Monday, 23rd December 2024

Kiran Upadhyay Column: ಅನಿವಾಸಿಗಳನ್ನು ಮನಃವಾಸಿಗಳನ್ನಾಗಿಸಿದ ಸಮ್ಮೇಳನ

ವಿದೇಶವಾಸಿ

ಕಿರಣ್‌ ಉಪಾಧ್ಯಾಯ, ಬಹ್ರೈನ್

dhyaapaa@gmail.com

ಪ್ರಪಂಚದ ಮೂಲೆ ಮೂಲೆಯಿಂದ ಸುಮಾರು 250 ಅನಿವಾಸಿಗಳು ಮಂಡ್ಯದಲ್ಲಿ ಜಮೆಯಾದರು. ಸಾಲ ದೆಂಬಂತೆ ಸಮ್ಮೇಳನದಲ್ಲಿ ಪ್ರಧಾನ ಅನಿವಾಸಿಗಳ ವಿಷಯಕ್ಕೆ ಸಂಬಂಧಿಸಿದ ಗೋಷ್ಠಿಯನ್ನು ಏರ್ಪಡಿಸಿ ದರು. ಇನ್ನೇನು ಬೇಕು? ಸಮ್ಮೇಳನಕ್ಕೆ ಆಗಮಿಸಿದ ನಮಗೆ ‘ಮೊದಲೇ ಉಸ, ಮೇಲಿಂದ ಫಲ್ಗುಣ ಮಾಸ!’ ಎಂಬಂತಾಯಿತು.

ಫ್ಲಾಶ್ ಬ್ಯಾಕ್: ಸುಮಾರು ಮೂರೂವರೆ ದಶಕಗಳ ಹಿಂದೆ, ನಮ್ಮ ಶಾಲಾ ದಿನಗಳಲ್ಲಿ, ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನ, ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನಗಳಾದಾಗ ಹೋಗಿಬರುತ್ತಿದ್ದೆವು. ಆಗೆಲ್ಲ ಸುತ್ತಮುತ್ತಲಿನಲ್ಲಿ ಎಲ್ಲೇ ಸಾಹಿತ್ಯ ಸಮ್ಮೇಳನವಾದರೂ ವ್ಯಕ್ತಿತ್ವವನ್ನು ಪರಿಚಯಿಸುವ ಸಣ್ಣ ಪುಸ್ತಕಗಳು, ಒಂದಷ್ಟು ಕಥೆಯ ಪುಸ್ತಕ ಗಳು, ಅಮರ ಚಿತ್ರಕಥೆ ಮೊದಲಾದವುಗಳ ಜತೆಗೆ ಪುಕ್ಕಟೆಯಾಗಿ ಸಿಗುತ್ತಿದ್ದ ದಿನಪತ್ರಿಕೆ, ಕೈಪಿಡಿ, ಕ್ಯಾಲೆಂಡರ್
ಇತ್ಯಾದಿಗಳ ಸಂಗ್ರಹ ಮನೆಯೊಳಕ್ಕೆ ಸೇರಿಕೊಳ್ಳುತ್ತಿತ್ತು.

ಮಾರನೇ ದಿನ ಶಾಲೆಗೆ ಹೋದಾಗ, ಸಾಹಿತ್ಯ ಸಮ್ಮೇಳನದಲ್ಲಿ ಎಷ್ಟು ಪುಸ್ತಕ ಖರೀದಿಸಿದೆ, ಯಾವ ಪುಸ್ತಕ ಖರೀದಿಸಿದೆ ಎನ್ನುವುದೇ ದೊಡ್ಡ ವಿಷಯವಾಗಿರುತ್ತಿತ್ತು. ಸಮ್ಮೇಳನಗಳಲ್ಲಿ ಇತರೆ ಅಂಗಡಿಗಳು ಹೆಚ್ಚೇನೂ ಇರುತ್ತಿರಲಿಲ್ಲ, ಇದ್ದರೂ ಅವನ್ನೆಲ್ಲ ಕೊಳ್ಳಲು ಹಣವು ಇರುತ್ತಿರಲಿಲ್ಲ.

