Monday, 23rd December 2024

R Ashwin: ಕ್ಯಾರಂ ಬಾಲ್​ ಎಸೆದು ಅಚ್ಚರಿ ಮೂಡಿಸಿದ್ದೀರಿ; ಅಶ್ವಿನ್​ಗೆ ಪ್ರಧಾನಿ ಮೋದಿ ಪತ್ರ

ನವದೆಹಲಿ: ಕಳೆದ ವಾರ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ ಭಾರತದ ಸ್ಪಿನ್‌ ಆಲ್‌ರೌಂಡರ್‌ ರವಿಚಂದ್ರನ್​ ಅಶ್ವಿನ್(R Ashwin)​ ಅವರಿಗೆ ಪ್ರಧಾನಿ ನರೇಂದ್ರ ಮೋದಿ(pm narendra modi) ಅವರು ಪತ್ರ ಬರೆದು, 14 ವರ್ಷಗಳ ಯಶಸ್ವಿ ಕ್ರಿಕೆಟ್‌ ವೃತ್ತೀಜಿವನಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ ಅಶ್ವಿನ್​ ಅವರ ದಿಢೀರ್‌ ನಿವೃತ್ತಿಯನ್ನು ‘ಕ್ಯಾರಂ ಬಾಲ್’ ಎಂದು ಬಣ್ಣಿಸಿದ್ದಾರೆ. ಮೋದಿ(pm modi) ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

‘ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿಮ್ಮ ನಿವೃತ್ತಿಯ ಘೋಷಣೆ ವಿಶ್ವದೆಲ್ಲೆಡೆಯ ಅಭಿಮಾನಿಗಳಿಗೆ ಅಚ್ಚರಿ ತಂದಿತು. ಎಲ್ಲರೂ ಇನ್ನಷ್ಟು ಆಫ್​-ಬ್ರೇಕ್​ ಎಸೆತಗಳನ್ನು ನಿರೀಕ್ಷಿಸುತ್ತಿದ್ದಾಗ ನೀವು ಕ್ಯಾರಂ ಬಾಲ್​ ಎಸೆದು ಎಲ್ಲರನ್ನೂ ಬೌಲ್ಡ್​ ಮಾಡಿದಿರಿ. ಆದರೆ ಭಾರತ ಪರ ನೀವು ತೋರಿದ ಅಮೋಘವಾದ ವೃತ್ತೀಜಿವನವನ್ನು ಕಂಡ ಬಳಿಕ ಇದು ನಿಮಗೂ ಕಠಿಣವಾದ ನಿರ್ಧಾರವೆಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬಲ್ಲರು’ ಎಂದು ಮೋದಿ ಪತ್ರದಲ್ಲಿ ಬರೆದಿದ್ದಾರೆ.

ಅಶ್ವಿನ್​ ಅವರ ಜೆರ್ಸಿ ನಂ. 99 ಅನ್ನೂ ಮಿಸ್​ ಮಾಡಿಕೊಳ್ಳುತ್ತೇವೆ ಎಂದಿರುವ ಮೋದಿ, 2022ರ ಟಿ20 ವಿಶ್ವಕಪ್​ನಲ್ಲಿ ಪಾಕ್​ ವಿರುದ್ಧದ ಪಂದ್ಯದ ಕೊನೇ ಓವರ್​ನಲ್ಲಿ ಅಶ್ವಿನ್​ ಸಮಯಪ್ರಜ್ಞೆಯಿಂದ ವೈಡ್​ ಎಸೆತವನ್ನು ಆಡದೆ ಬಿಟ್ಟ ಪ್ರಸಂಗವನ್ನೂ ನೆನಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಯುವ ಆಟಗಾರರಿಗೆ ನಿಮ್ಮ ಜ್ಞಾನವನ್ನು ಹಂಚಿಕೊಳ್ಳುವ ಮೂಲಕ ನೆರವಾಗಿ ಎಂದೂ ಮೋದಿ ಅವರು ಅಶ್ವಿನ್‌ಗೆ ಪ್ರೇರಣೆ ತುಂಬಿದ್ದಾರೆ.

ಇದನ್ನೂ ಓದಿ IPL 2025: ಐಪಿಎಲ್ 2025 ಆರಂಭಕ್ಕೆ ಮುಹೂರ್ತ ಫಿಕ್ಸ್..!

ಖೇಲ್ ರತ್ನ ನೀಡುವಂತೆ ಕಾಂಗ್ರೆಸ್ ಸಂಸದ ಮನವಿ

ಅಶ್ವಿನ್‌ಗೆ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ(Major Dhyan Chand Khel Ratna Award) ನೀಡಿ ಗೌರವಿಸುವಂತೆ ಕಾಂಗ್ರೆಸ್ ಸಂಸದ ವಿಜಯ ವಸಂತ ಅವರು ಕೇಂದ್ರ ಕ್ರೀಡಾ ಸಚಿವ ಮನ್‌ಸುಖ್ ಮಾಂಡವೀಯ ಅವರಿಗೆ ಮನವಿ ಮಾಡಿದ್ದಾರೆ.

‘ಆರ್. ಅಶ್ವಿನ್‌ರಿಗೆ ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ನೀಡುವಂತೆ ಕೋರಿ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಮನ್‌ಸುಖ್ ಮಾಂಡವೀಯರಿಗೆ ನಾನು ಪತ್ರ ಬರೆದಿದ್ದೇನೆ. ಭಾರತೀಯ ಕ್ರಿಕೆಟ್‌ಗೆ ಅವರು ನೀಡಿರುವ ದೇಣಿಗೆಗಳು ಮತ್ತು ಕ್ರಿಕೆಟ್ ಮೈದಾನದಲ್ಲಿನ ಅವರ ಅಸಾಧಾರಣ ಸಾಧನೆಗಳು ಅವರನ್ನು ಈ ಗೌರವಕ್ಕೆ ಅರ್ಹವಾಗಿಸಿವೆ’ ಎಂದು ವಿಜಯ ವಸಂತ್ ಎಕ್ಸ್‌(ಟ್ವಿಟರ್‌)ನಲ್ಲಿ ಬರೆದಿದ್ದಾರೆ.