Monday, 23rd December 2024

Brazil Air Crash: ನೋಡ ನೋಡ್ತಿದ್ದಂತೆ ಅಂಗಡಿಗೆ ಅಪ್ಪಳಿಸಿದ ವಿಮಾನ -10 ಮಂದಿ ಸಾವು; ಹಲವರಿಗೆ ಗಾಯ

Brazil Air Crash

ರಿಯೋ ಡಿ ಜನೈರೊ: ದಕ್ಷಿಣ ಬ್ರೆಜಿಲ್‌ನ ಗ್ರಾಮಡೊ(Brazil Air Crash) ನಗರದಲ್ಲಿ ಭಾನುವಾರ ಸಣ್ಣ ವಿಮಾನವೊಂದು ನೆಲಕ್ಕೆ ಅಪ್ಪಳಿಸಿ ಅದರಲ್ಲಿದ್ದ ಕನಿಷ್ಠ 10 ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ನಿಯಂತ್ರಣ ಕಳೆದುಕೊಂಡ ವಿಮಾನವು (Air Crash) ಹಲವಾರು ಕಟ್ಟಡಗಳಿಗೆ ಡಿಕ್ಕಿ ಹೊಡೆದು ವ್ಯಾಪಕ ಹಾನಿಯನ್ನುಂಟು ಮಾಡಿದೆ. ಈ ಘಟನೆಯಲ್ಲಿ 12 ಜನರು ಗಾಯಗೊಂಡಿದ್ದಾರೆ ಎಂದು ಬ್ರೆಜಿಲಿಯನ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನವು ವಸತಿ ಗೃಹಕ್ಕೆ ಅಪ್ಪಳಿಸುವ ಮೊದಲು ಕಟ್ಟಡದ ಚಿಮಣಿಗೆ ಡಿಕ್ಕಿ ಹೊಡೆದು ನಂತರ ಪೀಠೋಪಕರಣ ಅಂಗಡಿಗೆ ಸೇರಿದಂತೆ ಸುತ್ತಲಿರುವ ಮೊಬೈಲ್‌ ಅಂಗಡಿಗಳಿಗೆ ಅಪ್ಪಳಿಸಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ವಿಮಾನವು ಸ್ಥಳೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತ ಸಂಭವಿಸಿದೆ ಎಂದು ರಾಷ್ಟ್ರೀಯ ಸಿವಿಲ್ ಡಿಫೆನ್ಸ್ ಹೇಳಿದೆ.  ಘರ್ಷಣೆಯಿಂದ ಉಂಟಾದ ಬೆಂಕಿಯಿಂದಾಗಿ ಅನೇಕರು ಉಸಿರಾಟದ ಸಮಸ್ಯೆಯಿಂದ ಬಳಲುವಂತಾಗಿತ್ತು ಎಂದು ವರದಿಯಾಗಿದೆ. ವಿಮಾನ ಕಟ್ಟಡಗಳಿಗೆ ಅಪ್ಪಳಿಸಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ.

 ರಿಯೊ ಗ್ರಾಂಡೆ ಡೊ ಸುಲ್ ಗವರ್ನರ್ ಎಡ್ವರ್ಡೊ ಲೈಟ್ ಅವರು ವಿಮಾನದಲ್ಲಿದ್ದವರು ಯಾರು ಬದುಕಿ ಉಳಿದಿಲ್ಲ ಎಂದು ಹೇಳಿದ್ದಾರೆ. ಇನ್ನು ವಿಮಾನ 10 ಜನರನ್ನು ಹೊತ್ತೊಯ್ದಿದೆ ಎಂದು ಪ್ರಾಥಮಿಕ ಮಾಹಿತಿಗಳು ಹೇಳುತ್ತಿವೆ. ಮೃತಪಟ್ಟವರೆಲ್ಲ ವಿಮಾನದಲ್ಲಿದ್ದವರಾ, ಅಥವಾ ನೆಲದ ಮೇಲಿದ್ದವರಾ ಎಂಬುದು ಸ್ಪಷ್ಟವಾಗಿಲ್ಲ. ಅಪಘಾತದ ಕಾರಣಗಳನ್ನು ತಿಳಿದುಕೊಳ್ಳಲು ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಈ ದುರಂತ ದಕ್ಷಿಣ ಬ್ರೆಜಿಲ್‌ನ ಜನಪ್ರಿಯ ಹಾಲಿಡೇ ತಾಣವಾದ ಗ್ರಾಮಡೊದಲ್ಲಿ ನಡೆದಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ.

ಈ ಸುದ್ದಿಯನ್ನೂ ಓದಿ : J&K Fire accident: ಭೀಕರ ಅಗ್ನಿ ದುರಂತ- ಮಾಜಿ ಡಿಎಸ್ಪಿ ಸೇರಿದಂತೆ 6 ಜನರ ದುರ್ಮರಣ