ಮನೆಯಲ್ಲಿ ಕೊಡುವ ಹಣದಲ್ಲಿ ತಿಂಡಿ-ತಿನಿಸುಗಳನ್ನು ಕೊಳ್ಳುವ ಬದಲು ಪುಸ್ತಕವನ್ನು ಕೊಂಡು ತಂದರೆ, ಮರು ದಿನ ಶಾಲೆಯಲ್ಲಿ ಸ್ನೇಹಿತರ ಎದುರು ಒಂದಷ್ಟು ಪುಸ್ತಕ ಖರೀದಿಸಿದ ಡೌಲು ಹಾರಿಸಬಹುದು ಎನ್ನುವ ಕಾರಣವೂ ಇತ್ತು ಅನ್ನಿ. ಮಾರನೇ ದಿನ ತರಗತಿಯಲ್ಲಿ ಸಮ್ಮೇಳನದ ಬಗ್ಗೆ ಒಂದಷ್ಟು ಚರ್ಚೆಗಳಾಗುತ್ತಿದ್ದವು. ಯಾರು ಯಾರು ಎಷ್ಟೆಷ್ಟು ಪುಸ್ತಕಗಳನ್ನು, ಯಾವ ಯಾವ ಪುಸ್ತಕಗಳನ್ನು ಖರೀದಿಸಿದ್ದಾರೆ ಎನ್ನುವ ವಿಷಯವೂ ಚರ್ಚೆಯಾಗು ತ್ತಿತ್ತು.

ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಹೊಡೆದವ ಹೇಗೆ ‘ಪಂದ್ಯದ ಪುರುಷೋತ್ತಮ’ನಾಗುತ್ತಿದ್ದನೋ, ಹಾಗೆಯೇ ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚು ಪುಸ್ತಕ ಖರೀದಿಸಿದವ ‘ಪುಸ್ತಕ ಪುರುಷೋತ್ತಮ’ನಾಗಿ ಬೀಗುತ್ತಿದ್ದ ದಿನಗಳು ಅವಾಗಿದ್ದವು.
ಸಮ್ಮೇಳನದಲ್ಲಿ ನಮಗೆ ಸಿಗುತ್ತಿದ್ದ ಇನ್ನೊಂದು ವಿಷಯ ಎಂದರೆ, ಸಾಹಿತಿಗಳು, ಲೇಖಕರು ಅಥವಾ ಹೆಸರಾಂತ ವ್ಯಕ್ತಿಗಳು ವೇದಿಕೆಯಲ್ಲಿ ನೋಡಲು ಸಿಗುತ್ತಿದ್ದರು. ಅಂದಿನ ನಮ್ಮ ಗ್ರಹಗತಿ ಏನಾದರೂ ಚೆನ್ನಾಗಿದ್ದು, ಅವರನ್ನು ಹತ್ತಿರದಿಂದ ನೋಡಲು, ಭೇಟಿಯಾಗಲು ಅವಕಾಶ ಸಿಕ್ಕರಂತೂ ಸಂಭ್ರಮವೋ ಸಂಭ್ರಮ. ಅದರಲ್ಲೂ ಅವರೊಂದಿಗೆ ಕೈಕುಲುಕಲು ಅವಕಾಶ ಸಿಕ್ಕರಂತೂ ಕೇಳುವುದೇ ಬೇಡ- ‘ಆಕಾಶಕ್ಕೆ ಮೂರೇ ಗೇಣು’.

