಕ-ಚಾಲಿತ ಬೃಹನ್‌ಮುಂಬೈ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್‌ಪೋರ್ಟ್ ಸಂಸ್ಥೆ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಮುಂಬೈನಲ್ಲಿ ಚಾಲಕನೊಬ್ಬ ಪಾದಚಾರಿಗಳು ಮತ್ತು ವಾಹನಗಳಿಗೆ ಡಿಕ್ಕಿ ಹೊಡೆದು ಏಳು ಜನರನ್ನು ಬಲಿ ಪಡೆದಿತ್ತು. ಘಟನೆಯಲ್ಲಿ 42 ಮಂದಿ ಗಾಯಗೊಂಡಿದ್ದರು.

ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ರಸ್ತೆ ಅಪಘಾತಗಳಿಗೆ ಸಾಕ್ಷಿಯಾದ ರಾಜ್ಯಗಳಲ್ಲಿ ಮಹಾರಾಷ್ಟ್ರವೂ ಸೇರಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕಳೆದ ವಾರ ಹೇಳಿದೆ . ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪಡೆದ ದತ್ತಾಂಶವನ್ನು ಆಧರಿಸಿ ವರದಿಯು 2018-2022ರ ಅವಧಿಯಲ್ಲಿ ಭಾರತದಾದ್ಯಂತ ರಸ್ತೆ ಅಪಘಾತಗಳಲ್ಲಿ 7 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಬಹಿರಂಗಪಡಿಸಿದೆ.

ಈ ಸುದ್ದಿಯನ್ನೂ ಓದಿ : Viral Video: ಮುಂಬೈಯ ಭೀಕರ ಬಸ್‌ ದುರಂತ: ವೈರಲ್‌ ಆಯ್ತು ಅಪಘಾತದ ವಿಡಿಯೊ