ಕಳಕಳಿ
ಎಚ್.ಆನಂದರಾಮ ಶಾಸ್ತ್ರೀ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಗೊ.ರು.ಚನ್ನಬಸಪ್ಪ ಅವರು ಮಾಡಿದ ಅಧ್ಯಕ್ಷೀಯ ಭಾಷಣವನ್ನು ‘ಸಾಕ್ಷಾತ್’
ಆಲಿಸಿ, ಅನಂತರ ೪೮ ಪುಟಗಳ ಆ ಭಾಷಣವನ್ನು ಸಂಪೂರ್ಣ ಓದಿ, ಮನನ ಮಾಡಿಕೊಂಡು, ಮಥಿಸಿ ಈ ಅಭಿಪ್ರಾ ಯವನ್ನು ದಾಖಲಿಸುತ್ತಿದ್ದೇನೆ.
ಭಾಷಣವು ಆಡಂಬರದ ಪದಗಳನ್ನಾಗಲೀ, ಕಾರ್ಯಸಾಧ್ಯತೆ ಕಷ್ಟವಾಗುವ ಭಾರಿ ಯೋಜನೆಗಳ ಸಲಹೆಯನ್ನಾ ಗಲೀ ಹೊಂದಿರದೆ, ಅವಶ್ಯವೂ ಕಾರ್ಯಸಾಧ್ಯವೂ ಆಗಿರುವ ಸಲಹೆಗಳನ್ನು ಸರಳ ವಾಕ್ಯಗಳಲ್ಲಿ ಪ್ರತಿಪಾದಿಸಿದೆ. ಶಿಕ್ಷಣ ಮಾಧ್ಯಮ, ಶಿಕ್ಷಣಕ್ಕೆ ಸಾಕಷ್ಟು ಹಣದ ಮುಡಿಪು, ಸರಕಾರಿ ಶಾಲೆಗಳ ದುಃಸ್ಥಿತಿ, ವಿಶ್ವ ವಿದ್ಯಾಲಯಗಳ ಬಲವರ್ಧನೆ, ಧಾರ್ಮಿಕ ಸಾಮರಸ್ಯ, ಬಹುಭಾಷಾ-ಸಂಸ್ಕೃತಿ ನೀತಿ, ಮಾತೃಭಾಷೆಯ ವ್ಯಾಪಕ ಬಳಕೆ, ತಂತ್ರ ಜ್ಞಾನದ ಪ್ರಬುದ್ಧ ಬಳಕೆ, ನ್ಯಾಯೋಚಿತ ತೆರಿಗೆ ಪಾಲು, ವಿವಿಧ ಮೀಸಲಾತಿ, ಪ್ರವಾಸೋದ್ಯಮ-ಕೈಗಾರಿಕೋದ್ಯಮ ಅಭಿವೃದ್ಧಿ, ರಾಜಧಾನಿಯಿಂದ ಹೊರಗೆ ಉದ್ಯಮ-ಅಧಿಕಾರ ಕೇಂದ್ರಗಳ ಸ್ಥಾಪನೆ, ಪರಿಸರ ಸಂರಕ್ಷಣೆ, ಆರ್ಥಿಕ ಬೆಳವಣಿಗೆ, ಸರಕಾರಗಳ ನೀತಿನಿರ್ಧಾರ, ಸರೋಜಿನಿ ಮಹಿಷಿ ವರದಿ, ಶಾಸ್ತ್ರೀಯ ಭಾಷೆ, ಅಂತಾರಾಜ್ಯ ಸಮಸ್ಯೆಗಳು, ಪ್ರಾದೇಶಿಕ ಅಸಮಾನತೆ, ಸಾಹಿತ್ಯ ಕೃತಿ-ಸಂಸ್ಕೃತಿ ಪ್ರೋತ್ಸಾಹ, ಗ್ರಂಥಾಲಯ ಪುನಶ್ಚೇ ತನ, ಮಾತೃಭಾಷೆಯ ಬಳಕೆ, ಮಾತೃಭಾಷೆ ಹಾಗೂ ಹಿಂದಿ… ಹೀಗೆ ನಮಗಿಂದು ಅವಶ್ಯವಾಗಿರುವ ಸಂಗತಿಗಳ ನ್ನಷ್ಟೇ ಪ್ರಸ್ತಾಪಿಸಿ, ಆಗಬೇಕಾಗಿ ರುವ ಕಾರ್ಯಸಾಧ್ಯ ಕೆಲಸಗಳನ್ನು ಸರಳ ಭಾಷೆಯಲ್ಲಿ ಗೊರುಚ ಅವರು ತಿಳಿಸಿದ್ದಾರೆ.
‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ದ ಅಧ್ಯಕ್ಷತೆಗೆ ಆಯ್ಕೆಯಾಗುವ ಎಲ್ಲ ಹಿರಿಯರು ಪ್ರಾಜ್ಞರೂ ಅನುಭವಿ ಗಳೂ ಆಗಿರುತ್ತಾರೆ. ಅಧ್ಯಕ್ಷೀಯ ಭಾಷಣವನ್ನು ಸಿದ್ಧಪಡಿಸುವಾಗ, ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಸಾಕಷ್ಟು ಚಿಂತನ-ಮಂಥನ, ಅಧ್ಯಯನ, ಬಲ್ಲವರೊಡನೆ ವಿಚಾರ ವಿನಿಮಯ ನಡೆಸಿರುತ್ತಾರೆ. ಇದನ್ನು ನಾನು ಗಮನಿಸಿ ಮಾತ್ರವಲ್ಲ, ಒಡನಾಡಿಯೂ ಬಲ್ಲೆ.
ಪ್ರತಿವರ್ಷ ಅಧ್ಯಕ್ಷರ ಭಾಷಣದಲ್ಲಿ ನೀಡಲಾಗುವ ಸಲಹೆಗಳನ್ನು ಮತ್ತು ಸಮ್ಮೇಳನದಲ್ಲಿ ಕೈಗೊಳ್ಳಲಾದ ನಿರ್ಣಯಗಳನ್ನು ಆಯಾ ಸರಕಾರವು ಜಾರಿಗೆ ತಂದರೆ ಸಾಕು, ಕನ್ನಡ ನಾಡು-ನುಡಿಯ ಬಹುಪಾಲು ಸಮಸ್ಯೆಗಳು ನಿವಾರಣೆಗೊಳ್ಳುವುವಲ್ಲದೆ, ನಾಡು-ನುಡಿಯ ಏಳಿಗೆಯು ಬಹುತೇಕ ಸಮಗ್ರವಾಗಿ ಆಗಬಲ್ಲದು. ಆದರೆ, ಇದುವರೆಗಿನ ನಮ್ಮ ಯಾವ ಸರಕಾರವೂ ಇಂಥ ಇಚ್ಛಾಶಕ್ತಿ ತೋರದಿದ್ದುದು ಕನ್ನಡಿಗರ ದುರ್ದೈವ!
ಸಮ್ಮೇಳನದ ವೇದಿಕೆಯಲ್ಲಿ ಸ್ವಾಗತದ ಹೆಸರಿನಲ್ಲಿ ನಡೆಯುವ ತಮ್ಮ ಸನ್ಮಾನಕ್ಕೆ ಪೋಸು ಕೊಡುವ, ಸಾಹಿತ್ಯ-ಸಂಸ್ಕೃತಿಯ ಬಗ್ಗೆ ಭಾಷಣದಲ್ಲಿ ಏನೇನೋ ಅಪಲಾಪ ಮಾಡುವ, ಕ್ಲೀಷೆಯ ಮಾತಾಡುವ, ಸುಳ್ಳು-ಪೊಳ್ಳು ಆಶ್ವಾಸನೆ ನೀಡುವ ರಾಜಕಾರಣಿಗಳು ಮತ್ತು ಸರಕಾರದ ಉನ್ನತಾಧಿಕಾರಿಗಳು ಬದಲಾಗುತ್ತಾರೆಂದು
ನಿರೀಕ್ಷಿಸುವುದು ಮೂರ್ಖತನವೆಂಬುದು ನನಗೆ ಗೊತ್ತು.
ಆದರೂ, ಪ್ರಸಕ್ತ ಸಮ್ಮೇಳನದ ವೇದಿಕೆಯಲ್ಲಿ ‘ಕನ್ನಡ ರಾಮಯ್ಯ’ ಎಂಬ ಹೊಗಳಿಕೆಗೆ ‘ಸಾಕ್ಷಾತ್’ ಪಾತ್ರರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒಂದು ಮಟ್ಟದ ನಂಬಿಕೆಯನ್ನು ‘ಇನ್ನೂ ಕಾಪಾಡಿಕೊಂಡಿದ್ದೇನೆ’! ನೋಡೋಣ…
(ಲೇಖಕರು ಹಿರಿಯ ಸಾಹಿತಿ)
ಇದನ್ನೂ ಓದಿ: PatitaPavana Das Column: ಬಾಂಗ್ಲಾ ಗಲಭೆ ಮತ್ತು ಕೃಷ್ಣ ಪ್ರಜ್ಞೆಯ ಪ್ರಚಾರ