ಅಂದು ರಾತ್ರಿ ಸರಿಯಾಗಿ ನಿದ್ದೆಯೂ ಬರುತ್ತಿರಲಿಲ್ಲ. ಯಾವತ್ತೂ ತಡವಾಗಿ ಶಾಲೆಗೆ ಹೋಗುತ್ತಿದ್ದವನೂ ಸಮ್ಮೇಳ ನದ ಮರುದಿನ ಅರ್ಧಗಂಟೆ ಮೊದಲೇ ಶಾಲೆಗೆ ಹೋಗುತ್ತಿದ್ದ. ಸಮ್ಮೇಳನದಲ್ಲಿ ಆದ ಅನುಭವವನ್ನು ಸ್ನೇಹಿತರ ಮುಂದೆ ಕೊಚ್ಚಿಕೊಳ್ಳುವ ಕೆಲಸ ಇರುತ್ತಿತ್ತಲ್ಲ! ಹಾಗಂತ ಆ ಕಾಲದಲ್ಲಿ, ಮುಂದೊಂದು ದಿನ, ಲೇಖನ, ಅಂಕಣ ಬರೆಯುತ್ತೇವೆ, ವಿದೇಶದಲ್ಲಿ ಕನ್ನಡದ ಬೀಜವನ್ನು ಬಿತ್ತಿ, ಬೆಳೆಸಿ ಹೆಮ್ಮರವನ್ನಾಗಿಸುತ್ತೇವೆ, ಸಾವಿರಾರು ಜನರ ಸಮ್ಮುಖದಲ್ಲಿ ನಿಂತು ಮಾತನಾಡುತ್ತೇವೆ, ಮಾಡಿದ ಕೆಲಸಕ್ಕೆ ಪ್ರಶಂಸೆ ಪಡೆಯುತ್ತೇವೆ ಎಂಬ ಕನಿಷ್ಠ ಕನಸನ್ನೂ ಕಂಡವರಲ್ಲ, ಅಪೇಕ್ಷಿಸಿದವರೂ ಅಲ್ಲ. ಒಂದು ವೇಳೆ ಅದನ್ನು ಅಪೇಕ್ಷಿಸಿ ಕೆಲಸ ಮಾಡಿದರೆ ಅದು ನಾವಲ್ಲ!

ನಂತರದ ದಿನಗಳು: ಋತುಚಕ್ರ ತಿರುಗಿ, ಕೆಲವು ದಶಕಗಳು ಕಳೆದವು. ವಿದ್ಯಾಭ್ಯಾಸ ಮುಗಿಸಿ, ಕಾರ್ಯನಿಮಿತ್ತ ಊರು ಬಿಟ್ಟು ಹೊರ ಊರು ಸೇರಿ, ಅಲ್ಲಿಂದ ಹೊರನಾಡು, ಹೊರದೇಶವನ್ನು ಸೇರಿಕೊಂಡ ನಂತರವಂತೂ ಜೀವನ ತನ್ನಷ್ಟಕ್ಕೆ ಮುಂದೆ ಸಾಗುತ್ತಿತ್ತು. ಆದರೆ ನಮ್ಮ ನೆಲದ ನಂಟು ಎನ್ನುವುದೊಂದಿದೆಯಲ್ಲ, ಅದು ಯಾವತ್ತೂ ಬಿಟ್ಟು
ಹೋಗಲಿಲ್ಲ. ತಾಯ್ನಾಡಿನೊಂದಿಗೆ ಬೆಸೆದ ತಂತಿ ಹರಿದು ಹೋಗಲಿಲ್ಲ, ಮನದಲ್ಲಿ ಮನೆ ಮಾಡಿದ್ದ ನಮ್ಮ ನಾಡಿನ ಮಣ್ಣಿನ ಕಂಪಿನ ಮಡಕೆ ಒಡೆದು ಹೋಗಲಿಲ್ಲ. ಸಮಯ ಸಿಕ್ಕಾಗ ಅವಕಾಶ ದಕ್ಕಿದಾಗ, ತಾಯಿ ನೆಲದ ಋಣ ತೀರಿಸುವುದಕ್ಕಾಗಿ ತನು ತುಡಿಯುತ್ತಿತ್ತು, ನಮ್ಮ ನಾಡಿನ ಸಂಸ್ಕೃತಿ-ಭಾಷೆಯ ಕುರಿತು ಮನ ಮಿಡಿಯುತ್ತಿತ್ತು. ಸಣ್ಣದು-ದೊಡ್ಡದು ಎಂಬ ಭೇದವಿಲ್ಲದೆ, ಕರ್ನಾಟಕದ ಕೆಲಸ, ಕನ್ನಡ ಭಾಷೆಯ ಕೆಲಸ ಎಂದರೆ ಕಟಿಬದ್ಧರಾಗಿ
ನಿಲ್ಲುತ್ತಿದ್ದೆವು.


