Monday, 23rd December 2024

Kannada Sahitya Sammelana: ಕುಲಗೋತ್ರ ನಿಮ್ಮ ಔನ್ನತ್ಯ ಹೇಳುವುದಿಲ್ಲ: ಅಬೂಬಕರ್ ಸಿದ್ದೀಕ್

ಸಮಾನಾಂತರ ವೇದಿಕೆ-1(ಮಂಡ್ಯ): ಕುಲಗೋತ್ರ ನಿಮ್ಮ ಔನ್ನತ್ಯ ಹೇಳುವುದಿಲ್ಲ. ಏಕೆಂದರೆ, ಎಲ್ಲರೂ ಗಂಡು ಹೆಣ್ಣಿನಿಂದಲೇ ಬಂದವರು. ಇಬ್ಬರ ಸಮ್ಮಿಳಿತವೇ ಮನುಷ್ಯ ಸೃಷ್ಟಿ. ಹಾಗೆಂದ ಮೇಲೆ ಒಬ್ಬರ ಔನ್ನತ್ಯವನ್ನು ಜಾತಿ, ಧರ್ಮದಿಂದ ಅಳೆಯಲು ಹೇಗೆ ಸಾಧ್ಯ ಎಂದು ಚಿಂತಕ ಕೆ.ಎಂ. ಅಬೂಬಕರ್ ಸಿದ್ದೀಕ್‌ ಪ್ರಶ್ನಿಸಿದರು. ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ (Kannada Sahitya Sammelana) ಕೊನೆಯ ದಿನವಾದ ಭಾನುವಾರ ಸಮಾನಾಂತರ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ” ಸಮಾನತೆ ಸಾರಿದ ದಾರ್ಶನಿಕರು ” ಕುರಿತಾದ ಗೋಷ್ಠಿಯಲ್ಲಿ ಅವರು ಆಶಯ ನುಡಿಗಳನ್ನಾಡಿದರು.

ಈ ಜಗತ್ತಿಗೆ ಸಮಾನತೆಯನ್ನು ಬೋದಿಸಿದವರು ದಾರ್ಶನಿಕರು. ದಾರ್ಶನಿಕರ ತತ್ವ ಸಿದ್ಧಾಂತವು ಇಂದಿಗೂ ಜನತೆಗೆ ತಲುಪುತ್ತಿದೆ. ದಾರ್ಶನಿಕರ ಪ್ರಭಾವ ಜನಸಾಮಾನ್ಯರನ್ನು ಮಾತ್ರವಲ್ಲ, ರಾಜ ಮಹಾರಾಜರ ಮೇಲೂ ಬೀರಿತ್ತು. ಕೆಲ ರಾಜಮಹಾರಾಜರು ದಾರ್ಶನಿಕರನ್ನು ತಮ್ಮ ಆಸ್ಥಾನದಲ್ಲಿ ಇಟ್ಟುಕೊಂಡಿದ್ದರು. ಏಕೆಂದರೆ ಜನಪರ ನಿಲುವುಗಳಿಗೆ ಅವರು ದಾರ್ಶನಿಕರನ್ನು ಅವಲಂಬಿಸಿದ್ದರು. ಈ ಮೂಲಕ ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದರು ಎಂದರು.

ಇಡೀ ದೇಶವ್ಯಾಪಿ ಕರ್ನಾಟಕದಲ್ಲಿ ಸಮಾನತೆ ಬಗ್ಗೆ ದೊಡ್ಡ ದನಿ ಎದ್ದಿದೆ. ಮೇಲು ಕೀಳು ಎಂಬ ವಿಚಾರಗಳ ವಿರುದ್ಧ ಬಸವಣ್ಣ ದನಿಯೆತ್ತಿ ಅಸಮಾನತೆ ವಿರುದ್ಧ ಹೋರಾಟ ನಡೆಸಿದರು. ಜಾತಿ, ವರ್ಗ, ಧರ್ಮ ವಿರುದ್ಧ ಹೋರಾಟ ಮಾಡಿದರು ಎಂದು ಹೇಳಿದರು.

ಅಲ್ಪಸಂಖ್ಯಾತ ಹಾಗೂ ಬಹುಸಂಖ್ಯಾತ ಎಂದು ಧರ್ಮದ ವರ್ಗೀಕರಣ ಆಗಿದೆ. ಮತಪಂಥ ಯಾವುದನ್ನೂ ನೋಡಬಾರದು ಎಂದು ಬಸವಣ್ಣ ಹೇಳಿದ್ದಾರೆ. ಅವರ ಮಾರ್ಗದರ್ಶನ ನಮ್ಮ ನಡೆಯಾಗಬೇಕು ಎಂದು ತಿಳಿಸಿದ ಅವರು ದಾರ್ಶನಿಕರ ದರ್ಶನಗಳಲ್ಲಿ ಸಾಮ್ಯತೆ ಕಾಣಬಹುದು. ದುರ್ಗುಣ ನಿವಾರಿಸುವುದೇ ಅವರ ಉದ್ದೇಶ ಆಗಿತ್ತು. ಸಮಾನತೆಯ ಕ್ಷಿಪ್ರ ಚಳವಳಿಯಲ್ಲಿ ಸೂಫಿ ಸಂತರು ಎಲ್ಲರನ್ನೂ ಒಳಗೊಂಡು ಬಹಳ ಬೇಗ ಬಂದರು. ಆ ಮೂಲಕ ಲೌಕಿಕ ಮತ್ತು ಪಾರಮಾರ್ಥಿಕ ಸಮಸ್ಯೆಗಳಿಗೆ ಪರಿಹಾರ ಹುಡುಕಿದರು ಎಂದರು.

“ಸಾಂಸ್ಕೃತಿಕ ನಾಯಕ ಬಸವಣ್ಣ” ಎಂದು ವಿಷಯ ಕುರಿತು ಮಾತನಾಡಿದ ಶ್ರೀ ಶಿವರುದ್ರ ಸ್ವಾಮೀಜಿ, ನಾವು ಇಂದು ಜಾತಿ, ಮತ, ಪಂಥ, ಧರ್ಮ ಎಲ್ಲವನ್ನೂ ಇಟ್ಟುಕೊಂಡು ಗೊಂದಲದಲ್ಲಿ ಇದ್ದೀವಿ. ಮನುಷ್ಯರು ಸಮಾನ, ಪ್ರಾಣಿಗಳಲ್ಲಿ ಜಾತಿ ಇದೆ. ಕೀಳು ಮೇಲು ಎಂಬುದಿಲ್ಲ. ಇದನ್ನು ಮೂಲಭೂತವಾಗಿ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಊಟ ಬೇರೆ, ಆದರ ನಂತರದ ಸಂತೃಪ್ತಿ ಒಂದೇ. ಅದು ಅವರವರ ಆಹಾರ ಪದ್ದತಿ. ಸಮಾನತೆಯ ಆಧಾರದ ಮೇಲೆ ಎಲ್ಲರನ್ನೂ ಗುರುತಿಸಬೇಕು. ಈ ವಾಸ್ತವತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಬಸವಣ್ಣ ಸಾಂಸ್ಕೃತಿಕ ನಾಯಕ ಎಂಬುದು ಹೊಗಳಿಕೆಯ ವಿಷಯ ಅಲ್ಲ, ಸಮಾನತೆಯ ಪ್ರತೀಕ. ಕಾಯಕ ನಿಷ್ಠೆಯ ಪ್ರತಿರೂಪ. ನೆಲೆ ನುಡಿಗಳ ಸಮನ್ವಯತೆಯೇ ಭಕ್ತಿ. ನುಡಿದಂತೆ ನಡೆಯಬೇಕು. ನಮ್ಮ‌ ಮಾತಿಗೆ ಸಾಕ್ಷಿ ನಮ್ಮ ನಡೆ ಆಗಿರಬೇಕು.
ಎಲ್ಲರೂ ನಮ್ಮವರೆಂದಾಗ ವಿಶ್ವದಲ್ಲಿ ಯುದ್ದಗಳಿಗೆ ಅವಕಾಶವೇ ಇರುವುದಿಲ್ಲ. ಕಾಯಕವೇ ಕೈಲಾಸ ಎಂಬುದು ಮನೆ ಮಾತಾಗಬೇಕು ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Kannada Sahitya Sammelana: ಸಾಹಿತ್ಯ ಸಮ್ಮೇಳನಕ್ಕೆ ಸಂಭ್ರಮದ ತೆರೆ; 5 ನಿರ್ಣಯ ಮಂಡನೆ

ವೃತ್ತಿ ವ್ಯವಸ್ಥೆ ಬಿಟ್ಟು ಜಾತಿಗೆ ಅಂಟಿಸಿ, ಮೇಲುಕೀಳು ವ್ಯವಸ್ಥೆ ಮಾಡುವುದನ್ನು ಬಿಡಬೇಕು. ಅವನು ಮಾಡುವ ಕೆಲಸ ಅವನ ಜಾತಿಯಲ್ಲ ಎಂಬ ವಾಸ್ತವತೆಯನ್ನು ತಿಳಿದುಕೊಳ್ಳಬೇಕು ಎಂದು ಆಶಿಸಿದರು.