Monday, 23rd December 2024

Pune Horror : ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಹರಿದ ಟ್ರಕ್‌- ಇಬ್ಬರು ಮಕ್ಕಳು ಸೇರಿ ಮೂವರು ಬಲಿ

Pune Horror

ಪುಣೆ: ವೇಗವಾಗಿ ಬಂದ ಟ್ರಕ್‌ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಾದಚಾರಿ ಮಾರ್ಗದ ಬಳಿಯ ತೆರೆದ ಪ್ರದೇಶದಲ್ಲಿ ಮಲಗಿದ್ದ ಕಾರ್ಮಿಕರ ಗುಂಪಿನ ಮೇಲೆ ಬಿದ್ದ ಪರಿಣಾಮ ಇಬ್ಬರು ಪುಟ್ಟ ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ವಘೋಲಿಯ ಕೇಸ್ನಂದ್ ಫಾಟಾ ಬಳಿ ನಡೆದಿದೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಸೋಮವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎಂದು ಹೇಳಲಾಗಿದೆ. (Pune Horror)

ಅತಿವೇಗದಲ್ಲಿ ಸಾಗುತ್ತಿದ್ದ ಟ್ರಕ್ ಏಕಾಏಕಿ ರಸ್ತೆಯಿಂದ 12 ಮಂದಿ ಮಲಗಿದ್ದ ಫುಟ್‌ಪಾತ್‌ಗೆ ಪಲ್ಟಿಯಾಗಿದೆ. ಒಂಬತ್ತು ಮಂದಿ ಮೇಲೆ ವಾಹನ ಬಿದ್ದಿದೆ. ಇತರರು ಪಾರಾಗಿದ್ದಾರೆ. ಟ್ರಕ್‌ ಚಾಲಕನನ್ನು ಗಜಾನನ ಶಂಕರ್ ತೋಟೆ (26) ಎಂದು ಗುರುತಿಸಲಾಗಿದ್ದು, ಆತ ಕುಡಿದು ವಾಹನ ಚಲಾಯಿಸುತ್ತಿದ್ದ ಎನ್ನಲಾಗಿದೆ. ಈಗಾಗಲೇ ಆತನನ್ನು ಪುಣೆ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಸಂತ್ರಸ್ತರನ್ನು ತಕ್ಷಣವೇ ಸಾಸೂನ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಗಾಯಗೊಂಡವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಮೃತರನ್ನು ವಿಶಾಲ್ ವಿನೋದ್ ಪವಾರ್ (22), ವೈಭವಿ ರಿತೇಶ್ ಪವಾರ್ (1), ಮತ್ತು ವೈಭವ್ ರಿತೇಶ್ ಪವಾರ್ (2) ಎಂದು ಗುರುತಿಸಲಾಗಿದೆ. ಗಾಯಗೊಂಡವರಲ್ಲಿ ಜಾನಕಿ ದಿನೇಶ್ ಪವಾರ್ (21) ರಿನಿಶಾ ವಿನೋದ್ ಪವಾರ್ (18) ರೋಷನ್ ಶಶಾದು ಭೋಸಲೆ (9), ನಾಗೇಶ್ ನಿವೃತ್ತಿ ಪವಾರ್ (27), ದರ್ಶನ್ ಸಂಜಯ್ ವೈರಾಲ್ (18) ಮತ್ತು ಅಲಿಶಾ ವಿನೋದ್ ಪವಾರ್ (47) ಸೇರಿದ್ದಾರೆ. ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಪಂಡಿತ್ ರೆಜಿತ್ವಾಡ್ ಮಾತನಾಡಿ, ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗೆ ಯುವಕನೋರ್ವ ಕಾರನ್ನು (Car Accident) ಮಿತಿ ಮೀರಿದ ವೇಗದಲ್ಲಿ ಚಲಾಯಿಸಿ ನಾಲ್ಕು ವರ್ಷದ ಬಾಲಕನನ್ನು ಬಲಿ ಪಡೆದ ಘಟನೆ ಮುಂಬೈನಲ್ಲಿ (Mumbai Horror ) ನಡೆದಿದೆ. ಮುಂಬೈನ ಅಂಬೇಡ್ಕರ್ ಕಾಲೇಜು ಬಳಿಯ ವಡಾಲಾ ಪ್ರದೇಶದಲ್ಲಿ 19 ವರ್ಷದ ಯುವಕ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದು ನಾಲ್ಕು ವರ್ಷದ ಬಾಲಕ ಮೃತಪಟ್ಟಿದ್ದಾನೆ. ಎಂದು ಪೊಲೀಸರು ವರದಿ ಮಾಡಿದ್ದಾರೆ. ಮೃತಪಟ್ಟ ಬಾಲಕನನ್ನು ಆಯುಷ್ ಲಕ್ಷ್ಮಣ್ ಕಿನ್ವಾಡೆ ಎಂದು ಗುರುತಿಸಲಾಗಿದ್ದು, ತನ್ನ ಕುಟುಂಬದೊಂದಿಗೆ ಪಾದಚಾರಿ ಮಾರ್ಗದಲ್ಲಿ ನಡೆದು ಹೋಗುತ್ತಿದ್ದ ಎನ್ನಲಾಗಿದೆ. ಮೃತ ಬಾಲಕನ ಕುಟುಂಬ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನೂ ಓದಿ : Viral Video: ಮುಂಬೈಯ ಭೀಕರ ಬಸ್‌ ದುರಂತ: ವೈರಲ್‌ ಆಯ್ತು ಅಪಘಾತದ ವಿಡಿಯೊ