ನಿಜ, ನಾವು ಅನಿವಾಸಿಗಳು. ಆದರೆ ಅನ್ಯಗ್ರಹ ನಿವಾಸಿಗಳಲ್ಲ. ಹೊಟ್ಟೆಪಾಡಿಗಾಗಿಯೋ, ಕಷ್ಟ ನಿವಾರಣೆಗಾಗಿಯೋ,
ಭವಿಷ್ಯದ ಉನ್ನತಿಗಾಗಿಯೋ ತಾಯಿನೆಲದಿಂದ ದೂರಾಗಿ, ಇನ್ನೊಂದು ದೇಶದಲ್ಲಿ ಬೀಡುಬಿಟ್ಟರೂ, ಬೇರನ್ನು ಮಾತ್ರ ತಾಯಿ ನೆಲದಲ್ಲಿ ಭದ್ರವಾಗಿ ಉಳಿಸಿಕೊಂಡವರು. ಮೊದಮೊದಲು ರಜೆಗೆ ಎಂದು ಊರಿಗೆ ಹೋಗಿ ಹಿಂತಿರುಗಿ ಬರುವಾಗ ತುಪ್ಪ, ಜೇನುತುಪ್ಪ ಅಮ್ಮ ಮಾಡಿದ ಉಪ್ಪಿನಕಾಯಿ, ಅಕ್ಕ ಕೊಟ್ಟ ಮಿಠಾಯಿ, ತಂಗಿ ಕೊಟ್ಟ
ಚಕ್ಕುಲಿಯನ್ನು ನಮ್ಮ ಬ್ಯಾಗುಗಳಲ್ಲಿ ತುಂಬಿಕೊಂಡು ಬರುತ್ತಿದ್ದೆವು.

ಕ್ರಮೇಣ ಉಪ್ಪಿನಕಾಯಿ, ಹಪ್ಪಳ, ಚಕ್ಕುಲಿಯ ಜಾಗದಲ್ಲಿ ಕನ್ನಡ ಪುಸ್ತಕಗಳು, ಬಾವುಟಗಳು ಬಂದು ಕುಳಿತವು. ಅಲ್ಲಿಂದ ಮುಂದೆ ಮನೆಯ ಕಪಾಟುಗಳಲ್ಲಿ ಜಾಗ ಪಡೆದವು. ಅದಕ್ಕೂ ಮುಂದಕ್ಕೆ ಹೋಗಿ ನಮ್ಮ ಮನೆಯ
ಕಪಾಟುಗಳನ್ನು ಅಲಂಕರಿಸಿದವು. ತಾಯ್ನಾಡಿನ ತೋಟದಿಂದ ತಂದ ಹೂವಿನ ಗಿಡಗಳು ನಮ್ಮ ಮನೆಯ ಕೆಮ್ಮಣ್ಣಿನ ಕುಂಡವನ್ನು ಅಲಂಕರಿಸಿದವು. ತಿಂಡಿ, ಪುಸ್ತಕಗಳು ಬ್ಯಾಗಿನಲ್ಲಿ ಸೇರಿಕೊಂಡಂತೆ, ಮನೆಯ ಸಂಸ್ಕೃತಿ, ಊರಿನ ಆಚರಣೆಗಳು ನಾವಿರುವ ದೇಶವನ್ನು ಹೊಕ್ಕವು.

ತಾಯ್ನಾಡಿನಲ್ಲಿರುವ ಮನೆಗೆ ಸಮಾನವಾಗಿ ನಾವಿರುವ ದೇಶದೇಶ ದಲ್ಲಿಯೂ ನಮ್ಮತನವನ್ನು ಸೃಷ್ಟಿಸಿಕೊಂಡೆವು. ಆದರೂ ನಮ್ಮ ಸುತ್ತಲೂ ನಾವೇ ಒಂದು ಅದೃಶ್ಯ ಬೇಲಿ ನಿರ್ಮಿಸಿಕೊಂಡಿದ್ದೇವೆಯೋ ಎಂಬ ಭಾವನೆಯಿತ್ತು. ಆ ಕಾರಣಕ್ಕಾಗಿ, ಸಂಘ-ಸಂಸ್ಥೆಯ ಹೆಸರಿನಲ್ಲಿ ಒಂದಾಗಲು ತೊಡಗಿಕೊಂಡೆವು. ನಮ್ಮ ವ್ಯಾಪ್ತಿ ವಿಸ್ತರಿಸಿತ್ತು. ಮನೆ ಯಲ್ಲಿ ನಾಲ್ಕು ಗೋಡೆಯ ನಡುವೆ ನಡೆಯುತ್ತಿದ್ದ ಆಚರಣೆಗಳು ನಾಲ್ಕು ಜನರೊಂದಿಗೆ ಆಗತೊಡಗಿದವು. ಆಗಾಗ ಹಬ್ಬದ ನೆಪದಲ್ಲಿ, ಆಟದ ನೆಪದಲ್ಲಿ, ಊಟದ ನೆಪದಲ್ಲಿ, ಕೂಟದ ನೆಪದಲ್ಲಿ ಕೂಡುತ್ತಿದ್ದೆವು.

ನಮ್ಮ ನಮ್ಮ ವ್ಯಾಪ್ತಿಯಲ್ಲಿ, ನಮ್ಮ ಸ್ಥಿತಿಗತಿಗೆ ತಕ್ಕಂತೆ ಎಲ್ಲವೂ ನಡೆಯುತ್ತಿತ್ತು. ವಿದ್ಯುನ್ಮಾನದ ಈ ಕಾಲದಲ್ಲಿ ನಮ್ಮ ಅಕ್ಕ-ಪಕ್ಕದಲ್ಲಿಯೂ ಇದೇ ರೀತಿಯ ಆಚರಣೆಗಳು ನಡೆಯುತ್ತಿವೆ. ಅಲ್ಲಿಯೂ ನಮ್ಮ ನಾಡಿನ, ನುಡಿಯ ಆಚರಣೆಗಳು ನಡೆಯುತ್ತಿವೆ, ಕೇವಲ ಡಾಲರ್ ಗಳಿಸುವ, ಪೌಂಡ್ ಉಳಿಸುವ ವಿಚಾರ ಮಾಡದೆ, ಸಂಸ್ಕೃತಿಯನ್ನು ನಮ್ಮಂತೆಯೇ ಆಚರಿಸುವವರು ನಮ್ಮ ಪಕ್ಕದ ದೇಶದಲ್ಲಿಯೂ ಇzರೆ ಎನ್ನುವ ವಿಷಯ ತಿಳಿಯುತ್ತಿತ್ತು. ನಿಜ,
ನಾವೆ ಗಂಟೆಗೆ ಇಂತಿಷ್ಟು ಡಾಲರ್ ಎಂದು ಎಣಿಸುವವರು. ನಾವು ವಿದೇಶಕ್ಕೆ ಬಂದದ್ದೂ ಅದಕ್ಕೇ ಹೌದಾದರೂ ಕೇವಲ ಅದಕ್ಕಾಗಿ ಮಾತ್ರವಲ್ಲ ಎನ್ನುವುದನ್ನು ಆಗಾಗ ಸಾಬೀತುಪಡಿಸಿದವರು.

ನಾವಿರುವ ಜಾಗದಲ್ಲಿ, ನಾವಿರುವ ದೇಶದಲ್ಲಿ ಪುಟ್ಟ ಕರ್ನಾಟಕವನ್ನು ನಿರ್ಮಿಸಿಕೊಂಡವರು. ಆದರೂ ಒಬ್ಬರ ನ್ನೊಬ್ಬರು ಭೇಟಿಯಾಗುವ, ಮಾತನಾಡುವ, ಸಂಭ್ರಮ ಹಂಚಿಕೊಳ್ಳುವ ಅವಕಾಶ ಸಿಗುತ್ತಿಲ್ಲವಲ್ಲ ಎಂಬ ಕೊರಗು ನಮ್ಮಲ್ಲಿ ಇತ್ತು. ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಈ ಕೊರಗನ್ನು ದೂರ ಮಾಡಿತು.

ಅಂದಿನ ದಿನ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿಯವರು ನಮ್ಮ ನಡುವೆ ಇರುವ ಗೋಡೆಗಳನ್ನು ಕೆಡವಿ ನಮ್ಮನ್ನು ಸೀಮಾತೀತರನ್ನಾಗಿಸುವ ಕನಸು ಕಂಡರು. ಸಕ್ಕರೆಯ ನಾಡು ಮಂಡ್ಯ ದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಅನಿವಾಸಿಗಳೆಲ್ಲ ಬರಬೇಕೆಂದು ಆಹ್ವಾನ ವಿತ್ತರು. ಈ ಜವಾಬ್ದಾರಿಯನ್ನು ಶ್ರೀಮತಿ ನಿವೇದಿತಾ ಹಾವನೂರ್ ಹೊನ್ನತ್ತಿಯವರಿಗೆ ವಹಿಸಿದರು. ಪರಿಷತ್ತಿನ ಇತರರೂ ಇದಕ್ಕೆ ಕೈಜೋಡಿಸಿದರು. ಆಹ್ವಾನ ಹೇಗಿತ್ತು ಎಂದರೆ, ಪ್ರಪಂಚದ ಮೂಲೆ ಮೂಲೆಯಿಂದ ಸುಮಾರು ಇನ್ನೂರ ಐವತ್ತು ಅನಿವಾಸಿಗಳು ಮಂಡ್ಯದಲ್ಲಿ ಜಮೆಯಾದರು. ಸಾಲದು ಎಂಬಂತೆ ಸಮ್ಮೇಳನದಲ್ಲಿ ಅದರಲ್ಲೂ ಪ್ರಧಾನ ಅನಿವಾಸಿಗಳ ವಿಷಯಕ್ಕೆ ಸಂಬಂಧಿಸಿದ ಗೋಷ್ಠಿಯನ್ನು ಏರ್ಪಡಿಸಿದರು.

ವಿಶ್ವದಾದ್ಯಂತ ಎಂಬತ್ತಕ್ಕೂ ಹೆಚ್ಚು ವಿವಿಧ ಕನ್ನಡ ಸಂಘಗಳ ಕಿರು ಪರಿಚಯವಿರುವ ಹೊತ್ತಗೆಯೂ ಹೊರ ಬಂತು. ಇನ್ನೇನು ಬೇಕು? ಸಮ್ಮೇಳನಕ್ಕೆ ಆಗಮಿಸಿದ ನಮಗೆ ‘ಮೊದಲೇ ಉಸ, ಮೇಲಿಂದ ಫಲ್ಗುಣ ಮಾಸ!’
ಅನಿವಾಸಿಗಳಾದ ನಾವು ಇಲ್ಲಿ ಬರುವುದಕ್ಕಿಂತ ಮೊದಲು, ಸಮ್ಮೇಳನ ಅಧ್ಯಕ್ಷರ ಜತೆಗೆ, ಪರಿಷತ್ತಿನ ಅಧ್ಯಕ್ಷರ ಜತೆಗೆ ಕುಳಿತುಕೊಳ್ಳುತ್ತೇವೆ ಎಂಬ ಒಂದು ಸಣ್ಣ ಕನಸನ್ನೂ ಕಂಡವರಲ್ಲ. ಬೇರೆ ದೇಶದಲ್ಲಿ ದುಡಿಯುತ್ತೇವೆ, ಭವ್ಯ ಭವಿತವ್ಯವನ್ನು ಕಟ್ಟಿಕೊಳ್ಳುತ್ತೇವೆ ಎಂಬ ಕನಸು ಕಂಡಿದ್ದಾವೇ ವಿನಾ, ಸಾವಿರಾರು ಜನರ ಮುಂದೆ ನಿಂತು ಮಾತನಾಡುತ್ತೇವೆ, ನೂರಾರು ಜನರನ್ನು ನಮ್ಮ ಪರಿವಾರಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಎಣಿಸಿರಲಿಲ್ಲ.

