ಕೊಯಂಬತ್ತೂರು: ಇದು ‘ಚಿಲ್ರೆ ಕೇಸಿನ’ ಸುದ್ದಿ! ಹಾಗೆಂದುಕೊಂಡು ಈ ಸುದ್ದಿಯಲ್ಲಿ ಏನೂ ಇಲ್ಲ ಎಂದು ಓದೋದನ್ನೇ ನಿಲ್ಲಿಸಿಬಿಡ್ಬೇಡಿ. ಯಾಕಂದ್ರೆ, ಇದು ಚಿಲ್ಲರೆಗಳಿಗೆ ಅಥವಾ ‘ಕಾಯಿನ್ಸ್’ ವಿಚಾರಕ್ಕೆ ಸಂಬಂಧಿಸಿದ ಸುದ್ದಿ. ವಿಚ್ಛೇದನ ಪ್ರಕರಣಕ್ಕೆ (Divorce case) ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಪತ್ನಿಗೆ ನೀಡಬೇಕಿದ್ದ ಪರಿಹಾರದ ಹಣವನ್ನು ಒಂದು ಮತ್ತು ಎರಡು ರೂಪಾಯಿ ನಾಣ್ಯಗಳ ರೂಪದಲ್ಲಿ, ಎರಡು ಪ್ಲಾಸ್ಟಿಕ್ ಬ್ಯಾಗುಗಳಲ್ಲಿ ತುಂಬಿಸಿ ತರುತ್ತಿರುವ ವಿಡಿಯೋ ಒಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ.
ಕೊಯಂಬತ್ತೂರಿನ (Coimbatore) 37 ವರ್ಷದ ಟ್ಯಾಕ್ಸಿ ಚಾಲಕರೊಬ್ಬರು (Taxi Driver) ತಮ್ಮ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿಂತೆ ಪತ್ನಿಗೆ ನೀಡಬೇಕಿದ್ದ 2 ಲಕ್ಷ ರೂಪಾಯಿ ಜೀವನಾಂಶ ಮೊತ್ತದಲ್ಲಿ ಸುಮಾರು 80 ಸಾವಿರ ರೂಪಾಯಿಗಳನ್ನು ಈತ, ಒಂದು ಮತ್ತು ಎರಡು ರೂಪಾಯಿ ಮೌಲ್ಯದ ನಾಣ್ಯಗಳ ರೂಪದಲ್ಲಿ ಎರಡು ಚೀಲಗಳಲ್ಲಿ ತುಂಬಿಸಿ ನ್ಯಾಯಾಲಯಕ್ಕೆ ತರುತ್ತಿರುವ ವಿಡಿಯೋ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ. ವಿಚ್ಛೇದನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ವ್ಯಕ್ತಿ ನ್ಯಾಯಾಲಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
IANS ಸುದ್ದಿ ಸಂಸ್ಥೆ ಪೋಸ್ಟ್ ಮಾಡಿರುವ ಈ ವಿಡಿಯೊದಲ್ಲಿರುವಂತೆ, ನಾಣ್ಯಗಳಿಂದ ತುಂಬಿರುವ ಎರಡು ಚೀಲಗಳನ್ನು ಹಿಡಿದುಕೊಂಡು ವ್ಯಕ್ತಿಯೊಬ್ಬ ಕೋರ್ಟ್ ಆವರಣದಲ್ಲಿ ಬರುತ್ತಿರುವುದು ಮತ್ತು ಅವುಗಳನ್ನು ತನ್ನ ಕಾರಿನಲ್ಲಿ ಇರಿಸುತ್ತಿರುವುದನ್ನು ಕಾಣಬಹುದಾಗಿದೆ.
ಆದರೆ, ಈ ವ್ಯಕ್ತಿ ತಂದಿದ್ದ 80 ಸಾವಿರ ರೂಪಾಯಿ ಮೌಲ್ಯದ ನಾಣ್ಯಗಳನ್ನು ಸ್ವೀಕರಿಸಲು ಸಾಧ್ಯವಿಲ್ಲವೆಂದು ನ್ಯಾಯಾಲಯ ಹೇಳಿರುವುದಾಗಿ ತಿಳಿದುಬಂದಿದೆ. ಮತ್ತು ಈ ಪ್ರಕರಣದ ನ್ಯಾಯಾಧೀಶರು ಆ ವ್ಯಕ್ತಿಗೆ ಈ ನಾಣ್ಯಗಳ ಬದಲಾಗಿ ಅಷ್ಟೇ ಮೌಲ್ಯದ ನೊಟುಗಳನ್ನು ತರುವಂತೆ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವ್ಯಕ್ತಿಗೆ ಇದನ್ನು ನೋಟಾಗಿ ಪರಿವರ್ತಿಸಲು ಸಮಯದ ಅಗತ್ಯವಿರುವ ಹಿನ್ನಲೆಯಲ್ಲಿ ಈ ಪ್ರಕರಣವನ್ನು ನ್ಯಾಯಾಧೀಶರು ಮುಂದೂಡಿರುವ ಮಾಹಿತಿಯೂ ಲಭ್ಯವಾಗಿದೆ.