ಬೇರೆ ಬೇರೆ ವಸಾಹತುಗಳಂತೆ ಹಂಚಿಹೋಗಿದ್ದ ಅನಿವಾಸಿಗಳು ಈ ಸಮ್ಮೇಳನದಿಂದ ಒಂದಾದರು. ಭಾವ-
ಬಂಧನದ ಬೆಸುಗೆಗೊಳಗಾದರು. ಒಂದೇ ಮನೆಯಲ್ಲಿ ಹುಟ್ಟಿ ಬೆಳೆದವರಷ್ಟು ಹತ್ತಿರವಾದರು. ಈ ಸಮ್ಮೇಳನದಲ್ಲಿ ಅನಿವಾಸಿಗಳಿಗೆ ವ್ಯವಸ್ಥೆಯೂ ‘ಚೆನ್ನಾಗಿತ್ತು ’ಎಂದರೆ ಹೆಚ್ಚು ಹೇಳಿದಂತಾಗುವುದಿಲ್ಲ, ‘ತುಂಬಾ ಚೆನ್ನಾಗಿತ್ತು, ಯಾವ ಕೊರತೆಯೂ ಆಗದಂತೆ ನೋಡಿಕೊಂಡಿದ್ದರು’ ಎಂದರೂ ಅದು ತಕ್ಕ ಮಟ್ಟಿಗೆ ಹೇಳಿದಂತಾಯಿತೇ ವಿನಾ ಪೂರ್ತಿ
ಹೇಳಿದಂತಾಗುವುದಿಲ್ಲ. ಇದೇ ರೀತಿಯ ವ್ಯವಸ್ಥೆ ಮುಂದುವರಿದರೆ, ಮುಂದಿನ ಸಮ್ಮೇಳನಗಳಲ್ಲಿ ಅನಿವಾಸಿಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.

ವಸತಿ, ಊಟ, ವಾಹನದ ವ್ಯವಸ್ಥೆ ಎಲ್ಲವೂ ಅಚ್ಚುಕಟ್ಟು. ಇದೇ ಅನುಭವ ಇತರರಿಗೂ ಆಗಿದೆಯೇ? ಗೊತ್ತಿಲ್ಲ.
ಸಮ್ಮೇಳನವೆಂದರೆ, ಒಳಿತು-ಕೊರತೆಗಳ ಚರ್ಚೆ ಇದ್ದದ್ದೇ. ಅದರಲ್ಲೂ ಕೆಲವೊಮ್ಮೆ ಎಣಿಸಿದ್ದಕ್ಕಿಂತ ಹೆಚ್ಚಿನ ಜನ ಬಂದರೆ, ಅಕಾಲದಲ್ಲಿ ಮಳೆಯಾದರೆ, ವ್ಯವಸ್ಥೆ ಅಸ್ತವ್ಯಸ್ತವಾದಂತೆ ಕಾಣುವುದು ಸಹಜ. ಸಮ್ಮೇಳನಕ್ಕೆ ಬಂದವರಿ ಗೆಲ್ಲ ಒಂದೇ ರೀತಿಯ ಊಟವಿತ್ತು. ವಾಹನ ನಿಲುಗಡೆ, ಆಸನದ ವ್ಯವಸ್ಥೆ ಇತ್ಯಾದಿಗಳ ಕುರಿತು ಯಾವುದೇ ದೂರು ಬಂದಂತಿಲ್ಲ. ಸಮ್ಮೇಳನಕ್ಕೆ ಬರುವ ದಾರಿ ಸ್ವಲ್ಪ ಅಗಲವಾಗಿರಬೇಕಿತ್ತು, ಶೌಚಾಲಯ, ಕುಡಿಯುವ ನೀರು ಇರುವ ಜಾಗಕ್ಕೆ ಹೋಗುವ ದಾರಿ ಹೇಳುವ ಫಲಕಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಇರಬೇಕಿತ್ತು, ನೆಟ್ ವರ್ಕ್ ಇಲ್ಲದ ಕಾರಣ ಮಳಿಗೆಗಳಲ್ಲಿ ಹಣ ಸಂದಾಯ ಮಾಡಲು ಆಗುತ್ತಿರಲಿಲ್ಲ ಇತ್ಯಾದಿ ದೂರುಗಳಿದ್ದವು. ಪೊಲೀಸರು ಆಗಾಗ ಸ್ವಲ್ಪ ಅತಿಯಾಗಿ ವರ್ತಿಸುತ್ತಿದ್ದದ್ದು ಸುಳ್ಳಲ್ಲ.

ಕೊನೆಯ ಮಾತು: ಒಂದು ದೂರವಾಣಿ ಕರೆಗೆ, ಇ-ಮೇಲ್‌ಗೆ ಓಗೊಟ್ಟು ಬಂದ ಅನಿವಾಸಿಗಳು ಒಂದಾದರು. ಈ ಪರಿವಾರ ವಿಸ್ತರಿಸಬೇಕು. ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ, ಸಮ್ಮೇಳನದಿಂದ ಸಮ್ಮೇಳನಕ್ಕೆ! ಭಾಷೆಯ,
ಕಲೆಯ, ಸಂಸ್ಕೃತಿಯ ನಡುವೆ ಗೋಡೆಗಳೇಕೆ? ದೇಶದಲ್ಲಿರಲಿ, ವಿದೇಶದಲ್ಲಿರಲಿ, ಕನ್ನಡಿಗ ಎಂದೂ ಕನ್ನಡಿಗನೇ!

ಇನ್ನೂ ಒಂದು ಮಾತು: ಮಕ್ಕಳು ಹೇಗೇ ಇದ್ದರೂ ತಾಯಿ ಎಂದೂ ಮಗುವಿನ ಕೈಬಿಡುವುದಿಲ್ಲ ಎಂಬ ಮಾತಿದೆ. ಹಾಗಿರುವಾಗ, ತಾಯಿಯ ಸೇವೆ ಮಾಡುವ ಮಕ್ಕಳನ್ನು ಅವಳು ಕೈಬಿಟ್ಟಾಳೆಯೇ? ನಮಗೆ ಜನ್ಮ ನೀಡಿದ ತಾಯಿಯೇ ಆದರೂ ಸರಿ, ತಾಯಿ ಎಂದು ನಂಬಿದ ಭಾಷೆಯದರೂ ಸರಿ, ನಮ್ಮ ಭಾಷೆಯ, ನಮ್ಮ ನೆಲದ ಕೆಲಸ ಮಾಡುತ್ತಿದ್ದರೆ ಅದೇ ನಮ್ಮನ್ನು ಎಲ್ಲಿಗೆ ತಲುಪಿಸಬೇಕೋ ಅಲ್ಲಿಗೆ ತಲುಪಿಸುತ್ತದೆ ಎನ್ನುವುದಕ್ಕೆ ಉದಾಹರಣೆ ಇಂಥ ಸಮ್ಮೇಳನ ಗಳು.

ಇದನ್ನೂ ಓದಿ: kiranupadhyaycolumn