ನ್ಯಾಯಾಧೀಶರ ಸೂಚನೆಯಂತೆ ಆ ವ್ಯಕ್ತಿ ತಾನು ತಂದಿದ್ದ ನಾಣ್ಯಗಳ ಚೀಲವನ್ನು ಹಿಂದಕ್ಕೆ ತೆಗೆದುಕೊಂಡು ಹೋಗಿ ಮರುದಿವಸವೇ ಸೂಚಿತ ಮೌಲ್ಯವನ್ನು ನೋಟುಗಳ ರೂಪದಲ್ಲಿ ನೀಡಿದ್ದಾನೆ ಎಂದು ತಿಳಿದುಬಂದಿದೆ.
ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವ್ಯಕ್ತಿಯು ತನ್ನ ಮಾಜಿ ಪತ್ನಿಗೆ ಎರಡು ಲಕ್ಷ ರೂಪಾಯಿಗಳನ್ನು ಜೀವನಾಂಶವಾಗಿ ನೀಡಬೇಕಿತ್ತು. ಇದಕ್ಕೆ ಪ್ರತಿಯಾಗಿ ಈ ವ್ಯಕ್ತಿಯು ಇತ್ತೀಚೆಗೆ 80 ಸಾವಿರ ರೂಪಾಯಿಗಳೊಂದಿಗೆ ನ್ಯಾಯಾಲಯಕ್ಕೆ ಬಂದಿದ್ದ. ಆದರೆ ನ್ಯಾಯಾಧೀಶರು ಇನ್ನುಳಿದ ಮೊತ್ತವನ್ನೂ ಸಹ ಶೀಘ್ರ ಪಾವತಿಸುವಂತೆ ಆ ವ್ಯಕ್ತಿಗೆ ಆದೇಶಿಸಿದ್ದಾರೆ. ಈ ಟ್ಯಾಕ್ಸಿ ಚಾಲಕನ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲವಾದರೂ, ಕಳೆದ ವರ್ಷವಷ್ಟೇ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.
ಈ ಸುದ್ದಿಯನ್ನೂ ಓದಿ: Davanagere: ಕುರ್‌ಕುರೇ ವಿಚಾರಕ್ಕೆ ರಣರಂಗವಾದ ಊರು; 10 ಜನರಿಗೆ ಗಂಭೀರ ಗಾಯ… ಗ್ರಾಮ ತೊರೆದ 25ಕ್ಕೂ ಹೆಚ್ಚು ಮಂದಿ
ಆದರೆ, ಹೀಗೆ ಚೀಲ ತುಂಬಾ ನಾಣ್ಯಗಳನ್ನು ತುಂಬಿಸಿ ತಂದ ಆ ವ್ಯಕ್ತಿಯ ವಿಡಿಯೋ ವೈರಲ್ ಆಗುತ್ತಿದ್ದಂತೆ ‘ನೆಟ್ ಲೋಕ’ ಇದಕ್ಕೆ ವಿವಿಧ ರೀತಿಯಲ್ಲಿ ರೆಸ್ಪಾನ್ಸ್ ಮಾಡಿದ್ದು, ನೆಟ್ಟಿಗರು ಬೇರೆ ಬೇರೆ ರಿತಿಯಲ್ಲಿ ಇದಕ್ಕೆ ಕಮೆಂಟ್ ಮಾಡಿದ್ದಾರೆ. ‘ಈ ಮನುಷ್ಯ ತನ್ನನ್ನು ತಾನು ಹೇಗೆ ಶಪಿಸಿಕೊಂಡಿದ್ದಾನೆ ನೋಡಿ, ತನ್ನ ಕುಟುಂಬ, ತನ್ನ ಮದುವೆ, ಆತನೊಂದಿಗೆ ತನ್ನ ಜೀವನ ಹಂಚಿಕೊಂಡ ಆ ಮಹಿಳೆ.. ಎಲ್ಲರನ್ನೂ ಅವಮಾನಿಸಿದ್ದಾನೆ. ಇದೊಂದು ಘೋರ ಅವಮಾನ’ ಎಂದು ಒಬ್ಬರು ಖಾರವಾಗಿಯೇ ಕಮೆಂಟ್ ಮಾಡಿದ್ದಾರೆ.
‘ಇಂತಹ ಮಹಿಳೆಯರಿಗೆ ಹಣವನ್ನು ಹಿಗೆಯೇ ಕೊಡಬೇಕು.. ಒಳ್ಳೆಯದಾಗಿದೆ..’ ಎಂದು ಇನ್ನೊಬ್ಬರು ಆ ವ್ಯಕ್ತಿಯ ಪರವಾಗಿ ಕಮೆಂಟ್ ಮಾಡಿದ್ದಾರೆ. ‘ಈ ರೀತಿಯ ಪಾವತಿ ವಿಧಾನವನ್ನು ಆರ್.ಬಿ.ಐ. ಮಾನ್ಯ ಮಾಡಬೇಕು..’ ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ.